ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಗುಜರಾತ್ ನ ಅಮ್ರೇಲಿಯಲ್ಲಿ ‘ಗುಜರಾತ್ ಗೌರವ್ ಸರೋವರ’ ಉದ್ಘಾಟನೆ



ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಿದರು; ಅವರ ಪ್ರಯತ್ನಗಳಿಂದಾಗಿ ದೇಶಾದ್ಯಂತ ಜಲಾಶಯಗಳ ನೀರಾವರಿ ಸಾಮರ್ಥ್ಯದಲ್ಲಿ ಶೇ. 160 ರಷ್ಟು ಹೆಚ್ಚಳವಾಗಿದೆ

400 ದಶಲಕ್ಷ ಲೀಟರ್ ಸಾಮರ್ಥ್ಯದೊಂದಿಗೆ 21 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ 'ಗುಜರಾತ್ ಗೌರವ್ ಸರೋವರ'ವು ಕೃಷಿ ಮತ್ತು ಕುಡಿಯುವ ನೀರಿನ ಲಭ್ಯತೆಗೆ ಹಾಗೂ ಅಂತರ್ಜಲ ಸಂರಕ್ಷಣೆಗೆ ನೆರವಾಗಲಿದೆ

ಪ್ರತಿಯೊಂದು ಹನಿ ನೀರು ಮಣ್ಣನ್ನು ಮರುಪೂರಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ ಹನಿ ನೀರಾವರಿ ವ್ಯವಸ್ಥೆ, ತುಂತುರು  ನೀರಾವರಿ ವ್ಯವಸ್ಥೆ ಮತ್ತು 'ಕ್ಯಾಚ್ ದಿ ರೇನ್' ಅಭಿಯಾನವನ್ನು ಜಾರಿಗೊಳಿಸಲಾಯಿತು

ಉತ್ತರ ಮತ್ತು ಮಧ್ಯ ಗುಜರಾತ್ ನ ಸುಮಾರು 10,000 ಜಲಾಶಯಗಳಲ್ಲಿ ನರ್ಮದಾ ನದಿಯ ನೀರನ್ನು ಶೇಖರಿಸಲಾಗುತ್ತಿದೆ
ಜಲಾಶಯಗಳು ಮತ್ತು ಚೆಕ್ ಡ್ಯಾಮ್ ಗಳ ಸಂಖ್ಯೆ ಹೆಚ್ಚಾಗಿದ್ದು, ಕೃಷಿ ಇಳುವರಿ ಸುಧಾರಿಸಿದೆ ಮತ್ತು ಹಸಿರು ವಿಸ್ತರಿಸಿದೆ

ನಾವು ಮಳೆನೀರಿನ ಪ್ರತಿಯೊಂದು ಹನಿಯನ್ನು ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದರೆ, ದೇಶವು ಎಂದಿಗೂ ಬರಗಾಲವನ್ನು ಎದುರಿಸುವುದಿಲ್ಲ

ಮೋದಿ ಅವರು ಅಧಿಕಾರ ವಹಿಸಿಕೊಂಡಾಗಿನಿಂದ - ಮೊದಲು ಮುಖ್ಯಮಂತ್ರಿಯಾಗಿ ಮತ್ತು ನಂತರ ಪ್ರಧಾನಮಂತ್ರಿಯಾಗಿ - ಗುಜರಾತ್  ರಾಜ್ಯವು 2026 ರವರೆಗೂ ಯಾವುದೇ ಪ್ರಮುಖ ಬರಗಾಲವನ್ನು ಕಂಡಿಲ್ಲ.

