ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ಸೆಮಿಕಾನ್ ಇಂಡಿಯಾ 2026'ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

ಪ್ರಕಟಣಾ ದಿನಾಂಕ: 17 SEP 2026 2:19PM by PIB Bengaluru

ತುಂಬಾ ಧನ್ಯವಾದಗಳು.

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಅಶ್ವಿನಿ ವೈಷ್ಣವ್ ಜೀ ಮತ್ತು ಜಿತಿನ್ ಪ್ರಸಾದ್ ಜೀ ಅವರೇ; ಉದ್ಯಮ ಕ್ಷೇತ್ರದ ಎಲ್ಲಾ ಮುಖಂಡರು, ಸಿಇಒಗಳು ಮತ್ತು ಪ್ರತಿನಿಧಿಗಳೇ; ಹಾಗೂ ವರ್ಚುವಲ್ (ಆನ್‌ಲೈನ್) ಮೂಲಕ ಸಂಪರ್ಕಗೊಂಡಿರುವ ನೂರಾರು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳೇ - ಭಾರತದ ಭವಿಷ್ಯವಾಗಿರುವ ನನ್ನ ಯುವ ಸ್ನೇಹಿತರೇ; ಮತ್ತು ಇಲ್ಲಿ ಉಪಸ್ಥಿತರಿರುವ ಅಪಾರ ಸಂಖ್ಯೆಯ ಉತ್ಸಾಹಿ ಯುವಜನರೇ, ಮಹಿಳೆಯರೇ ಹಾಗೂ ಮಹನೀಯರೇ!

ಇದು 'ಸೆಮಿಕಾನ್ ಇಂಡಿಯಾ'ದ ಐದನೇ ಆವೃತ್ತಿಯಾಗಿದೆ. ನಿಮ್ಮೆಲ್ಲರಿಗೂ ನಾನು ಸ್ವಾಗತ ಕೋರುತ್ತೇನೆ. ವಿದೇಶದಿಂದ ಆಗಮಿಸಿರುವ ಅತಿಥಿಗಳಿಗೆ ವಿಶೇಷ ಸ್ವಾಗತವನ್ನು ಕೋರುತ್ತೇನೆ.

ಸ್ನೇಹಿತರೇ,

ಇಂದು ವಿಶ್ವಕರ್ಮ ಜಯಂತಿ ಕೂಡ ಹೌದು. ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ದೇಶವಾಸಿಗಳೆಲ್ಲರಿಗೂ ನನ್ನ ಶುಭಾಶಯಗಳು. ನಮ್ಮ ಸಂಪ್ರದಾಯದಲ್ಲಿ, ಭಗವಾನ್ ವಿಶ್ವಕರ್ಮನನ್ನು ನಿರ್ಮಾಣ ಮತ್ತು ಸೃಜನಶೀಲತೆಯ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮತ್ತು ನೋಡಿ, ಎಂತಹ ಕಾಕತಾಳೀಯವಿದು - 'ಸೆಮಿಕಾನ್ ಇಂಡಿಯಾ' (Semicon India) ಕಾರ್ಯಕ್ರಮವು ಇಂದೇ ಪ್ರಾರಂಭವಾಗುತ್ತಿದೆ. ಒಂದು ಕಡೆ ನಮ್ಮ ಶತಮಾನಗಳಷ್ಟು ಹಳೆಯದಾದ ಸೃಜನಶೀಲತೆಯ ಸಂಪ್ರದಾಯ, ಮತ್ತೊಂದು ಕಡೆ 21ನೇ ಶತಮಾನದ ತಂತ್ರಜ್ಞಾನ ಮತ್ತು ದೂರದೃಷ್ಟಿ - ಇದೇ 'ಸ್ವಾವಲಂಬಿ ಭಾರತ' ಮತ್ತು 'ಅಭಿವೃದ್ಧಿಶೀಲ ಭಾರತ'ದ ನಿರ್ಮಾಣಕ್ಕೆ ಸ್ಫೂರ್ತಿಯಾಗಿದೆ.

