ಸಂವಹನ ಸಚಿವಾಲಯ
ದೂರಸಂಪರ್ಕ ಇಲಾಖೆಯು ದೂರಸಂಪರ್ಕ ಮಾನದಂಡಗಳ ಅಭಿವೃದ್ಧಿ ಸೊಸೈಟಿ, ಇಂಡಿಯಾ (ಟಿ ಎಸ್ ಡಿ ಎಸ್ ಐ) ಜೊತೆಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ
ತಿಳುವಳಿಕಾ ಒಪ್ಪಂದವು ಜಾಗತಿಕ ದೂರಸಂಪರ್ಕ ಮಾನದಂಡಗಳಲ್ಲಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ ಮತ್ತು ನಾವೀನ್ಯತೆಗಳು ಹಾಗೂ ಎಂ ಎಸ್ ಎಂ ಇ ಗಳಿಗೆ ಸ್ಥಳೀಯ ನಾವೀನ್ಯತೆಗಳನ್ನು ಉತ್ತೇಜಿಸುತ್ತದೆ
ದೂರಸಂಪರ್ಕವು ಇತಿಹಾಸದಲ್ಲಿ ಯಾವುದೇ ನಾವೀನ್ಯತೆಗಿಂತ ಹೆಚ್ಚಾಗಿ ಮಾನವನ ಸಾಧ್ಯತೆಗಳನ್ನು ವಿಸ್ತರಿಸಿದೆ: ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ನಾಳೆಯ ದೂರಸಂಪರ್ಕ ತಂತ್ರಜ್ಞಾನಗಳನ್ನು ರೂಪಿಸುತ್ತಿದೆ: ಶ್ರೀ ಸಿಂಧಿಯಾ
ಭಾರತವು ಕೇವಲ ತಾಂತ್ರಿಕ ನಾವೀನ್ಯತೆಗಳ ಜಾಲವಷ್ಟೇ ಅಲ್ಲ, ಬದಲಿಗೆ ನಾಗರಿಕತೆಯ ಮಟ್ಟದಲ್ಲಿ ಅವುಗಳನ್ನು ಪರೀಕ್ಷಿಸುವ ಪ್ರಯೋಗಾಲಯವೂ ಆಗಿದೆ: ಶ್ರೀ ಸಿಂಧಿಯಾ
प्रविष्टि तिथि:
10 JUL 2026 8:30PM by PIB Bengaluru
ದೂರಸಂಪರ್ಕ ಮಾನದಂಡಗಳ ಜಾಗತಿಕ ನಾಯಕತ್ವದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಮತ್ತು ಭಾರತ್ 6ಜಿ ಮಿಷನ್ ನ ದೃಷ್ಟಿಕೋನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿ, ಸಂಪರ್ಕ ಸಚಿವಾಲಯದ ದೂರಸಂಪರ್ಕ ಇಲಾಖೆಯು (ಡಿಒಟಿ), ಕೇಂದ್ರ ಸಂವಹನ ಮತ್ತು ಈಶಾನ್ಯ ವಲಯದ ಅಭಿವೃದ್ಧಿ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಉಪಸ್ಥಿತಿಯಲ್ಲಿ, 9ನೇ ಟಿ ಎಸ್ ಡಿ ಎಸ್ ಐ ಟೆಕ್ನಿಕಲ್ ಡೀಪ್ ಡೈವ್ (ಟಿಟಿಡಿಡಿ) 2026 ರ ಸಂದರ್ಭದಲ್ಲಿ ದೂರಸಂಪರ್ಕ ಮಾನದಂಡಗಳ ಅಭಿವೃದ್ಧಿ ಸೊಸೈಟಿ, ಇಂಡಿಯಾ (ಟಿ ಎಸ್ ಡಿ ಎಸ್ ಐ) ಜೊತೆಗೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದೆ.
