ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಮಂಗೋಲಿಯಾದ ಉಲಾನ್‌ಬಾತರ್‌ನಲ್ಲಿ ನಡೆಯುತ್ತಿರುವ 'ಯುಎನ್‌ಸಿಸಿಡಿ ಸಿಒಪಿ 17' ಸಮಾವೇಶದಲ್ಲಿ, ಸಮುದಾಯ-ನೇತೃತ್ವದಲ್ಲಿ ಹುಲ್ಲುಗಾವಲುಗಳ ಮರುಸ್ಥಾಪನೆಗೆ ಕರೆ ನೀಡಿದ ಭಾರತ


ಭಾರತದ ಕಾರ್ಯವಿಧಾನವು ಭೂಮೇಲ್ಮೈ ನಿರ್ವಹಣೆ ಮತ್ತು ಜೀವನೋಪಾಯ ಬೆಂಬಲವನ್ನು ಸಂಯೋಜಿಸುತ್ತದೆ, ಸಮುದಾಯದ ಭಾಗವಹಿಸುವಿಕೆಯು ಇದರ ಪ್ರಮುಖ ಅಂಶವಾಗಿದೆ: ಶ್ರೀ ಭೂಪೇಂದರ್ ಯಾದವ್

ಪಶುಪಾಲಕರು ಕೇವಲ ಫಲಾನುಭವಿಗಳಾಗಿ ಮಾತ್ರವಲ್ಲ, ಪಾಲಕರಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಹುಲ್ಲುಗಾವಲುಗಳ ಯಶಸ್ವಿ ಪುನಃಸ್ಥಾಪನೆಯು ಪ್ರಾರಂಭವಾಗುತ್ತದೆ: ಕೇಂದ್ರ ಪರಿಸರ ಸಚಿವರು

ಪ್ರಕಟಣಾ ದಿನಾಂಕ: 26 AUG 2026 8:51AM by PIB Bengaluru

ಪಶುಪಾಲಕ ಸಮುದಾಯಗಳನ್ನು ಉಳಿಸಿಕೊಳ್ಳುವಲ್ಲಿ, ಜೀವವೈವಿಧ್ಯತೆಯನ್ನು ಸಂರಕ್ಷಿಸುವಲ್ಲಿ ಹಾಗೂ ನೀರು ಮತ್ತು ಇಂಗಾಲದ ಚಕ್ರಗಳನ್ನು ನಿಯಂತ್ರಿಸುವಲ್ಲಿ ಹುಲ್ಲುಗಾವಲುಗಳ  ನಿರ್ಣಾಯಕ ಪಾತ್ರವನ್ನು ಭಾರತವು ಒತ್ತಿಹೇಳಿದೆ. ಜೊತೆಗೆ ವಿಜ್ಞಾನ, ಸುರಕ್ಷಿತ ಹಿಡುವಳಿ ಹಕ್ಕು ಮತ್ತು ಸಮುದಾಯದ ಉಸ್ತುವಾರಿಯನ್ನು ಆಧರಿಸಿದ ಮರುಸ್ಥಾಪನಾ ವಿಧಾನಗಳಿಗೆ ಕರೆ ನೀಡಿದೆ. 'ಮರುಭೂಮೀಕರಣ ತಡೆಗಟ್ಟುವ ವಿಶ್ವಸಂಸ್ಥೆಯ ನಿರ್ಣಯ'ದ(ಯುಎನ್‌ಸಿಸಿಡಿ) 17ನೇ ಪಕ್ಷಗಳ ಸಮಾವೇಶದಲ್ಲಿ (ಸಿಒಪಿ17) “ಹುಲ್ಲುಗಾವಲುಗಳ ಮರುಸ್ಥಾಪನೆ ಮತ್ತು ಪಶುಪಾಲಕ ಸಮುದಾಯಗಳ ಯೋಗಕ್ಷೇಮ” ಕುರಿತ ಸಚಿವರ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು, ವೈಜ್ಞಾನಿಕ ಯೋಜನೆ ಮತ್ತು ಸಮುದಾಯದ ಭಾಗವಹಿಸುವಿಕೆಯ ಸಂಯೋಜನೆಯ ಮೂಲಕ ಹುಲ್ಲುಗಾವಲು ಪ್ರದೇಶಗಳನ್ನು ಮರುಸ್ಥಾಪಿಸುವಲ್ಲಿ ಭಾರತದ ಅನುಭವವನ್ನು ವಿವರಿಸಿದರು.

