ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಕಾನೂನುಬದ್ಧ ದತ್ತು ಸ್ವೀಕಾರವನ್ನು ಉತ್ತೇಜಿಸಲು ಮತ್ತು ಅಕ್ರಮ ದತ್ತು ಸ್ವೀಕಾರಕ್ಕೆ 'ಇಲ್ಲ' ಎನ್ನಲು 2026ರ ದತ್ತು ಜಾಗೃತಿ ಘೋಷವಾಕ್ಯವನ್ನು ಬಿಡುಗಡೆ ಮಾಡಿದ CARA
ಪ್ರಕಟಣಾ ದಿನಾಂಕ:
01 SEP 2026 4:52PM by PIB Bengaluru
ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (CARA), ದೇಶಾದ್ಯಂತ ಕಾನೂನುಬದ್ಧ, ಸುರಕ್ಷಿತ, ಪಾರದರ್ಶಕ ಹಾಗೂ ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡ ದತ್ತು ಪ್ರಕ್ರಿಯೆಯನ್ನು ಉತ್ತೇಜಿಸುವ ತನ್ನ ಬದ್ಧತೆಯನ್ನು ಎತ್ತಿಹಿಡಿಯುತ್ತಾ, 2026ರ ದತ್ತು ಜಾಗೃತಿ ಘೋಷವಾಕ್ಯವನ್ನು (ಥೀಮ್) ಬಿಡುಗಡೆ ಮಾಡಿದೆ.
2026ರ ದತ್ತು ಜಾಗೃತಿಯ ಘೋಷವಾಕ್ಯ ಹೀಗಿದೆ:
ಕಾನೂನುಬದ್ಧ ದತ್ತು. ಸುರಕ್ಷಿತ ಬಾಲ್ಯ. ಸುಭದ್ರ ಭವಿಷ್ಯ.
ಅಕ್ರಮ ದತ್ತು ಸ್ವೀಕಾರಕ್ಕೆ 'ಇಲ್ಲ' ಎನ್ನಿ!

ಕಾನೂನುಬದ್ಧ ದತ್ತು ಪ್ರಕ್ರಿಯೆಯನ್ನು ಉತ್ತೇಜಿಸಲು ಹಾಗೂ ಅಕ್ರಮ ದತ್ತು ಪದ್ಧತಿಗಳನ್ನು ತಡೆಗಟ್ಟುವ ನಿರಂತರ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನದ ಆರಂಭವನ್ನು ಸೂಚಿಸುವ ನಿಟ್ಟಿನಲ್ಲಿ, ಡಿಡಿ ನ್ಯಾಷನಲ್ನ 'ಲೈವ್ ಮಾರ್ನಿಂಗ್ ಶೋ'ನಲ್ಲಿ CARA ಸಿಇಒ ಶ್ರೀಮತಿ ಭಾವನಾ ಸಕ್ಸೇನಾ ಅವರು ಈ ಘೋಷವಾಕ್ಯವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕಾನೂನುಬದ್ಧ ದತ್ತು ಪ್ರಕ್ರಿಯೆಯನ್ನು ಅನುಸರಿಸುವ ಮಹತ್ವವನ್ನು ಒತ್ತಿಹೇಳಿದ 'ಕಾರಾ'ದ ಸಿಇಒ ಶ್ರೀಮತಿ ಭಾವನಾ ಸಕ್ಸೇನಾ, “ದತ್ತು ಸ್ವೀಕಾರ ಎಂಬುದು ಅಡ್ಡದಾರಿಯಲ್ಲ—ಅದೊಂದು ಪವಿತ್ರ ಜವಾಬ್ದಾರಿ. CARA ಮತ್ತು ಕಾನೂನುಬದ್ಧವಾಗಿ ನಿಗದಿಪಡಿಸಿದ ಮಾರ್ಗಗಳ ಮೂಲಕ, ಅನಾಥ, ನಿರ್ಗತಿಕ ಅಥವಾ ಒಪ್ಪಿಸಲ್ಪಟ್ಟ ಪ್ರತಿಯೊಂದು ಮಗುವಿನ ಘನತೆ, ಹಕ್ಕುಗಳು ಮತ್ತು ಭವಿಷ್ಯವನ್ನು ನಾವು ರಕ್ಷಿಸುತ್ತೇವೆ. ಪ್ರತಿಯೊಂದು ಮಗುವಿಗೂ ಸುರಕ್ಷಿತ, ಪ್ರೀತಿಯುತ ಹಾಗೂ ಸುಭದ್ರವಾದ ಕುಟುಂಬದ ಹಕ್ಕಿದೆಯೇ ಹೊರತು; ಗೌಪ್ಯತೆ, ಅನಿಶ್ಚಿತತೆ ಅಥವಾ ಅಪಾಯಗಳಿಗಲ್ಲ” ಎಂದು ಹೇಳಿದರು.
