ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಸೋನ್ ನದಿ ನೀರು ಹಂಚಿಕೆ ಕುರಿತು ಬಿಹಾರ ಮತ್ತು ಜಾರ್ಖಂಡ್‌ ನಡುವೆ ಒಡಂಬಡಿಕೆಗೆ ಸಹಿ


ಈ ಐತಿಹಾಸಿಕ ಒಪ್ಪಂದದೊಂದಿಗೆ ಪೂರ್ವ ಭಾರತದಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಜಲ ವಿವಾದಕ್ಕೆ ಪರಿಹಾರ‌ ದೊರೆತಿದೆ

ಈ ಒಪ್ಪಂದದಿಂದ ಬಿಹಾರ ಮತ್ತು ಜಾರ್ಖಂಡ್‌ ನ ವಿಶಾಲ ಗ್ರಾಮೀಣ ಪ್ರದೇಶಗಳ ಲಕ್ಷಾಂತರ ರೈತರಿಗೆ ನೀರಾವರಿ ನೀರು ದೊರೆಯುವುದರ ಜೊತೆಗೆ ಜನರಿಗೆ ಕುಡಿಯುವ ನೀರಿನ ಪೂರೈಕೆಯೂ ಖಾತ್ರಿಯಾಗಲಿದೆ

ಇಂದು ಆಗಿರುವ ಈ ಒಪ್ಪಂದವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಟೀಮ್‌ ಭಾರತ್’ನ ದೃಷ್ಟಿಕೋನ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಯಾಗಿದೆ

ಎಲ್ಲಾ ರಾಜ್ಯಗಳು ‘ಟೀಮ್‌ ಭಾರತ’ವಾಗಿ ಮುನ್ನಡೆದರೆ, ಪರಿಹರಿಸಲಾಗದ ಸಮಸ್ಯೆ ಯಾವುದೂ ಇಲ್ಲ

ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರ ಉಪಕ್ರಮದೊಂದಿಗೆ, ಹಲವು ದಶಕಗಳಿಂದ ಬಗೆಹರಿಯದೆ ಉಳಿದಿದ್ದ ವಿವಿಧ ರಾಜ್ಯಗಳ ನಡುವಿನ ಬಹುಕಾಲದ ಜಲ ವಿವಾದಗಳನ್ನು ಅಂತರರಾಜ್ಯ ಮಂಡಳಿಯ ಮೂಲಕ ಪರಿಹರಿಸಲಾಗುತ್ತಿದೆ; ಈ ವರ್ಷ ಇಲ್ಲಿಯವರೆಗೆ ನಾಲ್ಕು ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ

ಜಾರ್ಖಂಡ್‌ ಮುಖ್ಯಮಂತ್ರಿ ಶ್ರೀ ಹೇಮಂತ್‌ ಸೊರೇನ್‌ ಮತ್ತು ಬಿಹಾರ ಮುಖ್ಯಮಂತ್ರಿ ಶ್ರೀ ಸಾಮ್ರಾಟ್‌ ಚೌಧರಿ ಅವರು ಸೋನ್ ನದಿ ನೀರು ಹಂಚಿಕೆ ಸಮಸ್ಯೆ ಪರಿಹರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದರು

