ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತವು ಜಾಗತಿಕ ವೈದ್ಯಕೀಯ ಮತ್ತು ಆರೋಗ್ಯ ರಕ್ಷಣೆಯ ತಾಣವಾಗಿ ಹೊರಹೊಮ್ಮಲು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಕರೆ
ಭಾರತದ ಎಫ್‌ಟಿಎ ಜಾಲವು ಆರೋಗ್ಯ ಉದ್ಯಮಕ್ಕೆ ಮಾರುಕಟ್ಟೆ ವ್ಯವಹಾರದ ಅವಕಾಶಗಳನ್ನು ವಿಸ್ತರಿಸುತ್ತದೆ: ಶ್ರೀ ಗೋಯಲ್
ಭಾರತವು ಮೆಡ್‌ಟೆಕ್ ನಾವೀನ್ಯತೆ, ಇನ್‌ಕ್ಯುಬೇಷನ್ ಮತ್ತು ಬೌದ್ಧಿಕ ಆಸ್ತಿಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಬೇಕು: ಶ್ರೀ ಗೋಯಲ್
ಪ್ರಕಟಣಾ ದಿನಾಂಕ:
07 SEP 2026 2:46PM by PIB Bengaluru
ಭಾರತವು 'ವಿಶ್ವದ ಫಾರ್ಮಸಿ' ಎಂಬ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡು ಜಾಗತಿಕ ವೈದ್ಯಕೀಯ ಮತ್ತು ಆರೋಗ್ಯ ರಕ್ಷಣೆಯ ತಾಣವಾಗಿ ಹೊರಹೊಮ್ಮಲು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ 'ಫಾರ್ಮಾ ಮ್ಯಾಕ್ಟೆಕ್ ಮತ್ತು ಲ್ಯಾಬ್‌ನೆಕ್ಸ್ಟ್ ಎಕ್ಸ್‌ಪೋ 2026' ಅನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗೋಯಲ್, ರೋಗನಿವಾರಣೆ, ಸ್ವಾಸ್ಥ್ಯ, ಆರೈಕೆ, ರೋಗನಿರ್ಣಯ, ಪ್ರಯೋಗಾಲಯ ಸಾಮರ್ಥ್ಯಗಳು, ವೈದ್ಯಕೀಯ ಉಪಕರಣಗಳು, ಟೆಲಿಮೆಡಿಸಿನ್, ಟೆಲಿ ಕನ್ಸಲ್ಟೇಷನ್, ಡಿಜಿಟಲ್ ಆರೋಗ್ಯ ಪರಿಹಾರಗಳು, ನಾವೀನ್ಯತೆ ಹಾಗೂ ನೂತನ ಔಷಧಗಳು ಮತ್ತು ಆಧುನಿಕ ಉಪಕರಣಗಳ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಒಳಗೊಂಡಂತೆ ಕೇವಲ ಚಿಕಿತ್ಸೆಯಷ್ಟೇ ಅಲ್ಲದೆ ಆರೋಗ್ಯ ರಕ್ಷಣೆಯ ಬೆಳೆಯುತ್ತಿರುವ ಮಹತ್ವವನ್ನು ಎತ್ತಿ ಹಿಡಿದರು.
ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಉದ್ಭವಿಸುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಸಚಿವರು ಉದ್ಯಮಕ್ಕೆ ಆಗ್ರಹಿಸಿದರು. 2014 ಕ್ಕಿಂತ ಮೊದಲು, ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳು ಒಟ್ಟಾರೆಯಾಗಿ ಸುಮಾರು $10 ಟ್ರಿಲಿಯನ್ ಜಿಡಿಪಿ ಹೊಂದಿರುವ ಅರ್ಥವ್ಯವಸ್ಥೆಗಳನ್ನು ಒಳಗೊಂಡಿದ್ದವು, ಆದರೆ ಕಳೆದ ನಾಲ್ಕರಿಂದ ನಾಲ್ಕುವರೆ ವರ್ಷಗಳಲ್ಲಿ ಅಂತಿಮಗೊಳಿಸಲಾದ ಒಂಬತ್ತು ಮುಕ್ತ ವ್ಯಾಪಾರ ಮತ್ತು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ಒಟ್ಟು ಸುಮಾರು $60 ಟ್ರಿಲಿಯನ್ ಜಿಡಿಪಿ ಹೊಂದಿರುವ ಅರ್ಥವ್ಯವಸ್ಥೆಗಳನ್ನು ಒಳಗೊಂಡಿವೆ ಎಂದು ಅವರು ಒತ್ತಿ ಹೇಳಿದರು. ಪ್ರಸ್ತುತ ನಡೆಯುತ್ತಿರುವ ಮಾತುಕತೆಗಳು ಈ ವ್ಯಾಪ್ತಿಯನ್ನು ಸುಮಾರು $75 ಟ್ರಿಲಿಯನ್‌ಗೆ ವಿಸ್ತರಿಸಬಹುದು, ಇದು ಆದ್ಯತೆಯ ಕಡಿಮೆ-ಸುಂಕದ ಮಾರುಕಟ್ಟೆ ವಹಿವಾಟು, ಸೇವೆಗಳು ಮತ್ತು ಚಲನಶೀಲತೆಗೆ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.
