ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ


ಬಾಹ್ಯಾಕಾಶದ ಸಾಧ್ಯತೆಗಳು ಅನಂತವಾಗಿವೆ ಮತ್ತು ನಮ್ಮ ಜವಾಬ್ದಾರಿಯು ಸಾಮೂಹಿಕವಾಗಿದೆ: ಪ್ರಧಾನಮಂತ್ರಿ

ನಮ್ಮ ಆಯ್ಕೆಗಳು ಸ್ಪಷ್ಟವಾಗಿರಬೇಕು; ಸಂಘರ್ಷಕ್ಕಿಂತ ಸಹಕಾರ, ಅಲ್ಪಾವಧಿಯ ಲಾಭಕ್ಕಿಂತ ಸುಸ್ಥಿರತೆ ಮತ್ತು ಹೊರಗಿಡುವಿಕೆಗಿಂತ ಒಳಗೊಳ್ಳುವಿಕೆಗೆ ಆದ್ಯತೆ ನೀಡಬೇಕು: ಪ್ರಧಾನಮಂತ್ರಿ

ಅಂತಾರಾಷ್ಟ್ರೀಯ ಕಾನೂನು, ಸಂವಾದ ಮತ್ತು ಬಹುಪಕ್ಷೀಯ ಸಹಕಾರದಲ್ಲಿ ಭದ್ರವಾಗಿರುವ ಸುರಕ್ಷಿತ, ಶಾಂತಿಯುತ ಮತ್ತು ಸುಸ್ಥಿರ ಬಾಹ್ಯಾಕಾಶ ಕ್ಷೇತ್ರವನ್ನು ನಾವು ಬೆಂಬಲಿಸುತ್ತೇವೆ: ಪ್ರಧಾನಮಂತ್ರಿ

ಈ ಪ್ರಯಾಣದ ಕೇಂದ್ರಬಿಂದುವಾಗಿರುವ ಇಸ್ರೋ, ತನ್ನ ಶ್ರೇಷ್ಠತೆ ಮತ್ತು ವೆಚ್ಚ ಪರಿಣಾಮಕಾರಿ ಯೋಜನೆಗಳಿಗಾಗಿ ಜಾಗತಿಕ ಪ್ರಶಂಸೆಯನ್ನು ಗಳಿಸಿದೆ: ಪ್ರಧಾನಮಂತ್ರಿ

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಬಾಹ್ಯಾಕಾಶ ಶೃಂಗಸಭೆಯು ಒಂದು ಸ್ಪಷ್ಟ ಸಂದೇಶವನ್ನು ನೀಡಲಿ: ಇಡೀ ಮಾನವಕುಲಕ್ಕಾಗಿ ಮತ್ತು ಮುಂದಿನ ಪೀಳಿಗೆಗಾಗಿ ನಾವು ಒಟ್ಟಾಗಿ ಅನ್ವೇಷಿಸುವೆವು, ಒಟ್ಟಾಗಿ ಹೊಸತನವನ್ನು ಅನ್ವೇಷಿಸುವೆವು ಮತ್ತು ಒಟ್ಟಾಗಿ ಬಾಹ್ಯಾಕಾಶವನ್ನು ರಕ್ಷಿಸುತ್ತೇವೆ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 10 SEP 2026 3:51PM by PIB Bengaluru

ಫ್ರಾನ್ಸ್ ದೇಶದ ಪ್ಯಾರಿಸ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಉದ್ದೇಶಿಸಿ ಮಾತನಾಡಿದರು. ಸಕಾಲಿಕ ಉಪಕ್ರಮವನ್ನು ಕೈಗೊಂಡು ಪ್ರೀತಿಯ ಆಹ್ವಾನ ನೀಡಿದ್ದಕ್ಕಾಗಿ ಪ್ರಧಾನಮಂತ್ರಿಯವರು ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಧನ್ಯವಾದ ತಿಳಿಸಿದರು. ಈ ಐತಿಹಾಸಿಕ ಸಮಾವೇಶದಲ್ಲಿ ಭಾಗವಹಿಸಲು ಸಂತಸ ವ್ಯಕ್ತಪಡಿಸಿದ ಶ್ರೀ ಮೋದಿ, "ಮೊದಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಶೃಂಗಸಭೆಯ ಭಾಗವಾಗಲು ನನಗೆ ಸಂತೋಷವಾಗಿದೆ" ಎಂದು ಹೇಳಿದರು.