ಪ್ರಕಟಣಾ ದಿನಾಂಕ: 27 AUG 2026 5:29PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್ ನ ಅಮ್ರೇಲಿಯಲ್ಲಿ ‘ಗುಜರಾತ್ ಗೌರವ್ ಸರೋವರ’ವನ್ನು ಉದ್ಘಾಟಿಸಿದರು. 'ಗುಜರಾತ್ ಗೌರವ್ ಸರೋವರ'ವನ್ನು ಹರಿಕೃಷ್ಣ ಗ್ರೂಪ್ ಮತ್ತು ಧೋಲಾಕಿಯಾ ಫೌಂಡೇಶನ್ ನಿರ್ಮಿಸಿದೆ. ಈ ಸಂದರ್ಭದಲ್ಲಿ ಗುಜರಾತ್ ಉಪಮುಖ್ಯಮಂತ್ರಿ ಶ್ರೀ ಹರ್ಷ್ ಸಂಘವಿ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ, ಮತ್ಸ್ಯ ಪುರಾಣದ ಪ್ರಕಾರ ಬಾವಿ, ಕಲ್ಯಾಣಿ ಮತ್ತು ಕೆರೆಗಳನ್ನು ನಿರ್ಮಿಸುವವರು ಮಹಾನ್ ಪುಣ್ಯವನ್ನು ಗಳಿಸುತ್ತಾರೆ ಎಂದು ಹೇಳಿದರು. ಪ್ರಸ್ತುತ ದಿನಗಳಲ್ಲಿ ಕಡಿಮೆ ಮಳೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ನಾವು ಮಳೆಯ ಪ್ರತಿಯೊಂದು ಹನಿಯನ್ನು ಉಳಿಸಲು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದರೆ, ದೇಶದಲ್ಲಿ ಅಥವಾ ರಾಜ್ಯದಲ್ಲಿ ಎಂದಿಗೂ ಬರಗಾಲದ ಭಯವಿರುವುದಿಲ್ಲ ಎಂದು ಅವರು ಹೇಳಿದರು. 400 ದಶಲಕ್ಷ ಲೀಟರ್ ಸಾಮರ್ಥ್ಯದೊಂದಿಗೆ 21 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ 'ಗುಜರಾತ್ ಗೌರವ್ ಸರೋವರ'ವು ಕೃಷಿ ಮತ್ತು ಕುಡಿಯುವ ನೀರಿನ ಲಭ್ಯತೆಗೆ ಹಾಗೂ ಅಂತರ್ಜಲ ಸಂರಕ್ಷಣೆಗೆ ನೆರವಾಗಲಿದೆ  ಎಂದು ಹೇಳಿದರು.

ಕವಿ ಕಲಾಪಿ ಅವರು "ಪ್ರಜೆಗಳ ಭಾಗ್ಯವು ರಾಜನ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ" ಎಂದು ಸುಂದರವಾದ ಕವಿತೆಯನ್ನು ಬರೆದಿದ್ದಾರೆ ಎಂದು ಗೃಹ ಸಚಿವರಾದ ಶ್ರೀ ಅಮಿತ್ ಶಾ ಹೇಳಿದರು. 2001 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾದಾಗ, ಇಡೀ ಸೌರಾಷ್ಟ್ರ ಮತ್ತು ಉತ್ತರ ಗುಜರಾತ್ ಪ್ರದೇಶಗಳಲ್ಲಿನ ನೀರಿನ ಅಭಾವವನ್ನು ಶೀಘ್ರವಾಗಿ ಪರಿಹರಿಸಲಾಯಿತು ಮತ್ತು ಬರಗಾಲವು ಗತಕಾಲದ ವಿಷಯವಾಯಿತು ಎಂದು ಅವರು ಹೇಳಿದರು.