ಅಕ್ರಮ ದತ್ತು ಪದ್ಧತಿಗಳ ವಿರುದ್ಧ ಜಾಗೃತಿ, ಸಮನ್ವಯತೆ ಮತ್ತು ಕಾನೂನು ಜಾರಿಯನ್ನು ಬಲಪಡಿಸಲು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಗೃಹ ಸಚಿವಾಲಯದೊಂದಿಗೆ ಹೆಚ್ಚಿನ ಸಮನ್ವಯ ಸಾಧಿಸುವುದು ಸೇರಿದಂತೆ ಹಲವು ಕ್ರಮಗಳನ್ನು 'ಕಾರಾ' ಕೈಗೊಳ್ಳುತ್ತಿದೆ. ಆದಾಗ್ಯೂ, ಪ್ರತಿಯೊಂದು ಮಗುವನ್ನು ರಕ್ಷಿಸಲು ಮತ್ತು ಪ್ರತಿಯೊಂದು ದತ್ತು ಸ್ವೀಕಾರವೂ ನಿಗದಿತ ಕಾನೂನು ಪ್ರಕ್ರಿಯೆಯ ಮೂಲಕವೇ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ, ಜಿಲ್ಲಾ ಮತ್ತು ಸಮುದಾಯ ಮಟ್ಟದಲ್ಲಿ ನಿರಂತರ ಜಾಗೃತಿ ಮೂಡಿಸುವುದು ಹಾಗೂ ಸಾಮರ್ಥ್ಯ ವೃದ್ಧಿಸುವುದು ಅತ್ಯಂತ ನಿರ್ಣಾಯಕವಾಗಿದೆ.
ಕಾನೂನುಬದ್ಧ ದತ್ತು ಸ್ವೀಕಾರವನ್ನು ಉತ್ತೇಜಿಸಲು ವರ್ಷಪೂರ್ತಿ ಜಾಗೃತಿ ಕಾರ್ಯಕ್ರಮಗಳು
"ಕಾನೂನುಬದ್ಧ ದತ್ತು. ಸುರಕ್ಷಿತ ಬಾಲ್ಯ. ಸುಭದ್ರ ಭವಿಷ್ಯ. ಅಕ್ರಮ ದತ್ತು ಸ್ವೀಕಾರಕ್ಕೆ 'ಇಲ್ಲ' ಎನ್ನಿ" ಎಂಬ ಘೋಷವಾಕ್ಯದಡಿ, ನಾಗರಿಕರು ಮತ್ತು ಪ್ರಮುಖ ಪಾಲುದಾರರಲ್ಲಿ ವ್ಯಾಪಕ ಅರಿವು ಮೂಡಿಸಲು ವರ್ಷವಿಡೀ ಹಲವಾರು ಜಾಗೃತಿ ಮತ್ತು ಸಂಪರ್ಕ ಚಟುವಟಿಕೆಗಳನ್ನು ನಡೆಸಲಾಗುವುದು.