ಜಾಗತಿಕ ಮಾನದಂಡಗಳ ಅಭಿವೃದ್ಧಿ ಸಂಸ್ಥೆಗಳಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲು, ಸ್ಥಳೀಯ ನಾವೀನ್ಯತೆಗಳನ್ನು ಉತ್ತೇಜಿಸಲು, ಅಂತರರಾಷ್ಟ್ರೀಯ ಮಾನದಂಡಗಳಿಗೆ ಭಾರತೀಯ ತಂತ್ರಜ್ಞಾನಗಳ ಕೊಡುಗೆಯನ್ನು ಸುಲಭಗೊಳಿಸಲು ಮತ್ತು ಜಾಗತಿಕ ಮಾನದಂಡಗಳ ಚಟುವಟಿಕೆಗಳಲ್ಲಿ ಭಾರತೀಯ ನವೋದ್ಯಮಗಳು ಹಾಗೂ ಎಂಎಸ್‌ಎಂಇ ಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ತಂತ್ರಜ್ಞಾನ ಅಭಿವೃದ್ಧಿ ಮತ್ತು ಹೂಡಿಕೆ ಉತ್ತೇಜನ (ಟಿಡಿಇಪಿ) ಯೋಜನೆಯಡಿ ಈ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಂವಹನ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು, “ನಾವೆಲ್ಲರೂ ಅತ್ಯಂತ ಬುದ್ಧಿವಂತ ಮತ್ತು ಅಪ್ರತಿಮ ಮನಸ್ಸುಗಳನ್ನು ಒಟ್ಟುಗೂಡಿಸುವ ಮೂಲಕ ಸಹಯೋಗದ ಮನೋಭಾವ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಯನ್ನು ಪೋಷಿಸುತ್ತಿದ್ದೇವೆ. ಇದು ನಾವೀನ್ಯತೆಯ ಜಾಲ ಮತ್ತು ಬೆಳವಣಿಗೆಯ ಪ್ರಯೋಗಾಲಯವಾಗಿರುವ ಭಾರತದ ದಶಕದಷ್ಟು ಹಳೆಯ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಇಂದು ಭಾರತವು ಉದಯೋನ್ಮುಖ ತಂತ್ರಜ್ಞಾನದ ಕೇಂದ್ರವಾಗಿದೆ ಮತ್ತು ಈ ನಿರಂತರ ಚರ್ಚೆ ಮತ್ತು ಚಿಂತನೆಗಳ ಸೂತ್ರೀಕರಣ ಪ್ರಕ್ರಿಯೆಯು ಸಂಪರ್ಕ ತಂತ್ರಜ್ಞಾನವು ಕೇವಲ ಭಾರತಕ್ಕಷ್ಟೇ ಅಲ್ಲದೆ ಇಡೀ ಮಾನವಕುಲಕ್ಕಾಗಿ ಹೇಗೆ ವಿಕಸನಗೊಳ್ಳುತ್ತದೆ ಎಂಬುದಕ್ಕೆ ಅಡಿಪಾಯ ಹಾಕಲು ಸಹಾಯ ಮಾಡುತ್ತದೆ” ಎಂದರು.
“ಮಾನವ ನಾಗರಿಕತೆಯು ತಾನು ಸೃಷ್ಟಿಸಿದ ಜಾಲಗಳಿಂದಲೇ ಯಾವಾಗಲೂ ರೂಪಿಸಲ್ಪಟ್ಟಿದೆ ಎಂಬುದನ್ನು ನಾವು ಇತಿಹಾಸದುದ್ದಕ್ಕೂ ಕಲಿತಿದ್ದೇವೆ. ಇಂದಿನ ಕಾಲದಲ್ಲಿ, ದೂರಸಂಪರ್ಕವು ಆ ಅದೃಶ್ಯ ಶಕ್ತಿಯಾಗಿದ್ದು, ಪ್ರಪಂಚದಾದ್ಯಂತದ ನಾಗರಿಕರಿಗೆ ಅಪಾರವಾದ ಬಹುಮುಖಿ ಪ್ರಯೋಜನಗಳನ್ನು ನೀಡಿದೆ. ಇದು ಮಾನವ ಇತಿಹಾಸದ ಯಾವುದೇ ನಾವೀನ್ಯತೆಗಳು ಮಾಡಲು ಸಾಧ್ಯವಾಗದ ರೀತಿಯಲ್ಲಿ ಮಾನವ ಸಾಧ್ಯತೆಗಳ ಗಡಿಗಳನ್ನು ವಿಸ್ತರಿಸಿದೆ” ಎಂದು ಅವರು ಹೇಳಿದರು.