ಪ್ರಕಟಣಾ ದಿನಾಂಕ: 31 AUG 2026 6:27PM by PIB Bengaluru

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಸೋನ್ ನದಿ ನೀರು ಹಂಚಿಕೆ ಕುರಿತು ಬಿಹಾರ ಮತ್ತು ಜಾರ್ಖಂಡ್‌ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಜಾರ್ಖಂಡ್‌ ಮುಖ್ಯಮಂತ್ರಿ ಶ್ರೀ ಹೇಮಂತ್‌ ಸೊರೇನ್‌, ಬಿಹಾರ ಮುಖ್ಯಮಂತ್ರಿ ಶ್ರೀ ಸಾಮ್ರಾಟ್‌ ಚೌಧರಿ, ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್‌. ಪಾಟೀಲ್‌, ಬಿಹಾರದ ಉಪಮುಖ್ಯಮಂತ್ರಿ, ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಭಾರತ ಸರ್ಕಾರ ಮತ್ತು ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರು, ಬಿಹಾರ ಮತ್ತು ಜಾರ್ಖಂಡ್‌ ನಡುವೆ ಇಂದು ಆಗಿರುವ ಒಪ್ಪಂದದೊಂದಿಗೆ ಪೂರ್ವ ಭಾರತದಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ಜಲ ವಿವಾದಕ್ಕೆ ಪರಿಹಾರ ದೊರೆತಿದೆ ಎಂದು ಹೇಳಿದರು. ಈ ಒಪ್ಪಂದದಿಂದ ಬಿಹಾರ ಮತ್ತು ಜಾರ್ಖಂಡ್‌ ನ ವಿಶಾಲ ಗ್ರಾಮೀಣ ಪ್ರದೇಶಗಳ ಲಕ್ಷಾಂತರ ರೈತರಿಗೆ ನೀರಾವರಿ ನೀರು ದೊರೆಯುವುದರ ಜೊತೆಗೆ ಜನರಿಗೆ ಕುಡಿಯುವ ನೀರೂ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಸೋನ್ ನದಿ ನೀರು ಹಂಚಿಕೆ ಕುರಿತು ಇಂದು ಆಗಿರುವ ಒಪ್ಪಂದವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿರುವ ‘ಟೀಮ್‌ ಭಾರತ’ದ ದೃಷ್ಟಿಕೋನ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಎಲ್ಲಾ ರಾಜ್ಯಗಳು ತಮ್ಮದೇ ಆದ ವಿಶಿಷ್ಟ ಗುರುತನ್ನು ಹೊಂದಿದ್ದರೂ, ರಾಷ್ಟ್ರೀಯ ಹಿತದ ಹಿನ್ನೆಲೆಯಲ್ಲಿ ಅವು ‘ಟೀಮ್‌ ಭಾರತ’ವಾಗಿ ಮುನ್ನಡೆದರೆ, ಪರಿಹರಿಸಲಾಗದ ಸಮಸ್ಯೆ ಯಾವುದೂ ಇರುವುದಿಲ್ಲ ಎಂದು ಅವರು ಹೇಳಿದರು. ಈ ವರ್ಷ ರಾಜ್ಯಗಳ ನಡುವಿನ ನಾಲ್ಕನೇ ಜಲ ಒಪ್ಪಂದ ಇದಾಗಿದ್ದು, ಇದರಿಂದ ನೀರಾವರಿ, ಗ್ರಾಮೀಣ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ನೀರಿನ ಲಭ್ಯತೆ ಹೆಚ್ಚಲಿದೆ ಎಂದು ಶ್ರೀ ಶಾ ಹೇಳಿದರು.

ಬಿಹಾರ ಮತ್ತು ಜಾರ್ಖಂಡ್‌ ನಡುವಿನ ಸುಮಾರು 25 ವರ್ಷಗಳಷ್ಟು ಹಳೆಯ ಜಲ ವಿವಾದವನ್ನು ಪರಿಹರಿಸಲು ಇಂದು ಆಗಿರುವ ಒಪ್ಪಂದವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವದೊಂದಿಗೆ ಸಂವಾದದ ಮೂಲಕ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದಕ್ಕೆ ನಿದರ್ಶನವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಎರಡೂ ರಾಜ್ಯಗಳ ವಿಶಾಲ ಭೌಗೋಳಿಕ ಪ್ರದೇಶಗಳು, ರೈತರು, ಗ್ರಾಮೀಣ ಪ್ರದೇಶಗಳು ಮತ್ತು ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇಂದು ಶಾಶ್ವತ ಪರಿಹಾರ ದೊರೆತಿದೆ ಎಂದು ಅವರು ಹೇಳಿದರು.

