ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಬಾಲ್ಯದ ಸಂಕಷ್ಟಗಳಿಂದ ಚೇತರಿಕೆ ಮತ್ತು ಸ್ವಾವಲಂಬನೆಯತ್ತ: ಎನ್ ಎ ಪಿ ಡಿ ಡಿ ಆರ್ ಅಡಿಯಲ್ಲಿ ರಾಹುಲ್ ಲೋವಾಂಗ್ ಅವರ ಪಯಣ
ಪ್ರಕಟಣಾ ದಿನಾಂಕ:
13 SEP 2026 12:38PM by PIB Bengaluru
ಚೇತರಿಕೆಯು ನವೀಕೃತ ಆತ್ಮವಿಶ್ವಾಸ, ಸ್ವಾತಂತ್ರ್ಯ ಮತ್ತು ಹೆಚ್ಚು ಸ್ಥಿರವಾದ ಜೀವನಕ್ಕೆ ದಾರಿ ಮಾಡಿಕೊಡಬಲ್ಲದು. ಚಿಕಿತ್ಸೆ, ಸಮಾಲೋಚನೆ ಮತ್ತು ಪುನರ್ವಸತಿ ಬೆಂಬಲವು ವ್ಯಕ್ತಿಗಳಿಗೆ ಮಾದಕವಸ್ತುಗಳ ಮೇಲಿನ ಅವಲಂಬನೆ ಹೋಗಲಾಡಿಸಲು ಮತ್ತು ತಮ್ಮ ಜೀವನವನ್ನು ಮರುರೂಪಿಸಿಕೊಳ್ಳಲು ಸಹಾಯ ಮಾಡುತ್ತದೆ.
ಅರುಣಾಚಲ ಪ್ರದೇಶದ ತಿರಾಪ್ ಜಿಲ್ಲೆಯ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದ 27 ವರ್ಷದ ರಾಹುಲ್ ಲೋವಾಂಗ್ (ಹೆಸರು ಬದಲಾಯಿಸಲಾಗಿದೆ), ಖೋನ್ಸಾದ ಚಾರ್ಜುವಿನಲ್ಲಿರುವ 'ಕೇರ್ ಮಿ ಹೋಮ್ ವೆಲ್ಫೇರ್ ಸೊಸೈಟಿ' ನಡೆಸುತ್ತಿರುವ ಜಿಲ್ಲಾ ವ್ಯಸನ ಮುಕ್ತ ಕೇಂದ್ರದಲ್ಲಿ (ಡಿಡಿಎಸಿ), 'ಮಾದಕವಸ್ತು ಬೇಡಿಕೆ ಕಡಿತದ ರಾಷ್ಟ್ರೀಯ ಕ್ರಿಯಾ ಯೋಜನೆ' (ಎನ್ ಎಪಿಡಿಡಿಆರ್) ಅಡಿಯಲ್ಲಿ ಚಿಕಿತ್ಸೆ ಮತ್ತು ಪುನರ್ವಸತಿ ನೆರವನ್ನು ಪಡೆದರು.
ರಾಹುಲ್ ಇಂದು ಸ್ವಯಂ ಉದ್ಯೋಗಿಯಾಗಿದ್ದಾರೆ ಮತ್ತು ಆರ್ಥಿಕವಾಗಿ ಹೆಚ್ಚು ಸ್ವತಂತ್ರರಾಗಿದ್ದು, ಸ್ಥಿರ ಹಾಗೂ ಉತ್ಪಾದಕ ಜೀವನದತ್ತ ಸಾಗುತ್ತಿದ್ದಾರೆ.
