ಜಲ ಶಕ್ತಿ ಸಚಿವಾಲಯ
azadi ka amrit mahotsav

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ 11ನೇ ಜಿಲ್ಲಾಧಿಕಾರಿಗಳ 'ಪೇಯಜಲ್ ಸಂವಾದ' ಆಯೋಜನೆ


ಜಲಮೂಲದ ಸುಸ್ಥಿರತೆ, ಐಇಸಿ ಚಟುವಟಿಕೆಗಳ ಮೂಲಕ ನಡವಳಿಕೆ ಬದಲಾವಣೆ, ಕುಂದುಕೊರತೆ ನಿವಾರಣಾ ವ್ಯವಸ್ಥೆ ಮತ್ತು ವಿವಿಧ ಯೋಜನೆಗಳ ಸಮನ್ವಯ ಕುರಿತು ನಾಲ್ಕು ಜಿಲ್ಲೆಗಳಿಂದ ನವೀನ ಕ್ರಮಗಳ ಪ್ರಸ್ತುತಿ

प्रविष्टि तिथि: 11 AUG 2026 4:09PM by PIB Bengaluru

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಡಿಡಿಡಬ್ಲ್ಯೂಎಸ್), ಜಿಲ್ಲಾಧಿಕಾರಿಗಳ ʼಪೇಯಜಲ್ʼ ಸಂವಾದದ 11ನೇ ಆವೃತ್ತಿಯನ್ನು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯೋಜಿಸಿತ್ತು. ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು/ ಜಿಲ್ಲಾ ದಂಡಾಧಿಕಾರಿಗಳು / ಉಪ ವಿಭಾಗಾಧಿಕಾರಿಗಳನ್ನು ಒಟ್ಟುಗೂಡಿಸಿ ಜಲ ಜೀವನ್ ಮಿಷನ್ (ಜೆಜೆಎಂ) 2.0 ಅನುಷ್ಠಾನವನ್ನು ತ್ವರಿತಗೊಳಿಸುವ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆಯ ಕುರಿತು ಚರ್ಚಿಸಲಾಯಿತು.

ಈ ಸಂವಾದದ ಅಧ್ಯಕ್ಷತೆಯನ್ನು ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ ವಹಿಸಿದ್ದರು. ರಾಷ್ಟ್ರೀಯ ಜಲ ಜೀವನ್ ಮಿಷನ್‌ ನ (ಎನ್‌ ಜೆ ಜೆ ಎಂ) ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋಯನ್ ಹಾಗೂ ಎಸ್‌ ಡಬ್ಲ್ಯೂ ಎಸ್‌ ಎಂ ಮತ್ತು ಡಿಡಿಡಬ್ಲ್ಯೂಎಸ್‌ ನ ಹಿರಿಯ ಅಧಿಕಾರಿಗಳು ಈ ಸಂವಾದದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ, ಪ್ರಾಥಮಿಕ ಸಾಂಸ್ಥಿಕ ವ್ಯವಸ್ಥೆಯಾಗಿ ಡಿ ಡಬ್ಲ್ಯೂ ಎಸ್‌ ಎಂ ವಹಿಸುವ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ಹಾಗೂ ಜಿಲ್ಲೆಗಳು ನಿಯಮಿತವಾಗಿ ಮಾಸಿಕ ಸಭೆಗಳನ್ನು ನಡೆಸಲು ಮತ್ತು ಸಭೆಯ ನಡಾವಳಿಗಳನ್ನು ಜೆಜೆಎಂ ಐಎಂಐಎಸ್ ಪೋರ್ಟಲ್‌ ನಲ್ಲಿ ಅಪ್‌ಲೋಡ್ ಮಾಡಲು ಆಗ್ರಹಿಸಿದರು. ಜಲಮೂಲದ ಸುಸ್ಥಿರತೆಯನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲು 'ನಿರ್ಧಾರ ಬೆಂಬಲ ವ್ಯವಸ್ಥೆ'ಯನ್ನು (ಡಿ ಎಸ್‌ ಎಸ್) ಸದುಪಯೋಗಪಡಿಸಿಕೊಳ್ಳುವಂತೆ ಅವರು ಜಿಲ್ಲೆಗಳಿಗೆ ಕರೆ ನೀಡಿದರು. ಮಳೆಗಾಲದಲ್ಲಿ ಜಲ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ಮತ್ತು ದೀರ್ಘಕಾಲೀನ ಜಲ ಭದ್ರತೆಯನ್ನು ಉತ್ತೇಜಿಸಲು ಗ್ರಾಮ ಪಂಚಾಯಿತಿಗಳು, ವಿ ಡಬ್ಲ್ಯೂ ಎಸ್‌ ಸಿ ಗಳು, ಸ್ವಸಹಾಯ ಗುಂಪುಗಳು, ಶಾಲೆಗಳು, ಕಾಲೇಜುಗಳು ಮತ್ತು ಸಮುದಾಯ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಯ ಮೂಲಕ “ಕ್ಯಾಚ್ ದಿ ರೇನ್ - ಜಲ ಸಂಚಯ್ ಜನ ಭಾಗೀದಾರಿ” ಅಭಿಯಾನವನ್ನು ತೀವ್ರಗೊಳಿಸಲು ಜಿಲ್ಲೆಗಳಿಗೆ ಕರೆ ನೀಡಿದರು.