ಸ್ನೇಹಿತರೇ,

ಪ್ರತಿಯೊಬ್ಬ ನಾಗರಿಕನು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬದ್ಧನಾಗಿದ್ದಾನೆ. ಕಳೆದ 15 ದಿನಗಳನ್ನು ನೋಡಿದರೆ - ನಾನು ನಿಮ್ಮ ಗಮನವನ್ನು 15 ದಿನಗಳತ್ತ ಮಾತ್ರವೇ ಸೆಳೆಯುತ್ತೇನೆ - ಭಾರತವು ಯಾವ ದಿಕ್ಕು ಮತ್ತು ವೇಗದಲ್ಲಿ ಮುಂದುವರಿಯುತ್ತಿದೆ ಎಂಬುದನ್ನು ನಾವು ನೋಡಬಹುದು. ಈ ಸೆಪ್ಟೆಂಬರ್‌ನಲ್ಲಿ, ಕೇವಲ 10 ದಿನಗಳ ಹಿಂದೆ, ಮುಂಬೈನಲ್ಲಿ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ ನಡೆಯಿತು. ಏಜೆಂಟಿಕ್  ಎಐ, ಟೋಕನೈಸೇಶನ್ ಮತ್ತು ಕ್ವಾಂಟಮ್ ತಂತ್ರಜ್ಞಾನಗಳ ಮೂಲಕ ಅಂತರ್ಗತ ಹಣಕಾಸಿನ ಕುರಿತು ಚರ್ಚೆ ನಡೆಯಿತು. ಅದೇ ಅವಧಿಯಲ್ಲಿ, ಸುಮಾರು 3,000 ಕಿಲೋಮೀಟರ್  ಸರಕು ಸಾಗಾಣಿಕೆಗೆ ಮೀಸಲಾದ ಕಾರಿಡಾರ್ ಭಾರತದಲ್ಲಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿತು. ನಾನು ಸೆಪ್ಟೆಂಬರ್‌ನ 10 ದಿನಗಳ ಬಗ್ಗೆ ಮಾತನಾಡುತ್ತಿದ್ದೇನೆ, ಇತ್ತೀಚೆಗೆ ಅಲ್ಲ. ಇದು ದೇಶದಲ್ಲಿ ಸರಕು ಸಾಗಣೆಯನ್ನು ವೇಗಗೊಳಿಸುತ್ತದೆ, ಲಾಜಿಸ್ಟಿಕ್ಸ್ ಸುಧಾರಿಸುತ್ತದೆ ಮತ್ತು ಉತ್ಪಾದನೆಗೆ ಹೊಸ ಶಕ್ತಿಯನ್ನು ನೀಡುತ್ತದೆ.

ಸ್ನೇಹಿತರೇ,

ಇದೇ ಅವಧಿಯಲ್ಲಿ, ಅಂದರೆ ಇದೇ ಸೆಪ್ಟೆಂಬರ್‌ನಲ್ಲಿ ಭಾರತದ ತ್ರೈಮಾಸಿಕ ಜಿಡಿಪಿ (GDP) ವರದಿ ಪ್ರಕಟವಾಯಿತು. ಈ ಸವಾಲಿನ ಸಮಯದಲ್ಲೂ ಭಾರತವು ಶೇಕಡಾ 7.8 ರಷ್ಟು ಬೆಳವಣಿಗೆಯನ್ನು ಸಾಧಿಸಿತು. ಇದೇ ವೇಳೆ, ಜಪಾನ್‌ನ ಕ್ರೆಡಿಟ್ ರೇಟಿಂಗ್ ಏಜೆನ್ಸಿಯೊಂದು ಭಾರತದ ಸಾರ್ವಭೌಮ ರೇಟಿಂಗ್ ಅನ್ನು (sovereign rating) ಮೇಲ್ದರ್ಜೆಗೇರಿಸಿತು. ಮೂರು ದಶಕಗಳ ನಂತರ - ಅಂದರೆ ಸುಮಾರು 35 ವರ್ಷಗಳ ನಂತರ - ಇಂತಹ ಬೆಳವಣಿಗೆ ನಡೆದಿದೆ. ಇದರರ್ಥ, ಒಂದು ಕಡೆ ಭಾರತದ ಆರ್ಥಿಕತೆಯು ಬೆಳೆಯುತ್ತಿದೆ ಮತ್ತು ಇನ್ನೊಂದು ಕಡೆ ಭಾರತದ ಮೇಲಿನ ಜಗತ್ತಿನ ವಿಶ್ವಾಸವೂ ಹೆಚ್ಚುತ್ತಿದೆ.

ಸ್ನೇಹಿತರೇ,

ಈ ವಿಶ್ವಾಸದ ಮತ್ತೊಂದು ದೊಡ್ಡ ನಿದರ್ಶನವು ಕೇವಲ ಮೂರು ದಿನಗಳ ಹಿಂದೆ ನಡೆದ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಕಂಡುಬಂದಿತು. ಭಾರತವು ಈ ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿತು. 'ನವದೆಹಲಿ ಘೋಷಣೆ'ಯನ್ನು ಸರ್ವಾನುಮತದಿಂದ ಅಂಗೀಕರಿಸಿರುವುದು ಭಾರತದ ಮೇಲಿರುವ ಜಗತ್ತಿನ ವಿಶ್ವಾಸಕ್ಕೆ ಮತ್ತೊಂದು ದೊಡ್ಡ ಸಾಕ್ಷಿಯಾಗಿದೆ.