ಮೋದಿ ಮುಖ್ಯಮಂತ್ರಿಯಾದ ನಂತರ ಮತ್ತು ಬಳಿಕ ಪ್ರಧಾನಿಯಾದ ನಂತರ, ಗುಜರಾತ್ 2026 ರವರೆಗೆ ಯಾವುದೇ ಪ್ರಮುಖ ಬರಗಾಲವನ್ನು ಕಂಡಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ವರ್ಷ ಎಲ್ ನಿನೋ ಪ್ರಭಾವದಿಂದ ಬರಗಾಲ ಬರಲಿದೆ ಎಂದು ಎಲ್ಲರೂ ಹೇಳುತ್ತಿದ್ದರು. ಕೆಲವು ಸಣ್ಣ ಹಳ್ಳಿಗಳಲ್ಲಿ ಸ್ವಲ್ಪ ಮಳೆಯಾಯಿತು, ಆದರೆ ಹಿಂದೆ ಆದಂತೆ  ಜಾನುವಾರು ಮತ್ತು ಪಕ್ಷಿಗಳನ್ನು ವಲ್ಸಾಡ್ ಗೆ ಕರೆದೊಯ್ಯುವ ಪರಿಸ್ಥಿತಿ ಬರಲಿಲ್ಲ ಎಂದು ಶ್ರೀ ಶಾ ಹೇಳಿದರು. ಮುಖ್ಯಮಂತ್ರಿಯಾದ ನಂತರ ಮೋದಿ ಅವರು 2003 ರ ವೇಳೆಗೆ 1.5 ಲಕ್ಷ ಚೆಕ್ ಡ್ಯಾಮ್ ಗಳನ್ನು ನಿರ್ಮಿಸಿದರು ಎಂದು ಅವರು ಹೇಳಿದರು. 1964 ರಲ್ಲಿ ಅಂದಿನ ಪ್ರಧಾನಮಂತ್ರಿಯವರು ಅಡಿಪಾಯ ಹಾಕಿದ್ದ ನರ್ಮದಾ ಯೋಜನೆಯ ಗೇಟ್ ಗಳು ಮೋದಿ ಜಿ ಪ್ರಧಾನಮಂತ್ರಿಯಾದಾಗ ತೆರೆದವು ಎಂದು ಅವರು ಹೇಳಿದರು. ಈ ಯೋಜನೆಯಿಂದಾಗಿ ನರ್ಮದಾ ನೀರು ಇಡೀ ಸೌರಾಷ್ಟ್ರ, ಕಚ್ ಮತ್ತು ಖಾವ್ಡಾಗಳನ್ನು ತಲುಪಿತು. ನೀರನ್ನು ಉಳಿಸಲು ಪ್ರಾರಂಭಿಸಿದಾಗ, ಸೌನಿ  ಯೋಜನೆಯನ್ನು ಪ್ರಾರಂಭಿಸಲಾಯಿತು. ಹೆಚ್ಚುವರಿ ನೀರನ್ನು ಸೌನಿ ಯೋಜನೆಯ ಮೂಲಕ ಸೌರಾಷ್ಟ್ರದ ಅಣೆಕಟ್ಟುಗಳು ಮತ್ತು ನದಿಗಳಿಗೆ ಹರಿಸಲಾಯಿತು. ನರ್ಮದಾ ನದಿಯ ನೀರನ್ನು ಉತ್ತರ ಮತ್ತು ಮಧ್ಯ ಗುಜರಾತಿನ ಸುಮಾರು 10,000 ಕೊಳಗಳಲ್ಲಿ ಶೇಖರಿಸಲಾಗುತ್ತಿದೆ. ಮೋದಿ ಅವರ ನೇತೃತ್ವದಲ್ಲಿ ಅನೇಕ ಜನರು ಲೆಕ್ಕವಿಲ್ಲದಷ್ಟು ಕೊಳಗಳನ್ನು ನಿರ್ಮಿಸಿದ್ದಾರೆ ಎಂದರು.