ನಿಗದಿತ ಕಾಮಗಾರಿ ಪ್ರಕ್ರಿಯೆ ಮತ್ತು ಕಡ್ಡಾಯ ಪರೀಕಾರ್ಥ ಚಾಲನೆಯ ನಂತರ ಪೂರ್ಣಗೊಂಡ ಯೋಜನೆಗಳನ್ನು ಗ್ರಾಮ ಪಂಚಾಯಿತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲು ಅನುಕೂಲವಾಗುವಂತೆ 'ಜಲ ಅರ್ಪಣ್' ಸಮಾರಂಭಗಳನ್ನು ತ್ವರಿತಗೊಳಿಸುವಂತೆ ಅವರು ಜಿಲ್ಲೆಗಳನ್ನು ಒತ್ತಾಯಿಸಿದರು. ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಹಳ್ಳಿಗಳು ಮತ್ತು 1 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು 'ಹರ್ ಘರ್ ಜಲ್' ಪ್ರಮಾಣೀಕರಣವನ್ನು ಸಾಧಿಸಿದ್ದು, ಅದನ್ನು ಈಗ ಗ್ರಾಮೀಣ ಕುಡಿಯುವ ನೀರು ಸರಬರಾಜು ವ್ಯವಸ್ಥೆಗಳ ಸುಸ್ಥಿರ ಸಮುದಾಯ ನೇತೃತ್ವದ ನಿರ್ವಹಣೆಯಾಗಿ ಪರಿವರ್ತಿಸಬೇಕು ಎಂದು ಅವರು ಹೇಳಿದರು. ಮೂಲ ಸುಸ್ಥಿರತೆ ಮತ್ತು ಬೂದುಬಣ್ಣದ ನೀರು ನಿರ್ವಹಣೆಗಾಗಿ ವಿಬಿ-ಜಿ ರಾಮ್‌ ಜಿ ಯಂತಹ ಕಾರ್ಯಕ್ರಮಗಳೊಂದಿಗೆ ಸಂಯೋಜನೆ ಸಾಧಿಸುವುದು, ನೀರು ಮತ್ತು ನೈರ್ಮಲ್ಯಕ್ಕಾಗಿ 16ನೇ ಹಣಕಾಸು ಆಯೋಗದ ಅನುದಾನದ ಪರಿಣಾಮಕಾರಿ ಬಳಕೆ ಮತ್ತು ಗ್ರಾಮೀಣ ನೀರು ಸರಬರಾಜು ಮೂಲಸೌಕರ್ಯಗಳ ಕಾರ್ಯನಿರ್ವಹಣೆ ಮತ್ತು ನಿರ್ವಹಣೆಗೆ ಬೆಂಬಲ ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಳಕೆದಾರರ ಶುಲ್ಕ ಸಂಗ್ರಹಣೆಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.