ಸ್ನಹಿತರೇ,

ಭಾರತದ ಈ ಸಾಧನೆಗಳ ನಡುವೆ, 'ಸೆಮಿಕಾನ್ ಇಂಡಿಯಾ' (Semicon India) ಕಾರ್ಯಕ್ರಮವು ಇನ್ನಷ್ಟು ಮಹತ್ವದ್ದಾಗಿದೆ. ಇದರ ಮೊದಲ ಆವೃತ್ತಿಯು 2022ರಲ್ಲಿ ನಡೆದಿತ್ತು. ಅಂದಿನಿಂದ ನಾವು ಪ್ರತಿವರ್ಷವೂ ಭೇಟಿಯಾಗುತ್ತಿದ್ದೇವೆ, ಆದರೆ ಪ್ರತಿವರ್ಷವೂ ನಮ್ಮ ಚರ್ಚೆಯ ವಿಷಯ ಬದಲಾಗುತ್ತಾ ಬಂದಿದೆ. ಮೊದಲ ಆವೃತ್ತಿಯಲ್ಲಿ ನಾವು ನೀತಿಗಳ ಬಗ್ಗೆ ಮಾತನಾಡಿದೆವು. ಮುಂದಿನ ಆವೃತ್ತಿಗಳಲ್ಲಿ ಚರ್ಚೆಯು ಮುಂದುವರಿಯಿತು; ಕಡತಗಳಿಗೆ ಸಹಿ ಹಾಕುವುದರಿಂದ ಹಿಡಿದು ಶಂಕುಸ್ಥಾಪನೆ ನೆರವೇರಿಸುವವರೆಗೆ, ನಾವು ಯೋಜನೆಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದೆವು. ಕಳೆದ ವರ್ಷ ನಾವು ಪ್ರಾಯೋಗಿಕ ಉತ್ಪಾದನಾ/ಚಾಲನಾ  ಮಾರ್ಗಗಳು (pilot lines) ಮತ್ತು ಪರೀಕ್ಷಾ ಚಿಪ್‌ಗಳ (test chips) ಬಗ್ಗೆ ಚರ್ಚಿಸಲು ಆರಂಭಿಸಿದೆವು. ಭಾರತದ ಘಟಕಗಳಿಂದ ಮೊದಲ ಮಾದರಿಗಳು ಹೇಗೆ ಹೊರಬರಲು ಪ್ರಾರಂಭಿಸಿದವು ಎಂಬುದರ ಕುರಿತು ಚರ್ಚೆ ನಡೆಯಿತು. ಮತ್ತು ಈ ವರ್ಷ, ನಾವು ವಾಣಿಜ್ಯಿಕ ಉತ್ಪಾದನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಈಗ ಭಾರತದ ಘಟಕಗಳಿಂದ ಚಿಪ್‌ಗಳು ಹೊರಬರುತ್ತಿದ್ದು, ಭಾರತ ಹಾಗೂ ವಿಶ್ವದಾದ್ಯಂತ ಇರುವ ಗ್ರಾಹಕರನ್ನು ತಲುಪುತ್ತಿವೆ. ಇದೀಗ ಮೊಹಾಲಿ ಮತ್ತು ಸೂರತ್‌ನಲ್ಲಿರುವ ಇನ್ನೂ ಎರಡು ಘಟಕಗಳಲ್ಲಿ ವಾಣಿಜ್ಯಿಕ ಉತ್ಪಾದನೆ ಪ್ರಾರಂಭವಾಗಿದೆ. ನಾನು ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಯಾವುದೇ ದೇಶಕ್ಕೆ ಇಷ್ಟು ಕಡಿಮೆ ಅವಧಿಯಲ್ಲಿ ಈ ಹಂತವನ್ನು ತಲುಪುವುದು ಸುಲಭವಲ್ಲ. ಇದು ಕೇವಲ ಒಂದು ಕಾರ್ಖಾನೆಯನ್ನು ಸ್ಥಾಪಿಸಿದರೆ ಕೆಲಸ ಮುಗಿಯುವಂತಹ ಕ್ಷೇತ್ರವಲ್ಲ; ತಾಂತ್ರಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ದಶಕಗಳೇ ಬೇಕಾಗುತ್ತವೆ. ಜಗತ್ತಿನಾದ್ಯಂತ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗಳು (ecosystems) ರೂಪುಗೊಂಡಿರುವ ಕಡೆಗಳಲ್ಲೆಲ್ಲಾ, ಅವು ದಶಕಗಳ ನಿರಂತರ ಪ್ರಯತ್ನದ ಫಲವಾಗಿ ಸಿದ್ಧಗೊಂಡಿವೆ. ಆದರೆ ಭಾರತವು, ನಿಮ್ಮ ಸಹಕಾರದೊಂದಿಗೆ ಚಿಪ್ ವಿನ್ಯಾಸ, ಉತ್ಪಾದನೆ, ಉಪಕರಣಗಳ ತಯಾರಿಕೆ, ಕಚ್ಚಾ ವಸ್ತುಗಳ ಪರಿಸರ ವ್ಯವಸ್ಥೆ ಮತ್ತು ಪರೀಕ್ಷಾ ಸಾಮರ್ಥ್ಯ - ಹೀಗೆ ಎಲ್ಲದರಲ್ಲೂ ಏಕಕಾಲದಲ್ಲಿ ಕೆಲಸ ಮಾಡಿ ಯಶಸ್ಸನ್ನು ಸಾಧಿಸಿದೆ. ಈ ಪಯಣದಲ್ಲಿ ಉದ್ಯಮ ರಂಗದ ಪ್ರಮುಖ ನಾಯಕರಾದ ನೀವೇ ಪ್ರಮುಖ ಪಾಲುದಾರರಾಗಿದ್ದೀರಿ. ನೀವೇ ಭಾರತದ ಯಶಸ್ಸಿನ ಆಧಾರಸ್ತಂಭಗಳು ಮತ್ತು ನಮ್ಮ ಈ ಪಯಣದ ಸಹಭಾಗಿಗಳು.

