ರೈಲ್ವೇ ಸಚಿವಾಲಯ
ರಾಮನಗರ-ಡೆಹ್ರಾಡೂನ್ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿದ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್
ಉತ್ತರಾಖಂಡದ ಕುಮಾವೂನ್ ಮತ್ತು ಗರ್ವಾಲ್ ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸಲು ರಾಮನಗರ ಮತ್ತು ಡೆಹ್ರಾಡೂನ್ ನಡುವೆ ಮೊದಲ ನೇರ ಎಕ್ಸ್ ಪ್ರೆಸ್ ರೈಲು
ದಟ್ಟಣೆಯನ್ನು ಹೆಚ್ಚಿಸದೆ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗಾಗಿ ಉತ್ತಮ ಸೌಲಭ್ಯಗಳತ್ತ ಗಮನ ಹರಿಸಲು ಹರಿದ್ವಾರ ಮತ್ತು ಡೆಹ್ರಾಡೂನ್ ನಿಲ್ದಾಣಗಳ ಪುನರಾಭಿವೃದ್ಧಿ: ಶ್ರೀ ಅಶ್ವಿನಿ ವೈಷ್ಣವ್
ಉತ್ತರಾಖಂಡದಲ್ಲಿ ರೈಲು ಸಾಮರ್ಥ್ಯವನ್ನು ವಿಸ್ತರಿಸಲು ಹೃಷಿಕೇಶ ರೈಲ್ವೆ ನಿಲ್ದಾಣವನ್ನು ಫೀಡರ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುವುದು: ಕೇಂದ್ರ ರೈಲ್ವೆ ಸಚಿವರು
ಋಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗದ ಕಾಮಗಾರಿ ತ್ವರಿತ ಪ್ರಗತಿಯಲ್ಲಿದೆ, ಇದು ಉತ್ತರಾಖಂಡದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಜೀವನಾಡಿಯಾಗಲಿದೆ: ಶ್ರೀ ಪುಷ್ಕರ್ ಸಿಂಗ್ ಧಾಮಿ
प्रविष्टि तिथि:
18 JUL 2026 4:11PM by PIB Bengaluru
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ರಾಮನಗರ-ಡೆಹ್ರಾಡೂನ್ ಎಕ್ಸ್ ಪ್ರೆಸ್ ನ ಉದ್ಘಾಟನಾ ಸೇವೆಗೆ ವರ್ಚುವಲ್ ಮೂಲಕ ಹಸಿರು ನಿಶಾನೆ ತೋರಿದರು, ಇದು ರಾಮನಗರವನ್ನು ಡೆಹ್ರಾಡೂನ್ ಗೆ ಸಂಪರ್ಕಿಸುವ ಮೊದಲ ನೇರ ಎಕ್ಸ್ ಪ್ರೆಸ್ ರೈಲಿನ ಪ್ರಾರಂಭವನ್ನು ಸೂಚಿಸುತ್ತದೆ. ಉತ್ತರಾಖಂಡದ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹೊಸ ರೈಲು ಈ ಪ್ರದೇಶದ ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುತ್ತದೆ ಮತ್ತು ಉತ್ತರಾಖಂಡದ ಕುಮಾವೂನ್ ಹಾಗು ಗರ್ವಾಲ್ ಪ್ರದೇಶಗಳ ನಡುವೆ ರೈಲು ಸಂಪರ್ಕವನ್ನು ಗಮನಾರ್ಹವಾಗಿ ಬಲಪಡಿಸುತ್ತದೆ.