ನೀರಿನ ಗುಣಮಟ್ಟ ಪರಿಶೀಲನೆ, ಸಮುದಾಯದ ಭಾಗವಹಿಸುವಿಕೆ ಮತ್ತು ನೀರಿನ ಮೂಲದ ಸುಸ್ಥಿರತೆಯನ್ನು ಬಲಪಡಿಸಲು ಮಹಿಳಾ ನೇತೃತ್ವದ ಗ್ರಾಮ ಮಟ್ಟದ ಬೆಂಬಲ ಗುಂಪುಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ “ಸುಜಲಂ ಶಕ್ತಿ” ಅನುಷ್ಠಾನದ ಮಾರ್ಗಸೂಚಿಯ ಕುರಿತು ಡಿಡಿಡಬ್ಲ್ಯೂಎಸ್ ವಿವರವಾದ ಪ್ರಸ್ತುತಿಯನ್ನು ನೀಡಿತು.

ಜೆಜೆಎಂ 2.0 ಅಡಿಯಲ್ಲಿ ಅನುಷ್ಠಾನವನ್ನು ಬಲಪಡಿಸುವಲ್ಲಿ ಇತರ ಜಿಲ್ಲೆಗಳಿಗೆ ಪರಸ್ಪರ ಕಲಿಕೆ ಮತ್ತು ಬೆಂಬಲವನ್ನು ನೀಡಲು, ಆಯ್ಕೆಯಾದ ನಾಲ್ಕು ಜಿಲ್ಲೆಗಳಾದ ಉತ್ತರ ಕನ್ನಡ (ಕರ್ನಾಟಕ), ಖೋವಾಯಿ (ತ್ರಿಪುರ), ದಿದ್ವಾನಾ ಕುಚಾಮನ್ (ರಾಜಸ್ಥಾನ) ಮತ್ತು ಚತ್ರಾ (ಜಾರ್ಖಂಡ್) ಜಿಲ್ಲೆಗಳ ಪ್ರಗತಿ ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಆಯಾ ಜಿಲ್ಲಾಧಿಕಾರಿಗಳು/ಜಿಲ್ಲಾ ದಂಡಾಧಿಕಾರಿಗಳು ಪ್ರಸ್ತುತಪಡಿಸಿದರು.

ಸಂಬಂಧಿತ ಜಿಲ್ಲಾಧಿಕಾರಿಗಳು / ಜಿಲ್ಲಾ ದಂಡಾಧಿಕಾರಿಗಳು / ಉಪ ವಿಭಾಗಾಧಿಕಾರಿಗಳು ನೀಡಿದ ಪ್ರಸ್ತುತಿಗಳ ಮೂಲಕ ನಾಲ್ಕು ಜಿಲ್ಲೆಗಳು ಹಂಚಿಕೊಂಡ ನವೀನ ಅತ್ಯುತ್ತಮ ಅಭ್ಯಾಸಗಳು:

