ಶಿಕ್ಷಣ ಸಚಿವಾಲಯ
ಸಾಕ್ಷರತೆ ಮತ್ತು ಶಿಕ್ಷಣವನ್ನು ಸಬಲೀಕರಣ ಹಾಗೂ ಸಕ್ರಿಯ ನಾಗರಿಕತ್ವದ ಸಾಧನಗಳಾಗಿ ಮರುರೂಪಿಸಬೇಕಿದೆ: ಕೇಂದ್ರ ಶಿಕ್ಷಣ ರಾಜ್ಯ ಸಚಿವರಾದ ಶ್ರೀ ಜಯಂತ್ ಚೌಧರಿ
'ಉಲ್ಲಾಸ್ -ನವ ಭಾರತ ಸಾಕ್ಷರತಾ ಕಾರ್ಯಕ್ರಮʼವು ಕಲಿಕಾರ್ಥಿಗಳಿಗೆ ಆತ್ಮವಿಶ್ವಾಸ, ಘನತೆ ಮತ್ತು ಸಮಾಜದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಿಸುತ್ತಿದೆ: ಶ್ರೀ ಜಯಂತ್ ಚೌಧರಿ
ಕೇಂದ್ರ ಶಿಕ್ಷಣ ಸಚಿವಾಲಯದಿಂದ ನವದೆಹಲಿಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನ 2026 ಆಚರಣೆ
ಪ್ರಕಟಣಾ ದಿನಾಂಕ:
08 SEP 2026 8:05PM by PIB Bengaluru
ಉಲ್ಲಾಸ್- ನವ ಭಾರತ ಸಾಕ್ಷರತಾ ಕಾರ್ಯಕ್ರಮವು ಕಲಿಕಾರ್ಥಿಗಳಿಗೆ ಆತ್ಮವಿಶ್ವಾಸ, ಘನತೆ ಮತ್ತು ಸಮಾಜದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಿಸುತ್ತಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಹಾಗೂ ಶಿಕ್ಷಣ ರಾಜ್ಯ ಸಚಿವರಾದ ಶ್ರೀ ಜಯಂತ್ ಚೌಧರಿ ಅವರು, ಹೇಳಿದರು. ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಾಕ್ಷರತಾ ದಿನ 2026ರ ರಾಷ್ಟ್ರೀಯ ಮಟ್ಟದ ಆಚರಣೆಯಲ್ಲಿ ಮಾತನಾಡಿದ ಅವರು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಮಕ್ಕಳಲ್ಲಿ ಅಪಾಯಗಳನ್ನು ಎದುರಿಸುವ ಧೈರ್ಯ ಮತ್ತು ಸೃಜನಶೀಲತೆಯ ಮೌಲ್ಯಗಳನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

ಸಾಕ್ಷರತೆ ಮತ್ತು ಶಿಕ್ಷಣವನ್ನು ಸಬಲೀಕರಣ, ಸೃಜನಶೀಲತೆ, ಘನತೆ ಮತ್ತು ಸಕ್ರಿಯ ನಾಗರಿಕತ್ವದ ಸಾಧನಗಳಾಗಿ ಮರುರೂಪಿಸುವ ಅಗತ್ಯವನ್ನು ಸಚಿವರು ಒತ್ತಿಹೇಳಿದರು. ಸಾಕ್ಷರತೆ ಎಂದರೆ ಕೇವಲ ಓದಲು ಮತ್ತು ಬರೆಯಲು ಬರುವ ಸಾಮರ್ಥ್ಯಕ್ಕೆ ಸೀಮಿತವಾಗಬಾರದು. ಅದು ವಿಷಯವನ್ನು ಅರ್ಥಮಾಡಿಕೊಳ್ಳುವಿಕೆ, ಜ್ಞಾನವನ್ನು ಅನ್ವಯಿಸುವ ಸಾಮರ್ಥ್ಯ, ಹಣಕಾಸು ಸಾಕ್ಷರತೆ ಮತ್ತು ಡಿಜಿಟಲ್ ಸಾಕ್ಷರತೆಯನ್ನೂ ಒಳಗೊಂಡಿರಬೇಕು ಎಂದು ಅವರು ಹೇಳಿದರು. ಶಿಕ್ಷಣವು ಅಂತಿಮವಾಗಿ ಸುಸ್ಥಿರ ಅಭಿವೃದ್ಧಿ, ಆರ್ಥಿಕ ಕಲ್ಯಾಣ ಮತ್ತು ಸಕ್ರಿಯ ಹಾಗೂ ಜವಾಬ್ದಾರಿಯುತ ನಾಗರಿಕರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.
