ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ರಾಷ್ಟ್ರೀಯ ವಯೋಶ್ರೀ ಯೋಚನೆಯಡಿ 9.23 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರಿಗೆ 49.81 ಲಕ್ಷಕ್ಕೂ ಹೆಚ್ಚು ಸಹಾಯಕ ಸಾಧನಗಳ ವಿತರಣೆ: ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ಬಿ. ಎಲ್. ವರ್ಮಾ
32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 'ಎಲ್ಡರ್ಲೈನ್' ಸಹಾಯವಾಣಿ, 'ಅವ್ಯಯ್' (AVYAY) ಅಡಿಯಲ್ಲಿ 734 ಹಿರಿಯ ನಾಗರಿಕರ ಗೃಹಗಳಿಗೆ ಬೆಂಬಲ
प्रविष्टि तिथि:
21 JUL 2026 5:23PM by PIB Bengaluru
ದೇಶಾದ್ಯಂತ ಹಿರಿಯ ನಾಗರಿಕರ ಕಲ್ಯಾಣ, ಗೌರವ ಮತ್ತು ಸಾಮಾಜಿಕ ಭದ್ರತೆಯನ್ನು ಉತ್ತೇಜಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಅಟಲ್ ವಯೋ ಅಭ್ಯುದಯ ಯೋಜನೆ (AVYAY) ಅಡಿಯಲ್ಲಿ ಸಮಗ್ರ ಶ್ರೇಣಿಯ ಉಪಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿ ಪ್ರಮುಖ ಉಪಕ್ರಮಗಳೆಂದರೆ 'ಎಲ್ಡರ್ಲೈನ್ - ಹಿರಿಯ ನಾಗರಿಕರಿಗಾಗಿ ರಾಷ್ಟ್ರೀಯ ಸಹಾಯವಾಣಿ' (14567), ಹಿರಿಯ ನಾಗರಿಕರಿಗಾಗಿ ಸಮಗ್ರ ಕಾರ್ಯಕ್ರಮ (IPSrC), ಹಿರಿಯರ ಆರೈಕೆ ವೃದ್ಧಿ ಯಂತ್ರ (SAGE) ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆ (RVY). ಈ ಉಪಕ್ರಮಗಳು ಹಿರಿಯ ನಾಗರಿಕರಿಗೆ ಪ್ರವೇಶಿಸಬಹುದಾದ ಬೆಂಬಲ ಸೇವೆಗಳು, ಸಾಂಸ್ಥಿಕ ಆರೈಕೆ, ತಾಂತ್ರಿಕ ನಾವೀನ್ಯತೆ ಮತ್ತು ಸಹಾಯಕ ಸಾಧನಗಳನ್ನು ಖಚಿತಪಡಿಸುವ ಗುರಿಯನ್ನು ಸಾಮೂಹಿಕವಾಗಿ ಹೊಂದಿವೆ.
ಡಾ. ಡಿ. ಪುರಂದೇಶ್ವರಿ, ಶ್ರೀ ಅತುಲ್ ಗರ್ಗ್, ಶ್ರೀ ಅರುಣ್ ಭಾರತಿ, ಶ್ರೀಮತಿ ಶಾಂಭವಿ ಮತ್ತು ಡಾ. ಲತಾ ವಾಂಖಡೆ ಸೇರಿದಂತೆ ಸಂಸತ್ ಸದಸ್ಯರು ಮಂಡಿಸಿದ ಪ್ರಶ್ನೆಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಅವರು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
'ಎಲ್ಡರ್ಲೈನ್' (14567) ಪ್ರಸ್ತುತ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಹಿರಿಯ ನಾಗರಿಕರಿಗೆ ಮಾಹಿತಿ, ಮಾರ್ಗದರ್ಶನ, ಭಾವನಾತ್ಮಕ ಬೆಂಬಲ, ಮಧ್ಯಸ್ಥಿಕೆ, ರಕ್ಷಣೆ ಮತ್ತು ಕುಂದುಕೊರತೆ ನಿವಾರಣಾ ಸೇವೆಗಳನ್ನು ಒದಗಿಸುತ್ತದೆ ಎಂದು ಸಚಿವರು ಉತ್ತರಿಸಿದರು. ಈ ಸಹಾಯವಾಣಿಯು ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8:00 ರಿಂದ ರಾತ್ರಿ 8:00 ರವರೆಗೆ ಕಾರ್ಯನಿರ್ವಹಿಸುತ್ತದೆ, ಇದು ಅಗತ್ಯವಿರುವ ವೃದ್ಧರಿಗೆ ಸಮಯೋಚಿತ ಸಹಾಯವನ್ನು ಖಚಿತಪಡಿಸುತ್ತದೆ.