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಮಾತನಾಡಿ, ಪ್ರಧಾನಿಯಾದ ನಂತರ ಮೋದಿ ಅವರು ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಿದರು. "ಜಲವೇ ಜೀವನ" ಎಂದು ಸಂತರು ಶತಮಾನಗಳಿಂದ ಹೇಳುತ್ತಿದ್ದಾರೆ, ಆದರೆ ಈ ಮೊದಲು ಯಾವುದೇ ಸರ್ಕಾರ ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಿರಲಿಲ್ಲ ಎಂದು ಅವರು ಹೇಳಿದರು. ಒಂದೇ ಒಂದು ಹೆಚ್ಚುವರಿ ರೂಪಾಯಿ ವೆಚ್ಚ ಮಾಡದೆ, ಮೋದಿ ಜಿ ದೇಶಾದ್ಯಂತ ಅಣೆಕಟ್ಟುಗಳಿಂದ ಹೂಳನ್ನು ತೆಗೆಸಿ ನೀರಾವರಿ ಸಾಮರ್ಥ್ಯವನ್ನು ಶೇಕಡಾ 160 ರಷ್ಟು ಹೆಚ್ಚಿಸಿದ್ದಾರೆ ಎಂದರು. ಮೋದಿ ಅವರ ನೇತೃತ್ವದಲ್ಲಿ ಹನಿ ನೀರಾವರಿ ವ್ಯವಸ್ಥೆ, ತುಂತುರು  ನೀರಾವರಿ ವ್ಯವಸ್ಥೆ ಮತ್ತು “ಕ್ಯಾಚ್ ದಿ ರೇನ್” (ಮಳೆಯನ್ನು ಹಿಡಿದಿಟ್ಟುಕೊಳ್ಳಿ) ಅಭಿಯಾನಗಳನ್ನು ಪ್ರಾರಂಭಿಸಲಾಯಿತು, ಇದರಿಂದ ಪ್ರತಿಯೊಂದು ಹನಿ ನೀರು ಮರಳಿ ಭೂಮಿಗೆ ತಲುಪುತ್ತದೆ. ಇಂದು ಗುಜರಾತ್ ಬರಗಾಲದ ಸಮಸ್ಯೆಯಿಂದ ಹೆಚ್ಚಿನ ಮಟ್ಟಿಗೆ ಮುಕ್ತವಾಗಿದೆ ಎಂದರು. ರಾಜ್ಯದಲ್ಲಿ ಕೆರೆಗಳು ಮತ್ತು ಅಣೆಕಟ್ಟುಗಳ ಸಂಖ್ಯೆ ಹೆಚ್ಚಾಗಿದೆ, ಮತ್ತು ಇದರೊಂದಿಗೆ ಕೃಷಿ ಕ್ಷೇತ್ರವೂ ಬೆಳೆದಿದೆ. ನದಿಗಳ ಜೀರ್ಣೋದ್ಧಾರ ಮತ್ತು ಕೊಳಗಳ ನಿರ್ಮಾಣದಿಂದ ಹಲವು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ ಎಂದು  ಹೇಳಿದರು.

ಸೌರಾಷ್ಟ್ರದಾದ್ಯಂತ ಇರುವ ಜಲ ಸಂರಕ್ಷಣೆಯ ಸಂಸ್ಕೃತಿಯು ಈಗ ಹೊಸ ಪೀಳಿಗೆಯನ್ನು ತಲುಪಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಾವಿರಾರು ಸಂತರು ಮತ್ತು ಜಾನಪದ ಕಲಾವಿದರು ನೀರನ್ನು ಉಳಿಸುವ ಅಗತ್ಯತೆಯ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. 2001ರಲ್ಲಿ ಗುಜರಾತ್ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿತ್ತು ಎಂದು ಅವರು ಹೇಳಿದರು. ಸುಮಾರು 80% ರಷ್ಟು ನೀರು ಭರೂಚ್ವರೆಗಿನ ಪ್ರದೇಶದಲ್ಲಿತ್ತು, ಆದರೆ ಆ ಪ್ರದೇಶದಲ್ಲಿ 16% ರಷ್ಟು ಜನಸಂಖ್ಯೆ ಮಾತ್ರ ಇತ್ತು. 85% ರಷ್ಟು ಜನಸಂಖ್ಯೆ ವಾಸಿಸುತ್ತಿದ್ದ ಕಡೆ ಕೇವಲ 14% ರಷ್ಟು ನೀರು ಇತ್ತು. ಮೋದಿ ಜಿ ಅವರು ಮಾನವಶಕ್ತಿ, ಸಾರ್ವಜನಿಕ ಜಾಗೃತಿ ಮತ್ತು ಸಮೂಹ ಚಳವಳಿಯ ಮೂಲಕ ಈ ದೊಡ್ಡ ಅಂತರವನ್ನು ಸರಿದೂಗಿಸಲು ಪ್ರಯತ್ನಿಸಿದರು. ಸೌನಿ ಯೋಜನೆಯ ಮೂಲಕ ನರ್ಮದಾ ನೀರನ್ನು ಸೌರಾಷ್ಟ್ರಕ್ಕೆ ಕೊಂಡೊಯ್ಯಲಾಯಿತು ಮತ್ತು ಉತ್ತರ ಗುಜರಾತಿನ ʻಸುಜಲಾಂ ಸುಫಲಾಂ ಯೋಜನೆʼಯ ಮೂಲಕ ಒಂದರ ನಂತರ ಒಂದರಂತೆ ಗ್ರಾಮ ಗ್ರಾಮಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಯಿತು ಎಂದು ಅವರು ಹೇಳಿದರು. ಇಂದು ಗುಜರಾತ್ ನಿಜವಾಗಿಯೂ ಬರ ಮುಕ್ತವಾಗಿದೆ ಎಂದು ಅವರು ಹೇಳಿದರು. ಕೆರೆಗಳು ಮತ್ತು ಚೆಕ್ ಡ್ಯಾಮ್ ಗಳು ಹೆಚ್ಚಾಗಿವೆ, ಕೃಷಿ ಚೆನ್ನಾಗಿ ನಡೆಯುತ್ತಿದೆ, ಹಸಿರು ಬೆಳೆದಿದೆ ಮತ್ತು ಮಳೆಯೂ ಉತ್ತಮವಾಗಿದೆ. 2001 ರಿಂದ 2026 ರವರೆಗೆ ಎಲ್ಲೂ ಬರಗಾಲ ಕಂಡುಬಂದಿಲ್ಲ. ಇದು ಮೋದಿ ಜಿ ಅವರ ಯೋಜನೆಗಳ ಫಲಿತಾಂಶವಾಗಿದೆ ಎಂದು ಹೇಳಿದರು.