ಉತ್ತರ ಕನ್ನಡ, ಕರ್ನಾಟಕ – ಜಿಲ್ಲಾಧಿಕಾರಿ ಶ್ರೀಮತಿ ಕೆ. ಲಕ್ಷ್ಮಿ ಪ್ರಿಯಾ ಮತ್ತು ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಶ್ ಸಸಿ ಅವರು, ಕರಾವಳಿ, ಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳನ್ನು ಒಳಗೊಂಡ ಭೌಗೋಳಿಕವಾಗಿ ಸವಾಲಿನ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಸೇವೆ ತಲುಪಿಸುವ ಬಗೆಗಿನ ತಮ್ಮ ಜಿಲ್ಲೆಯ ಸಮಗ್ರ ವಿಧಾನವನ್ನು ಪ್ರಸ್ತುತಪಡಿಸಿದರು. ಕೆರೆಗಳು, ತೆರೆದ ಬಾವಿಗಳು ಮತ್ತು ಕೊಳವೆಬಾವಿಗಳ ನಕ್ಷೆ ತಯಾರಿಸುವುದು ಹಾಗೂ ಭೌಗೋಳಿಕ ದತ್ತಾಂಶ, ಅಂತರ್ಜಲ ಮೌಲ್ಯಮಾಪನ ಮತ್ತು ಸ್ಥಳೀಯ ಸಂಪನ್ಮೂಲಗಳ ನಕ್ಷೆ ತಯಾರಿಕೆಯನ್ನು ಬಳಸಿಕೊಂಡು ಗ್ರಾಮ ಪಂಚಾಯಿತಿಗಳಲ್ಲಿ ಜಲಮೂಲಗಳ ಸುಸ್ಥಿರತೆಯ ಯೋಜನೆಗಳನ್ನು ಸಿದ್ಧಪಡಿಸುವ ಮೂಲಕ ಕೈಗೊಂಡಿರುವ ವ್ಯಾಪಕ ಜಲಮೂಲ ಸುಸ್ಥಿರತಾ ಕ್ರಮಗಳನ್ನು ಜಿಲ್ಲೆ ವಿವರಿಸಿತು. ಮುಂದಿನ ಐದು ವರ್ಷಗಳಲ್ಲಿ ವಿಬಿ-ಜಿ ರಾಮ್‌ ಜಿಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ದೀರ್ಘಾವಧಿಯ ಜಲ ಭದ್ರತಾ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬಹು-ಗ್ರಾಮ ನೀರು ಪೂರೈಕೆ ಯೋಜನೆಗಳಿಗೆ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅನುಮತಿಗಳನ್ನು ಪಡೆಯಲು ಅರಣ್ಯ ಇಲಾಖೆಯೊಂದಿಗೆ ನಿಯಮಿತವಾಗಿ ಸಮನ್ವಯ ಸಾಧಿಸಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಾಮರ್ಥ್ಯ ವೃದ್ಧಿ, ನಿಯಮಿತ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಗಳು, ಎಂಜಿನಿಯರ್‌ ಗಳು ಮತ್ತು ಪಂಚಾಯಿತಿ ಸಿಬ್ಬಂದಿಯಿಂದ ಜಂಟಿ ಪರಿಶೀಲನೆಗಳು ಸ್ಥಳೀಯ ಆಡಳಿತ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಿವೆ. ನೀರು ಪೂರೈಕೆ ಯೋಜನೆಗಳು, ನಿರ್ಮಿಸಲಾದ ಮೂಲಸೌಕರ್ಯ ಮತ್ತು ಸೇವೆ ಒದಗಿಸುವಿಕೆಯ ಸ್ಥಿತಿಗೆ ಸಂಬಂಧಿಸಿದ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಗ್ರಾಮಸಭೆಗಳು ಮತ್ತು ಭಾಗವಹಿಸುವಿಕೆಯ ಆಧಾರಿತ ಯೋಜನಾ ಪ್ರಕ್ರಿಯೆಗಳ ಮೂಲಕ ಸಮುದಾಯಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗುತ್ತಿದೆ.