ತಿಳುವಳಿಕಾ ಒಪ್ಪಂದದ ಪ್ರಮುಖ ಲಕ್ಷಣಗಳು
ಈ ತಿಳುವಳಿಕಾ ಒಪ್ಪಂದವು ಈ ಕೆಳಗಿನ ಉಪಕ್ರಮಗಳ ಮೂಲಕ ದೃಢವಾದ ದೂರಸಂಪರ್ಕ ಮಾನದಂಡಗಳ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ:
- 3ಜಿಪಿಪಿ, ಐಟಿಯು ಮತ್ತು oneM2M ಸೇರಿದಂತೆ ಜಾಗತಿಕ ಮಾನದಂಡಗಳ ಅಭಿವೃದ್ಧಿ ಸಂಸ್ಥೆಗಳಲ್ಲಿ ಭಾಗವಹಿಸಲು ಹಣಕಾಸಿನ ನೆರವು, ಇದು ಅಂತರರಾಷ್ಟ್ರೀಯ ಮಾನದಂಡಗಳ ಚಟುವಟಿಕೆಗಳಲ್ಲಿ ಹೆಚ್ಚಿನ ಭಾರತೀಯ ಪ್ರಾತಿನಿಧ್ಯವನ್ನು ಸಕ್ರಿಯಗೊಳಿಸುತ್ತದೆ.
- ಟಿ ಎಸ್ ಡಿ ಎಸ್ ಐ ಸದಸ್ಯತ್ವ ಶುಲ್ಕಕ್ಕೆ ಸಬ್ಸಿಡಿ
- ₹10 ಕೋಟಿ ವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಅರ್ಹ ಡಿಪಿಐಐಟಿ ಮಾನ್ಯತೆ ಪಡೆದ ನವೋದ್ಯಮಗಳು ಮತ್ತು ಎಂ ಎಸ್ ಎಂ ಇ ಗಳಿಗೆ ಶೇಕಡಾ 98 ರಷ್ಟು ಹಣಕಾಸಿನ ನೆರವು.
- ₹10 ಕೋಟಿಗಿಂತ ಹೆಚ್ಚು ಮತ್ತು ₹500 ಕೋಟಿ ವರೆಗೆ ವಾರ್ಷಿಕ ವಹಿವಾಟು ಹೊಂದಿರುವ ಅರ್ಹ ಎಂ ಎಸ್ ಎಂ ಇ ಗಳಿಗೆ ಶೇಕಡಾ 80 ರಷ್ಟು ಹಣಕಾಸಿನ ನೆರವು.
- ಇದೇ ಮಾದರಿಯಲ್ಲಿ 3ನೇ ಜನರೇಷನ್ ಪಾರ್ಟ್‌ನರ್‌ಶಿಪ್ ಪ್ರಾಜೆಕ್ಟ್ (3ಜಿಪಿಪಿ) ವೈಯಕ್ತಿಕ ಸದಸ್ಯತ್ವ (ಐಎಂ) ಶುಲ್ಕಗಳಿಗೆ ಬೆಂಬಲ, ಇದು ಭಾರತೀಯ ನಾವೀನ್ಯಕಾರರು ಜಾಗತಿಕ ಸುಧಾರಿತ 5ಜಿ ಮತ್ತು 6ಜಿ ಮಾನದಂಡಗಳಿಗೆ ನೇರವಾಗಿ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ.
- ಅಂತರರಾಷ್ಟ್ರೀಯ ಮಾನದಂಡಗಳ ಸಭೆಗಳಲ್ಲಿ ಭಾಗವಹಿಸಲು ನವೋದ್ಯಮಗಳು ಮತ್ತು ಎಂ ಎಸ್ ಎಂ ಇ ಗಳಿಗೆ ಪ್ರಯಾಣದ ನೆರವು, ಅರ್ಹ ವೆಚ್ಚದ ಶೇಕಡಾ 80 ರಷ್ಟು ಹಣಕಾಸಿನ ಬೆಂಬಲದೊಂದಿಗೆ, ಪ್ರತಿ ಅಂತರರಾಷ್ಟ್ರೀಯ ಸಭೆಗೆ ಒಬ್ಬ ವ್ಯಕ್ತಿಗೆ ಗರಿಷ್ಠ ₹₹5 ಲಕ್ಷದ ಮಿತಿಗೆ ಒಳಪಟ್ಟು ನೆರವು ನೀಡಲಾಗುತ್ತದೆ. ಇದರಿಂದ ಜಾಗತಿಕ ಮಾನದಂಡಗಳ ಸಂಸ್ಥೆಗಳಲ್ಲಿ ಭಾರತೀಯ ತಾಂತ್ರಿಕ ಕೊಡುಗೆಗಳನ್ನು (TDocs) ಸಲ್ಲಿಸಲು ಪ್ರೋತ್ಸಾಹಿಸಲಾಗುತ್ತದೆ.
