ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಲು ಐಡಿಯಾಸ್, ಐಎಸ್‌ಐ ಕೋಲ್ಕತ್ತಾ ಜೊತೆ ಎರಡು ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI)
ಪ್ರಕಟಣಾ ದಿನಾಂಕ:
10 AUG 2026 7:03PM by PIB Bengaluru

ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಲು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) 'ಇನ್‌ಸ್ಟಿಟ್ಯೂಟ್ ಆಫ್ ಡೇಟಾ ಎಂಜಿನಿಯರಿಂಗ್, ಅನಾಲಿಟಿಕ್ಸ್ ಅಂಡ್ ಸೈನ್ಸ್ ಫೌಂಡೇಶನ್' (IDEAS), ಇಂಡಿಯನ್ ಸ್ಟಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್ (ISI) ಕೋಲ್ಕತ್ತಾ ಜೊತೆ ಎರಡು ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದೆ.
ಐಡಿಯಾಸ್‌ನ (IDEAS) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಅಗ್ನಿಮಿತ್ರ ಬಿಸ್ವಾಸ್ ಮತ್ತು ಮೊಸ್ಪಿ (MoSPI) ಯ ಸಾಮರ್ಥ್ಯ ಅಭಿವೃದ್ಧಿ ವಿಭಾಗದ ತರಬೇತಿ ಘಟಕದ ನಿರ್ದೇಶಕರಾದ ಶ್ರೀ ಪ್ರಸೂನ್ ವರ್ಮಾ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಿದರು. ಸಹಿ ಹಾಕುವ ಸಮಾರಂಭದಲ್ಲಿ ಮೊಸ್ಪಿಯ ಮಹಾನಿರ್ದೇಶಕರು (ಡೇಟಾ ಗವರ್ನೆನ್ಸ್) ಶ್ರೀ ಪಿ. ಆರ್. ಮೇಷ್ರಾಂ ಮತ್ತು ಮೊಸ್ಪಿಯ ಸಾಮರ್ಥ್ಯ ಅಭಿವೃದ್ಧಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರು ಶ್ರೀ ಆರ್. ರಾಜೇಶ್ ಉಪಸ್ಥಿತರಿದ್ದರು.
ಈ ಸಹಯೋಗದ ಉಪಕ್ರಮವು ಮೊಸ್ಪಿ (MoSPI) ಮತ್ತು ಐಡಿಯಾಸ್ (IDEAS) ನಡುವಿನ ಹೊಸತನದಿಂದ ಕೂಡಿದ, ಜ್ಞಾನ ವಿನಿಮಯದ ವೇದಿಕೆಯಾಗಿದೆ. ಇದರಲ್ಲಿ ಮೊಸ್ಪಿ ಆರ್ಥಿಕ ನೆರವು ಮತ್ತು ದತ್ತಾಂಶ ಬೆಂಬಲವನ್ನು ಒದಗಿಸುತ್ತದೆ ಹಾಗೂ ಐಡಿಯಾಸ್ ಜಿಡಿಪಿ ನೌಕಾಸ್ಟಿಂಗ್ (GDP Nowcasting) ಮಾಡಲು ಡೆಸ್ಕ್‌ಟಾಪ್ ಆಧಾರಿತ ತಂತ್ರಾಂಶ ಉಪಕರಣವನ್ನು ಮತ್ತು ಸರ್ಕಾರದ ಆರೋಗ್ಯ, ಪೋಷಣೆ ಹಾಗೂ ಕಲ್ಯಾಣ ಯೋಜನೆಗಳ ಆಡಳಿತಾತ್ಮಕ ದತ್ತಾಂಶವನ್ನು ಗೃಹ ಮಟ್ಟದ ಎನ್‌ಎಸ್‌ಎಸ್ (NSS) ದತ್ತಾಂಶದೊಂದಿಗೆ ಸಂಯೋಜಿಸುವ ಸುಸಂಘಟಿತ ಸೂಚಿ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತದೆ.
ಈ ಸಹಯೋಗವು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡುವ ವಿವಿಧ ಅಂಕಿಅಂಶಗಳ ಆಳವಾದ ಅಧ್ಯಯನ ನಡೆಸುವ ಮತ್ತು ಇತರ ದತ್ತಾಂಶ ಮೂಲಗಳೊಂದಿಗೆ ಸುಸಂಘಟನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ, ಇದು 'ವಿಕಸಿತ ಭಾರತ @ 2047' ಗಾಗಿ ಭಾರತ ಸರ್ಕಾರದ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವ ಉಪಕ್ರಮಕ್ಕೆ ಒತ್ತು ನೀಡುತ್ತದೆ.
*****
(ಪ್ರಕಟಣೆ ಐ.ಡಿ.: 2297408)
ವಿಸಿಟರ್ ಕೌಂಟರ್ : 73