ಸ್ನೇಹಿತರೇ,

ಸೆಮಿಕಂಡಕ್ಟರ್ ಉದ್ಯಮದಲ್ಲಿ "ಟೇಪ್-ಔಟ್" (tape-out) ಎಂಬ ಪದವೊಂದು ಬಳಕೆಯಲ್ಲಿದೆ. ವಿನ್ಯಾಸ ಪೂರ್ಣಗೊಂಡ ನಂತರ ಚಿಪ್ (chip) ಉತ್ಪಾದನಾ ಹಂತಕ್ಕೆ ಪ್ರವೇಶಿಸುವ ದಿನವಿದು. ಆದರೆ, 'ಟೇಪ್-ಔಟ್' ಆದ ನಂತರ ಕೆಲಸ ನಿಲ್ಲುವುದಿಲ್ಲ; ಅದೇ ದಿನ ಮುಂದಿನ ಆವೃತ್ತಿಯ ಕೆಲಸವೂ ಪ್ರಾರಂಭವಾಗುತ್ತದೆ. ಭಾರತವೂ ಇದನ್ನೇ ಮಾಡುತ್ತಿದೆ. ಭಾರತವು ತನ್ನ ಸೆಮಿಕಂಡಕ್ಟರ್ ಮಿಷನ್‌ನ ಎರಡನೇ ಹಂತವನ್ನು ಪ್ರಾರಂಭಿಸಿದೆ. ನಮ್ಮ ಮೊದಲ ಹಂತದ ಗಾತ್ರವು ಸುಮಾರು 8 ಶತಕೋಟಿ ಡಾಲರ್‌ಗಳಷ್ಟಿದ್ದರೆ, ಎರಡನೇ ಹಂತಕ್ಕಾಗಿ ನಾವು 13.5 ಶತಕೋಟಿ ಡಾಲರ್‌ಗಳನ್ನು ನಿಗದಿಪಡಿಸಿದ್ದೇವೆ. ಸುಧಾರಣಾ ಪಥದಲ್ಲಿ ಸಾಗುತ್ತಾ, ನಾವು ಈ ವಲಯದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತಂದಿದ್ದೇವೆ. ಈಗ ಅಂತರರಾಷ್ಟ್ರೀಯ ಕಂಪನಿಗಳು ನಮ್ಮ ನವೋದ್ಯಮಗಳು (ಸ್ಟಾರ್ಟಪ್‌ಗಳು), ಭಾರತೀಯ ವಿನ್ಯಾಸ ಕಂಪನಿಗಳು ಮತ್ತು ಒ.ಸಿ.ಐ. ಒಡೆತನದ ಕಂಪನಿಗಳೊಂದಿಗೆ ಸಹಯೋಗ ಮಾಡಬಹುದು. ಇದರರ್ಥ ನೀತಿಗಳು, ನಿಧಿಗಳು ಅಥವಾ ನಿಯಂತ್ರಕ ಚೌಕಟ್ಟುಗಳು - ಹೀಗೆ ನಿಮ್ಮ ಯೋಜನೆಗಳ ಯಶಸ್ಸಿಗೆ ಏನೇ ಅಗತ್ಯವಿದ್ದರೂ, ಭಾರತ ಸರ್ಕಾರವು ಅದಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದೆ.