ಹಿರಿಯ ನಾಗರಿಕರಿಗಾಗಿ ಸಮಗ್ರ ಕಾರ್ಯಕ್ರಮದ (IPSrC) ಅಡಿಯಲ್ಲಿ, ಸಚಿವಾಲಯವು ಪ್ರಸ್ತುತ 734 ಹಿರಿಯ ನಾಗರಿಕರ ಗೃಹಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಅನುದಾನದ ಮೂಲಕ ಬೆಂಬಲ ನೀಡುತ್ತಿದೆ ಎಂದು ಲಿಖಿತ ಉತ್ತರದಲ್ಲಿ ಮತ್ತಷ್ಟು ವಿವರಿಸಲಾಗಿದೆ. ಈ ಗೃಹಗಳು ವೃದ್ಧರಿಗೆ, ವಿಶೇಷವಾಗಿ ಬಡವರಿಗೆ ಅಥವಾ ಸಹಾಯದ ಅಗತ್ಯವಿರುವವರಿಗೆ ಸಾಂಸ್ಥಿಕ ಆರೈಕೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸುತ್ತವೆ.
ಸಚಿವಾಲಯವು ಹಿರಿಯರ ಆರೈಕೆ ವೃದ್ಧಿ ಯಂತ್ರ (SAGE) ಉಪಕ್ರಮವನ್ನು ಪ್ರಾರಂಭಿಸಿದೆ. ಆಗಸ್ಟ್ 2022 ರಲ್ಲಿ SAGE ಪೋರ್ಟಲ್ ಪ್ರಾರಂಭವಾದಾಗಿಂದ 131 ಅರ್ಜಿಗಳನ್ನು ಸ್ವೀಕರಿಸಲಾಗಿದೆ, ಅದರಲ್ಲಿ ಹಿರಿಯ ನಾಗರಿಕರಿಗಾಗಿ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಉತ್ತೇಜಿಸಲು ಮತ್ತು ಸಿಲ್ವರ್ ಆರ್ಥಿಕತೆಯನ್ನು ಬಲಪಡಿಸಲು ₹9.5 ಕೋಟಿ ಮೌಲ್ಯದ ಹಣಕಾಸಿನ ನೆರವಿನೊಂದಿಗೆ ಸೂಕ್ತ ಪರಿಶೀಲನೆಯ ನಂತರ 10 ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ವಯೋಶ್ರೀ ಯೋಜನೆ (RVY) ಅಡಿಯಲ್ಲಿ, ಸಚಿವಾಲಯವು ವಯಸ್ಸಿಗೆ ಸಂಬಂಧಿಸಿದ ಅಂಗವೈಕಲ್ಯಗಳಿಂದ ಬಳಲುತ್ತಿರುವ ಅರ್ಹ ಹಿರಿಯ ನಾಗರಿಕರಿಗೆ ದೈಹಿಕ ಸಹಾಯಕ ಸಾಧನಗಳು ಮತ್ತು ಜೀವನೋಪಾಯ ಸಾಧನಗಳನ್ನು ಒದಗಿಸುತ್ತಿದೆ.
ಯೋಜನೆಯ ಆರಂಭದಿಂದಲೂ, ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕೆ ಸೇರಿರುವ ಅಥವಾ ತಿಂಗಳಿಗೆ ₹15,000 ವರೆಗೆ ಮಾಸಿಕ ಆದಾಯ ಹೊಂದಿರುವ 9,23,071 ಹಿರಿಯ ನಾಗರಿಕರಿಗೆ 49,81,380 ಸಹಾಯಕ ಸಾಧನಗಳನ್ನು ವಿತರಿಸಲಾಗಿದೆ, ಇದು ಅವರು ಸ್ವಾವಲಂಬಿ ಮತ್ತು ಗೌರವಾನ್ವಿತ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಸದನಕ್ಕೆ ತಿಳಿಸಲಾಯಿತು.
ಮತ್ತೊಂದು ಪೂರಕ ಪ್ರಶ್ನೆಗೆ ಉತ್ತರಿಸುತ್ತಾ, ಪ್ರತ್ಯೇಕ 'ರಾಷ್ಟ್ರೀಯ ಸಿಲ್ವರ್ ನೀತಿ'ಯನ್ನು ಪರಿಚಯಿಸುವ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಪರಿಶೀಲನೆಯಲ್ಲಿಲ್ಲ ಎಂದು ತಿಳಿಸಲಾಯಿತು.
AVYAY ಅಡಿಯಲ್ಲಿ ಸಮಗ್ರ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸರ್ಕಾರವು ಹಿರಿಯ ನಾಗರಿಕರಿಗಾಗಿ ಅಸ್ತಿತ್ವದಲ್ಲಿರುವ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದನ್ನು ಮುಂದುವರೆಸಿದೆ, ಉತ್ತಮ ಆರೈಕೆ, ಸಾಮಾಜಿಕ ಸೇರ್ಪಡೆ ಮತ್ತು ಸುಧಾರಿತ ಜೀವನದ ಗುಣಮಟ್ಟವನ್ನು ಖಚಿತಪಡಿಸುತ್ತದೆ ಎಂದು ಸಚಿವರು ದೃಢಪಡಿಸಿದರು.
*****
(रिलीज़ आईडी: 2287571)
आगंतुक पटल : 10