ಬಾಹ್ಯಾಕಾಶದ ಕಡೆಗೆ ಮಾನವಕುಲಕ್ಕಿರುವ ನಿರಂತರ ಕುತೂಹಲವನ್ನು ಪ್ರತಿಬಿಂಬಿಸಿದ ಪ್ರಧಾನಮಂತ್ರಿಯವರು, ಬಾಹ್ಯಾಕಾಶವು ಶತಮಾನಗಳಿಂದ ಮಾನವನ ಕಲ್ಪನಾಶಕ್ತಿಯನ್ನು ಪ್ರೇರೇಪಿಸಿದೆ ಎನ್ನುವ ಅಂಶದ ಕಡೆಗೆ ಗಮನ ಸೆಳೆದರು. ವಾತಾವರಣ, ಬೆಳೆಗಳಿಂದ ಹಿಡಿದು ಸಾಗರಗಳು ಮತ್ತು ಸಮುದಾಯಗಳವರೆಗೆ ಭೂಮಿಯ ಮೇಲಿನ ದೈನಂದಿನ ಜೀವನವನ್ನು ಇಂದು ಈ ಕ್ಷೇತ್ರವೇ ರೂಪಿಸುತ್ತಿದೆ ಎಂದು ಉಲ್ಲೇಖಿಸಿದರು. "ಬಾಹ್ಯಾಕಾಶದ ಸಾಧ್ಯತೆಗಳು ಅನಂತವಾಗಿವೆ ಮತ್ತು ನಮ್ಮ ಜವಾಬ್ದಾರಿಯು ಸಾಮೂಹಿಕವಾಗಿದೆ" ಎಂದು ಶ್ರೀ ಮೋದಿ ಹೇಳಿದರು.

ಬಾಹ್ಯಾಕಾಶ ವಾತಾವರಣದ ಹೆಚ್ಚುತ್ತಿರುವ ಜಟಿಲತೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬಾಹ್ಯಾಕಾಶ ಕಕ್ಷೆಗಳು ಹೆಚ್ಚು ದಟ್ಟಣೆಯಾಗುತ್ತಿವೆ, ತಂತ್ರಜ್ಞಾನಗಳು ಹೆಚ್ಚು ಶಕ್ತಿಶಾಲಿಯಾಗುತ್ತಿವೆ ಮತ್ತು ಇದರಲ್ಲಿ ತೊಡಗಿಸಿಕೊಂಡಿರುವ ದೇಶಗಳು ಮತ್ತು ಸಂಸ್ಥೆಗಳು ಹೆಚ್ಚಾಗುತ್ತಿವೆ ಎಂದು ಒತ್ತಿಹೇಳಿದರು. ಜಾಗತಿಕ ಸಹಭಾಗಿತ್ವವು ಅಲ್ಪಾವಧಿಯ ಲಾಭಗಳಿಗಿಂತ ದೀರ್ಘಕಾಲದ ಸುಸ್ಥಿರತೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು. "ನಮ್ಮ ಆಯ್ಕೆಗಳು ಸ್ಪಷ್ಟವಾಗಿರಬೇಕು: ಸಂಘರ್ಷಕ್ಕಿಂತ ಸಹಕಾರ, ಅಲ್ಪಾವಧಿಯ ಲಾಭಕ್ಕಿಂತ ಸುಸ್ಥಿರತೆ ಮತ್ತು ಹೊರಗಿಡುವಿಕೆಗಿಂತ ಒಳಗೊಳ್ಳುವಿಕೆಗೆ ಆದ್ಯತೆ ನೀಡಬೇಕು" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಭಾರತದ ತತ್ವದ ದೃಷ್ಟಿಕೋನವನ್ನು ಬಾಹ್ಯಾಕಾಶಕ್ಕೆ ಕೂಡಿಸುತ್ತಾ ಪ್ರಧಾನಮಂತ್ರಿಯವರು, ದೇಶದ ವಿಧಾನವು 'ವಸುಧೈವ ಕುಟುಂಬಕಂ' ಅಂದರೆ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎನ್ನುವ  ನೀತಿಯಲ್ಲಿ ದೃಢವಾಗಿ ಬೇರೂರಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸುರಕ್ಷಿತ ಕ್ಷೇತ್ರವನ್ನು ಖಚಿತಪಡಿಸಿಕೊಳ್ಳಲು ಈ ಏಕತೆಯ ಭಾವನೆಯು ನಮ್ಮ ಗ್ರಹದಿಂದ ಆಚೆಗೂ ಪ್ರಯಾಣಿಸಬೇಕು ಎಂದು ಅವರು ಒತ್ತಿ ಹೇಳಿದರು. "ಅಂತಾರಾಷ್ಟ್ರೀಯ ಕಾನೂನು, ಸಂವಾದ ಮತ್ತು ಬಹುಪಕ್ಷೀಯ ಸಹಕಾರದಲ್ಲಿ ನೆಲೆಗೊಂಡಿರುವ ಸುರಕ್ಷಿತ, ಶಾಂತಿಯುತ ಮತ್ತು ಸುಸ್ಥಿರ ಬಾಹ್ಯಾಕಾಶ ಕ್ಷೇತ್ರವನ್ನು ನಾವು ಬೆಂಬಲಿಸುತ್ತೇವೆ" ಎಂದು ಶ್ರೀ ಮೋದಿ ಸ್ಪಷ್ಟಪಡಿಸಿದರು.