ಎಕ್ಸ್ ಪ್ರೆಸ್ ರೈಲು ಪ್ರತಿ ಬುಧವಾರ ಮತ್ತು ಶುಕ್ರವಾರ ಓಡಾಟ ನಡೆಸುತ್ತದೆ/ಕಾರ್ಯನಿರ್ವಹಿಸುತ್ತದೆ. ರೈಲು ಸಂಖ್ಯೆ 15310 ರಾಮನಗರದಿಂದ ಮಧ್ಯಾಹ್ನ 5:50 ಕ್ಕೆ ಹೊರಟು 12:40 ಕ್ಕೆ ಡೆಹ್ರಾಡೂನ್ ತಲುಪಲಿದೆ. ರೈಲು ಸಂಖ್ಯೆ 15309 ಡೆಹ್ರಾಡೂನ್ ನಿಂದ 15:55 ಗಂಟೆಗೆ ಹೊರಟು ರಾತ್ರಿ 23:30 ಕ್ಕೆ ರಾಮನಗರ ತಲುಪಲಿದೆ. ಈ ರೈಲು ತನ್ನ ಮಾರ್ಗದಲ್ಲಿ ಕಾಶಿಪುರ, ರೋಶನ್ಪುರ, ಪಿಪಲ್ಸಾನಾ, ಮೊರಾದಾಬಾದ್, ನಜೀಬಾಬಾದ್ ಮತ್ತು ಹರಿದ್ವಾರದಲ್ಲಿ ನಿಲುಗಡೆ ಹೊಂದಿದೆ.
ಈ ರೈಲು ಹವಾನಿಯಂತ್ರಿತ ಸೆಕೆಂಡ್ ಕ್ಲಾಸ್, ಹವಾನಿಯಂತ್ರಿತ ಥರ್ಡ್ ಕ್ಲಾಸ್, ಎಸಿ ಚೇರ್ ಕಾರ್, ಸ್ಲೀಪರ್ ಕ್ಲಾಸ್, ಸೆಕೆಂಡ್ ಸಿಟಿಂಗ್ ಮತ್ತು ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳನ್ನು ಒಳಗೊಂಡಿರುತ್ತದೆ, ಇದು ವಿವಿಧ ವಿಭಾಗಗಳಲ್ಲಿ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಆಯ್ಕೆಗಳನ್ನು ನೀಡುತ್ತದೆ.

ಹೊಸ ಸೇವೆಯು ಉತ್ತರಾಖಂಡದ ನೈನಿತಾಲ್, ಉಧಮ್ ಸಿಂಗ್ ನಗರ, ಹರಿದ್ವಾರ ಮತ್ತು ಡೆಹ್ರಾಡೂನ್ ಜಿಲ್ಲೆಗಳು ಮತ್ತು ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಬಿಜ್ನೋರ್ ಜಿಲ್ಲೆಗಳ ರೈತರು, ವ್ಯಾಪಾರಿಗಳು ಮತ್ತು ಎಲ್ಲಾ ವರ್ಗದ ಜನರು ಸೇರಿದಂತೆ ನಿವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಡೆಹ್ರಾಡೂನ್ ಮತ್ತು ಹರಿದ್ವಾರಕ್ಕೆ ಒಂದೇ ದಿನದ ಅನುಕೂಲಕರ ಸಂಪರ್ಕವನ್ನು ಒದಗಿಸುತ್ತದೆ, ಪ್ರಯಾಣಿಕರು ಮನೆಗೆ ಮರಳುವ ಮೊದಲು ಅಧಿಕೃತ, ಶೈಕ್ಷಣಿಕ, ವ್ಯಾಪಾರ ಮತ್ತು ವೈಯಕ್ತಿಕ ಕೆಲಸಗಳನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ.

ಈ ರೈಲು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಇದು ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ, ರಾಮನಗರ ಬಳಿಯ ಕೋಸಿ ನದಿಯ ನಡುವೆ ದೊಡ್ಡ ಬಂಡೆಯ ಮೇಲೆ ಇರುವ ಗಿರಿಜಾ ದೇವಿ ದೇವಾಲಯ ಮತ್ತು ಪ್ರಾಚೀನ ಧಾರ್ಮಿಕ ಸ್ಥಳಗಳಾದ ಸೀತಾಮಾಧಿ / ಸೀತಾವಾಣಿಗೆ ಸಂಪರ್ಕವನ್ನು ಸುಧಾರಿಸುತ್ತದೆ. ಇದಲ್ಲದೆ, ಪ್ರಯಾಣಿಕರು ಹರಿದ್ವಾರ ಮತ್ತು ಡೆಹ್ರಾಡೂನ್ನಿಂದ ಮುಂದಿನ ಸಂಪರ್ಕದ ಮೂಲಕ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಸೇರಿದಂತೆ ಚಾರ್ ಧಾಮ್ ಯಾತ್ರಾ ಸರ್ಕ್ಯೂಟ್ಗೆ ಪ್ರವೇಶಿಸಲು ಹೆಚ್ಚು ಅನುಕೂಲಗಳನ್ನು ಒದಗಿಸುತ್ತದೆ.