ಸ್ನೇಹಿತರೇ,

ಭಾರತದಲ್ಲಿ 'ಫ್ಯಾಬ್‌ಲೆಸ್' (fabless) ಅಂದರೆ ಫ್ಯಾಬ್ರಿಕೇಷನ್ ಸೌಲಭ್ಯ ರಹಿತವಾದ (ಇವು ಸೆಮಿಕಂಡಕ್ಟರ್ ಉತ್ಪಾದನೆಯನ್ನು ಬೇರೊಂದು ಫೌಂಡ್ರಿಗೆ ನೀಡುತ್ತವೆ, ವಿನ್ಯಾಸ ಮತ್ತು ಮಾರಾಟವನ್ನು ತಾವು ವಹಿಸಿಕೊಳ್ಳುತ್ತವೆ) ಕಂಪನಿಗಳು ಬೆಳೆಯಬೇಕು ಮತ್ತು ಬೌದ್ಧಿಕ ಆಸ್ತಿಯ ಸೃಷ್ಟಿಯೂ ಇಲ್ಲಿಯೇ ನಡೆಯಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ವಿವಿಧ ರೀತಿಯ ಸಂಕೀರ್ಣ (ಕಾಂಪೌಂಡ್) ಸೆಮಿಕಂಡಕ್ಟರ್‌ಗಳ ತಯಾರಿಕೆ ಇರಲಿ, ಸಿಲಿಕಾನ್ ಫೋಟೋನಿಕ್ಸ್ ಅನ್ನು ಪರಿಸರ ವ್ಯವಸ್ಥೆಯ ಭಾಗವಾಗಿಸುವುದು ಇರಲಿ ಅಥವಾ ಕೃತಕ ಬುದ್ಧಿಮತ್ತೆಗೆ (AI) ಅಗತ್ಯವಾದ ಮೂಲಸೌಕರ್ಯವನ್ನು ಒದಗಿಸುವುದು ಇರಲಿ - ಇವೆಲ್ಲವೂ ಅತ್ಯಗತ್ಯ. ಮತ್ತು ಈ ದಿಕ್ಕಿನಲ್ಲಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯಬೇಕಿದೆ. ಇದಕ್ಕಾಗಿ ಅಗತ್ಯವಿರುವ ಅಡಿಪಾಯವನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪೂರೈಕೆ ಸರಪಳಿಗಳನ್ನು ಬಲಪಡಿಸುವತ್ತಲೂ ಭಾರತವು ಹೆಚ್ಚಿನ ಗಮನಹರಿಸುತ್ತಿದೆ. ಇದಕ್ಕಾಗಿ ಅನೇಕ ಸುಧಾರಣೆಗಳನ್ನು ತರಲಾಗಿದೆ. ಇಲ್ಲಿ ಉಪಸ್ಥಿತರಿರುವ ಉಪಕರಣ ತಯಾರಿಕಾ ಕಂಪನಿಗಳ ಮುಖ್ಯಸ್ಥರಿಗೆ ನಾನು ಹೇಳುವುದೇನೆಂದರೆ - ಇದರ ಲಾಭ ಪಡೆಯುವಲ್ಲಿ ನೀವು ಹಿಂದುಳಿಯಬೇಡಿ. ರಾಸಾಯನಿಕಗಳು, ಅನಿಲಗಳು ಮತ್ತು ವಸ್ತುಗಳ (materials) ವಲಯದ ಮುಖ್ಯಸ್ಥರಿಗೂ ಭಾರತದಲ್ಲಿ ಸುವರ್ಣಾವಕಾಶಗಳು ಕಾದಿವೆ. ಸಂಪೂರ್ಣ ಪರಿಸರ ವ್ಯವಸ್ಥೆಯು ಒಟ್ಟಾಗಿ ಬೆಳೆಯಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ಬೇಡಿಕೆಯ ಸರಪಳಿಯೂ (demand pipeline) ಸಿದ್ಧವಾಗಿದೆ. ಇಲ್ಲಿಯವರೆಗೆ 12 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು ಮುಂದಿನ ಹಂತದಲ್ಲಿ ಇದರ ವ್ಯಾಪ್ತಿಯು ಇನ್ನಷ್ಟು ವಿಸ್ತರಣೆಯಾಗಲಿದೆ.

ಸ್ನೇಹಿತರೇ,

ಭಾರತದಲ್ಲಿರುವ ನಿಮ್ಮೆಲ್ಲರಿಗೂ ಇರುವ ಮತ್ತೊಂದು ಅನುಕೂಲವೆಂದರೆ ಯುವಶಕ್ತಿ – ಅಂದರೆ ಪ್ರತಿಭಾವಂತ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲ. ಇಂದು ನಮ್ಮಲ್ಲಿ ಅಪಾರ ಸಂಖ್ಯೆಯ ಎಂಜಿನಿಯರಿಂಗ್ ಪ್ರತಿಭೆಗಳಿದ್ದಾವೆ. ಭಾರತದಲ್ಲಿ ಸಾವಿರಾರು ಎಂಜಿನಿಯರಿಂಗ್ ಕಾಲೇಜುಗಳಿವೆ ಮತ್ತು ಪ್ರತಿ ವರ್ಷ ಲಕ್ಷಾಂತರ ಎಂಜಿನಿಯರ್‌ಗಳು ಇಲ್ಲಿಂದ ಹೊರಹೊಮ್ಮುತ್ತಾರೆ. ಒಮ್ಮೆ, ಅಮೆರಿಕದ ಕಂಪನಿಯೊಂದರ ಪ್ರತಿನಿಧಿಯೊಬ್ಬರು ನನ್ನನ್ನು ಭೇಟಿಯಾಗಲು ಬಂದಿದ್ದರು. ಅವರು ಹೇಳಿದರು, "ನಮ್ಮ ದೇಶದಲ್ಲಿ ನಾವು ಎಂಜಿನಿಯರ್‌ಗಳನ್ನು ನೇಮಕ ಮಾಡಲು ಕರೆದರೆ, ಅವರೆಲ್ಲರೂ ಒಂದು ಕೋಣೆಯೊಳಗೆ ಸೇರಿಕೊಳ್ಳುತ್ತಾರೆ. ಆದರೆ ಭಾರತದಲ್ಲಿ, ನಾವು ಎಂಜಿನಿಯರ್‌ಗಳನ್ನು ಕರೆದರೆ, ಫುಟ್‌ಬಾಲ್ ಮೈದಾನವೂ ಕೂಡ ಚಿಕ್ಕದಾಗುತ್ತದೆ." ಇದೇ ಭಾರತದ ಶಕ್ತಿ.