ಕಲಿಕಾರ್ಥಿಗಳಲ್ಲಿ ಕುತೂಹಲ, ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಮಹತ್ವವನ್ನು ಶ್ರೀ ಚೌಧರಿ ಮತ್ತಷ್ಟು ಒತ್ತಿಹೇಳಿದರು. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಯುವಜನರಿಗೆ ಕೇವಲ ಜ್ಞಾನವನ್ನು ನೀಡುವುದಷ್ಟೇ ಅಲ್ಲದೆ, ಅದನ್ನು ಅರ್ಥಪೂರ್ಣವಾಗಿ ಅನ್ವಯಿಸುವ ಆತ್ಮವಿಶ್ವಾಸ ಮತ್ತು ಸಾಮರ್ಥ್ಯವನ್ನೂ ಶಿಕ್ಷಣ ಒದಗಿಸಬೇಕು ಎಂದು ಅವರು ಹೇಳಿದರು. ವಿಭಿನ್ನವಾಗಿ ಆಲೋಚಿಸುವಂತೆ, ಪ್ರಸ್ತುತ ವ್ಯವಸ್ಥೆಗಳನ್ನು ಪ್ರಶ್ನಿಸುವಂತೆ ಹಾಗೂ ನವಭಾರತ ನಿರ್ಮಾಣಕ್ಕೆ ಸೃಜನಾತ್ಮಕವಾಗಿ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಮತ್ತು ನಾಗರಿಕರಿಗೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ಪ್ರೊ. (ಡಾ.) ಮಾಣಿಕ್ ಸಾಹಾ ಅವರು, ರಾಜ್ಯದ ಸಾಮೂಹಿಕ ಪ್ರಯತ್ನಗಳ ಫಲವಾಗಿ ತ್ರಿಪುರಾ ಶೇ. 95.6ರಷ್ಟು ಸಾಕ್ಷರತಾ ಪ್ರಮಾಣವನ್ನು ಸಾಧಿಸಿದ್ದು, ಸಂಪೂರ್ಣ ಸಾಕ್ಷರ ರಾಜ್ಯವೆಂದು ಘೋಷಿಸಲು ಭಾರತ ಸರ್ಕಾರ ನಿಗದಿಪಡಿಸಿರುವ ಮಾನದಂಡವನ್ನು ದಾಟಿದೆ ಎಂದು ಹೇಳಿದರು. ಮುಂದಿನ ಮೂರರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಶಾಲೆ ತೊರೆಯುವವರ ಪ್ರಮಾಣವನ್ನು ಸಾಧ್ಯವಾದಷ್ಟು ಕನಿಷ್ಠ ಮಟ್ಟಕ್ಕೆ ತಗ್ಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ಹಿಮಾಚಲ ಪ್ರದೇಶದ ಶಿಕ್ಷಣ ಸಚಿವರಾದ ಶ್ರೀ ರೋಹಿತ್ ಠಾಕೂರ್; ಉತ್ತರಾಖಂಡದ ಶಿಕ್ಷಣ ಸಚಿವರಾದ ಡಾ. ಧನ್ ಸಿಂಗ್ ರಾವತ್; ಮಿಜೋರಾಂನ ಶಿಕ್ಷಣ ಮತ್ತು ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಇಲಾಖೆ ಸಚಿವ ಡಾ. ವನ್ಲಾಲ್ಥ್ಲಾನಾ; ಮತ್ತು ಸಿಕ್ಕಿಂನ ಶಾಲಾ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾದ ಶ್ರೀ ರಾಜು ಬಾಸ್ನೆಟ್ ಅವರು ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಶ್ರೀ ಟಿ. ಕೆ. ಅನಿಲ್ ಕುಮಾರ್; ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಅರ್ಚನಾ ಶರ್ಮಾ ಅವಸ್ಥಿ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಆಚರಣೆಯಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಶ್ರಯದಲ್ಲಿ, "ಜನರು, ಗ್ರಹ ಮತ್ತು ಸಮೃದ್ಧಿಗಾಗಿ ಸಾಕ್ಷರತೆ" ಎಂಬ ಈ ವರ್ಷದ ವಿಷಯದಡಿ ಅಂತರರಾಷ್ಟ್ರೀಯ ಸಾಕ್ಷರತಾ ದಿನ 2026ರ ಎರಡು ದಿನಗಳ ಆಚರಣೆಯ ಭಾಗವಾಗಿ ಆಯೋಜಿಸಲಾಯಿತು. ನಾಳೆ ರಾಷ್ಟ್ರೀಯ ಬಾಲ ಭವನದಲ್ಲಿ 'ಉಲ್ಲಾಸ್ ಮೇಳ'ವನ್ನು ಆಯೋಜಿಸಲಾಗುವುದು. ಇದು 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಭಾಗವಹಿಸುವವರನ್ನು ಒಂದೆಡೆ ತರಲಿದ್ದು, ನವ-ಸಾಕ್ಷರರು, ಸ್ವಯಂಸೇವಕ ಶಿಕ್ಷಕರು ಮತ್ತು ಇತರ ಪಾಲುದಾರರಿಗೆ ತಮ್ಮ ಅನುಭವಗಳು, ಸಾಧನೆಗಳು, ನಾವೀನ್ಯತೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸುತ್ತದೆ.

ಕೇಂದ್ರ ಶಿಕ್ಷಣ ಸಚಿವಾಲಯವು ಸೆಪ್ಟೆಂಬರ್ 1ರಿಂದ 14ರವರೆಗೆ ದೇಶಾದ್ಯಂತ ಸಾಕ್ಷರತಾ ಪಾಕ್ಷಿಕವನ್ನು ಆಯೋಜಿಸುತ್ತಿದ್ದು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕ್ರಮಗಳು, ರ‍್ಯಾಲಿಗಳು, ಬೀದಿ ನಾಟಕಗಳು, ನೋಂದಣಿ ಅಭಿಯಾನಗಳು, ಸಾಮಾಜಿಕ ಮಾಧ್ಯಮ ಅಭಿಯಾನಗಳು ಹಾಗೂ ಇತರ ಜನಸಂಪರ್ಕ ಚಟುವಟಿಕೆಗಳನ್ನು ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಅಭಿಯಾನವು ಜನರ ವ್ಯಾಪಕ ಭಾಗವಹಿಸುವಿಕೆಗೆ ಉತ್ತೇಜನ ನೀಡುವ ಮೂಲಕ ಎಲ್ಲ ನಾಗರಿಕರಲ್ಲಿ ‘ಕರ್ತವ್ಯಪ್ರಜ್ಞೆ’ ಮತ್ತು ‘ಜನಭಾಗೀದಾರಿ’ ಮನೋಭಾವವನ್ನು ಬೆಳೆಸಲಿದೆ. ಇದು ʼಉಲ್ಲಾಸ್ – ನವ ಭಾರತ ಸಾಕ್ಷರತಾ ಕಾರ್ಯಕ್ರಮʼದ ದೃಷ್ಟಿಕೋನದಡಿ ಭಾರತವನ್ನು ಸಂಪೂರ್ಣ ಸಾಕ್ಷರ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಸಾಧಿಸಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರಿಗೂ ಮೂಲಭೂತ ಸಾಕ್ಷರತೆ ಮತ್ತು ಜೀವನಪರ್ಯಂತ ಕಲಿಕೆಗೆ ಅವಕಾಶಗಳಿರುವ ಸಮಾಜವನ್ನು ನಿರ್ಮಿಸುವುದರೊಂದಿಗೆ “ಜನ್ ಜನ್ ಸಾಕ್ಷರ್” ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸುವ ಸಾಮೂಹಿಕ ಬದ್ಧತೆಯನ್ನು ಈ ಅಭಿಯಾನ ಮತ್ತಷ್ಟು ದೃಢಪಡಿಸುತ್ತದೆ.
*****
(ಪ್ರಕಟಣೆ ಐ.ಡಿ.: 2308100)
ವಿಸಿಟರ್ ಕೌಂಟರ್ : 9