ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರ ಅಧ್ಯಕ್ಷತೆಯಲ್ಲಿ 53ನೇ ʼಪ್ರಗತಿʼ ಸಭೆ
ರೈಲ್ವೆ, ರಸ್ತೆ ಮತ್ತು ವಿದ್ಯುತ್ ಕ್ಷೇತ್ರಗಳ ಆರು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪರಾಮರ್ಶೆ ನಡೆಸಿದ ಪ್ರಧಾನಮಂತ್ರಿ
₹30,000 ಕೋಟಿಗೂ ಹೆಚ್ಚು ಒಟ್ಟು ಹೂಡಿಕೆಯೊಂದಿಗೆ 9 ರಾಜ್ಯಗಳಲ್ಲಿ ಹರಡಿರುವ ಯೋಜನೆಗಳ ಪರಿಶೀಲನೆ
ಮೂಲಸೌಕರ್ಯ ಯೋಜನೆಗಳನ್ನು ಪ್ರತ್ಯೇಕ ವಿಭಾಗಗಳು ಅಥವಾ ಪ್ಯಾಕೇಜ್ ಗಳಾಗಿ ನೋಡುವ ಬದಲು, ಒಂದು ಸಮಗ್ರ ಘಟಕವಾಗಿ ನೋಡಬೇಕು: ಪ್ರಧಾನಮಂತ್ರಿ
ಯೋಜನೆ ಅನುಷ್ಠಾನದ ಎಲ್ಲಾ ಹಂತಗಳಲ್ಲಿ ನಿರಂತರ ಸುಧಾರಣೆಗಳು ಮತ್ತು ಸಚಿವಾಲಯಗಳು ಹಾಗೂ ರಾಜ್ಯಗಳಾದ್ಯಂತ ಕ್ರಿಯಾತ್ಮಕ ಕೆಲಸದ ಸಂಸ್ಕೃತಿಗೆ ಪ್ರಧಾನಮಂತ್ರಿ ಕರೆ
ವೇಗದ ಜೊತೆಗೆ ಗುಣಮಟ್ಟವೂ ಇರಬೇಕು: ಪ್ರಧಾನಮಂತ್ರಿ
ಅಗ್ರಿಸ್ಟ್ಯಾಕ್ ಪರಿಶೀಲಿಸುವ ವೇಳೆ, ಕೃಷಿ ದತ್ತಾಂಶದಿಂದ ಹೆಚ್ಚಿನ ಮೌಲ್ಯ ಪಡೆಯಲು ಕೃತಕ ಬುದ್ಧಿಮತ್ತೆ ಸೇರಿದಂತೆ ಇತ್ತೀಚಿನ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿ ಒತ್ತಿಹೇಳಿದರು
ಸೈಬರ್ ವಂಚನೆ ಮತ್ತು ‘ಡಿಜಿಟಲ್ ಅರೆಸ್ಟ್’ ಕುರಿತು ತರಬೇತಿ, ಸಾರ್ವಜನಿಕ ಜಾಗೃತಿ, ಸೈಬರ್ ಸುರಕ್ಷತಾ ಶಿಕ್ಷಣ ಹಾಗೂ ಸಮನ್ವಯದ ಕ್ರಮಗಳಿಗೆ ಪ್ರಧಾನಮಂತ್ರಿ ಒತ್ತು
ಪ್ರಕಟಣಾ ದಿನಾಂಕ:
25 AUG 2026 8:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೇವಾ ತೀರ್ಥದಲ್ಲಿ ನಡೆದ ಕ್ರಿಯಾತ್ಮಕ ಆಡಳಿತ ಮತ್ತು ಸಕಾಲಿಕ ಅನುಷ್ಠಾನಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಆಧಾರಿತ, ಬಹು-ಮಾದರಿಯ ವೇದಿಕೆಯಾದ 'ಪ್ರಗತಿ'ಯ (PRAGATI) 53ನೇ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಭೆಯಲ್ಲಿ, ಪ್ರಧಾನಮಂತ್ರಿಯವರು ರೈಲ್ವೆ, ರಸ್ತೆ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಸಂಬಂಧಿಸಿದ ಆರು ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದರು. ಒಂಬತ್ತು ರಾಜ್ಯಗಳಲ್ಲಿ ಜಾರಿಯಲ್ಲಿರುವ ಈ ಯೋಜನೆಗಳ ಒಟ್ಟು ವೆಚ್ಚ ₹30,000 ಕೋಟಿಗೂ ಅಧಿಕವಾಗಿದೆ. ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದು, ಕೈಗಾರಿಕಾ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಹಾಗೂ ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಮಹತ್ವದ್ದಾಗಿವೆ. ಯೋಜನೆಗಳ ನಿಗದಿತ ಕಾಲಮಿತಿಯ ಪಾಲನೆ, ವಿವಿಧ ಸಂಸ್ಥೆಗಳ ನಡುವಿನ ಸಮನ್ವಯ, ಬಾಕಿ ಉಳಿದಿರುವ ಸಮಸ್ಯೆಗಳ ಪರಿಹಾರ ಮತ್ತು ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ವಿಶೇಷ ಒತ್ತು ನೀಡಿ ಅವುಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.