- ದೂರಸಂಪರ್ಕ ಮಾನದಂಡಗಳ ಚರ್ಚೆಗಳಿಗೆ ಭಾರತವನ್ನು ಆದ್ಯತೆಯ ಜಾಗತಿಕ ತಾಣವನ್ನಾಗಿ ಬಲಪಡಿಸಲು ಮತ್ತು ಭಾರತೀಯ ಶಿಕ್ಷಣ ತಜ್ಞರು, ನವೋದ್ಯಮಗಳು ಹಾಗೂ ಉದ್ಯಮಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಭಾರತದಲ್ಲಿ 3ಜಿಪಿಪಿ ಮತ್ತು oneM2M ಸಭೆಗಳು ಸೇರಿದಂತೆ ಅಂತರರಾಷ್ಟ್ರೀಯ ಮಾನದಂಡಗಳ ಸಭೆಗಳನ್ನು ಆಯೋಜಿಸಲು ಬೆಂಬಲ ನೀಡಲಾಗುತ್ತದೆ.
- ಐಟಿಯು ಮತ್ತು oneM2M ನಂತಹ ಪ್ರಮುಖ ಜಾಗತಿಕ ಮಾನದಂಡಗಳ ಸಂಸ್ಥೆಗಳಲ್ಲಿ ಟಿ ಎಸ್ ಡಿ ಎಸ್ ಐ ನ ಸದಸ್ಯತ್ವಕ್ಕಾಗಿ ಹಣಕಾಸಿನ ನೆರವು, ಇದು ಅಂತರರಾಷ್ಟ್ರೀಯ ಮಾನದಂಡಗಳಲ್ಲಿ ನಿರಂತರ ತೊಡಗಿಸಿಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ.
ಭಾರತದ ಜಾಗತಿಕ ಮಾನದಂಡಗಳ ಹೆಜ್ಜೆಗುರುತು ಬಲಪಡಿಸುವುದು
ಈ ಸಹಯೋಗದ ಮೂಲಕ, ದೂರಸಂಪರ್ಕ ಇಲಾಖೆಯು ಜಾಗತಿಕ ದೂರಸಂಪರ್ಕ ಮಾನದಂಡಗಳಿಗೆ ಭಾರತದ ಕೊಡುಗೆಯನ್ನು ವೇಗಗೊಳಿಸಲು, ಸ್ಥಳೀಯ ಬೌದ್ಧಿಕ ಆಸ್ತಿಯನ್ನು ಉತ್ತೇಜಿಸಲು ಮತ್ತು ಭಾರತ್ 6ಜಿ ಮಿಷನ್ ನ ಉದ್ದೇಶಗಳಿಗೆ ಅನುಗುಣವಾಗಿ ಜಾಗತಿಕವಾಗಿ ಸ್ಪರ್ಧಾತ್ಮಕ ದೂರಸಂಪರ್ಕ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಬೆಂಬಲಿಸಲು ಉದ್ದೇಶಿಸಿದೆ.
ಈ ಪಾಲುದಾರಿಕೆಯು ಜಾಗತಿಕ ಮಾನದಂಡಗಳ ಅಭಿವೃದ್ಧಿಯಲ್ಲಿ ಭಾರತೀಯ ನವೋದ್ಯಮಗಳು ಮತ್ತು ಎಂ ಎಸ್ ಎಂ ಇ ಗಳ ಭಾಗವಹಿಸುವಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ, ನಾವೀನ್ಯತೆ ಆಧಾರಿತ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಮುಂದಿನ ಪೀಳಿಗೆಯ ದೂರಸಂಪರ್ಕ ತಂತ್ರಜ್ಞಾನಗಳು ಹಾಗೂ ಮಾನದಂಡಗಳಿಗೆ ಭಾರತವನ್ನು ಪ್ರಮುಖ ಕೊಡುಗೆದಾರನನ್ನಾಗಿ ಮಾಡಲು ನೆರವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಟಿ ಎಸ್ ಡಿ ಎಸ್ ಐ ಬಗ್ಗೆ:
ಟಿ ಎಸ್ ಡಿ ಎಸ್ ಐ ಭಾರತದ ದೂರಸಂಪರ್ಕ ಮಾನದಂಡಗಳ ಅಭಿವೃದ್ಧಿ ಸಂಸ್ಥೆಯಾಗಿದ್ದು, ಇದು ಐಟಿಯು ನ ಸೆಕ್ಟರ್ ಸದಸ್ಯರಾಗಿರುವುದರ ಜೊತೆಗೆ, 3ಜಿಪಿಪಿ ಮತ್ತು oneM2M ನ ಸಾಂಸ್ಥಿಕ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತದೆ.