ಮತ್ತು ಸ್ನೇಹಿತರೇ,

ಚಿಪ್ ವಿನ್ಯಾಸಕ್ಕಾಗಿ ಬೃಹತ್ ಪ್ರಮಾಣದ ಕೌಶಲ್ಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಇಲ್ಲಿಗೆ ಬರುವ ಮುನ್ನ, ಇದೇ ಆವರಣದಲ್ಲಿ ಉದ್ಯಮ ರಂಗದ ಕೆಲವು ಯುವ ಸಹಚರರನ್ನು - ಅಂದರೆ ವಿದ್ಯಾರ್ಥಿಗಳನ್ನು - ನಾನು ಭೇಟಿಯಾದೆ. ಈ ವಿದ್ಯಾರ್ಥಿಗಳು ತಾವೇ ಸ್ವತಃ ವಿನ್ಯಾಸಗೊಳಿಸಿದ ಚಿಪ್‌ಗಳನ್ನು ನನಗೆ ಉಡುಗೊರೆಯಾಗಿ ನೀಡಿದರು. ಸೆಮಿಕಂಡಕ್ಟರ್ ಉದ್ಯಮಕ್ಕಾಗಿ ಒಂದು ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ. ಮತ್ತು ನಿಮಗೆ ತಿಳಿಸಿದಂತೆ, ನಾವು ಈಗಾಗಲೇ 70,000ಕ್ಕೂ ಹೆಚ್ಚು ಯುವಜನರಿಗೆ ತರಬೇತಿ ನೀಡಿದ್ದೇವೆ. ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರತಿಭಾವಂತರ ಸಮೂಹವು ನಿಮ್ಮೆಲ್ಲರಿಗೂ ಚಿನ್ನದ ಗಣಿಗಿಂತ ಕಡಿಮೆಯೇನಲ್ಲ.

ಸ್ನೇಹಿತರೇ,

ಸರ್ಕಾರದ ಈ ಪ್ರಯತ್ನಗಳ ನಡುವೆ, ಇಂದು ನಾನು ಯುವಜನರಿಗೂ ಒಂದು ಮನವಿ ಮಾಡಿಕೊಳ್ಳುತ್ತಿದ್ದೇನೆ - ಭಾರತದಲ್ಲಿ ಸಂಶೋಧನೆ ನಡೆಸುತ್ತಿರುವ ಯುವ ಪ್ರತಿಭೆಗಳು ಮುಂದೆ ಬರಬೇಕು. ವಿದೇಶಗಳಲ್ಲಿ ಸಂಶೋಧನೆ ನಡೆಸುತ್ತಿರುವ ಯುವಜನರು ಕೂಡ ಭಾರತದಲ್ಲಿನ ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಯೊಂದಿಗೆ ತಮ್ಮನ್ನು ಜೋಡಿಸಿಕೊಳ್ಳಬೇಕು. ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (R&D) ಚಟುವಟಿಕೆಗಳ ನೇತೃತ್ವ ವಹಿಸುವಂತೆ ನಾನು ಉದ್ಯಮ ವಲಯದ ನಾಯಕರಿಗೆ ಮನವಿ ಮಾಡುತ್ತೇನೆ. ಇದು ಉದ್ಯಮಕ್ಕೆ ಪ್ರಯೋಜನವನ್ನು ನೀಡುವುದಲ್ಲದೆ, ಭಾರತದ ಯುವಶಕ್ತಿಯನ್ನೂ ಬಲಪಡಿಸುತ್ತದೆ.

