ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ದೇಶಾದ್ಯಂತ 89,900 ಕ್ಕೂ ಹೆಚ್ಚು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ ಪರಿಶೀಲನೆ ಹಾಗೂ 87,000 ಕ್ಕೂ ಹೆಚ್ಚು ಪಿಪಿಇ ಕಿಟ್ ಗಳ ವಿತರಣೆ
प्रविष्टि तिथि:
27 JUL 2026 6:20PM by PIB Bengaluru
ಅಪಾಯಕಾರಿ ನೈರ್ಮಲ್ಯ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಮತ್ತು 'ನಮಸ್ತೆ' (ನ್ಯಾಷನಲ್ ಆಕ್ಷನ್ ಫಾರ್ ಮೆಕನೈಸ್ಡ್ ಸ್ಯಾನಿಟೇಷನ್ ಇಕೋಸಿಸ್ಟಮ್) ಯೋಜನೆಯ ಮೂಲಕ ನೈರ್ಮಲ್ಯ ಕಾರ್ಮಿಕರ ಘನತೆ, ಸುರಕ್ಷತೆ ಹಾಗೂ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ತನ್ನ ಪ್ರಯತ್ನಗಳನ್ನು ಬಲಪಡಿಸುವುದನ್ನು ಮುಂದುವರಿಸಿದೆ. ಈ ಉಪಕ್ರಮವು ನೈರ್ಮಲ್ಯ ಕಾರ್ಮಿಕರಿಗೆ ವೃತ್ತಿಪರ ಸುರಕ್ಷತೆ, ಸಾಮಾಜಿಕ ಭದ್ರತೆ ಮತ್ತು ಜೀವನೋಪಾಯದ ಬೆಂಬಲವನ್ನು ಹೆಚ್ಚಿಸುವುದರ ಜೊತೆಗೆ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವಿಕೆಯನ್ನು ಸಂಪೂರ್ಣವಾಗಿ ಯಾಂತ್ರೀಕರಣಗೊಳಿಸುವುದನ್ನು ಉತ್ತೇಜಿಸುತ್ತದೆ.
ಈ ಮಾಹಿತಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಅಠಾವಳೆ ಅವರು ಲೋಕಸಭೆಯಲ್ಲಿ ಶ್ರೀ ಅಪ್ಪಲನಾಯ್ಡು ಕಲಿಶೆಟ್ಟಿ ಮತ್ತು ಡಾ. ಬೈರೆಡ್ಡಿ ಶಬರಿ ಅವರ ಲಿಖಿತ ಪ್ರಶ್ನೆಗೆ ಉತ್ತರವಾಗಿ ನೀಡಿದ್ದಾರೆ.

ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳನ್ನು ಗುರುತಿಸುವ ಸಮೀಕ್ಷೆಗಳನ್ನು 2013 ಮತ್ತು 2018 ರಲ್ಲಿ ನಡೆಸಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ. 2018 ರ ಸಮೀಕ್ಷೆಯ ಸಮಯದಲ್ಲಿ, ಹದಿನಾಲ್ಕು ರಾಜ್ಯಗಳಲ್ಲಿ 44,217 ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳನ್ನು ಗುರುತಿಸಲಾಗಿತ್ತು. ತದನಂತರ, ' ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳ ಉದ್ಯೋಗ ನಿಷೇಧ ಮತ್ತು ಪುನರ್ವಸತಿ ಕಾಯ್ದೆ, 2013' ರ ನಿಬಂಧನೆಗಳ ಅಡಿಯಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಹೊಸದಾಗಿ ದೇಶವ್ಯಾಪಿ ಸಮೀಕ್ಷೆಯನ್ನು ನಡೆಸಲಾಯಿತು. ಅದರಲ್ಲಿ ಯಾವುದೇ ಮ್ಯಾನ್ಯುವಲ್ ಸ್ಕ್ಯಾವೆಂಜರ್ ಗಳು ಕಂಡುಬಂದಿಲ್ಲ, ಇದು ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಸರ್ಕಾರದ ಸುಸ್ಥಿರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ.
2023 ರಲ್ಲಿ ಪ್ರಾರಂಭಿಸಲಾದ ನಮಸ್ತೆ ಯೋಜನೆಯು ಯಾಂತ್ರೀಕರಣ ಮತ್ತು ಸುಧಾರಿತ ಔದ್ಯೋಗಿಕ ಸುರಕ್ಷತೆಯ ಮೂಲಕ ಸುರಕ್ಷಿತ ಮತ್ತು ಗೌರವಾನ್ವಿತ ನೈರ್ಮಲ್ಯ ಕೆಲಸವನ್ನು ಖಾತ್ರಿಪಡಿಸುವುದರ ಮೇಲೆ ಗಮನ ಹರಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಈ ಯೋಜನೆಯಡಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 89,915 ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರನ್ನು (ಎಸ್ ಎಸ್ ಡಬ್ಲ್ಯೂ) ಪರಿಶೀಲಿಸಲಾಗಿದೆ, ಹಾಗೆಯೇ ಕೆಲಸದ ಸ್ಥಳದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ನೈರ್ಮಲ್ಯ ಕಾರ್ಮಿಕರಿಗೆ 87,037 ವೈಯಕ್ತಿಕ ರಕ್ಷಣಾ ಉಪಕರಣಗಳ (ಪಿಪಿಇ) ಕಿಟ್ ಗಳನ್ನು ಒದಗಿಸಲಾಗಿದೆ.