ಸರ್ಕಾರವು ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಮತ್ತು ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಪಾಲುದಾರನಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ ಎಂಬುದನ್ನು ಶ್ರೀ ಗೋಯಲ್ ಒತ್ತಿ ಹೇಳಿದರು. ದೇಶದ ಅಭಿವೃದ್ಧಿಯ ಪಯಣದಲ್ಲಿ ಭಾಗವಹಿಸಲು ಮತ್ತು ಎಲ್ಲರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಅವಕಾಶಗಳನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲು ಅವರು ಪಾಲುದಾರರಿಗೆ ಕರೆ ನೀಡಿದರು.
ವೈದ್ಯಕೀಯ ಮತ್ತು ಔಷಧೀಯ ಯಂತ್ರೋಪಕರಣಗಳು, ಉಪಭೋಗ್ಯ ವಸ್ತುಗಳು ಮತ್ತು ಸಂಬಂಧಿತ ವಲಯಗಳು ಸರಕು ರಫ್ತು, ಆಮದು ಪರ್ಯಾಯ ಮತ್ತು ಸೇವೆಗಳ ರಫ್ತಿಗೆ ಗಮನಾರ್ಹ ಸಾಮರ್ಥ್ಯವನ್ನು ಹೊಂದಿರುವ ಹಾಗೂ ಬೆಳೆಯುತ್ತಿರುವ ಕ್ಷೇತ್ರವನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು. ಆರೋಗ್ಯ ರಕ್ಷಣೆಯ ಪರಿಸರ ವ್ಯವಸ್ಥೆಯು ಕೋಟ್ಯಂತರ ಉದ್ಯೋಗಗಳನ್ನು, ಸಾವಿರಾರು ವ್ಯಾಪಾರ ಅವಕಾಶಗಳನ್ನು ಮತ್ತು ಲಕ್ಷಾಂತರ ಹೊಸ ಸ್ಟಾರ್ಟ್‌ಅಪ್‌ಗಳನ್ನು, ವಿಶೇಷವಾಗಿ ಮೆಡ್‌ಟೆಕ್ ಕ್ಷೇತ್ರದಲ್ಲಿ ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು. ಈ ವಲಯವು ದೇಶಾದ್ಯಂತ ಗುಣಮಟ್ಟದ ಆರೋಗ್ಯ ರಕ್ಷಣೆಯ ಲಭ್ಯತೆಗೆ ಕೊಡುಗೆ ನೀಡುವಾಗ ಯುವಜನರಿಗೆ ವ್ಯಾಪಾರ ಅವಕಾಶಗಳು, ಉದ್ಯೋಗಗಳು ಮತ್ತು ಆದಾಯವನ್ನು ಸೃಷ್ಟಿಸುತ್ತದೆ ಎಂದು ಅವರು ತಿಳಿಸಿದರು.
ವಿನ್ಯಾಸ, ಹಕ್ಕುಸ್ವಾಮ್ಯಗಳು, ಪೇಟೆಂಟ್ ಕಾಯ್ದೆಗಳು ಮತ್ತು ಬೌದ್ಧಿಕ ಆಸ್ತಿ ಪರಿಸರ ವ್ಯವಸ್ಥೆಯಲ್ಲಿನ ಸುಧಾರಣೆಗಳ ಜೊತೆಗೆ ಮೆಡ್‌ಟೆಕ್, ವೈದ್ಯಕೀಯ ಉಪಕರಣಗಳು ಮತ್ತು ಉಪಭೋಗ್ಯ ವಸ್ತುಗಳಿಗೆ ಸ್ಟಾರ್ಟ್‌ಅಪ್ ಇನ್‌ಕ್ಯುಬೇಷನ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಚಿವರು ಕರೆ ನೀಡಿದರು. ಇತರ ದೇಶಗಳಲ್ಲಿನ ಆರ್‌ಅಂಡ್‌ಡಿ (R&D) ಕೇಂದ್ರಗಳೊಂದಿಗೆ ಸಹಯೋಗ ಹೊಂದುವುದನ್ನು ಪ್ರೋತ್ಸಾಹಿಸಿದ ಅವರು, ಜಾಗತಿಕ ನಾವೀನ್ಯಕಾರರು ಮತ್ತು ಬೃಹತ್ ಫಾರ್ಮಾಸ್ಯುಟಿಕಲ್ ಕಂಪನಿಗಳನ್ನು ಭಾರತಕ್ಕೆ ಆಹ್ವಾನಿಸಿದರು ಮತ್ತು ದೇಶದಲ್ಲಿ ವಿನ್ಯಾಸ ಕೇಂದ್ರಗಳನ್ನು ಸ್ಥಾಪಿಸಲು ಕೋರಿದರು.