ಸ್ನೇಹಿತರೇ,

ವೇಗವಾಗಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಉದ್ಯಮವು ಕೆಲವು ಸವಾಲುಗಳನ್ನು ಎದುರಿಸುತ್ತಿದೆ, ಅವುಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ವರ್ಷಗಳ ಕಾಲ, ನಿಮ್ಮ ಉದ್ಯಮದ ಜನರು ಟ್ರಾನ್ಸಿಸ್ಟರ್ ಗಾತ್ರದ ಬಗ್ಗೆಯೇ ಚರ್ಚಿಸುತ್ತಿದ್ದರು. ಟ್ರಾನ್ಸಿಸ್ಟರ್‌ಗಳು ಚಿಕ್ಕದಾದಂತೆ, ಕಂಪ್ಯೂಟಿಂಗ್ ಪ್ರಕ್ರಿಯೆಯು ವೇಗವಾಗಿ ಮತ್ತು ಹೆಚ್ಚು ದಕ್ಷತೆಯಿಂದ ಕೂಡಿದಂತಾಯಿತು. ಇಂದಿಗೂ ಈ ಪ್ರಶ್ನೆ ಮಹತ್ವದ್ದಾಗಿದೆ. ಆದರೆ ಈಗ, ಕೃತಕ ಬುದ್ಧಿಮತ್ತೆಯ (AI) ಆಗಮನದೊಂದಿಗೆ, ಈ ಉದ್ಯಮದ ಮುಂದೆ ಕೆಲವು ಹೊಸ ಪ್ರಶ್ನೆಗಳು ಉದ್ಭವಿಸಿವೆ. ಕಳೆದ ಎರಡು ವರ್ಷಗಳಲ್ಲಿ, ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆಯು ಶೇಕಡಾ 20 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಂಡಿದೆ. ಮತ್ತು ಈ ಬೆಳವಣಿಗೆಯ ಬಹುದೊಡ್ಡ ಭಾಗವು ಎ.ಐ. ಸೃಷ್ಟಿಸಿದ ಬೇಡಿಕೆಯಿಂದಲೇ ಉಂಟಾಗಿದೆ. ಇದರರ್ಥ, ಇಂದು ನೀವು ಎ.ಐ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಸವಾಲುಗಳು ಕೇವಲ ಚಿಪ್‌ನ ಒಳಗಿನ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಅದರ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳಿಗೂ ಸಂಬಂಧಿಸಿವೆ. ಸ್ಮರಣ ಶಕ್ತಿಯನ್ನು (ಮೆಮೊರಿಯನ್ನು) ಪ್ರೊಸೆಸರ್‌ಗೆ ಹತ್ತಿರವಾಗಿಸುವುದು, ಅನೇಕ ಚಿಪ್‌ಗಳನ್ನು ಒಂದೇ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವಂತೆ ಪರಸ್ಪರ ಸಂಪರ್ಕಿಸುವುದು, ಅಪಾರ ಪ್ರಮಾಣದ ಡೇಟಾವನ್ನು ವಿಳಂಬವಿಲ್ಲದೆ ವರ್ಗಾಯಿಸುವುದು ಹಾಗೂ ಶಾಖ ಮತ್ತು ವಿದ್ಯುತ್ ಬಳಕೆಯನ್ನು ನಿರ್ವಹಿಸುವುದು - ಹೀಗೆ ಸೆಮಿಕಂಡಕ್ಟರ್ ಉದ್ಯಮದ ಮುಂದೆ ಅನೇಕ ಸವಾಲುಗಳಿವೆ. ಈ ಸವಾಲುಗಳ ನಡುವೆ, ಜಗತ್ತಿಗೆ ಹೊಸ ಮತ್ತು ವಿಶ್ವಾಸಾರ್ಹ ಉತ್ಪಾದನಾ ಕೇಂದ್ರಗಳ ಅಗತ್ಯವಿದೆ. ಮತ್ತು ಭಾರತ - ನಾನು ನಿಮಗೆ ಭರವಸೆ ನೀಡುತ್ತೇನೆ - ಭಾರತವು ಇದಕ್ಕಾಗಿ ನಿರಂತರವಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ.

