ಶಿಕ್ಷಣ ಸಚಿವಾಲಯ
ನವದೆಹಲಿಯಲ್ಲಿ ನಡೆದ ಎನ್ ಸಿ ಇ ಆರ್ ಟಿ ಯ 66ನೇ ಸಂಸ್ಥಾಪನಾ ದಿನದ ಆಚರಣೆಯಲ್ಲಿ ಕೇಂದ್ರ ಶಿಕ್ಷಣ ಸಚಿವರು ಪಾಲ್ಗೊಂಡರು
ಎನ್ ಸಿ ಇ ಆರ್ ಟಿ ಯನ್ನು ಮತ್ತಷ್ಟು ನವೀನ, ಸಮಗ್ರ, ಸಂಶೋಧನಾಧಾರಿತ ಮತ್ತು ಭವಿಷ್ಯಕ್ಕೆ ಸಜ್ಜಾದ ಸಂಸ್ಥೆಯನ್ನಾಗಿ ರೂಪಿಸೋಣ - ಶ್ರೀ ಪ್ರಲ್ಹಾದ್ ಜೋಶಿ
ಶಾಲಾ ಶಿಕ್ಷಣವನ್ನು ಪರಿವರ್ತಿಸುವಲ್ಲಿ ಮತ್ತು ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಎನ್ ಸಿ ಇ ಆರ್ ಟಿ ಪ್ರಮುಖ ಪಾತ್ರವನ್ನು ಹೊಂದಿದೆ - ಕೇಂದ್ರ ಶಿಕ್ಷಣ ಸಚಿವರು
ಪ್ರಕಟಣಾ ದಿನಾಂಕ:
01 SEP 2026 5:35PM by PIB Bengaluru
ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ, ಅದರಲ್ಲೂ ವಿಶೇಷವಾಗಿ ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿಗಳು ಹಾಗೂ ಪಠ್ಯಕ್ರಮದ ಚೌಕಟ್ಟುಗಳ ಮೂಲಕ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ ಸಿ ಇ ಆರ್ ಟಿ) ಮಹತ್ವದ ಪಾತ್ರ ವಹಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ತಿಳಿಸಿದರು. ನವದೆಹಲಿಯ ಎನ್ ಸಿ ಇ ಆರ್ ಟಿ ಕೇಂದ್ರ ಕಚೇರಿಯಲ್ಲಿ ನಡೆದ 66ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇ ಪಿ) 2020 ಸಮಗ್ರ ಅಭಿವೃದ್ಧಿ, ಸೃಜನಶೀಲತೆ, ವಿಮರ್ಶಾತ್ಮಕ ಆಲೋಚನೆ, ಅನುಭವಜನ್ಯ ಕಲಿಕೆ ಮತ್ತು ಸಾಮರ್ಥ್ಯ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಶಾಲಾ ಶಿಕ್ಷಣದಲ್ಲಿ ಸುಧಾರಣೆಗಳಿಗೆ ಚೌಕಟ್ಟನ್ನು ಒದಗಿಸಿದೆ ಎಂದು ಕೇಂದ್ರ ಸಚಿವರು ಹೇಳಿದರು. ಈ ನಿಟ್ಟಿನಲ್ಲಿ, ಮೂಲಭೂತ ಹಂತದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್ ಸಿ ಎಫ್-ಎಫ್ ಎಸ್) 2022, ಶಾಲಾ ಶಿಕ್ಷಣದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್ ಸಿ ಎಫ್ – ಎಸ್ ಇ) 2023 ರೂಪಿಸುವಲ್ಲಿ ಮತ್ತು 1 ರಿಂದ 9 ನೇ ತರಗತಿಗಳಿಗೆ ಹೊಸ ಪಠ್ಯಪುಸ್ತಕಗಳ ಅಭಿವೃದ್ಧಿಯಲ್ಲಿ ಎನ್ ಸಿ ಇ ಆರ್ ಟಿ ಮಾಡಿದ ಕೆಲಸವನ್ನು ಅವರು ಎತ್ತಿ ತೋರಿಸಿದರು. ಬಹುಭಾಷಾ ಶಿಕ್ಷಣದತ್ತ ಎನ್ ಸಿ ಇ ಆರ್ ಟಿ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದ ಸಚಿವರು, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಪಟ್ಟಿ ಮಾಡಲಾದ ಎಲ್ಲಾ 22 ಭಾಷೆಗಳಲ್ಲಿ 1 ರಿಂದ 8 ನೇ ತರಗತಿಗಳ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗುತ್ತಿದೆ ಹಾಗೂ 93 ಬುಡಕಟ್ಟು ಭಾಷೆಗಳು ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ 121 ಪ್ರೈಮರ್ ಗಳನ್ನು (ಆರಂಭಿಕ ಕಲಿಕಾ ಪುಸ್ತಕ) ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು. ಎಲ್ಲಾ ಪಠ್ಯಪುಸ್ತಕಗಳಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಸಂಯೋಜಿಸುವ ಮೂಲಕ, ಹೊಸ ಪಠ್ಯಪುಸ್ತಕಗಳು ಭಾರತದ ಪರಂಪರೆಯಲ್ಲಿ ಬೇರೂರಿರುವುದರ ಜೊತೆಗೆ ಕಲಿಕೆಯನ್ನು ಹೆಚ್ಚು ಆಸಕ್ತಿದಾಯಕ ಮತ್ತು ಪ್ರಸ್ತುತವಾಗುವಂತೆ ಮಾಡುತ್ತಿವೆ ಎಂದು ಅವರು ಹೇಳಿದರು.
ಶಿಕ್ಷಣ ಮತ್ತು ಸಮಾಜದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಬೆಳೆಯುತ್ತಿರುವ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಎನ್ ಸಿ ಇ ಆರ್ ಟಿ ಯು ತನ್ನ ಸಂಶೋಧನಾ ವ್ಯವಸ್ಥೆಯನ್ನು ಮತ್ತು ತಂತ್ರಜ್ಞಾನದ ಬಳಕೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಶ್ರೀ ಜೋಶಿ ಒತ್ತಿ ಹೇಳಿದರು. ಕಲಿಕಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆ, ಎಐ ಕುರಿತ ಅರಿವು, ವಿಮರ್ಶಾತ್ಮಕ ಆಲೋಚನೆ, ಸಮಸ್ಯೆ ಪರಿಹರಿಸುವಿಕೆ ಮತ್ತು ನಾವೀನ್ಯತೆ ಕೌಶಲ್ಯಗಳನ್ನು ಒದಗಿಸುವ ಮಹತ್ವವನ್ನು ಅವರು ವಿವರಿಸಿದರು. ಅದೇ ವೇಳೆ, ಸೂಕ್ತ ಪಠ್ಯಕ್ರಮಾಧಾರಿತ ಕ್ರಮಗಳು, ಮನೋಸಾಮಾಜಿಕ ಬೆಂಬಲ ಹಾಗೂ ಶಿಕ್ಷಕರ ತರಬೇತಿಯ ಮೂಲಕ ವಿದ್ಯಾರ್ಥಿಗಳ ಮಾನಸಿಕ ಕ್ಷೇಮಕ್ಕೂ ಸೂಕ್ತ ಗಮನ ನೀಡಬೇಕು ಎಂದು ಅವರು ಹೇಳಿದರು.
