ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಮದ್ಯ ವ್ಯಸನದಿಂದ ಘನತೆಯುಕ್ತ ಜೀವನದತ್ತ: ದಾರಾ ಸಿಂಗ್ ಅವರ ಚೇತರಿಕೆಯ ಪಯಣ
ಪ್ರಕಟಣಾ ದಿನಾಂಕ:
19 SEP 2026 5:52PM by PIB Bengaluru
ಸಮಯಕ್ಕೆ ಸರಿಯಾದ ಚಿಕಿತ್ಸೆ, ಸಮಾಲೋಚನೆ ಮತ್ತು ಪುನರ್ವಸತಿ ಬೆಂಬಲವು ಒಬ್ಬ ವ್ಯಕ್ತಿಗೆ ಮಾದಕ ದ್ರವ್ಯಗಳು ಹಾಗೂ ನಶೆಯ ಪದಾರ್ಥಗಳ ಮೇಲಿನ ಅವಲಂಬನೆಯನ್ನು ಹೋಗಲಾಡಿಸಲು, ಕೌಟುಂಬಿಕ ಬಾಂಧವ್ಯವನ್ನು ಮರುಸ್ಥಾಪಿಸಲು ಮತ್ತು ಉಪಯುಕ್ತ ಜೀವನಕ್ಕೆ ಹಿಂತಿರುಗಲು ಸಹಾಯ ಮಾಡುತ್ತದೆ.
ಮಾದಕ ದ್ರವ್ಯಗಳ ಅವಲಂಬನೆಯು ಒಬ್ಬ ವ್ಯಕ್ತಿಯ ಆರೋಗ್ಯ, ಸಂಬಂಧಗಳು, ಜೀವನೋಪಾಯ ಮತ್ತು ಸಮಾಜದಲ್ಲಿನ ಆತನ ಸ್ಥಾನಮಾನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ರಾಜಸ್ಥಾನದ ದೌಸಾ ಜಿಲ್ಲೆಯ 29 ವರ್ಷದ ಸ್ವಯಂ ಉದ್ಯೋಗಿ ದಾರಾ ಸಿಂಗ್ (ಹೆಸರು ಬದಲಾಯಿಸಲಾಗಿದೆ), ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರವಾದ 'ಡಿಡ್ವಾನಾದ ನಶಾ ಮುಕ್ತಿ ಕೇಂದ್ರ'ದ ಚಿಕಿತ್ಸೆ ಮತ್ತು ಪುನರ್ವಸತಿ ನೆರವಿನೊಂದಿಗೆ ದೀರ್ಘಕಾಲದ ಮದ್ಯದ ವ್ಯಸನದಿಂದ ಹೊರಬಂದರು. ಅವರು ಈಗ ಸಂಪೂರ್ಣವಾಗಿ ಮದ್ಯಪಾನದಿಂದ ದೂರವಿದ್ದು, ತಮ್ಮ ಕೌಟುಂಬಿಕ ಸಂಬಂಧಗಳನ್ನು ಮರುನಿರ್ಮಾಣ ಮಾಡಿಕೊಂಡಿದ್ದಾರೆ ಮತ್ತು ಸ್ವಯಂ ಉದ್ಯೋಗದ ಮೂಲಕ ದಿನಕ್ಕೆ ಸುಮಾರು 500 ರೂ.ಗಳನ್ನು ಗಳಿಸುತ್ತಿದ್ದಾರೆ.