ಖೋವಾಯಿ, ತ್ರಿಪುರಾ - ಜಿಲ್ಲಾ ದಂಡಾಧಿಕಾರಿ ಮತ್ತು ಜಿಲ್ಲಾಧಿಕಾರಿ ಶ್ರೀ ರಜತ್ ಪಂತ್ ಅವರು, ನಿಯಮಿತ ಡಿಡಬ್ಲ್ಯೂಎಸ್‌ಎಂ ಮತ್ತು ದಿಶಾ ಸಭೆಗಳು, ಜಿಯೋ-ಟ್ಯಾಗ್ ಮಾಡಲಾದ ಮೇಲ್ವಿಚಾರಣೆ, ತೃತೀಯ ಪಕ್ಷದ ಗುಣಮಟ್ಟ ಪರಿಶೀಲನೆ ಮತ್ತು ‘ಜಲ ಅರ್ಪಣ್’ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಯೋಜನೆಗಳನ್ನು ವ್ಯವಸ್ಥಿತವಾಗಿ ಹಸ್ತಾಂತರಿಸುವುದರ ಮೂಲಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಪೂರೈಕೆ ಸೇವೆ ಒದಗಿಸಲು ಜಿಲ್ಲೆಯು ಅನುಸರಿಸುತ್ತಿರುವ ಸಮಗ್ರ ವಿಧಾನವನ್ನು ಪ್ರಸ್ತುತಪಡಿಸಿದರು. ದೂರದ ಬುಡಕಟ್ಟು ವಸತಿಗಳಿಗೆ ಕುಡಿಯುವ ನೀರು ಪೂರೈಕೆಗಾಗಿ 15ನೇ ಹಣಕಾಸು ಆಯೋಗದ ಅನುದಾನ ಮತ್ತು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿಯೊಂದಿಗೆ ಸಮನ್ವಯ ಸಾಧಿಸಿರುವುದನ್ನು ಅವರು ವಿವರಿಸಿದರು. ಶಾಲೆಗಳು, ಸ್ವಸಹಾಯ ಗುಂಪುಗಳು ಮತ್ತು ವಿವಿಧ ಇಲಾಖೆಗಳ ಸಹಭಾಗಿತ್ವದೊಂದಿಗೆ ವ್ಯಾಪಕ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸ್ವಸಹಾಯ ಗುಂಪುಗಳ ಮಹಿಳೆಯರು ವಿದ್ಯಾರ್ಥಿಗಳಿಗೆ ವೇಗದ ಪರೀಕ್ಷಾ ಕಿಟ್‌ ಗಳ ಮೂಲಕ ನೀರಿನ ಗುಣಮಟ್ಟ ಪರೀಕ್ಷೆ ಕುರಿತು ತರಬೇತಿ ನೀಡುವ ‘ಶಾಲಾ ನೀರು ಕ್ಲಬ್‌’ಗಳನ್ನು ರಚಿಸಲಾಗಿದೆ. ಜಿಲ್ಲೆಯ ‘ನಿರ್ಮಲ್ ಮೋದಿ’ ಎಂಬ ಮ್ಯಾಸ್ಕಾಟ್ ಮೂಲಕ ಜಾಗೃತಿ ಅಭಿಯಾನಗಳನ್ನು ಉತ್ತೇಜಿಸಲಾಗುತ್ತಿದೆ. 6,000ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ ಮಹಿಳೆಯರನ್ನು ಸಮುದಾಯ ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಜಲಮೂಲಗಳ ಸುಸ್ಥಿರತೆಯ ಕ್ರಮಗಳ ಭಾಗವಾಗಿ ಜಲಾನಯನ ಪ್ರದೇಶಗಳ ಸಂರಕ್ಷಣೆ, ಅರಣ್ಯೀಕರಣ, ಅಂತರ್ಜಲ ಮರುಪೂರಣ ರಚನೆಗಳು ಮತ್ತು ಬೂದು ನೀರಿನ ನಿರ್ವಹಣೆಗೆ ಒತ್ತು ನೀಡಲಾಗಿದೆ. ಎಸ್‌ ಬಿ ಎಂ – ಜಿ, 15ನೇ ಹಣಕಾಸು ಆಯೋಗ ಮತ್ತು ವಿಬಿ-ಜಿ ರಾಮ್‌ ಜಿ ಗಳೊಂದಿಗೆ ಸಮನ್ವಯ ಸಾಧಿಸಿ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ. ದೀರ್ಘಾವಧಿಯ ಜಲ ಭದ್ರತೆಯನ್ನು ಬಲಪಡಿಸಲು ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತರನ್ನು ತಲುಪುವ ಕಾರ್ಯಕ್ರಮಗಳನ್ನೂ ಕೈಗೊಳ್ಳಲಾಗಿದೆ. ಎಲ್ಲಾ 860 ಅಂಗನವಾಡಿ ಕೇಂದ್ರಗಳಲ್ಲೂ  ವಿವಿಧ ಯೋಜನೆಗಳ ಸಮನ್ವಯದ ಮೂಲಕ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ

ದಿದ್ವಾನಾ ಕುಚಾಮನ್, ರಾಜಸ್ಥಾನ - ಜಿಲ್ಲಾಧಿಕಾರಿ ಶ್ರೀ ಅವಧೇಶ್ ಮೀನಾ ಅವರು, ದೀರ್ಘಕಾಲದಿಂದಲೂ ಫ್ಲೋರೈಡ್ ಮತ್ತು ಲವಣಾಂಶದಿಂದ ಬಾಧಿತವಾಗಿದ್ದ ಅಂತರ್ಜಲದ ಸಮಸ್ಯೆಯನ್ನು ಪರಿಹರಿಸಲು ಜಿಲ್ಲೆಯು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಈ ಸಮಸ್ಯೆಯಿಂದ ಈ ಹಿಂದೆ ಹಲ್ಲು ಮತ್ತು ಮೂಳೆಗಳ ಫ್ಲೋರೋಸಿಸ್ ಪ್ರಕರಣಗಳು ವರದಿಯಾಗುತ್ತಿದ್ದವು. ಸುರಕ್ಷಿತ ಕುಡಿಯುವ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಯಲ್ಲಿ ಮೇಲ್ಮೈ ಜಲ ಆಧಾರಿತ ಪ್ರಾದೇಶಿಕ ನೀರು ಪೂರೈಕೆ ವ್ಯವಸ್ಥೆಗಳನ್ನು ಬಲಪಡಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕೊಳವೆ ಮೂಲಕ ನೀರು ಪೂರೈಕೆಯ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲಾಗಿದೆ. ಮನರೇಗಾ ಮತ್ತು ಇತರ ಕಾರ್ಯಕ್ರಮಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಜಲಮೂಲಗಳ ಸುಸ್ಥಿರತೆಗೆ ಒತ್ತು ನೀಡಲಾಗಿದೆ. ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣಕ್ಕಾಗಿ ಸಾಂಪ್ರದಾಯಿಕ ಜಲ ಸಂರಕ್ಷಣಾ ಕ್ರಮಗಳನ್ನು ಉತ್ತೇಜಿಸಲಾಗುತ್ತಿದೆ. ಇದರಲ್ಲಿ ‘ಟಾಂಕಾ’ಗಳ ನಿರ್ಮಾಣ ಮತ್ತು ಪುನರುಜ್ಜೀವನ, ಜಲಮೂಲಗಳ ಪುನಃಸ್ಥಾಪನೆ ಹಾಗೂ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಮಳೆನೀರು ಕೊಯ್ಲು ಕ್ರಮಗಳು ಸೇರಿವೆ. ಜಲಾಶಯಗಳು, ನೀರು ಸಂಸ್ಕರಣಾ ಘಟಕಗಳು, ಪಂಪ್ ಹೌಸ್‌ ಗಳು ಮತ್ತು ಗ್ರಾಮ ಮಟ್ಟದ ನೀರು ವಿತರಣಾ ಜಾಲಗಳ ನೈಜ-ಸಮಯದ ಮೇಲ್ವಿಚಾರಣೆಗಾಗಿ ಎಸ್‌ ಸಿ ಎ ಡಿ ಎ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯನ್ನೂ ಜಿಲ್ಲೆ ಪ್ರಸ್ತುತಪಡಿಸಿತು. ಇದರಿಂದ ನೀರಿನ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಮತ್ತು ಸೇವೆ ಒದಗಿಸುವಿಕೆಯನ್ನು ಸುಧಾರಿಸಲು ಸಾಧ್ಯವಾಗಿದೆ.