ಮೂಲಸೌಕರ್ಯ ಯೋಜನೆಗಳಲ್ಲಿ ವಿಳಂಬವಾದರೆ ವೆಚ್ಚ ಹೆಚ್ಚಳಕ್ಕೆ ಮಾತ್ರ ಸೀಮಿತವಾಗದೆ, ನಾಗರಿಕರು, ಉದ್ಯಮಗಳು ಮತ್ತು ಆರ್ಥಿಕತೆಗೆ ಉದ್ದೇಶಿತ ಪ್ರಯೋಜನಗಳ ಲಭ್ಯತೆಯೂ ವಿಳಂಬವಾಗುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ಮೂಲಸೌಕರ್ಯ ಯೋಜನೆಗಳನ್ನು ಪ್ರತ್ಯೇಕ ವಿಭಾಗಗಳು, ವಿಸ್ತರಣೆಗಳು ಅಥವಾ ಪ್ಯಾಕೇಜ್ ಗಳಂತೆ ಪರಿಗಣಿಸಿ ಮೇಲ್ವಿಚಾರಣೆ ಮಾಡುವ ಬದಲು ಸಮಗ್ರ ಯೋಜನೆಯಾಗಿ ಪರಿಗಣಿಸಬೇಕು ಮತ್ತು ಮೇಲ್ವಿಚಾರಣೆ ನಡೆಸಬೇಕು ಎಂದು ಅವರು ಹೇಳಿದರು. ವೈಯಕ್ತಿಕ ಪ್ಯಾಕೇಜ್ ಗಳ ಪ್ರಗತಿಯು ಅಂತಿಮವಾಗಿ ಸಂಪೂರ್ಣ ಯೋಜನೆಯ ನಿಗದಿತ ಕಾಲಮಿತಿಯೊಳಗಿನ ಪೂರ್ಣಗೊಳಿಸುವಿಕೆ ಮತ್ತು ಕಾರ್ಯಾರಂಭಕ್ಕೆ ಕಾರಣವಾಗಬೇಕು ಎಂದು ಅವರು ತಿಳಿಸಿದರು. ಆದ್ದರಿಂದ, ಸಚಿವಾಲಯಗಳು ಮತ್ತು ರಾಜ್ಯಗಳು ಯೋಜನೆಯ ಆರಂಭದಿಂದ ಅಂತ್ಯದವರೆಗಿನ ಸಮಗ್ರ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಹಾಗೂ ಒಟ್ಟಾರೆ ಯೋಜನೆಯ ಕಾರ್ಯಾರಂಭ ಮತ್ತು ಪ್ರಯೋಜನಗಳ ವಿತರಣೆಗೆ ವಿಳಂಬ ಉಂಟುಮಾಡಬಹುದಾದ ಪ್ರಮುಖ ಅಂತರಗಳನ್ನು ಪರಿಹರಿಸಬೇಕು ಎಂದು ಪ್ರಧಾನಮಂತ್ರಿಯವರು ಸೂಚಿಸಿದರು. ಯೋಜನೆಗಳ ಅನುಷ್ಠಾನದ ಪ್ರತಿಯೊಂದು ಹಂತದಲ್ಲೂ ಹೆಚ್ಚಿನ ಹೊಣೆಗಾರಿಕೆಯೊಂದಿಗೆ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳಲ್ಲಿ ಕ್ರಿಯಾತ್ಮಕ ಕೆಲಸದ ಸಂಸ್ಕೃತಿಯನ್ನು ಬೆಳೆಸುವಂತೆ ಅವರು ಕರೆ ನೀಡಿದರು.
ಸಾಧ್ಯವಿರುವ ಕಡೆಗಳಲ್ಲಿ, ವಿಶೇಷವಾಗಿ ಪ್ರಮುಖ ಸಾರಿಗೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ರೂಪಿಸುವ ಸಂದರ್ಭದಲ್ಲಿ ಮೂಲಸೌಕರ್ಯ ಸೇವೆಗಳಿಗಾಗಿ ಸಾಮಾನ್ಯ ಯುಟಿಲಿಟಿ ಕಾರಿಡಾರ್ ಗಳನ್ನು ಬಳಸಿಕೊಳ್ಳುವ ಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಯೋಜನೆ ರೂಪಿಸುವ ಹಂತದಲ್ಲಿಯೇ ಇಂತಹ ಸಮಗ್ರ ವಿಧಾನಗಳನ್ನು ಪರಿಶೀಲಿಸುವಂತೆ ಅವರು ಸಚಿವಾಲಯಗಳು ಮತ್ತು ರಾಜ್ಯಗಳಿಗೆ ಕರೆ ನೀಡಿದರು.