ಬಿಹಾರದ ಭೋಜಪುರ, ಬಕ್ಸರ್‌, ರೋಹ್ತಾಸ್‌, ಕೈಮೂರ್‌, ಔರಂಗಾಬಾದ್‌, ಅರವಾಲ್‌, ಗಯಾ ಮತ್ತು ಪಾಟ್ನಾ ಜಿಲ್ಲೆಗಳ ದೊಡ್ಡ ಜನಸಂಖ್ಯೆಗೆ ಕುಡಿಯುವ ನೀರು ಮತ್ತು ನೀರಾವರಿಗಾಗಿ ಸಾಕಷ್ಟು ನೀರಿನ ಲಭ್ಯತೆಯನ್ನು ಇಂದಿನ ಒಪ್ಪಂದ ಖಾತ್ರಿಪಡಿಸಲಿದೆ ಎಂದು ಶ್ರೀ ಅಮಿತ್‌ ಶಾ ಹೇಳಿದರು. ಇದರ ಜೊತೆಗೆ, ಜಾರ್ಖಂಡ್‌ ನ ಪಾಲಮು, ಗಢ್ವಾ ಹಾಗೂ ಇತರ ಪ್ರದೇಶಗಳಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ನೀರು ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಜಾರ್ಖಂಡ್‌ ಮುಖ್ಯಮಂತ್ರಿ ಶ್ರೀ ಹೇಮಂತ್‌ ಸೊರೇನ್‌ ಮತ್ತು ಬಿಹಾರ ಮುಖ್ಯಮಂತ್ರಿ ಶ್ರೀ ಸಾಮ್ರಾಟ್‌ ಚೌಧರಿ ಅವರು ಸೋನ್ ನದಿ ನೀರು ಹಂಚಿಕೆ ಸಮಸ್ಯೆ ಪರಿಹರಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರ ಉಪಕ್ರಮದೊಂದಿಗೆ, ಹಲವು ದಶಕಗಳಿಂದ ಬಗೆಹರಿಯದೆ ಉಳಿದಿದ್ದ ವಿವಿಧ ರಾಜ್ಯಗಳ ನಡುವಿನ ಬಹುಕಾಲದ ಜಲ ವಿವಾದಗಳನ್ನು ಅಂತರರಾಜ್ಯ ಮಂಡಳಿಯ ಮೂಲಕ ಪರಿಹರಿಸಲಾಗುತ್ತಿದೆ. ಈ ವರ್ಷ ಇಲ್ಲಿಯವರೆಗೆ ನಾಲ್ಕು ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

2026ರ ಜುಲೈ 7ರಂದು ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ‘ನರ್ಮದಾ ತೀರ್ಪು’ ವ್ಯಾಪ್ತಿಗೆ ಒಳಪಡುವ ಫಲಾನುಭವಿ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್‌, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ನಡುವಿನ ಬಾಕಿ ಪಾವತಿಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಸರ್ದಾರ್‌ ಸರೋವರ ಯೋಜನೆಯ ನಿರ್ಮಾಣಕ್ಕೆ ಸಂಬಂಧಿಸಿದ ವೆಚ್ಚ ಹಂಚಿಕೆಯ ಕುರಿತು ಈ ರಾಜ್ಯಗಳ ನಡುವೆ ದೀರ್ಘಕಾಲದಿಂದ ಬಾಕಿ ಉಳಿದಿದ್ದ ವಿವಾದಗಳನ್ನು ಪರಿಹರಿಸುವಲ್ಲಿ ಈ ಒಪ್ಪಂದವು ಮಹತ್ವದ ಮೈಲಿಗಲ್ಲಾಗಿದೆ. ಒಂದು ಬಾರಿಯ ಇತ್ಯರ್ಥದ ಮೂಲಕ ಬಾಕಿ ಉಳಿದಿದ್ದ ಮೊತ್ತವನ್ನು ಪರಿಹರಿಸಲಾಗಿದೆ.