ಸ್ನೇಹಿತರೇ,

ಇಂದಿನ ಸೆಮಿಕಂಡಕ್ಟರ್ ಉದ್ಯಮದ ಮುಂದಿರುವ ಮತ್ತೊಂದು ಪ್ರಮುಖ ವಿಷಯವೆಂದರೆ ಇಂಧನ ಭದ್ರತೆ. ಕೃತಕ ಬುದ್ಧಿಮತ್ತೆ (AI) ಗಾಗಿ ತಯಾರಿಸಲಾಗುವ ಚಿಪ್‌ಗಳನ್ನು ಎ.ಐ. ಡೇಟಾ ಸೆಂಟರ್‌ಗಳಲ್ಲಿ ಬಳಸಲಾಗುತ್ತದೆ. ಈ ಡೇಟಾ ಸೆಂಟರ್‌ಗಳಲ್ಲಿ, ಸಾವಿರಾರು ಉನ್ನತ-ಕಾರ್ಯಕ್ಷಮತೆಯ ಪ್ರೊಸೆಸರ್‌ಗಳು ಒಟ್ಟಾಗಿ ಕೆಲಸ ಮಾಡುತ್ತಾ, ಅಪಾರ ಪ್ರಮಾಣದ ಡೇಟಾವನ್ನು ಸಂಸ್ಕರಿಸುತ್ತವೆ. ಎ.ಐ. ವಿಸ್ತರಿಸಿದಂತೆ, ಕಂಪ್ಯೂಟಿಂಗ್ ಸಾಮರ್ಥ್ಯದ ಅಗತ್ಯವೂ ಅದೇ ವೇಗದಲ್ಲಿ ಹೆಚ್ಚಾಗುತ್ತದೆ. ಮತ್ತು ಕಂಪ್ಯೂಟಿಂಗ್ ಸಾಮರ್ಥ್ಯ ಹೆಚ್ಚಾದಂತೆ, ವಿದ್ಯುತ್‌ನ ಅಗತ್ಯವೂ ಗಣನೀಯವಾಗಿ ಹೆಚ್ಚಾಗುತ್ತದೆ. ಆದ್ದರಿಂದ, ವಿದ್ಯುತ್ ವಲಯದಲ್ಲಿ ಹೂಡಿಕೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ನಮ್ಮ ಘಟಕಗಳು ಇರುವ ಸ್ಥಳಗಳಲ್ಲಿ, ಅಗತ್ಯವಿದ್ದಾಗ ಮತ್ತು ಅಗತ್ಯವಿರುವ ಪ್ರಮಾಣದಲ್ಲಿ ಸಮಯಕ್ಕೆ ಸರಿಯಾಗಿ ವಿದ್ಯುತ್ ಲಭ್ಯವಿರುವುದು ಬಹಳ ಮುಖ್ಯ. ಇದೇ ಕಾರಣಕ್ಕಾಗಿ ಭಾರತ ಇಂದು ವಿದ್ಯುತ್ ವಲಯದಲ್ಲಿ ಬೃಹತ್ ಪ್ರಮಾಣದ ಹೂಡಿಕೆಗಳನ್ನು ಮಾಡುತ್ತಿದೆ. ಕಳೆದ ದಶಕದಲ್ಲಿ, ನಮ್ಮ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವು ಸುಮಾರು 2 ಗಿಗಾವ್ಯಾಟ್‌ಗಳಿಂದ 160 ಗಿಗಾವ್ಯಾಟ್‌ಗಳಿಗಿಂತ ಹೆಚ್ಚಿನ ಮಟ್ಟಕ್ಕೆ ಏರಿಕೆಯಾಗಿದೆ - ಅಂದರೆ 2 ರಿಂದ 160 ರವರೆಗೆ. ಪರಮಾಣು ಶಕ್ತಿ ವಲಯದಲ್ಲೂ ನಾವು ವೇಗವಾಗಿ ಮುನ್ನಡೆಯುತ್ತಿದ್ದೇವೆ. ಈ ವಲಯವನ್ನು ಖಾಸಗಿ ಸಂಸ್ಥೆಗಳಿಗೂ ಮುಕ್ತಗೊಳಿಸಲಾಗಿದೆ. ನಾವು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ (small modular reactors) ಮೇಲೂ ಕೆಲಸ ಮಾಡುತ್ತಿದ್ದೇವೆ. ಕಳೆದ ದಶಕದಲ್ಲಿ, ಭಾರತವು ತನ್ನ ವಿದ್ಯುತ್ ಪ್ರಸರಣ ಜಾಲವನ್ನೂ ವಿಸ್ತರಿಸಿದೆ.

ಸ್ನೇಹಿತರೇ,

ಭಾರತದಲ್ಲಿನ ವಿದ್ಯುತ್ ಮೂಲಸೌಕರ್ಯದ ಈ ವಿಸ್ತರಣೆಯು ನಮ್ಮ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಒಂದು ದೊಡ್ಡ ಬಲವಾಗಿದೆ. ಸೆಮಿಕಂಡಕ್ಟರ್ ಉದ್ಯಮಕ್ಕೆ ಭಾರತವನ್ನು ಆದ್ಯತೆಯ ತಾಣವನ್ನಾಗಿ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಭಾರತ ಕೈಗೊಳ್ಳುತ್ತಿದೆ.

ಸ್ನೇಹಿತರೇ,

ಭಾರತವು ಪ್ರಜಾಪ್ರಭುತ್ವದ ತಾಯಿ. ಕೆಲವೇ ವರ್ಷಗಳ ಹಿಂದೆ ನಮ್ಮ ಸಂವಿಧಾನವು 75 ವರ್ಷಗಳನ್ನು ಪೂರೈಸಿದೆ. ಇಂತಹ ದೇಶವೊಂದು ನಿರ್ಣಾಯಕ ಉದ್ಯಮವೊಂದರಲ್ಲಿ ಯಶಸ್ವಿಯಾದಾಗ, ಅದು ಇಡೀ ಪ್ರಪಂಚದ ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ. ಮತ್ತು ಇಂದು, ಪೂರೈಕೆ ಸರಪಳಿಗಳನ್ನು ಅಸ್ತ್ರಗಳನ್ನಾಗಿ ಬಳಸಲಾಗುತ್ತಿರುವಾಗ, ಇದರ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಈ ವಿಶಾಲ ದೃಷ್ಟಿಕೋನದಿಂದ ನೋಡಬೇಕು. ಭಾರತದ ಆಕಾಂಕ್ಷೆಗಳು ನಿಮ್ಮ ಮುಂದಿವೆ ಮತ್ತು ಭಾರತದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳು ನಿಮ್ಮನ್ನು ಸ್ವಾಗತಿಸಲು ಸಿದ್ಧವಾಗಿವೆ. ಮತ್ತೊಮ್ಮೆ, ಈ ಕಾರ್ಯಕ್ರಮಕ್ಕಾಗಿ ನಿಮ್ಮೆಲ್ಲರಿಗೂ ನಾನು ಅನೇಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ತುಂಬಾ ಧನ್ಯವಾದಗಳು.

 

*****


(ಪ್ರಕಟಣೆ ಐ.ಡಿ.: 2311658) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Bengali , Bengali-TR , Gujarati