ಪಾರದರ್ಶಕ ಸಂಶೋಧನೆಯ ಮಹತ್ವದ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತದ ಬಾಹ್ಯಾಕಾಶ ಪಯಣವು ಜಾಗತಿಕ ಕಲ್ಯಾಣದ ತತ್ವವನ್ನು ಅತ್ಯುತ್ತಮವಾಗಿ ಪ್ರತಿಬಿಂಬಿಸುತ್ತದೆ ಎಂದು ಒತ್ತಿಹೇಳಿದರು. ಜಾಗತಿಕ ಪ್ರಗತಿಗೆ ಮಾಹಿತಿಯ ನೈತಿಕ ಹಂಚಿಕೆ ಅತ್ಯಂತ ಮುಖ್ಯ ಎನ್ನುವ ಅಂಶದ ಕಡೆಗೆ ಅವರು ಗಮನ ಸೆಳೆದರು. "ವೈಜ್ಞಾನಿಕ ದತ್ತಾಂಶವು ಮುಕ್ತತೆ ಮತ್ತು ಪ್ರಾಮಾಣಿಕತೆಯಿಂದ ಸಾರ್ವಜನಿಕ ಒಳಿತಿಗಾಗಿ ಬಳಕೆಯಾಗಬೇಕು" ಎಂದು ಶ್ರೀ ಮೋದಿ ಹೇಳಿದರು.

ದೇಶದ ಬಾಹ್ಯಾಕಾಶ ಉದ್ಯಮದ ಅದ್ಭುತ ಪಥವನ್ನು ಶ್ಲಾಘಿಸುತ್ತಾ ಪ್ರಧಾನಮಂತ್ರಿಯವರು, ಹವಾಮಾನ ಮುನ್ಸೂಚನೆ, ವಿಪತ್ತು ನಿರ್ವಹಣೆ ಮತ್ತು ಸಂಚಾರಕ್ಕಾಗಿ ಉಪಗ್ರಹ ತಂತ್ರಜ್ಞಾನದ ಪ್ರಾಯೋಗಿಕ ಪ್ರಯೋಜನಗಳನ್ನು ಉಲ್ಲೇಖಿಸಿದರು. ಈ ಸುಧಾರಿತ ಸಾಮರ್ಥ್ಯಗಳು ರೈತರು ಮತ್ತು ಮೀನುಗಾರರು ಸೇರಿದಂತೆ ತಳಮಟ್ಟದ ಸಮುದಾಯಗಳಿಗೆ ನೇರವಾಗಿ ಸೇವೆಯನ್ನು ಒದಗಿಸುತ್ತಿವೆ ಎಂದು ಅವರು ಹೇಳಿದರು. "ಈ ಪಯಣದ ಕೇಂದ್ರಬಿಂದುವಾಗಿರುವ ಇಸ್ರೋ, ತನ್ನ ಶ್ರೇಷ್ಠತೆ ಮತ್ತು ವೆಚ್ಚ ಪರಿಣಾಮಕಾರಿ ಯೋಜನೆಗಳಿಗಾಗಿ ಜಗತ್ತಿನ ಮೆಚ್ಚುಗೆಯನ್ನು ಗಳಿಸಿದೆ" ಎಂದು ಶ್ರೀ ಮೋದಿ ಹೇಳಿದರು.