ಪಶುಪಾಲಕರ ಪ್ರಮುಖ ಪಾತ್ರವನ್ನು ಒತ್ತಿಹೇಳಿದ ಶ್ರೀ ಯಾದವ್, "ಪಶುಪಾಲಕರು ಕೇವಲ ಫಲಾನುಭವಿಗಳಾಗಿರದೆ, ಪಾಲಕರಾಗಿ ಕಾರ್ಯನಿರ್ವಹಿಸಿದಾಗ ಯಶಸ್ವಿ ಮರುಸ್ಥಾಪನೆಯು ಪ್ರಾರಂಭವಾಗುತ್ತದೆ" ಎಂದು ಹೇಳಿದರು. ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸುವುದರಿಂದ ಪರಿಸರ ಸ್ನೇಹಿ, ಆರ್ಥಿಕವಾಗಿ ಲಾಭದಾಯಕ ಮತ್ತು ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡ ಮರುಸ್ಥಾಪನೆಯನ್ನು ಸಾಧಿಸಲು ಸಾಧ್ಯವಿದೆ ಎಂದು ಅವರು ಒತ್ತಿ ಹೇಳಿದರು. ಹಿಮಾಲಯದ ಹುಲ್ಲುಗಾವಲುಗಳು ಮತ್ತು ಮಧ್ಯ ಭಾರತದ 'ಸವನ್ನಾ'ದಿಂದ ಹಿಡಿದು ಶುಷ್ಕವಾದ ಥಾರ್, ಕಚ್ ಪ್ರದೇಶಗಳು ಮತ್ತು ದಕ್ಷಿಣದ ಶೋಲಾಗಳವರೆಗೆ - ಭಾರತದ ಹುಲ್ಲುಗಾವಲುಗಳು ವೈವಿಧ್ಯಮಯ ಭೂ ಮೇಲ್ಮೈಗಳಲ್ಲಿ ವ್ಯಾಪಿಸಿವೆ. ಮತ್ತು ದೇಶದ ಅಪಾರ ಜಾನುವಾರು ಹಾಗೂ ಮಾನವ ಜನಸಂಖ್ಯೆಯನ್ನು ಪೋಷಿಸುತ್ತಿವೆ ಎಂದು ಅವರು ಸಭೆಯಲ್ಲಿ ತಿಳಿಸಿದರು. ಉಪಗ್ರಹ-ಆಧಾರಿತ ಮರುಭೂಮೀಕರಣ ಮತ್ತು ಭೂಮಿಯ ಶಿಥಿಲತೆ  ನಕ್ಷೆಗಳು ಹುಲ್ಲುಗಾವಲುಗಳನ್ನು ಮ್ಯಾಪಿಂಗ್ ಮಾಡಲು ಮತ್ತು ಮರುಸ್ಥಾಪನೆಯನ್ನು ಯೋಜಿಸಲು ವೈಜ್ಞಾನಿಕ ಆಧಾರವನ್ನು ಒದಗಿಸುತ್ತವೆ. ಜೊತೆಗೆ, ಪಶುಪಾಲಕರ ಮೇಯಿಸುವಿಕೆಯ ಹಕ್ಕುಗಳು ಮತ್ತು ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳಿಗೆ ಮನ್ನಣೆ ನೀಡುವುದರಿಂದ ಸುಸ್ಥಿರ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಗಳ ಪಾತ್ರವನ್ನು ಬಲಪಡಿಸಿದಂತಾಗುತ್ತದೆ ಎಂದು ಸಚಿವರು ಗಮನಸೆಳೆದರು.