ಹಲವು ವರ್ಷಗಳ ಕಾಲ, ಮದ್ಯದ ವ್ಯಸನವು ದಾರಾ ಸಿಂಗ್ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು ಹಾಗೂ ಅವರ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಅವರು ಭಾವನಾತ್ಮಕ ಅಸ್ಥಿರತೆ, ಒತ್ತಡ ಮತ್ತು ಆತ್ಮವಿಶ್ವಾಸದ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸಿದರು. ಅದೇ ಸಮುಯದಲ್ಲಿ ಅವರ ಕುಟುಂಬವು ಕಲಹ, ಸಾಮಾಜಿಕ ಕಳಂಕ ಮತ್ತು ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ಎದುರಿಸಿತು. ಮನೆಯ ಸಂಪನ್ಮೂಲಗಳನ್ನು ಹೆಚ್ಚಾಗಿ ಮದ್ಯಪಾನಕ್ಕಾಗಿ ಖರ್ಚಾಗುತ್ತಿದ್ದರಿಂದ, ಕುಟುಂಬದ ಆರ್ಥಿಕ ಪರಿಸ್ಥಿತಿ ಅಸ್ಥಿರವಾಯಿತು ಮತ್ತು ಕುಟುಂಬ ಹಾಗೂ ಸಮಾಜದಲ್ಲಿದ್ದ ಅವರ ಬಾಂಧವ್ಯ ಹದಗೆಟ್ಟವು.
ಈ ಎಲ್ಲಾ ತೊಂದರೆಗಳ ಹೊರತಾಗಿಯೂ, ದಾರಾ ಸಿಂಗ್ ಅವರು ಸ್ಥಿರ ಮತ್ತು ಆರೋಗ್ಯಕರ ಜೀವನವನ್ನು ಮರಳಿ ಪಡೆಯಲು, ತಮ್ಮ ಕುಟುಂಬದ ವಿಶ್ವಾಸವನ್ನು ಮರುಗಳಿಸಲು, ಆರ್ಥಿಕವಾಗಿ ಸ್ವತಂತ್ರರಾಗಲು ಮತ್ತು ಸಮಾಜದ ಮುಖ್ಯವಾಹಿನಿಗೆ ಮರಳಲು ಬಯಸಿದ್ದರು. ಮದ್ಯದ ವ್ಯಸನದ ಪರಿಣಾಮ ತೀವ್ರವಾದಾಗ ಅವರ ಕುಟುಂಬವು ಬೆಂಬಲವಾಗಿ ನಿಂತಿತು ಮತ್ತು ವೃತ್ತಿಪರ ನೆರವನ್ನು ಪಡೆಯಿತು.
ಅವರನ್ನು ಡಿಡ್ವಾನಾದ ʻನಶಾ ಮುಕ್ತಿ ಕೇಂದ್ರʼಕ್ಕೆ ಸೇರಿಸಲಾಯಿತು, ಅಲ್ಲಿ ಅವರು ಕೇಂದ್ರದ ದಿನಚರಿಯನ್ನು ಸಕ್ರಿಯವಾಗಿ ಅನುಸರಿಸಿದರು ಮತ್ತು ಸಮಾಲೋಚನೆ ಅವಧಿ, ಯೋಗ, ವೈದ್ಯಕೀಯ ಆರೈಕೆ ಹಾಗೂ ಪುನರ್ವಸತಿ ಚಟುವಟಿಕೆಗಳಲ್ಲಿ ಭಾಗವಹಿಸಿದರು. ದೈನಂದಿನ ಸಮಾಲೋಚನೆ, ನಡವಳಿಕೆಯ ಮಾರ್ಗದರ್ಶನ ಮತ್ತು ಜವಾಬ್ದಾರಿಯುತ ಚಟುವಟಿಕೆಗಳು ಹಾಗೂ ಜೀವನೋಪಾಯದ ಅವಕಾಶಗಳ ಬಗೆಗಿನ ಜಾಗೃತಿಯು ಅವರಿಗೆ ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳನ್ನು ಅರಿಯಲು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡಿತು. ನಿಯಮಿತ ತಪಾಸಣೆಗಳು ಅವರ ಚೇತರಿಕೆಗೆ ಮತ್ತಷ್ಟು ಬೆಂಬಲ ನೀಡಿ, ಮದ್ಯರಹಿತ ಜೀವನಕ್ಕೆ ಬದ್ಧರಾಗಿರಲು ಅವರನ್ನು ಪ್ರೋತ್ಸಾಹಿಸಿದವು.

ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನಿಯಮಿತ ಅನುಸರಣೆ, ತಪಾಸಣೆ ಮತ್ತು ಮೌಲ್ಯಮಾಪನಗಳಲ್ಲಿ ನಿರಂತರ ಸಕಾರಾತ್ಮಕ ಪ್ರಗತಿ ಕಂಡುಬಂದಿತು. ಅವರ ಆರೋಗ್ಯ ಮತ್ತು ನಡವಳಿಕೆ ಗಮನಾರ್ಹವಾಗಿ ಸುಧಾರಿಸಿದ್ದು, ಅವರು ಮದ್ಯಪಾನದಿಂದ ಸಂಪೂರ್ಣವಾಗಿ ದೂರವಿದ್ದಾರೆ. ಅವರು ಈಗ ನಕಾರಾತ್ಮಕ ಪ್ರಭಾವಗಳಿಂದ ದೂರವಿದ್ದು, ತಮ್ಮ ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಮತ್ತು ಸಮಾಜದಲ್ಲಿ ಯಶಸ್ವಿಯಾಗಿ ಬೆರೆತಿದ್ದಾರೆ.
ದಾರಾ ಸಿಂಗ್ ಅವರು ಮತ್ತೆ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿದ್ದು, ದಿನಕ್ಕೆ ಸುಮಾರು 500 ರೂ.ಗಳನ್ನು ಗಳಿಸುತ್ತಿದ್ದಾರೆ. ಅವರ ಆದಾಯವು ಕುಟುಂಬಕ್ಕೆ ನೆರವಾಗಲು ಮತ್ತು ಆರ್ಥಿಕ ಸ್ವಾವಲಂಬನೆಯತ್ತ ಸಾಗಲು ಅವರಿಗೆ ಸಹಾಯ ಮಾಡುತ್ತಿದೆ. ಅವರ ಚೇತರಿಕೆಯು ಕುಟುಂಬದಲ್ಲಿ ಶಾಂತಿಯನ್ನು ಮರಳಿ ತಂದಿದೆ ಮತ್ತು ವ್ಯಸನದಿಂದ ನಷ್ಟವಾಗಿದ್ದ ನಂಬಿಕೆ ಹಾಗೂ ಘನತೆಯನ್ನು ಪುನರ್ನಿರ್ಮಿಸಲು ನೆರವಾಗಿದೆ.
ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ ದಾರಾ ಸಿಂಗ್, "ಚಿಕಿತ್ಸೆ ಮತ್ತು ಆಪ್ತ ಸಮಾಲೋಚನೆಯು ನನಗೆ ಮದ್ಯವನ್ನು ತೊರೆದು ನನ್ನ ಜೀವನವನ್ನು ಮತ್ತೆ ಪ್ರಾರಂಭಿಸಲು ಶಕ್ತಿಯನ್ನು ನೀಡಿತು. ಇಂದು ನಾನು ಆರೋಗ್ಯವಾಗಿದ್ದೇನೆ, ನನ್ನ ಕುಟುಂಬಕ್ಕಾಗಿ ಸಂಪಾದಿಸುತ್ತಿದ್ದೇನೆ ಮತ್ತು ಘನತೆಯಿಂದ ಬಾಳುತ್ತಿದ್ದೇನೆ" ಎಂದು ಹೇಳಿದರು.
ಕುಟುಂಬದ ಬೆಂಬಲ, ವೃತ್ತಿಪರ ಸಮಾಲೋಚನೆ, ವೈದ್ಯಕೀಯ ಆರೈಕೆ ಮತ್ತು ನಿರಂತರ ಪುನರ್ವಸತಿಯು ಒಬ್ಬ ವ್ಯಕ್ತಿಗೆ ಮಾದಕ ವ್ಯಸನದಿಂದ ಮುಕ್ತಿ ಹೊಂದಲು ಮತ್ತು ಆರೋಗ್ಯಕರ, ಪ್ರಯೋಜನಕಾರಿ ಹಾಗೂ ಗೌರವಾನ್ವಿತ ಜೀವನಕ್ಕೆ ಮರಳಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ದಾರಾ ಸಿಂಗ್ ಅವರ ಈ ಪಯಣ ಪ್ರದರ್ಶಿಸುತ್ತದೆ.
*****
(ಪ್ರಕಟಣೆ ಐ.ಡಿ.: 2312564)
ವಿಸಿಟರ್ ಕೌಂಟರ್ : 18