ಉಡಾವಣಾ ಸೇವೆಗಳಲ್ಲಿ ಭಾರತದ ದ್ವಿಪಕ್ಷೀಯ ಹಾಗೂ ಅಂತಾರಾಷ್ಟ್ರೀಯ ಸಹಕಾರದ ಹೆಜ್ಜೆಗುರುತುಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ಸ್ವದೇಶಿ ರಾಕೆಟ್ ಗಳ ಮೂಲಕ 34 ದೇಶಗಳ 430ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ತಲುಪಿಸಿರುವುದನ್ನು ಉಲ್ಲೇಖಿಸಿದರು. ಈ ಜಂಟಿ ವೈಜ್ಞಾನಿಕ ಪ್ರಯತ್ನಗಳ ವ್ಯಾಪಕ ಜಾಗತಿಕ ಉಪಯೋಗವನ್ನು ಅವರು ಒತ್ತಿಹೇಳಿದರು. "ಇಸ್ರೋದ ತಂತ್ರಜ್ಞಾನಗಳು ಮತ್ತು ಸಹಭಾಗಿತ್ವಗಳು ಭಾರತಕ್ಕೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ಸೇವೆಯನ್ನು ಸಲ್ಲಿಸುತ್ತಿವೆ" ಎಂದು ಶ್ರೀ ಮೋದಿ ಹೇಳಿದರು.

ಈ ಸಾಂಸ್ಥಿಕ ಯಶಸ್ಸಿಗೆ ದೇಶದ ಮಾನವ ಸಂಪನ್ಮೂಲವೇ ಕಾರಣ ಎಂದು ಹೇಳಿದ ಪ್ರಧಾನಮಂತ್ರಿಯವರು, ಭಾರತೀಯ ವಿಜ್ಞಾನಿಗಳು, ಎಂಜಿನಿಯರ್ ಗಳು ಮತ್ತು ತಂತ್ರಜ್ಞರ ಪೀಳಿಗೆಯ  ಸಮರ್ಪಣೆ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಿದರು. ಅವರ ಅವಿಶ್ರಾಂತ ಶ್ರಮವು ಬಾಹ್ಯಾಕಾಶ ಯಾನ ಮಾಡುವ ದೇಶಗಳ ನಡುವೆ ಭಾರತಕ್ಕೆ ಹೆಮ್ಮೆಯ ಸ್ಥಾನವನ್ನು ತಂದುಕೊಟ್ಟಿದೆ ಎಂದು ಅವರು ಶ್ಲಾಘಿಸಿದರು. "ಹಗಲಿರುಳು ಶ್ರಮಿಸುತ್ತಾ, ಅವರು ಯೋಜನೆಗಳ ನಂತರ ಯೋಜನೆ, ಯಶಸ್ಸಿನ ನಂತರ ಯಶಸ್ಸನ್ನು ಸಾಧಿಸುತ್ತಾ ಇಸ್ರೋದ ಜಾಗತಿಕ ಖ್ಯಾತಿಯನ್ನು ನಿರ್ಮಿಸಿದ್ದಾರೆ" ಎಂದು ಶ್ರೀ ಮೋದಿ ಹೇಳಿದರು.

ಗ್ರಹಗಳ ವಿಜ್ಞಾನದಲ್ಲಿನ ಐತಿಹಾಸಿಕ ಮೈಲಿಗಲ್ಲುಗಳನ್ನು ನೆನೆದ ಪ್ರಧಾನಮಂತ್ರಿಯವರು, ಆದಿತ್ಯ-ಎಲ್1 ಪ್ರಸ್ತುತ ಸೂರ್ಯನ ರಹಸ್ಯಗಳನ್ನು ಬಿಚ್ಚಿಡುತ್ತಿದೆ ಮತ್ತು ಕಳೆದ ವರ್ಷ ಭಾರತೀಯ ಗಗನಯಾತ್ರಿಯೊಬ್ಬರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಹೊಸ ಜಾಗತಿಕ ಮೈಲಿಗಲ್ಲನ್ನು ಸ್ಥಾಪಿಸಿದ ಐತಿಹಾಸಿಕ ಚಂದ್ರನನ್ನು ಸ್ಪರ್ಶಿಸುವುದರ ಬಗ್ಗೆ ಅವರು ಹೆಮ್ಮೆಯಿಂದ ಸ್ಮರಿಸಿದರು. "ಚಂದ್ರನ ದಕ್ಷಿಣ ಧ್ರುವದ ಬಳಿ ನೌಕೆಯನ್ನು ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಚಂದ್ರಯಾನ-3 ಭಾರತವನ್ನು ಪಾತ್ರಗೊಳಿಸಿತು" ಎಂದು ಶ್ರೀ ಮೋದಿ ಹೇಳಿದರು.