ರಾಹುಲ್ ಅವರ ಬಾಲ್ಯವು ಕಷ್ಟಕರವಾದ ಕೌಟುಂಬಿಕ ಪರಿಸ್ಥಿತಿಗಳಿಂದ ಕೂಡಿತ್ತು. ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡಿದ್ದರಿಂದ ಅವರಿಗೆ ಸೂಕ್ತ ಆರೈಕೆ, ಮಾರ್ಗದರ್ಶನ ಮತ್ತು ಭಾವನಾತ್ಮಕ ಬೆಂಬಲ ಸಿಗಲಿಲ್ಲ. ಈ ಸವಾಲುಗಳು ಅವರ ಶಿಕ್ಷಣಕ್ಕೆ ಅಡ್ಡಿಯುಂಟುಮಾಡಿದವು; ಅವರು ಕೇವಲ ಮಾಧ್ಯಮಿಕ ಶಾಲಾ ಹಂತದವರೆಗೆ ಮಾತ್ರ ಶಿಕ್ಷಣ ಮುಂದುವರಿಸಲು ಸಾಧ್ಯವಾಯಿತು. ಈ ದುರ್ಬಲ ಹಂತದಲ್ಲಿ, ಅವರು 11ನೇ ವಯಸ್ಸಿನಲ್ಲಿಯೇ ಮಾದಕವಸ್ತುಗಳ ಬಳಕೆಯನ್ನು ಆರಂಭಿಸಿದರು.
ಸೀಮಿತ ಕೌಟುಂಬಿಕ ಬೆಂಬಲ ಮತ್ತು ಸಮಾಜದಲ್ಲಿ ಸ್ವೀಕಾರಾರ್ಹತೆಯನ್ನು ಕಂಡುಕೊಳ್ಳುವಲ್ಲಿನ ತೊಂದರೆಗಳು ಅವರ ಸಂಕಷ್ಟಗಳನ್ನು ಹೆಚ್ಚಿಸಿದವು. ಇಷ್ಟೆಲ್ಲಾ ಕಷ್ಟಗಳ ನಡುವೆಯೂ, ರಾಹುಲ್ ಸ್ಥಿರ ಮತ್ತು ಶಿಸ್ತುಬದ್ಧ ಜೀವನ ನಡೆಸುವ ಆಕಾಂಕ್ಷೆ ಹೊಂದಿದ್ದರು. ಅವರು 'ಇಂಡಿಯನ್ ರಿಸರ್ವ್ ಬೆಟಾಲಿಯನ್' (ಐಆರ್ ಬಿಎನ್) ಸೇರಲು ಮತ್ತು ಅರ್ಥಪೂರ್ಣ ಉದ್ಯೋಗವನ್ನು ಪಡೆಯಲು ಆಶಿಸಿದ್ದರು.
ತಿರಾಪ್ ಜಿಲ್ಲೆಯ ಖೋನ್ಸಾದ ಚಾರ್ಜುವಿನಲ್ಲಿರುವ 'ಕೇರ್ ಮಿ ಹೋಮ್ ವೆಲ್ಫೇರ್ ಸೊಸೈಟಿ' ನಡೆಸುತ್ತಿರುವ ಡಿಡಿಎಸಿ ಜೊತೆಗಿನ ಸಂಪರ್ಕವು ಅವರ ಜೀವನದಲ್ಲಿ ಒಂದು ಮಹತ್ವದ ತಿರುವಾಯಿತು. 2024ರ ಮೇ 9 ರಂದು, ರಾಹುಲ್ ಅವರು ಎನ್ ಎಪಿಡಿಡಿಆರ್ ಅಡಿಯಲ್ಲಿ ಭಾರೀ ಸಬ್ಸಿಡಿ ದರದ ಚಿಕಿತ್ಸಾ ಯೋಜನೆ, ಸಮಾಲೋಚನೆ ಸೇವೆಗಳು ಮತ್ತು ಪುನರ್ವಸತಿ ನೆರವು ಸೇರಿದಂತೆ ವಿವಿಧ ರೀತಿಯ ನೆರವನ್ನು ಪಡೆದರು.
ಈ ಮಧ್ಯಸ್ಥಿಕೆಯು ರಾಹುಲ್ ಅವರಿಗೆ ಮಾದಕವಸ್ತುಗಳ ಮೇಲಿನ ಅವಲಂಬನೆಯನ್ನು ಹೋಗಲಾಡಿಸಲು, ತಮ್ಮ ವೈಯಕ್ತಿಕ ಕೌಶಲ್ಯಗಳನ್ನು ಬಲಪಡಿಸಿಕೊಳ್ಳಲು ಮತ್ತು ಹೆಚ್ಚು ಸ್ಥಿರವಾದ ಜೀವನದತ್ತ ಸಾಗಲು ಸಹಾಯ ಮಾಡಿತು. ಸಮಾಲೋಚನೆ ಮತ್ತು ಪುನರ್ವಸತಿ ಸೇವೆಗಳು ಅವರ ಚೇತರಿಕೆ ಮತ್ತು ಸಮಾಜದ ಮುಖ್ಯವಾಹಿನಿಗೆ ಮರಳಲು ಬೆಂಬಲ ನೀಡಿದರೆ, ಸಮುದಾಯದ ಬೆಂಬಲ ಮತ್ತು ತಡೆಗಟ್ಟುವ ಕ್ರಮಗಳು ಪುನರ್ವಸತಿ ಪ್ರಕ್ರಿಯೆಯನ್ನು ಬಲಪಡಿಸಲು ನೆರವಾದವು.