ಭಾರತದ ಸಾಂಪ್ರದಾಯಿಕ ಸಮುದಾಯ ಸಂರಕ್ಷಣೆಯ ವ್ಯವಸ್ಥೆಗಳನ್ನು ಉಲ್ಲೇಖಿಸಿಸಿದ ಶ್ರೀ ಯಾದವ್, ರಾಜಸ್ಥಾನದ 'ಓರನ್‌'ಗಳ ಉದಾಹರಣೆಯನ್ನು ಉಲ್ಲೇಖಿಸಿದರು. ಇವು ಪವಿತ್ರ ತೋಪುಗಳಾಗಿದ್ದು, ಅವುಗಳ ಸಾಂಸ್ಕೃತಿಕ ಮತ್ತು ಪರಿಸರ ಪ್ರಾಮುಖ್ಯತೆಗಾಗಿ ಸ್ಥಳೀಯ ಸಮುದಾಯಗಳಿಂದ ಪೂಜಿಸಲ್ಪಡುತ್ತವೆ ಮತ್ತು ರಕ್ಷಿಸಲ್ಪಡುತ್ತವೆ. ದೇಶಾದ್ಯಂತ ಸುಮಾರು 0.6 ದಶಲಕ್ಷ ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿರುವ, ಸಮುದಾಯದಿಂದ ರಕ್ಷಿಸಲ್ಪಟ್ಟ ಸುಮಾರು 25,000 ಇಂತಹ ಪವಿತ್ರ ತೋಪುಗಳು, ಸಮುದಾಯದ ಉಸ್ತುವಾರಿಗೆ ಅತ್ಯುತ್ತಮ ಉದಾಹರಣೆಯಾಗಿವೆ. ಜೊತೆಗೆ ಪಶುಪಾಲನಾ ಭೂಮಿ ಹಕ್ಕುಗಳನ್ನು ಭದ್ರಪಡಿಸುತ್ತವೆ ಮತ್ತು 'ಗ್ರೇಟ್ ಇಂಡಿಯನ್ ಬಸ್ಟರ್ಡ್‌'ನಂತಹ ಮಹತ್ವದ ಆವಾಸಸ್ಥಾನಗಳನ್ನು ಸಂರಕ್ಷಿಸುತ್ತವೆ ಎಂದು ಅವರು ತಿಳಿಸಿದರು. ಈ ಪೈಕಿ ಅನೇಕ ಪವಿತ್ರ ತೋಪುಗಳನ್ನು ಶಾಸನಬದ್ಧ ನಿಬಂಧನೆಗಳ ಅಡಿಯಲ್ಲಿ ರಕ್ಷಿಸಲಾಗಿದೆ ಎಂದು ಶ್ರೀ ಯಾದವ್ ಸೇರಿಸಿದರು. ಗುಜರಾತ್‌ನ 'ಬನ್ನಿ'ಯಂತಹ ಹುಲ್ಲುಗಾವಲುಗಳಲ್ಲಿ ಚೀತಾಗಳ ಮರುಪರಿಚಯ ಮತ್ತು ಅದರ ಉದ್ದೇಶಿತ ವಿಸ್ತರಣೆ ಸೇರಿದಂತೆ, ಬಯಲು ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವ ಭಾರತದ ಪ್ರಯತ್ನಗಳನ್ನು ಸಚಿವರು ಮತ್ತಷ್ಟು ವಿವರಿಸಿದರು. ಆಳವಾದ ಬೇರುಗಳನ್ನು ಹೊಂದಿರುವ ಹುಲ್ಲುಗಳು ಮಣ್ಣಿನ ಇಂಗಾಲದ ಶೇಖರಣೆಗೆ ಕೊಡುಗೆ ನೀಡುತ್ತವೆ, ನೀರು ಇಂಗುವಿಕೆಯನ್ನು ಹೆಚ್ಚಿಸುತ್ತವೆ. ಭಾರತದಾದ್ಯಂತ ಇರುವ ಸುಮಾರು 10 ದಶಲಕ್ಷ  ಹೆಕ್ಟೇರ್ ಶಾಶ್ವತ ಹುಲ್ಲುಗಾವಲುಗಳು ಮತ್ತು ಮೇವಿನ ಭೂಮಿಯಲ್ಲಿ ಅಂತರ್ಜಲ ಮರುಪೂರಣವನ್ನು ಬೆಂಬಲಿಸುತ್ತವೆ ಎಂದು ಅವರು ಗಮನಸೆಳೆದರು.