 ಚತ್ರಾ, ಜಾರ್ಖಂಡ್ - ಉಪ ಆಯುಕ್ತರಾದ ಶ್ರೀ ರವಿ ಆನಂದ್ ಅವರು ಗ್ರಾಮೀಣ ಕುಡಿಯುವ ನೀರು ಪೂರೈಕೆ ಸೇವೆಯನ್ನು ಬಲಪಡಿಸಲು ಸಮನ್ವಯ ಆಧಾರಿತ ಮಾದರಿಯನ್ನು ಪ್ರಸ್ತುತಪಡಿಸಿದರು. ಜಿಲ್ಲೆಯ ಪ್ರಸ್ತುತಿಯ ಪ್ರಮುಖ ಅಂಶವೆಂದರೆ, ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕ್ಷೇತ್ರಮಟ್ಟದಲ್ಲಿ ಕಾರ್ಯಾಚರಣೆ ನಡೆಸಿ ಕುಡಿಯುವ ನೀರಿನ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಕೈಗೊಂಡ ವಿಶೇಷ ಅಭಿಯಾನ “ಪೇಜಲ್ ಸಮಸ್ಯಾ ನಿವಾರಣ್ ಪಖ್ವಾಡಾ”. ಜಿಲ್ಲಾ ಆಡಳಿತ, ತಾಂತ್ರಿಕ ಇಲಾಖೆಗಳು, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ. ಕೈಪಂಪ್‌ ಗಳು, ಗ್ರಾಮೀಣ ನೀರು ಪೂರೈಕೆ ಯೋಜನೆಗಳು, ನೀರಿನ ಕೊರತೆ ಮತ್ತು ಜಲಮೂಲಗಳ ಸುಸ್ಥಿರತೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಈ ಉಪಕ್ರಮ ನೆರವಾಗಿದೆ. ಇದರ ಜೊತೆಗೆ ಸಮುದಾಯದ ಮಾಲೀಕತ್ವದ ಭಾವನೆಯನ್ನು ಬಲಪಡಿಸಿ, ಕುಡಿಯುವ ನೀರಿನ ಸೇವೆಗಳ ಪುನಃಸ್ಥಾಪನೆಯನ್ನು ವೇಗಗೊಳಿಸಲಾಗಿದೆ. ಮನರೇಗಾ ಮತ್ತು ಇತರ ಹಣಕಾಸು ಮೂಲಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ 5,300ಕ್ಕೂ ಹೆಚ್ಚು ಇಂಗು ಗುಂಡಿಗಳು, ಮಳೆನೀರು ಕೊಯ್ಲು ರಚನೆಗಳನ್ನು ನಿರ್ಮಿಸಲಾಗಿದೆ. ಅಂತರ್ಜಲ ಮರುಪೂರಣ ಮತ್ತು ದೀರ್ಘಾವಧಿಯ ಜಲ ಭದ್ರತೆಯನ್ನು ಬಲಪಡಿಸಲು ಕೆರೆಗಳು ಮತ್ತು ಜಲಾಶಯಗಳ ಪುನರುಜ್ಜೀವನವನ್ನೂ ಕೈಗೊಳ್ಳಲಾಗಿದೆ. ವ್ಯಾಪಕ ಐಇಸಿ ಚಟುವಟಿಕೆಗಳು, ಜಲಶಕ್ತಿ ಸಂವಾದಗಳು, ಜಲ ಯಾತ್ರೆಗಳು ಮತ್ತು ಸಮುದಾಯದ ಭಾಗವಹಿಸುವಿಕೆಯ ವಿವಿಧ ಕಾರ್ಯಕ್ರಮಗಳ ಮೂಲಕ ‘ಜನ ಭಾಗೀದಾರಿ’ ಹಾಗೂ ಗ್ರಾಮೀಣ ನೀರು ಪೂರೈಕೆ ವ್ಯವಸ್ಥೆಗಳ ಸುಸ್ಥಿರತೆಯನ್ನು ಮತ್ತಷ್ಟು ಉತ್ತೇಜಿಸಲಾಗುತ್ತಿದೆ.

ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್ ಅವರು ಸಮಾರೋಪದ ಮಾತುಗಳಲ್ಲಿ, ನಿಯಮಿತ ಡಿ ಡಬ್ಲ್ಯೂ ಎಸ್‌ ಎಂ ಸಭೆಗಳು, ಜಿಲ್ಲಾ ಡ್ಯಾಶ್‌ಬೋರ್ಡ್‌ ಗಳು ಮತ್ತು ಜಿಲ್ಲಾ ತಾಂತ್ರಿಕ ಘಟಕಗಳು (ಡಿಟಿಯು) ಯೋಜನೆ ರೂಪಿಸುವಿಕೆ, ಮೇಲ್ವಿಚಾರಣೆ ಮತ್ತು ಸೇವೆ ಒದಗಿಸುವಿಕೆಯನ್ನು ಬಲಪಡಿಸುವಲ್ಲಿ ವಹಿಸುವ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದರು. ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆಗೆ ಜಿಲ್ಲಾಧಿಕಾರಿಗಳು ಒತ್ತು ನೀಡಬೇಕು, ಡಿಟಿಯುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಆರ್‌ ಎಸ್‌ ಇ ಟಿ ಐ, ಎಸ್‌ ಆರ್‌ ಎಲ್‌ ಎಂಗಳು ಹಾಗೂ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಾಮರ್ಥ್ಯ ವೃದ್ಧಿಯನ್ನು ಉತ್ತೇಜಿಸಬೇಕು ಎಂದು ಅವರು ಕರೆ ನೀಡಿದರು. ಸುಜಲಂ ಶಕ್ತಿ ಅಡಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡುವುದು ಮತ್ತು ಗ್ರಾಮೀಣ ನೀರು ಪೂರೈಕೆ ಸೇವೆಗಳ ದೀರ್ಘಾವಧಿಯ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ಮಹತ್ವವನ್ನೂ ಅವರು ಒತ್ತಿಹೇಳಿದರು.

ಈ ಪ್ರಸ್ತುತಿಗಳು ಜಲ ಜೀವನ್ ಮಿಷನ್ ಅಡಿಯಲ್ಲಿ ವಿವಿಧ ಜಿಲ್ಲೆಗಳು ಸಾಧಿಸಿರುವ ಪ್ರಗತಿ, ಸವಾಲುಗಳನ್ನು ಎದುರಿಸಲು ಕೈಗೊಂಡಿರುವ ಕ್ರಮಗಳು ಮತ್ತು ಅನುಸರಿಸಿರುವ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸಿದವು. ‘ಹರ್ ಘರ್ ಜಲ್’ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಗತಿಯನ್ನು ವೇಗಗೊಳಿಸಲು ವಿವಿಧ ಜಿಲ್ಲೆಗಳು ಅಳವಡಿಸಿಕೊಂಡಿರುವ ವಿಧಾನಗಳಲ್ಲಿನ ವೈವಿಧ್ಯತೆಯನ್ನು ಈ ಪ್ರಸ್ತುತಿಗಳು ಉಲ್ಲೇಖಿಸಿದವು.

 

*****

 


(रिलीज़ आईडी: 2297987) आगंतुक पटल : 21
इस विज्ञप्ति को इन भाषाओं में पढ़ें: English , Urdu , हिन्दी