ಈ ವಲಯದಲ್ಲಿ ಸ್ವಾವಲಂಬನೆಯನ್ನು ಮುನ್ನಡೆಸಲು ತಂತ್ರಜ್ಞಾನ ಪಾಲುದಾರಿಕೆಗಳು, ಬಲವಾದ ಖರೀದಿದಾರ-ಮಾರಾಟಗಾರರ ಬಾಂಧವ್ಯಗಳು ಮತ್ತು ಜಂಟಿ ಉದ್ಯಮಗಳಿಗೆ ಶ್ರೀ ಗೋಯಲ್ ಕರೆ ನೀಡಿದರು. ನಮ್ಮ ದೇಶ, ಭಾರತೀಯ ತಂತ್ರಜ್ಞಾನಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯಬಹುದು ಮತ್ತು ಭಾರತಕ್ಕೆ ಸೂಕ್ತವಾದ ಜಾಗತಿಕ ತಂತ್ರಜ್ಞಾನಗಳನ್ನೂ ತರಬಹುದು, ಇದಕ್ಕಾಗಿ ಭಾರತವು, ಹೊಸ ವಿಧಾನವನ್ನು ಮರುಶೋಧಿಸುವ ಅಗತ್ಯವಿಲ್ಲ ಎಂದು ಅವರು ಒತ್ತಿಹೇಳಿದರು. ಅವರು ಸಹ-ವಿನ್ಯಾಸ, ಸಹ-ಅಭಿವೃದ್ಧಿ, ಪರವಾನಗಿ, ಜ್ಞಾನ ಹಂಚಿಕೆ ಮತ್ತು ಜ್ಞಾನ ವರ್ಗಾವಣೆಯನ್ನು ಸಹ ಪ್ರೋತ್ಸಾಹಿಸಿದರು.
ಸಂಶೋಧನೆ, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳಲ್ಲಿ ಸ್ವಾವಲಂಬನೆಯ ಅಗತ್ಯವನ್ನು ಸಚಿವರು ಒತ್ತಿಹೇಳಿದರು ಮತ್ತು ಈ ಪ್ರಯತ್ನದಲ್ಲಿ ರಫ್ತು ಉತ್ತೇಜನ ಮಂಡಳಿಗಳು ಮತ್ತು ಉದ್ಯಮದ ಪಾಲುದಾರರು ವಹಿಸಬೇಕಾದ ಪ್ರಮುಖ ಪಾತ್ರವಿದೆ ಎಂದು ಹೇಳಿದರು. ಈ ವಲಯಕ್ಕೆ ಕೈಗೆಟುಕುವ ದರ ಮತ್ತು ಅವಕಾಶಗಳನ್ನು ಸುಧಾರಿಸಲು ಸರಕು ಮತ್ತು ಸೇವಾ ತೆರಿಗೆಯನ್ನು (GST) ತಿದ್ದುಪಡಿ ಮಾಡಲಾಗಿದೆ ಎಂದು ಅವರು ಗಮನಿಸಿದರು. ಸಂಶೋಧನೆ ಮತ್ತು ಅಭಿವೃದ್ಧಿ, ನಾವೀನ್ಯತೆ ಮತ್ತು ಧನಸಹಾಯಕ್ಕಾಗಿ ₹1 ಲಕ್ಷ ಕೋಟಿ ಬದ್ಧತೆಯನ್ನು ಅವರು ಹೈಲೈಟ್ ಮಾಡಿದರು ಮತ್ತು ನೂತನ ಉಪಕರಣಗಳು, ನವೀನ ಔಷಧಗಳು ಮತ್ತು ಮಾತ್ರೆಗಳನ್ನು ಅಭಿವೃದ್ಧಿಪಡಿಸಲು ಈ ಅವಕಾಶಗಳನ್ನು ಬಳಸಿಕೊಳ್ಳುವಂತೆ ಪಾಲುದಾರರನ್ನು ಆಗ್ರಹಿಸಿದರು.