2026ರ ಜೂನ್‌ 29ರಂದು ಯಮುನಾ ಜಲ ಯೋಜನೆಯ ನಿರ್ಮಾಣ ಮತ್ತು ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮತ್ತು ಹರಿಯಾಣ ಸರ್ಕಾರಗಳ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಅನ್ವಯ, ಯಮುನಾ ಕಾಲುವೆಯಿಂದ ಸುಮಾರು 580 ಎಂಸಿಎಂ ನೀರನ್ನು ಮೂರು ಭೂಗತ ಪೈಪ್‌ಲೈನ್‌ ಗಳ ಮೂಲಕ ರಾಜಸ್ಥಾನಕ್ಕೆ ರವಾನಿಸಲಾಗುತ್ತದೆ. ಪಶ್ಚಿಮ ಯಮುನಾ ಕಾಲುವೆಯಿಂದ ಈ ಭೂಗತ ಪೈಪ್‌ಲೈನ್‌ ಗಳ ಮೂಲಕ ರಾಜಸ್ಥಾನಕ್ಕೆ ಹಂಚಿಕೆಯಾಗಿರುವ ಯಮುನಾ ನೀರಿನ ಪಾಲನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಮೇಲ್ದಂಡೆ ಯಮುನಾ ಜಲಾನಯನ ಪ್ರದೇಶದ ಬಳಕೆಗೆ ಯೋಗ್ಯವಾದ ಮೇಲ್ಮೈ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ 1994ರಲ್ಲಿ ಆಗಿರುವ ಒಪ್ಪಂದದ ಅಡಿಯಲ್ಲಿ ರಾಜಸ್ಥಾನಕ್ಕೆ ಹಂಚಿಕೆಯಾಗಿರುವ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಈ ಯೋಜನೆಯು ಕಡಿಮೆ ಮಳೆ ಬೀಳುವ ಒಣ ಪ್ರದೇಶಗಳ ರಾಜಸ್ಥಾನದ ಭಾಗಗಳಿಗೆ ನಿರಂತರ ಕುಡಿಯುವ ನೀರಿನ ಪೂರೈಕೆಯನ್ನು ಖಾತ್ರಿಪಡಿಸುವುದರ ಜೊತೆಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಇದರಿಂದ ಲಕ್ಷಾಂತರ ಜನರಿಗೆ ಪ್ರಯೋಜನವಾಗುತ್ತದೆ.

2026ರ ಜೂನ್‌ 16ರಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬಹುಕಾಲದಿಂದ ಬಾಕಿ ಉಳಿದಿದ್ದ ‘ಕಿಶಾವು ಬಹು ಉದ್ದೇಶಿತ ಅಣೆಕಟ್ಟು ಯೋಜನೆ’ ಕುರಿತು ಸಂಬಂಧಿತ ರಾಜ್ಯಗಳ ನಡುವೆ ಒಮ್ಮತ ಮೂಡಿತು. ಸಭೆಯಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ರಾಜ್ಯಗಳು ‘ಕಿಶಾವು ಬಹು ಉದ್ದೇಶಿತ ಯೋಜನೆ’ ಅನುಷ್ಠಾನಕ್ಕಾಗಿ ತಿಳುವಳಿಕೆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದವು. ಈ ಯೋಜನೆಗೆ ಸಂಬಂಧಿಸಿದಂತೆ ನೀರಿನ ಘಟಕದ ಶೇ.90ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವು ಕೇಂದ್ರ ಸಹಾಯಧನವಾಗಿ ಭರಿಸಲಿದ್ದು, ಉಳಿದ ಶೇ.10ರ ಹಣಕಾಸಿನ ಹೊರೆಯನ್ನು ಆರು ರಾಜ್ಯಗಳು ಭರಿಸಲಿವೆ. ಯೋಜನೆಯ ವಿದ್ಯುತ್‌ ಘಟಕದ ವೆಚ್ಚವನ್ನು ಹಂಚಿಕೊಳ್ಳುವ ಬದಲಾಗಿ ಹಿಮಾಚಲ ಪ್ರದೇಶಕ್ಕೆ ಹಂಚಿಕೆಯಾಗಿರುವ ನೀರನ್ನು ದೆಹಲಿ ಮತ್ತು ರಾಜಸ್ಥಾನಕ್ಕೆ ಹಂಚಿಕೆ ಮಾಡುವ ಕುರಿತು ಒಪ್ಪಂದಕ್ಕೆ ಬರಲಾಯಿತು.

 

*****

 


(ಪ್ರಕಟಣೆ ಐ.ಡಿ.: 2305292) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Odia