ರಾಷ್ಟ್ರೀಯ ಬಾಹ್ಯಾಕಾಶ ಯೋಜನೆಯ ಮಹತ್ವಾಕಾಂಕ್ಷೆಯ ಭವಿಷ್ಯದ ಗುರಿಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, 2035ರ ವೇಳೆಗೆ ಸ್ವದೇಶಿ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಮತ್ತು 2040ರ ವೇಳೆಗೆ ಚಂದ್ರನ ಮೇಲೆ ಗಗನಯಾತ್ರಿಯನ್ನು ಕಳುಹಿಸುವ ಯೋಜನೆಗಳನ್ನು ಘೋಷಿಸಿದರು. ಈ ದೀರ್ಘಕಾಲದ ಪ್ರಯತ್ನಗಳು ಒಂದೇ ಒಂದು ಪ್ರಮುಖ ಉದ್ದೇಶದಿಂದ ನಡೆಸಲ್ಪಡುತ್ತಿವೆ ಎಂದು ಅವರು ಹೇಳಿದರು. "ಈ ಎಲ್ಲಾ ಪ್ರಯತ್ನಗಳಲ್ಲಿ, ನಮ್ಮ ಮಾರ್ಗದರ್ಶಿ ತತ್ವವು ಸ್ಪಷ್ಟವಾಗಿದೆ: ಅವುಗಳ ಪ್ರಯೋಜನಗಳು ಇಡೀ ಮಾನವಕುಲವನ್ನು ತಲುಪಬೇಕು" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಭಾರತದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದ ವೇಗದ ಬೆಳವಣಿಗೆಯನ್ನು ವಿವರಿಸಿದ ಪ್ರಧಾನಮಂತ್ರಿಯವರು, ಸಾಂಸ್ಥಿಕ ಸಂಸ್ಥೆಗಳ ಜೊತೆಗೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರವು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಹೇಳಿದರು. ಉದಯೋನ್ಮುಖ ನವೋದ್ಯಮಗಳು   ಮತ್ತು ಸ್ಥಾಪಿತ ಸಂಸ್ಥೆಗಳ ನಡುವೆ ಏರ್ಪಡುತ್ತಿರುವ ಕ್ರಿಯಾತ್ಮಕ ಸಹಕಾರದ ಬಗ್ಗೆ ಅವರು ಗಮನ ಸೆಳೆದರು. "ಉದ್ಯಮಶೀಲತೆಯ ಶಕ್ತಿಯು ಇಸ್ರೋದ ಶ್ರೇಷ್ಠತೆಯೊಂದಿಗೆ ಕೈಜೋಡಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.