ರಾಹುಲ್ ಅವರ ಪ್ರಗತಿಯು, ಸುಲಭವಾಗಿ ಲಭ್ಯವಿರುವ ಚಿಕಿತ್ಸೆ, ಸಮಾಲೋಚನೆ ಮತ್ತು ಸಮುದಾಯದ ಬೆಂಬಲವು ಒಬ್ಬ ವ್ಯಕ್ತಿಯ ಜೀವನದಲ್ಲಿ ತರಬಲ್ಲ ಸಕಾರಾತ್ಮಕ ಬದಲಾವಣೆ ಪ್ರತಿಬಿಂಬಿಸುತ್ತದೆ. ಅವರ ಸ್ವಯಂ ಉದ್ಯೋಗ ಮತ್ತು ಹೆಚ್ಚಿದ ಆರ್ಥಿಕ ಸ್ವಾತಂತ್ರ್ಯವು ಸ್ವಾವಲಂಬನೆಯತ್ತ ಸಾಗುವ ಅರ್ಥಪೂರ್ಣ ಹೆಜ್ಜೆಗಳಾಗಿವೆ.
ತಮ್ಮ ಸಂತೋಷ ಮತ್ತು ತೃಪ್ತಿಯನ್ನು ವ್ಯಕ್ತಪಡಿಸುತ್ತಾ, ರಾಹುಲ್ ಲೋವಾಂಗ್ (ಹೆಸರು ಬದಲಾಯಿಸಲಾಗಿದೆ) ಹೀಗೆ ಹೇಳಿದರು: "ಚಿಕಿತ್ಸೆ ಮತ್ತು ಸಮಾಲೋಚನೆಯು ನನಗೆ ವ್ಯಸನದ ಮೇಲಿನ ಅವಲಂಬನೆಯಿಂದ ಹೊರಬರಲು ಹಾಗೂ ಆತ್ಮವಿಶ್ವಾಸದಿಂದ ನನ್ನ ಜೀವನವನ್ನು ಮರುರೂಪಿಸಿಕೊಳ್ಳಲು ಸಹಾಯ ಮಾಡಿತು."
ಗೌರವ ಮತ್ತು ಹೊಸ ಭರವಸೆಯೊಂದಿಗೆ ವ್ಯಕ್ತಿಗಳು ತಮ್ಮ ಜೀವನವನ್ನು ಮರುರೂಪಿಸಿಕೊಳ್ಳಲು ಸಹಾಯ ಮಾಡುವಲ್ಲಿ, ಎನ್ ಎಪಿಡಿಡಿಆರ್ -ಬೆಂಬಲಿತ ವ್ಯಸನ ಮುಕ್ತಗೊಳಿಸುವ ಸೇವೆಗಳ ಪಾತ್ರವನ್ನು ರಾಹುಲ್ ಅವರ ಈ ಪಯಣ ಎತ್ತಿ ತೋರಿಸುತ್ತದೆ. ನಷ್ಟ ಮತ್ತು ಸೀಮಿತ ಬೆಂಬಲದ ನಡುವೆ ರೂಪುಗೊಂಡ ಬಾಲ್ಯದಿಂದ ಹೊರಬಂದು, ಅವರು ಈಗ ಹೆಚ್ಚಿನ ಸ್ಥಿರತೆ ಮತ್ತು ಸ್ವಾವಲಂಬನೆಯತ್ತ ಸಾಗುತ್ತಿದ್ದಾರೆ.
*****
(ಪ್ರಕಟಣೆ ಐ.ಡಿ.: 2310314)
ವಿಸಿಟರ್ ಕೌಂಟರ್ : 6