ಹರಿಕೃಷ್ಣ ಗ್ರೂಪ್ನ ಸಂಸ್ಥಾಪಕ ಶ್ರೀ ಸಾವ್ಜಿ ಧೋಲಾಕಿಯಾ ಅವರು ಪದ್ಮಶ್ರೀಗಾಗಿ ಸರ್ಕಾರಕ್ಕೆ ಯಾವುದೇ ಮನವಿ ಮಾಡಿರಲಿಲ್ಲ, ಆದರೂ ಅವರಿಗೆ ಈ ಗೌರವ ನೀಡಲಾಗಿದೆ ಎಂದು ತಮ್ಮಲ್ಲಿ ಹೇಳಿದ್ದಾಗಿ ಗೃಹ ಸಚಿವರು ತಿಳಿಸಿದರು. ಜಲ ಸಂರಕ್ಷಣೆಗಾಗಿ 208 ಕೆರೆಗಳನ್ನು ನಿರ್ಮಿಸಿದ ವ್ಯಕ್ತಿಯು ಪದ್ಮಶ್ರೀಗಾಗಿ ಮನವಿ ಮಾಡಬೇಕಾಗಿ ಬಂದರೆ, ನಮ್ಮ ಸರ್ಕಾರ ನಿಷ್ಪ್ರಯೋಜಕ ಎಂದು ಪರಿಗಣಿಸಲ್ಪಡುತ್ತದೆ ಎಂದು ಶ್ರೀ ಶಾ ಹೇಳಿದರು. ಇಂತಹ ಉದಾತ್ತ ಕೆಲಸಗಳನ್ನು ಗಮನಿಸಲಾಗದ ಸರ್ಕಾರವನ್ನು ಸರ್ಕಾರ ಎಂದು ಕರೆಯಲು ಸಾಧ್ಯವಿಲ್ಲ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ಭಾರತ ರತ್ನಗಳು ಕುಟುಂಬದ ಸದಸ್ಯರಿಗೆ ಅಥವಾ ಪರಿಚಿತರಿಗೆ ನೀಡುವ ಗೌರವಗಳಲ್ಲ ಎಂದು ಶ್ರೀ ಶಾ ಹೇಳಿದರು. ಈ ಗೌರವಗಳು ಯಾವುದೇ ಪ್ರಶಂಸೆಯ ಬಯಕೆಯಿಲ್ಲದೆ ತಮ್ಮ ಇಡೀ ಜೀವನವನ್ನು ಭಾರತಾಂಬೆಗೆ ಸಮರ್ಪಿಸುವವರಿಗಾಗಿ ಇವೆ ಎಂದು ಹೇಳಿದರು.

 

******

 

 


(ಪ್ರಕಟಣೆ ಐ.ಡಿ.: 2303941) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Odia , Tamil