ದೀರ್ಘಕಾಲದ ದ್ವಿಪಕ್ಷೀಯ ಬಾಂಧವ್ಯವನ್ನು ಗೌರವಿಸಿದ ಪ್ರಧಾನಮಂತ್ರಿಯವರು, 1960ರ ದಶಕದಲ್ಲಿ ಕೇರಳದ ತುಂಬದಲ್ಲಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಆರಂಭದಿಂದಲೂ ಫ್ರಾನ್ಸ್ ನಂಬಿಕಸ್ಥ ಪಾಲುದಾರನಾಗಿದೆ ಎಂದು ನೆನಪಿಸಿಕೊಂಡರು. ಪ್ರಸ್ತುತ ಜಂಟಿ ಉಪಕ್ರಮಗಳು ಉನ್ನತ ಮಟ್ಟದ ಸಂಶೋಧನೆಯನ್ನು ಸ್ಪಷ್ಟ ಸಾಮಾಜಿಕ ಪ್ರಯೋಜನಗಳೊಂದಿಗೆ ಯಶಸ್ವಿಯಾಗಿ ವಿಲೀನಗೊಳಿಸುತ್ತಿವೆ ಎಂದು ಅವರು ಒತ್ತಿಹೇಳಿದರು. "ಇಂದು, ನಮ್ಮ ಸಹಕಾರವು ಭೂಮಿಯ ವೀಕ್ಷಣೆ ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ವೈಜ್ಞಾನಿಕ ಶ್ರೇಷ್ಠತೆಯನ್ನು ಮಾನವ ಉದ್ದೇಶದೊಂದಿಗೆ ಒಂದಾಗಿಸುತ್ತಿದೆ" ಎಂದು ಶ್ರೀ ಮೋದಿ ಹೇಳಿದರು.

ಅಂತಾರಾಷ್ಟ್ರೀಯ ಪಾಲುದಾರರಿಗೆ ಮುಕ್ತ ಆಹ್ವಾನ ನೀಡಿದ ಪ್ರಧಾನಮಂತ್ರಿಯವರು, ಮುಂಬರುವ ಸಂಶೋಧನಾ ಯೋಜನೆಗಳಲ್ಲಿ ಭಾಗವಹಿಸುವಂತೆ ಜಾಗತಿಕ ಸಮುದಾಯಕ್ಕೆ ಕರೆ ನೀಡಿದರು. ಮುಂಬರುವ ಬಾಹ್ಯಾಕಾಶ ಶೋಧನೆಯಲ್ಲಿ ಕೈಜೋಡಿಸಲು ಅವರು ವಿಶ್ವಾದ್ಯಂತ ಪಾಲುದಾರರನ್ನು ಸ್ವಾಗತಿಸಿದರು. "ಭಾರತದ ಮುಂದಿನ ಬಾಹ್ಯಾಕಾಶ ಪ್ರಯಾಣದಲ್ಲಿ ಸಹ-ಪ್ರಯಾಣಿಕರಾಗಲು ನಾವು ಫ್ರಾನ್ಸ್ ಮತ್ತು ಇಡೀ ವಿಶ್ವವನ್ನು ಆಹ್ವಾನಿಸುತ್ತೇವೆ" ಎಂದು ಶ್ರೀ ಮೋದಿ ಹೇಳಿದರು.

ತಮ್ಮ ವಿಡಿಯೋ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿಯವರು ಶೃಂಗಸಭೆಯ ಎಲ್ಲಾ ಗಣ್ಯರಿಗೆ ಶುಭಾಶಯಗಳನ್ನು ತಿಳಿಸಿದರು. ಸಹಯೋಗದ ಅನ್ವೇಷಣೆ ಮತ್ತು ಹೊಸತನದ ಮೂಲಕ ಬಾಹ್ಯಾಕಾಶ ವಾತಾವರಣವನ್ನು ರಕ್ಷಿಸಲು ಅವರು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದರು. "ಪ್ಯಾರಿಸ್ ನ ಬಾಹ್ಯಾಕಾಶ ಶೃಂಗಸಭೆಯು ಒಂದು ಸ್ಪಷ್ಟ ಸಂದೇಶವನ್ನು ನೀಡಲಿ: ಇಡೀ ಮಾನವಕುಲಕ್ಕಾಗಿ ಮತ್ತು ಮುಂದಿನ ಪೀಳಿಗೆಗಾಗಿ ನಾವು ಒಟ್ಟಾಗಿ ಪರಿಶೋಧಿಸುತ್ತೇವೆ, ಒಟ್ಟಾಗಿ ಹೊಸತನವನ್ನು ಅನ್ವೇಷಿಸುತ್ತೇವೆ ಮತ್ತು ಒಟ್ಟಾಗಿ ಬಾಹ್ಯಾಕಾಶವನ್ನು ರಕ್ಷಿಸುತ್ತೇವೆ" ಎಂದು ಶ್ರೀ ಮೋದಿ ಹೇಳಿದರು.

 

*****


(ಪ್ರಕಟಣೆ ಐ.ಡಿ.: 2308761) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Gujarati , Odia , Tamil , Telugu , Malayalam