ಜನರನ್ನುದ್ದೇಶಿಸಿ ಮಾತನಾಡಿದ ಶ್ರೀ ವೈಷ್ಣವ್, ರಾಮನಗರ-ಡೆಹ್ರಾಡೂನ್ ಎಕ್ಸ್ ಪ್ರೆಸ್ ಉತ್ತರಾಖಂಡದ ಕುಮಾವೂನ್ ಮತ್ತು ಗರ್ವಾಲ್ ಪ್ರದೇಶಗಳ ನಡುವೆ ರೈಲು ಸಂಪರ್ಕವನ್ನು ಬಲಪಡಿಸುತ್ತದೆ ಎಂದು ಹೇಳಿದರು. ಇದು ಎರಡು ನಗರಗಳ ನಡುವಿನ ಮೊದಲ ನೇರ ಎಕ್ಸ್ ಪ್ರೆಸ್ ರೈಲು ಆಗಿದೆ ಮತ್ತು ಉತ್ತರಾಖಂಡದ ಜನರಿಗೆ ವೇಗದ, ಹೆಚ್ಚು ಅನುಕೂಲಕರ ಮತ್ತು ವಿಶ್ವಾಸಾರ್ಹ ರೈಲು ಸಂಪರ್ಕವನ್ನು ಒದಗಿಸುವ ನಿರೀಕ್ಷೆಯಿದೆ.
ಹರಿದ್ವಾರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಋಷಿಕೇಶ ರೈಲು ನಿಲ್ದಾಣವನ್ನು ಫೀಡರ್ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು. ಇದಕ್ಕಾಗಿ, ಹರಿದ್ವಾರ ಮತ್ತು ಹೃಷಿಕೇಶಕ್ಕೆ ಮತ್ತು ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚುವರಿ ಸಾಮರ್ಥ್ಯವನ್ನು ಸೃಷ್ಟಿಸಲು ಮತ್ತು ಸಂಪರ್ಕವನ್ನು ಸುಧಾರಿಸಲು ಮಹಾಯೋಜನೆಯನ್ನು (ಮಾಸ್ಟರ್ ಪ್ಲಾನ್) ಸಿದ್ಧಪಡಿಸಲಾಗುತ್ತಿದೆ ಎಂದರು.

ಉತ್ತರಾಖಂಡದ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ವೇಗವಾಗಿ ಪ್ರಗತಿಯಲ್ಲಿದೆ ಎಂದು ಶ್ರೀ ವೈಷ್ಣವ್ ಒತ್ತಿ ಹೇಳಿದರು. ಡೆಹ್ರಾಡೂನ್, ಹರಿದ್ವಾರ ಜಂಕ್ಷನ್, ಹರಾವಾಲಾ, ಕಾಶಿಪುರ ಜಂಕ್ಷನ್, ಕಿಚ್ಚಾ, ಕೋಟ್ದ್ವಾರ, ರೂರ್ಕಿ, ಕಠ್ಗೊಡಮ್, ಲಾಲ್ ಕುವಾನ್ ಜಂಕ್ಷನ್, ರಾಮನಗರ ಮತ್ತು ತನಕ್ಪುರ ಸೇರಿದಂತೆ ರಾಜ್ಯದ 11 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಹರಿದ್ವಾರ ಮತ್ತು ಡೆಹ್ರಾಡೂನ್ ನಿಲ್ದಾಣಗಳ ಪುನರಾಭಿವೃದ್ಧಿಯ ಯೋಜನೆಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಮತ್ತು ದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ರೈಲ್ವೆ ಸಚಿವರು ಹೇಳಿದರು. ಇತರ ರೈಲ್ವೆ ಉಪಕ್ರಮಗಳನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್, ಇತ್ತೀಚೆಗೆ ಪರಿಚಯಿಸಲಾದ ತನಕ್ಪುರ-ನಾಂದೇಡ್ ಎಕ್ಸ್ ಪ್ರೆಸ್ ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಈ ಪ್ರದೇಶದಲ್ಲಿ ವಂದೇ ಭಾರತ್ ಸೇವೆಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದೂ ಹೇಳಿದರು.