ತಂತ್ರಜ್ಞಾನ ಅಭಿವೃದ್ಧಿ ಮತ್ತು ಹೂಡಿಕೆ ಉತ್ತೇಜನ (ಟಿಡಿಐಪಿ) ಯೋಜನೆಯ ಬಗ್ಗೆ:
2026-31ರ ಅವಧಿಗೆ ಒಟ್ಟು ₹₹203 ಕೋಟಿ ವೆಚ್ಚದ ತಂತ್ರಜ್ಞಾನ ಅಭಿವೃದ್ಧಿ ಮತ್ತು ಹೂಡಿಕೆ ಉತ್ತೇಜನ (ಟಿಡಿಐಪಿ) ಯೋಜನೆಯು, ಸ್ಥಳೀಯ ದೂರಸಂಪರ್ಕ ತಂತ್ರಜ್ಞಾನ ಅಭಿವೃದ್ಧಿ, ನಾವೀನ್ಯತೆ ಮತ್ತು ಜಾಗತಿಕ ಮಾನದಂಡಗಳನ್ನು ಉತ್ತೇಜಿಸಲು ದೂರಸಂಪರ್ಕ ಇಲಾಖೆಯ ಒಂದು ಉಪಕ್ರಮವಾಗಿದೆ. ಈ ಯೋಜನೆಯು ನವೋದ್ಯಮಗಳು, ಎಂ ಎಸ್ ಎಂ ಇ ಗಳು, ಶಿಕ್ಷಣ ತಜ್ಞರು, ಉದ್ಯಮಗಳು ಮತ್ತು ಮಾನದಂಡಗಳ ಅಭಿವೃದ್ಧಿ ಸಂಸ್ಥೆಗಳಿಗೆ ಮಾನದಂಡಗಳ ಅಭಿವೃದ್ಧಿ, ಪರೀಕ್ಷೆ ಮತ್ತು ಪ್ರಮಾಣೀಕರಣ, ವಾಣಿಜ್ಯೀಕರಣ ಮತ್ತು ಜಾಗತಿಕ ಮಾನದಂಡಗಳ ಸಂಸ್ಥೆಗಳಲ್ಲಿ ಭಾಗವಹಿಸುವಿಕೆಯನ್ನು ಬಲಪಡಿಸಲು ಉದ್ದೇಶಿತ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಭಾರತ್ 6ಜಿ ಮಿಷನ್ ನ ದೃಷ್ಟಿಕೋನವನ್ನು ಮುನ್ನಡೆಸುವಾಗ, ಸುಧಾರಿತ 5ಜಿ ಮತ್ತು 6ಜಿ ಸೇರಿದಂತೆ ಮುಂದಿನ ಪೀಳಿಗೆಯ ದೂರಸಂಪರ್ಕ ತಂತ್ರಜ್ಞಾನಗಳಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಇದನ್ನು ಸಮಗ್ರ ಬೆಂಬಲ ಚೌಕಟ್ಟಾಗಿ ವಿನ್ಯಾಸಗೊಳಿಸಲಾಗಿದೆ.
ವಿವರವಾದ ಮಾಹಿತಿ ಮತ್ತು ಯೋಜನೆಯ ಮಾರ್ಗಸೂಚಿಗಳಿಗಾಗಿ, ದಯವಿಟ್ಟು ಭೇಟಿ ನೀಡಿ:
https://www.dot.gov.in/offerings/schemes-and-services/details/technology-development-investment-promotion-tdip-scheme-EDOwITNtQWa
Follow DoT handles for more: -
X - https://x.com/DoT_India
Insta- https://www.instagram.com/department_of_telecom?igsh=MXUxbHFjd3llZTU0YQ==
Fb - https://www.facebook.com/DoTIndia
Youtube: https://youtube.com/@departmentoftelecom?si=DALnhYkt89U5jAaa
*****
(रिलीज़ आईडी: 2283763)
आगंतुक पटल : 18