ಈ ಉಪಕ್ರಮದ ಭಾಗವಾಗಿ, ದತ್ತು ಜಾಗೃತಿ ಚಟುವಟಿಕೆಗಳನ್ನು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತಗೊಳಿಸುತ್ತಿದ್ದ ಹಿಂದಿನ ಪದ್ಧತಿಯನ್ನು ಮೀರಿ, 2026ರ ಸೆಪ್ಟೆಂಬರ್ ನಿಂದ ರಾಜ್ಯ/ಕೇಂದ್ರಾಡಳಿತ ಪ್ರದೇಶ ಮಟ್ಟದ ದತ್ತು ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಶಾಸನಬದ್ಧ ದತ್ತು ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು, ಇಲಾಖೆಗಳ ನಡುವಿನ ಸಮನ್ವಯತೆಯನ್ನು ಬಲಪಡಿಸಲು, ಅಕ್ರಮ ದತ್ತು ಪದ್ಧತಿಗಳನ್ನು ಗುರುತಿಸಿ ಪರಿಹರಿಸಲು ಹಾಗೂ ಮಗುವಿನ ಶ್ರೇಯೋಭಿವೃದ್ಧಿಯ ತತ್ವವನ್ನು ಎತ್ತಿಹಿಡಿಯಲು ಈ ಕಾರ್ಯಾಗಾರಗಳು ಪಾಲುದಾರರಿಗೆ ಒಂದು ವೇದಿಕೆಯನ್ನು ಒದಗಿಸಲಿವೆ.
ಈ ಅಭಿಯಾನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ವಿಶೇಷ ದತ್ತು ಸಂಸ್ಥೆಗಳು, ಮಕ್ಕಳ ಪಾಲನಾ ಸಂಸ್ಥೆಗಳು, ಪೊಲೀಸ್, ಆರೋಗ್ಯ ಇಲಾಖೆಗಳು, ನ್ಯಾಯಾಂಗ, ಕಾನೂನು ಸೇವಾ ಪ್ರಾಧಿಕಾರಗಳು, ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಗಳು, ವೈದ್ಯಕೀಯ ವೃತ್ತಿಪರರು, ಆಶಾ ಮತ್ತು ಎ ಎನ್ ಎಂ ಕಾರ್ಯಕರ್ತೆಯರು, ನಾಗರಿಕ ಸಮಾಜದ ಸಂಘಟನೆಗಳು, ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಪಾಲುದಾರರು ಪಾಲ್ಗೊಳ್ಳಲಿದ್ದಾರೆ.
2026ರ ಸೆಪ್ಟೆಂಬರ್ 10 ರಂದು ದೆಹಲಿಯಲ್ಲಿ ದತ್ತು ಜಾಗೃತಿ ಕಾರ್ಯಾಗಾರ
ಈ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿ, ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಂಬಂಧಪಟ್ಟ ಪ್ರಾಧಿಕಾರಗಳ ಸಹಯೋಗದೊಂದಿಗೆ CARA 2026ರ ಸೆಪ್ಟೆಂಬರ್ 10, ಗುರುವಾರದಂದು ನವದೆಹಲಿಯ ದೆಹಲಿ ಸಚಿವಾಲಯದಲ್ಲಿ ದತ್ತು ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಿದೆ.
ಪಾಲನೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು ಕಾನೂನುಬದ್ಧ ಕಾರ್ಯವಿಧಾನಗಳ ಮೂಲಕ ಸೂಕ್ತ ಪಾಲನೆ, ರಕ್ಷಣೆ ಮತ್ತು ಪುನರ್ವಸತಿಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಪಾಲುದಾರರ ಪಾತ್ರಗಳು ಮತ್ತು ಜವಾಬ್ದಾರಿಗಳು, ಹಾಗೂ ಕಾನೂನುಬದ್ಧ ದತ್ತು ಚೌಕಟ್ಟಿನ ಕುರಿತು ಜಾಗೃತಿಯನ್ನು ಬಲಪಡಿಸುವತ್ತ ಈ ಕಾರ್ಯಾಗಾರವು ಗಮನಹರಿಸಲಿದೆ.