ಯೋಜನೆಗಳ ಅನುಷ್ಠಾನದ ವೇಗದ ಜೊತೆಗೆ ಯಾವುದೇ ರಾಜಿಯಿಲ್ಲದ ಗುಣಮಟ್ಟವೂ ಇರಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಚಿವಾಲಯಗಳು, ರಾಜ್ಯಗಳು ಮತ್ತು ಅನುಷ್ಠಾನ ಸಂಸ್ಥೆಗಳು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಯೋಜನೆಗಳ ಪ್ರತಿಯೊಂದು ಹಂತದಲ್ಲೂ ಗುಣಮಟ್ಟದ ಭರವಸೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಬೇಕು ಎಂದು ಅವರು ಹೇಳಿದರು.
ಡಿಜಿಟಲ್ ಕೃಷಿ ಮಿಷನ್ ನಡಿ ಅಗ್ರಿಸ್ಟ್ಯಾಕ್ ಅನ್ನು ಪರಿಶೀಲಿಸುವ ಸಂದರ್ಭದಲ್ಲಿ, ಕೃಷಿ ದತ್ತಾಂಶದಿಂದ ಹೆಚ್ಚಿನ ಮೌಲ್ಯವನ್ನು ಪಡೆಯಲು ಕೃತಕ ಬುದ್ಧಿಮತ್ತೆ ಸೇರಿದಂತೆ ಇತ್ತೀಚಿನ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ಕೃಷಿ ಮೌಲ್ಯ ಸರಪಳಿಯಲ್ಲಿನ ಇನ್‌ಪುಟ್ ಯೋಜನೆಯಿಂದ ಹಿಡಿದು ಸಂಸ್ಕರಣೆಯವರೆಗೆ ದತ್ತಾಂಶ ಪರಿಸರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇದರಿಂದ ಹೆಚ್ಚು ಸೂಕ್ತವಾದ ಮಧ್ಯಸ್ತಿಕೆಗಳು, ಉತ್ತಮ ಗುರಿನಿರ್ಧಾರ ಮತ್ತು ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಅಗ್ರಿಸ್ಟ್ಯಾಕ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಹಾಗೂ ರೈತರಿಗೆ ಉತ್ತಮ ಫಲಿತಾಂಶಗಳನ್ನು ಒದಗಿಸಲು ಅದರ ಬಳಕೆಯನ್ನು ಮತ್ತಷ್ಟು ಬಲಪಡಿಸುವಂತೆ ಕರೆ ನೀಡಿದರು.
‘ಡಿಜಿಟಲ್ ಅರೆಸ್ಟ್’ ಪ್ರಕರಣಗಳು ಸೇರಿದಂತೆ ಸೈಬರ್ ವಂಚನೆ ಪ್ರಕರಣಗಳ ಪರಿಶೀಲನೆ ವೇಳೆ, ತರಬೇತಿ, ಜಾಗೃತಿ ಮತ್ತು ಶಿಕ್ಷಣದ ಮೇಲೆ ನಿರಂತರ ಗಮನ ಹರಿಸುವ ಮೂಲಕ ತಡೆಗಟ್ಟುವ ಕ್ರಮಗಳನ್ನು ಬಲಪಡಿಸಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ವಿಶೇಷವಾಗಿ ಹಿರಿಯ ನಾಗರಿಕರು, ಯುವಜನರು ಮತ್ತು ಇತರ ದುರ್ಬಲ ವರ್ಗಗಳ ಜನರಿಗೆ ಸಾಮಾನ್ಯ ವಂಚನಾ ವಿಧಾನಗಳು, ಎಚ್ಚರಿಕೆಯ ಸೂಚನೆಗಳು ಮತ್ತು ಸುರಕ್ಷಿತ ಡಿಜಿಟಲ್ ಬಳಕೆಯ ಕ್ರಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಿರಂತರ ಹಾಗೂ ನಿರ್ದಿಷ್ಟ ಗುರಿ ಹೊಂದಿದ ಸಾರ್ವಜನಿಕ ಜಾಗೃತಿ ಅಭಿಯಾನಗಳನ್ನು ನಡೆಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ಸೈಬರ್ ವಂಚನೆಯಲ್ಲಿ ಉದ್ಭವಿಸುತ್ತಿರುವ ಹೊಸ ವಿಧಾನಗಳನ್ನು ತ್ವರಿತವಾಗಿ ಗುರುತಿಸಿ, ಅವುಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಲು ಸಂಬಂಧಿತ ಸಿಬ್ಬಂದಿಗೆ ನಿಯಮಿತವಾಗಿ ಸಾಮರ್ಥ್ಯವೃದ್ಧಿಗೆ ಅವರು ಕರೆ ನೀಡಿದರು.
*****
(ಪ್ರಕಟಣೆ ಐ.ಡಿ.: 2303377)
ವಿಸಿಟರ್ ಕೌಂಟರ್ : 18