ಹೆಚ್ಚಿನ ದೇಶೀಯ ಉಪಕರಣಗಳ ಉತ್ಪಾದನೆ ಮತ್ತು ಮಾರಾಟದ ಮೂಲಕ ಆರೋಗ್ಯ ರಕ್ಷಣೆಯ ಪೂರೈಕೆ ಸರಪಳಿಗಳಲ್ಲಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಅಗತ್ಯವನ್ನು ಶ್ರೀ ಗೋಯಲ್ ಒತ್ತಿಹೇಳಿದರು. ಕೋವಿಡ್-19 ರ ಸಮಯದಲ್ಲಿ ಆಕ್ಸಿಜನೇಟರ್‌ಗಳು ಮತ್ತು ವೆಂಟಿಲೇಟರ್‌ಗಳ ಕೊರತೆ ಸೇರಿದಂತೆ ಅನುಭವವನ್ನು ನೆನಪಿಸಿಕೊಂಡ ಅವರು, ಆ ಅನುಭವದಿಂದ ಕಲಿಯುವ ಮತ್ತು ಮಾನದಂಡಗಳಲ್ಲಿ ಯಾವುದೇ ರಾಜಿ ಇಲ್ಲದೆ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದರು.
ಭಾರತವು ಪ್ರತಿಯೊಬ್ಬ ಭಾರತೀಯನಿಗೂ ಉನ್ನತ ಮಟ್ಟದ, ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸುವುದು ಮಾತ್ರವಲ್ಲದೆ ಭಾರತದಿಂದ ಇಡೀ ವಿಶ್ವಕ್ಕೆ ಸೌಖ್ಯ ಮತ್ತು ಆರೋಗ್ಯ ರಕ್ಷಣೆಯ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿರಬೇಕು ಎಂದು ಸಚಿವರು ಹೇಳಿದರು. ಭಾರತೀಯ ವೈದ್ಯಕೀಯ ಉಪಕರಣಗಳು ಮತ್ತು ಔಷಧಗಳು, ಭಾರತೀಯ ವೈದ್ಯರಿಂದ ರೋಗಿಗಳ ಆರೈಕೆ, ಶುಶ್ರೂಷೆ ಮತ್ತು ಪಾಲನೆ, ತಂತ್ರಜ್ಞರು, ಆಸ್ಪತ್ರೆ ಆಡಳಿತಾಧಿಕಾರಿಗಳು, ನಿರ್ವಹಣಾ ಸಿಬ್ಬಂದಿ ಮತ್ತು ಎಂಜಿನಿಯರಿಂಗ್ ಸಿಬ್ಬಂದಿಯನ್ನು ಒಳಗೊಂಡ ಸಮಗ್ರ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಯ ಸಾಮರ್ಥ್ಯವನ್ನು ಅವರು ಉಲ್ಲೇಖಿಸಿಸಿದರು.
ಮಾನವ ಆರೈಕೆ ಮತ್ತು ಶುಶ್ರೂಷೆಯು ಅತ್ಯಗತ್ಯವಾಗಿ ಮುಂದುವರಿಯುತ್ತಿದ್ದರೂ, ಕೃತಕ ಬುದ್ಧಿಮತ್ತೆಯು (AI) ಹೆಚ್ಚಿನ ದಕ್ಷತೆಯನ್ನು ತರುತ್ತದೆ ಮತ್ತು ಆರೋಗ್ಯ ರಕ್ಷಣಾ ವೃತ್ತಿಪರರು ತಮ್ಮ ಕೆಲಸವನ್ನು ಉತ್ತಮವಾಗಿ, ಹೆಚ್ಚು ಬುದ್ಧಿವಂತಿಕೆಯಿಂದ ಮತ್ತು ವೇಗವಾಗಿ ಮಾಡಲು ಬೆಂಬಲಿಸುತ್ತದೆ ಎಂದು ಶ್ರೀ ಗೋಯಲ್ ತಿಳಿಸಿದರು.
ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಭಾರತದ ವೆಚ್ಚದ ಪ್ರಯೋಜನವನ್ನು ಸಚಿವರು ಉಲ್ಲೇಖಿಸಿದರು ಮತ್ತು ಉದ್ಯಮ, ಶೈಕ್ಷಣಿಕ ಕ್ಷೇತ್ರ, ವೈದ್ಯಕೀಯ ಕಾಲೇಜುಗಳು, ಐಐಟಿಗಳು ಮತ್ತು ಇತರ ಅತ್ಯುತ್ತಮ ಕೇಂದ್ರಗಳ ನಡುವಿನ ಹೆಚ್ಚಿನ ಸಹಯೋಗವು ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಮಾಣವನ್ನು ಗಣನೀಯವಾಗಿ ವಿಸ್ತರಿಸಬಹುದು ಎಂದು ಹೇಳಿದರು. ದೇಶದಲ್ಲಿ ಉಪಕರಣಗಳನ್ನು ಉತ್ಪಾದಿಸುವುದರ ಜೊತೆಗೆ ಭಾರತದಲ್ಲಿ ನಾವೀನ್ಯತೆ, ವಿನ್ಯಾಸ ಮತ್ತು ಕ್ಲಿನಿಕಲ್ ಪ್ರಯೋಗಗಳ ಸಾಧ್ಯತೆಗಳನ್ನು ಅವರು ಉಲ್ಲೇಖಿಸಿದರು.
ಸ್ವಯಂಚಾಲಿತ ಮಾರ್ಗದ ಮೂಲಕ ಶೇಕಡಾ 100 ರಷ್ಟು ನೇರ ವಿದೇಶಿ ಹೂಡಿಕೆಗೆ (FDI) ಅನುಮತಿ ನೀಡಲಾಗಿದೆ ಎಂದು ಶ್ರೀ ಗೋಯಲ್ ಹೇಳಿದರು. ಆರ್ಥಿಕ ಸಮೀಕ್ಷೆ 2025-26 ಅನ್ನು ಉಲ್ಲೇಖಿಸಿದ ಅವರು, ಔಷಧ ಉದ್ಯಮವು ಪ್ರಮಾಣದಿಂದ (volume) ಮೌಲ್ಯದತ್ತ (value) ಬದಲಾಗುತ್ತಿದೆ ಎಂದು ತಿಳಿಸಿದರು.
ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ, ಉತ್ತಮ ಗುಣಮಟ್ಟದ ಉಪಕರಣಗಳ ಮೂಲಕ ನಿರ್ಣಾಯಕ ಘಟಕ ಪರಿಸರ ವ್ಯವಸ್ಥೆ ಮತ್ತು ದೇಶೀಯ ಸಾಮರ್ಥ್ಯಗಳನ್ನು ಬಲಪಡಿಸಲು ಅವರು ಕರೆ ನೀಡಿದರು. ಭಾರತೀಯ ಉಪಕರಣಗಳನ್ನು ಪರೀಕ್ಷಿಸಬಹುದಾದ, ವಿಶ್ವದ ಅತ್ಯುತ್ತಮ ಉಪಕರಣಗಳಿಗೆ ಹೋಲಿಸಿ ಮಾನದಂಡವಾಗಿ ಮಾಡಬಹುದಾದ, ಪ್ರಮಾಣೀಕರಿಸಬಹುದಾದ ಮತ್ತು ಜಾಗತಿಕ ಗ್ರಾಹಕರಿಗೆ ಪ್ರದರ್ಶಿಸಬಹುದಾದ ಹಂಚಿಕೆಯ ಪರೀಕ್ಷಾ ಮೂಲಸೌಕರ್ಯ ಮತ್ತು ಸೌಲಭ್ಯಗಳ ಸೃಷ್ಟಿಯನ್ನು ಅವರು ಪ್ರಸ್ತಾಪಿಸಿದರು. ಸರ್ಕಾರಿ ಪ್ರಾಯೋಜಿತ ಅಥವಾ ವಿಶ್ವವಿದ್ಯಾಲಯದ ಪ್ರಯೋಗಾಲಯಗಳಲ್ಲಿ ಇಂತಹ ಸೌಲಭ್ಯಗಳಿಗಾಗಿ ಅತ್ಯುತ್ತಮ ತಾಂತ್ರಿಕ ಪರೀಕ್ಷಾ ಉಪಕರಣಗಳ ಸ್ವಾಧೀನಕ್ಕೆ ಭಾರತ ಸರ್ಕಾರವು ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
ಉದ್ಯಮ, ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು, ಸಂಶೋಧಕರು, ಆರೋಗ್ಯ ರಕ್ಷಣಾ ವೃತ್ತಿಪರರು ಮತ್ತು ಇತರ ಪಾಲುದಾರರ ಜಂಟಿ ಶ್ರಮವು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಪಯಣಕ್ಕೆ ಕೊಡುಗೆ ನೀಡುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
*****
(ಪ್ರಕಟಣೆ ಐ.ಡಿ.: 2307470)
ವಿಸಿಟರ್ ಕೌಂಟರ್ : 8