ರೋಬೋಟಿಕ್ಸ್ ಲರ್ನಿಂಗ್ ಸೆಂಟರ್, ಭಾಷಾಂತರ ಪ್ರಯೋಗಾಲಯ ಮತ್ತು ಮೇಲ್ದರ್ಜೆಗೇರಿಸಲಾದ ಟೆಲಿವಿಷನ್ ಸ್ಟುಡಿಯೊದ ಚಾಲನೆಯನ್ನು ಉಲ್ಲೇಖಿಸಿದ ಅವರು, ಈ ಸೌಲಭ್ಯಗಳು ತಂತ್ರಜ್ಞಾನ- ಆಧಾರಿತ ಕಲಿಕೆ, ಭಾರತೀಯ ಭಾಷೆಗಳಲ್ಲಿ ಶಿಕ್ಷಣ ಮತ್ತು ಶೈಕ್ಷಣಿಕ ವಿಷಯಗಳ (ಕಂಟೆಂಟ್) ಅಭಿವೃದ್ಧಿಗೆ ಬೆಂಬಲ ನೀಡಲಿವೆ ಎಂದು ಹೇಳಿದರು. ಎನ್ ಸಿ ಇ ಆರ್ ಟಿ ಯ ಮುಂದಿನ ಹಂತದ ಅಭಿವೃದ್ಧಿಯು ಸಂಸ್ಥೆಯಲ್ಲಿರುವ ಅನುಭವವನ್ನು ಆಧಾರವಾಗಿಸಿಕೊಂಡು, ಉದಯೋನ್ಮುಖ ಶೈಕ್ಷಣಿಕ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕು ಎಂದು ಅವರು ಹೇಳಿದರು.


ರೋಬೋಟಿಕ್ಸ್ ಮತ್ತು ಭಾಷಾಂತರ ಪ್ರಯೋಗಾಲಯಗಳು ಹಾಗೂ ಮೇಲ್ದರ್ಜೆಗೇರಿಸಲಾದ ಟಿವಿ ಸ್ಟುಡಿಯೋ ಹೊರತಾಗಿ, ಕೇಂದ್ರ ಸಚಿವರು ನೂತನವಾಗಿ ನಿರ್ಮಿಸಲಾದ ಗೇಟ್ ಸಂಖ್ಯೆ 2 ಸಂಕೀರ್ಣ ಮತ್ತು ಥೀಮ್ ಪಾರ್ಕ್ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ 'ಫ್ಲೋರಾ ಅಂಡ್ ಫೌನಾ ಅಟ್ ಎನ್ ಸಿ ಇ ಆರ್ ಟಿ' (Flora and Fauna at NCERT) ಎಂಬ ಕಾಫಿ ಟೇಬಲ್ ಪುಸ್ತಕವನ್ನೂ ಬಿಡುಗಡೆ ಮಾಡಲಾಯಿತು.

ಪಠ್ಯಕ್ರಮ ಚೌಕಟ್ಟು ಅಭಿವೃದ್ಧಿ, 'ಜಾದೂ ಪಿಟಾರಾ' ಮತ್ತು 'ಪಿಎಂ ಇ-ವಿದ್ಯಾ', 'ದೀಕ್ಷಾ' ಹಾಗೂ 'ಇ-ಜಾದೂ ಪಿಟಾರಾ' ದಂತಹ ಡಿಜಿಟಲ್ ಶಿಕ್ಷಣ ವೇದಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎನ್ ಸಿ ಇ ಆರ್ ಟಿ ಯ ಉಪಕ್ರಮಗಳನ್ನು ಪ್ರದರ್ಶಿಸಲು ಆಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಪ್ರದರ್ಶನಕ್ಕೂ ಶ್ರೀ ಜೋಶಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಭಾಷಾ ಸಮಿತಿಯ ಅಧ್ಯಕ್ಷರಾದ ಡಾ. ಚಾಮು ಕೃಷ್ಣ ಶಾಸ್ತ್ರಿ; ಎನ್ ಸಿ ಇ ಆರ್ ಟಿ ನಿರ್ದೇಶಕರಾದ ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ ಹಾಗೂ ಶಿಕ್ಷಣ ಸಚಿವಾಲಯ ಮತ್ತು ಎನ್ ಸಿ ಇ ಆರ್ ಟಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2305783)
ವಿಸಿಟರ್ ಕೌಂಟರ್ : 8