ಉತ್ತರಾಖಂಡ ಮುಖ್ಯಮಂತ್ರಿ ಶ್ರೀ ಪುಷ್ಕರ್ ಸಿಂಗ್ ಧಾಮಿ ಮಾತನಾಡಿ, ರಾಮನಗರ-ಡೆಹ್ರಾಡೂನ್ ಎಕ್ಸ್ ಪ್ರೆಸ್ ಉದ್ಘಾಟನೆಯು ಉತ್ತರಾಖಂಡದಲ್ಲಿ ರೈಲು ಸಂಪರ್ಕವನ್ನು ಬಲಪಡಿಸುವ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದರು. ಹೊಸ ರೈಲು ಸೇವೆಯನ್ನು ಒದಗಿಸಿದ ಸಂದರ್ಭದಲ್ಲಿ ಅವರು ರಾಜ್ಯದ ಜನರನ್ನು ಅಭಿನಂದಿಸಿದರು ಮತ್ತು ಈ ಉಪಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಇತ್ತೀಚಿನ ವರ್ಷಗಳಲ್ಲಿ ಉತ್ತರಾಖಂಡದಲ್ಲಿ ರೈಲು ಸಂಪರ್ಕವು ಗಮನಾರ್ಹವಾಗಿ ಸುಧಾರಿಸಿದೆ, ರಾಜ್ಯದಾದ್ಯಂತ ಹಲವಾರು ಹೊಸ ರೈಲು ಸೇವೆಗಳನ್ನು ಪರಿಚಯಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ರಿಷಿಕೇಶ-ಕರ್ಣಪ್ರಯಾಗ ರೈಲು ಮಾರ್ಗದ ಕಾಮಗಾರಿ ವೇಗವಾಗಿ ಸಾಗುತ್ತಿದೆ ಮತ್ತು ಉತ್ತರಾಖಂಡದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗು ಪ್ರವಾಸೋದ್ಯಮ ಅಭಿವೃದ್ಧಿಗೆ ಜೀವನಾಡಿಯಾಗಲಿದೆ ಎಂದು ಶ್ರೀ ಧಾಮಿ ಹೇಳಿದರು.
ಇದಲ್ಲದೆ, ಉತ್ತರಾಖಂಡವು ದಾಖಲೆಯ 4,769 ಕೋಟಿ ರೂ.ಗಳ ರೈಲ್ವೆ ಬಜೆಟ್ ಹಂಚಿಕೆಯನ್ನು ಪಡೆದಿದೆ, ಪ್ರಸ್ತುತ ರಾಜ್ಯದಲ್ಲಿ 40,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ರೈಲ್ವೆ ಯೋಜನೆಗಳು ಅನುಷ್ಠಾನದಲ್ಲಿವೆ ಎಂಬುದನ್ನು ಶ್ರೀ ಧಾಮಿ ಉಲ್ಲೇಖಿಸಿದರು. ಹರಿದ್ವಾರದಲ್ಲಿ ರೈಲ್ವೆ ಅಭಿವೃದ್ಧಿಯನ್ನು ಉಲ್ಲೇಖಿಸಿದ ಶ್ರೀ ಧಾಮಿ, ಮುಂಬರುವ ಕುಂಭಮೇಳದ ದೃಷ್ಟಿಯಿಂದ ಹಲವಾರು ಮೂಲಸೌಕರ್ಯ ಯೋಜನೆಗಳು ಮತ್ತು ರೈಲು ಸೇವೆಗಳನ್ನು ಯೋಜಿಸಲಾಗುತ್ತಿದೆ ಎಂದು ಹೇಳಿದರು.
ಹರಿದ್ವಾರ ಕ್ಷೇತ್ರದ ಸಂಸತ್ ಸದಸ್ಯರಾದ ಶ್ರೀ ತ್ರಿವೇಂದ್ರ ಸಿಂಗ್ ರಾವತ್, ಗರ್ವಾಲ್ ಕ್ಷೇತ್ರದ ಸಂಸದ ಅನಿಲ್ ಬಲೂನಿ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳು,ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(रिलीज़ आईडी: 2286188)
आगंतुक पटल : 29