ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಸರ್ಕಾರದಿಂದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಇತರೆ ಹಿಂದುಳಿದ ವರ್ಗ (ಒಬಿಸಿ) ವಿದ್ಯಾರ್ಥಿಗಳಿಗೆ ನೇರ ಸವಲತ್ತು ವರ್ಗಾವಣೆಯ ಮೂಲಕ ವಿದ್ಯಾರ್ಥಿವೇತನ ವಿತರಣೆ ಬಲವರ್ಧನೆ


ಪೂರ್ವ ಗೋದಾವರಿ ಜಿಲ್ಲೆಯಲ್ಲಿ 2025–26ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಳಡಿಯಲ್ಲಿ ₹30.81 ಕೋಟಿ ಬಿಡುಗಡೆ

प्रविष्टि तिथि: 21 AUG 2026 5:38PM by PIB Bengaluru

ಸರ್ಕಾರವು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿ (ಎಸ್ ಸಿ) ಮತ್ತು ಇತರೆ ಹಿಂದುಳಿದ ವರ್ಗ (ಒಬಿಸಿ) ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲದ ಬಲವರ್ಧನೆ ಮುಂದುವರಿಸಿದೆ. ನೇರ ನಗದು ವರ್ಗಾವಣೆ (ಡಿಬಿಟಿ)ಯು ವಿದ್ಯಾರ್ಥಿವೇತನ ಧನಸಹಾಯವನ್ನು ಅರ್ಹ ಫಲಾನುಭವಿಗಳ ಆಧಾರ್-ಸಂಪರ್ಕಿತ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಮೂಲಕ ವಿತರಣಾ ಪ್ರಕ್ರಿಯೆಯನ್ನು ಸರಳ, ವೇಗ ಮತ್ತು ಹೆಚ್ಚು ಪಾರದರ್ಶಕವಾಗಿಸಿದೆ. 

ಪೂರ್ವ ಗೋದಾವರಿ ಜಿಲ್ಲೆಯಲ್ಲಿ 2025–26ರ ಅವಧಿಯಲ್ಲಿ, ಈ ವಿದ್ಯಾರ್ಥಿವೇತನ ಯೋಜನೆಗಳಡಿಯಲ್ಲಿ ಎಸ್‌ಸಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ₹30.81 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಎಸ್ ಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿ ₹20.80 ಕೋಟಿ ಹಾಗೂ ಎಸ್ ಸಿ ಮತ್ತು ಇತರರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ ₹2.38 ಕೋಟಿ ಸೇರಿವೆ. ಹೆಚ್ಚುವರಿಯಾಗಿ, ಒಬಿಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿ ₹6.83 ಕೋಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಡಿ ₹0.80 ಕೋಟಿ ಬಿಡುಗಡೆ ಮಾಡಲಾಗಿದೆ.

ಲಭ್ಯವಿರುವ 2025–26ರ ಫಲಾನುಭವಿಗಳ ದತ್ತಾಂಶದ ಪ್ರಕಾರ, 44,746 ವಿದ್ಯಾರ್ಥಿಗಳು ಎಸ್ ಸಿ ವರ್ಗದಡಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಧನಸಹಾಯವನ್ನು ಪಡೆದಿದ್ದು, ಎಸ್ ಸಿ ಮತ್ತು ಇತರ ವರ್ಗಗಳಡಿ 32,813 ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಮೆಟ್ರಿಕ್ ನಂತರದ ಮತ್ತು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಗಳಡಿಯಲ್ಲಿ ಕ್ರಮವಾಗಿ 13,658 ಮತ್ತು 1,997 ರಷ್ಟು  ಒಬಿಸಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿದ್ದಾರೆ.

ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ ನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿ ಸೌಲಭ್ಯ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಇತರರ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆ ಸೌಲಭ್ಯ ಪಡೆದವರ ಬಗ್ಗೆ ಕ್ಷೇತ್ರವಾರು ದತ್ತಾಂಶ ಲಭ್ಯವಿಲ್ಲ. ಹೀಗಾಗಿ, 44,746 ಮತ್ತು 32,813 ಎಂಬ ಅಂಕಿಅಂಶಗಳು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ - ರಾಷ್ಟ್ರೀಯ ಮಾಹಿತಿ ಕೇಂದ್ರವು ಒದಗಿಸಿರುವ ಪೂರ್ವ ಗೋದಾವರಿ, ಎಲೂರು ಮತ್ತು ಕಾಕಿನಾಡ ಜಿಲ್ಲೆಗಳ ಸಂಯೋಜಿತ ಅಂಕಿಅಂಶವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ವಹಿಸುವ ನಿರ್ದಿಷ್ಟಪಡಿಸಿದ ಆನ್‌ ಲೈನ್ ಪೋರ್ಟಲ್‌ ಮೂಲಕ ವಿದ್ಯಾರ್ಥಿವೇತನ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗುತ್ತದೆ.

ಕೇಂದ್ರದ ಪಾಲಿನ ಬಿಡುಗಡೆಯು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಪಾಲಿನ ವಿತರಣೆ ಮತ್ತು ಅಂತಿಮವಾಗಿ ಪರಿಶೀಲಿಸಲ್ಪಟ್ಟ ಫಲಾನುಭವಿ ದತ್ತಾಂಶವನ್ನು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ಗೆ ಸಲ್ಲಿಸುವುದರ ಮೇಲೆ ಅವಲಂಬಿತವಾಗಿದೆ. ಅನುಷ್ಠಾನ ಸಂಸ್ಥೆಗಳಾಗಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಅರ್ಜಿಗಳನ್ನು ಆಹ್ವಾನಿಸುವ, ಪ್ರಕ್ರಿಯೆಗೊಳಿಸುವ ಮತ್ತು ಪರಿಶೀಲಿಸುವ, ಸಂಬಂಧಿತ ದತ್ತಸಂಚಯಗಳನ್ನು ಸಂಯೋಜಿಸುವ ಮತ್ತು ಅನುಷ್ಠಾನದ ಇತರ ಅಂಶಗಳನ್ನು ನಿರ್ವಹಿಸುವ ವಿಧಾನಗಳನ್ನು ನಿರ್ಧರಿಸುತ್ತವೆ. ಡಿಬಿಟಿ ವ್ಯವಸ್ಥೆಯು ನಿಖರವಾಗಿ ಅರ್ಹರಿಗೆ ಸೌಲಭ್ಯ ದೊರೆಯುವುದನ್ನು ಬಲಪಡಿಸಿದೆ, ದಕ್ಷತೆಯನ್ನು ಸುಧಾರಿಸಿದೆ ಮತ್ತು ಹಣಕಾಸಿನ ನೆರವು ಅರ್ಹ ವಿದ್ಯಾರ್ಥಿಗಳನ್ನು ನೇರವಾಗಿ ತಲುಪುವುದನ್ನು ಖಚಿತಪಡಿಸಿದೆ.

ಅರ್ಜಿ ನವೀಕರಣ ಪ್ರಕ್ರಿಯೆಯಲ್ಲಿ ವಿಳಂಬ ಸೇರಿದಂತೆ ವಿದ್ಯಾರ್ಥಿವೇತನ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳ ಸಮಯೋಚಿತ ಪರಿಹಾರಕ್ಕೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಸಂಬಂಧಿತರೊಂದಿಗೆ ನಿಯಮಿತವಾಗಿ ವ್ಯವಹರಿಸಲಾಗುತ್ತದೆ. ರಾಷ್ಟ್ರ ಮಟ್ಟದ ಚಿಂತನ ಶಿಬಿರಗಳು, ಪ್ರಾದೇಶಿಕ ಸಭೆಗಳು ಹಾಗೂ ಅಧಿಕಾರಿಗಳು ಮತ್ತು ಸಂಬಂಧಿತರನ್ನು ಒಳಗೊಂಡ ರಾಷ್ಟ್ರೀಯ ಸಮ್ಮೇಳನಗಳ ಮೂಲಕವೂ ಯೋಜನೆಗಳ ಮೇಲೆ ನಿಗಾ ವಹಿಸಲಾಗುತ್ತದೆ.

 

*****


(रिलीज़ आईडी: 2302470) आगंतुक पटल : 16
इस विज्ञप्ति को इन भाषाओं में पढ़ें: English , Urdu , Marathi , हिन्दी