ನಮಸ್ತೆ ಯೋಜನೆಯಡಿ ಸ್ಥಾಪಿಸಲಾದ ತುರ್ತು ಸ್ಪಂದನಾ ನೈರ್ಮಲ್ಯ ಘಟಕಗಳು (ಇ ಆರ್ ಎಸ್ ಯು) ಟಾರ್ಚ್ ಹೊಂದಿರುವ ಸುರಕ್ಷತಾ ಹೆಲ್ಮೆಟ್ ಗಳು, ಸುರಕ್ಷತಾ ಟ್ರೈಪಾಡ್ ಗಳು, ಆಕ್ಸಿಯಲ್ ಫ್ಯಾನ್ ಬ್ಲೋವರ್ ಗಳು, ಆಂಟಿ-ಸ್ಟ್ಯಾಟಿಕ್ ಕಾಂಡ್ಯೂಟ್ ಗಳು, ಫುಲ್ ಬಾಡಿ ವೇಡರ್ ಸೂಟ್ ಗಳು ಮತ್ತು ಮಲ್ಟಿ ಗ್ಯಾಸ್ ಡಿಟೆಕ್ಟರ್ ಗಳು ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಹೊಂದಿದ್ದು, ನೈರ್ಮಲ್ಯ ಕಾರ್ಮಿಕರಿಗೆ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ಸುರಕ್ಷಿತ ರೀತಿಯಲ್ಲಿ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ದೇಶಾದ್ಯಂತ, ಇ ಆರ್ ಎಸ್ ಯು ಗಳಿಗೆ 753 ಸುರಕ್ಷತಾ ಸಾಧನಗಳ ಸೆಟ್ ಗಳನ್ನು ಒದಗಿಸಲಾಗಿದೆ.
ಯೋಜನೆಯಡಿಯಲ್ಲಿನ ಆರ್ಥಿಕ ನೆರವಿಗೆ ಸಂಬಂಧಿಸಿದಂತೆ, ನಮಸ್ತೆ ಕೇಂದ್ರ ವಲಯದ ಯೋಜನೆಯಾಗಿದ್ದು, ಇದು ರಾಜ್ಯವಾರು ನಿಧಿ ಹಂಚಿಕೆಗೆ ಅವಕಾಶ ನೀಡುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ. 2023 ರಲ್ಲಿ ಇದನ್ನು ಪ್ರಾರಂಭಿಸಿದಾಗಿನಿಂದ, 2023-24 ರ ಅವಧಿಯಲ್ಲಿ ₹30.06 ಕೋಟಿ, 2024-25 ರ ಅವಧಿಯಲ್ಲಿ ₹47.625 ಕೋಟಿ, 2025-26 ರ ಅವಧಿಯಲ್ಲಿ ₹97.6791 ಕೋಟಿ ಬಿಡುಗಡೆ ಮಾಡಲಾಗಿದೆ ಮತ್ತು 2026-27 ರ ಅವಧಿಯಲ್ಲಿ (ಇಲ್ಲಿಯವರೆಗೆ) ₹28.30 ಕೋಟಿ ಬಿಡುಗಡೆ ಮಾಡಲಾಗಿದೆ. ಅನುರೂಪ ವೆಚ್ಚಗಳು ಕ್ರಮವಾಗಿ ₹30.06 ಕೋಟಿ, ₹35.64 ಕೋಟಿ, ₹97.6791 ಕೋಟಿ (ಅಂದಾಜು) ಮತ್ತು ₹12.45 ಕೋಟಿ (ಅಂದಾಜು) ಆಗಿದೆ.
ನೈರ್ಮಲ್ಯ ಕಾರ್ಮಿಕರು ತಮ್ಮ ಕರ್ತವ್ಯಗಳನ್ನು ಗೌರವ, ಸುರಕ್ಷತೆ ಮತ್ತು ಆಧುನಿಕ ಯಾಂತ್ರಿಕ ಉಪಕರಣಗಳ ಲಭ್ಯತೆಯೊಂದಿಗೆ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಬದ್ಧವಾಗಿದೆ. ನಮಸ್ತೆ ಯೋಜನೆಯ ಜಾರಿಯ ಮೂಲಕ, ಸರ್ಕಾರವು ಯಾಂತ್ರಿಕ ನೈರ್ಮಲ್ಯವನ್ನು ಉತ್ತೇಜಿಸುವುದು, ಕಾರ್ಮಿಕರ ಸುರಕ್ಷತೆಯನ್ನು ಬಲಪಡಿಸುವುದು, ರಕ್ಷಣಾತ್ಮಕ ಉಪಕರಣಗಳು ಮತ್ತು ಆಧುನಿಕ ತುರ್ತು ಸ್ಪಂದನಾ ಮೂಲಸೌಕರ್ಯಗಳನ್ನು ಒದಗಿಸುವುದು ಹಾಗೂ ದೇಶಾದ್ಯಂತ ಅಪಾಯಕಾರಿ ಹಸ್ತಚಾಲಿತ ನೈರ್ಮಲ್ಯ ಪದ್ಧತಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾಗುವುದನ್ನು ಮುಂದುವರಿಸಿದೆ.
******
(रिलीज़ आईडी: 2290214)
आगंतुक पटल : 4