ಭಾರತದ ವಿಧಾನವು ಭೂದೃಶ್ಯ ನಿರ್ವಹಣೆ, ಜಲಾನಯನ ಅಭಿವೃದ್ಧಿ, ಸುಸ್ಥಿರ ಮೇಯಿಸುವಿಕೆ, ಮೇವು ಅಭಿವೃದ್ಧಿ ಮತ್ತು ಜೀವನೋಪಾಯದ ಬೆಂಬಲವನ್ನು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಸಂಯೋಜಿಸುತ್ತದೆ ಎಂದು ಹೇಳುವ ಮೂಲಕ ಶ್ರೀ ಯಾದವ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಅಭಿವೃದ್ಧಿಶೀಲ ರಾಷ್ಟ್ರಗಳು ಭೂ ಅವನತಿ ತಟಸ್ಥತೆಯತ್ತ ಸಾಗುತ್ತಿದ್ದಂತೆ, ಹಣಕಾಸು, ತಂತ್ರಜ್ಞಾನ ಮತ್ತು ಜ್ಞಾನಕ್ಕೆ ವರ್ಧಿತ ಪ್ರವೇಶಕ್ಕೆ ಅವರು ಕರೆ ನೀಡಿದರು, "ರೇಂಜ್ ಲ್ಯಾಂಡ್ ಪುನಃಸ್ಥಾಪನೆಗಾಗಿ ಭಾರತವು ಸಮರ್ಪಿತ, ಪ್ರವೇಶಿಸಬಹುದಾದ ಹಣಕಾಸನ್ನು ಸ್ವಾಗತಿಸುತ್ತದೆ ಮತ್ತು ದಕ್ಷಿಣ-ದಕ್ಷಿಣ ಸಹಕಾರದ ಮೂಲಕ ತನ್ನ ಅನುಭವ ಮತ್ತು ಪರಿಹಾರಗಳನ್ನು ಹಂಚಿಕೊಳ್ಳಲು ಸಿದ್ಧವಾಗಿದೆ" ಎಂದು ಹೇಳಿದರು.

ಭಾರತದ ಕಾರ್ಯವಿಧಾನವು ಭೂಮೇಲ್ಮೈ ನಿರ್ವಹಣೆ, ಜಲಾನಯನ ಅಭಿವೃದ್ಧಿ, ಸುಸ್ಥಿರ ಮೇಯಿಸುವಿಕೆ, ಮೇವು ಅಭಿವೃದ್ಧಿ ಮತ್ತು ಜೀವನೋಪಾಯ ಬೆಂಬಲವನ್ನು ಒಟ್ಟುಗೂಡಿಸುತ್ತದೆ. ಸಮುದಾಯದ ಭಾಗವಹಿಸುವಿಕೆ ಇದರ ಪ್ರಧಾನ ಅಂಶವಾಗಿದೆ ಎಂದು ಹೇಳುವ ಮೂಲಕ ಶ್ರೀ ಯಾದವ್ ತಮ್ಮ ಭಾಷಣವನ್ನು ಮುಗಿಸಿದರು. ಅಭಿವೃದ್ಧಿಶೀಲ ರಾಷ್ಟ್ರಗಳು 'ಭೂ ಸವಕಳಿ ತಟಸ್ಥತೆ'ಯ ಕಡೆಗೆ ಮುನ್ನಡೆಯುತ್ತಿರುವ ಈ ಹೊತ್ತಿನಲ್ಲಿ ಅವುಗಳಿಗೆ ಹಣಕಾಸು, ತಂತ್ರಜ್ಞಾನ ಮತ್ತು ಜ್ಞಾನದ ಪ್ರವೇಶ ವಿಸ್ತರಿಸುವಂತೆ ಅವರು ಕರೆ ನೀಡಿದರು. ಜೊತೆಗೆ, "ಹುಲ್ಲುಗಾವಲು ಪ್ರದೇಶಗಳ ಮರುಸ್ಥಾಪನೆಗೆ ಮೀಸಲಾದ, ಸುಲಭವಾಗಿ ಲಭ್ಯವಾಗುವ ಹಣಕಾಸು ನೆರವನ್ನು ಭಾರತವು ಸ್ವಾಗತಿಸುತ್ತದೆ. ಅಲ್ಲದೆ, ದಕ್ಷಿಣ-ದಕ್ಷಿಣ ಸಹಕಾರದ ಮೂಲಕ ತನ್ನ ಅನುಭವ ಮತ್ತು ಪರಿಹಾರಗಳನ್ನು ಹಂಚಿಕೊಳ್ಳಲು ಸಿದ್ಧವಾಗಿದೆ," ಎಂದು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2303464) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Bengali , Gujarati