ತಮ್ಮ ಪಾಲಕರಿಂದ ಬೇರ್ಪಟ್ಟ ಮಕ್ಕಳು ಕಂಡುಬಂದಾಗ ಸಕಾಲದಲ್ಲಿ ವರದಿ ಮಾಡುವುದು, ಕಾನೂನುಬದ್ಧವಾಗಿ ಒಪ್ಪಿಸುವ ಪ್ರಕ್ರಿಯೆಗಳು, ಮಕ್ಕಳನ್ನು ದತ್ತು ಪಡೆಯಲು ಕಾನೂನುಬದ್ಧವಾಗಿ ಮುಕ್ತರೆಂದು ಘೋಷಿಸುವುದು ಮತ್ತು ನಿಗದಿತ ದತ್ತು ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವುದರ ಮಹತ್ವವನ್ನು ಈ ಕಾರ್ಯಾಗಾರವು ಒತ್ತಿಹೇಳಲಿದೆ.
ಪ್ರತಿಯೊಂದು ಮಗುವನ್ನೂ ರಕ್ಷಿಸುವುದು ಸಾಮೂಹಿಕ ಜವಾಬ್ದಾರಿ
ದತ್ತು ಸ್ವೀಕಾರ ಎಂಬುದು ಒಂದು ಕಾನೂನುಬದ್ಧ ಹಾಗೂ ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡ ಪ್ರಕ್ರಿಯೆಯೇ ಹೊರತು, ವ್ಯಕ್ತಿಗಳ ನಡುವಿನ ಖಾಸಗಿ ಒಪ್ಪಂದವಲ್ಲ ಎಂಬುದನ್ನು ದತ್ತು ಪಡೆಯಲು ಇಚ್ಛಿಸುವ ಪೋಷಕರು ಮತ್ತು ಸಾರ್ವಜನಿಕರು ಅರ್ಥಮಾಡಿಕೊಳ್ಳುವಂತೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ.
CARA ಮತ್ತು ನಿಯೋಜಿತ ಪ್ರಾಧಿಕಾರಗಳು/ಸಂಸ್ಥೆಗಳ ಮೂಲಕ ಕಾನೂನುಬದ್ಧವಾಗಿ ನಿಗದಿಪಡಿಸಿದ ದತ್ತು ಪ್ರಕ್ರಿಯೆಯನ್ನು ಮಾತ್ರ ಅನುಸರಿಸುವಂತೆ ಹಾಗೂ ಅಕ್ರಮ ದತ್ತು ಸ್ವೀಕಾರದ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ಸಮರ್ಥ ಪ್ರಾಧಿಕಾರಗಳಿಗೆ ವರದಿ ಮಾಡುವಂತೆ ನಾಗರಿಕರನ್ನು ಪ್ರೋತ್ಸಾಹಿಸಲಾಗುತ್ತದೆ.
ನಿರಂತರವಾದ, ವರ್ಷಪೂರ್ತಿ ಜಾಗೃತಿ ಮತ್ತು ಸಂಘಟಿತ ಕಾರ್ಯಚಟುವಟಿಕೆಗಳ ಮೂಲಕ, ಪ್ರತಿಯೊಂದು ಮಗುವಿನ ಘನತೆ, ಗುರುತು, ಹಕ್ಕುಗಳು, ಸುರಕ್ಷತೆ ಹಾಗೂ ಭವಿಷ್ಯವನ್ನು ರಕ್ಷಿಸುವ ಬಲವಾದ ವ್ಯವಸ್ಥೆಯನ್ನು (Ecosystem) ನಿರ್ಮಿಸುವ ಗುರಿಯನ್ನು CARA ಹೊಂದಿದೆ.
*****
(ಪ್ರಕಟಣೆ ಐ.ಡಿ.: 2305588)
ವಿಸಿಟರ್ ಕೌಂಟರ್ : 13