ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಈರುಳ್ಳಿ ಖರೀದಿ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ ಶೇ.13 ರಷ್ಟು ಹೆಚ್ಚಿಸಿದ ಸರ್ಕಾರ; ಆ ಮೂಲಕ ಈರುಳ್ಳಿ ಬೆಳೆಗಾರರಿಗೆ ಉತ್ತಮ ಆದಾಯವನ್ನು ಖಾತ್ರಿಪಡಿಸಿದೆ ಮತ್ತು ಕಾಪು ದಾಸ್ತಾನು ಬಲಪಡಿಸಿದೆ

प्रविष्टि तिथि: 04 JUL 2026 12:47PM by PIB Bengaluru

ಸರ್ಕಾರವು ಬೆಲೆ ಸ್ಥಿರೀಕರಣ ಕಾಪು ದಾಸ್ತಾನಿಗಾಗಿ ಈರುಳ್ಳಿಯ ಖರೀದಿ ಬೆಲೆಯನ್ನು ಪ್ರತಿ ಕ್ವಿಂಟಾಲ್‌ಗೆ 1,875 ರೂ.ನಿಂದ 2,125 ರೂ.ಗೆ, ಅಂದರೆ ಶೇ.13 ರಷ್ಟು ಹೆಚ್ಚಿಸಿದೆ. ಪರಿಷ್ಕೃತ ಖರೀದಿ ಬೆಲೆ 4 ಜುಲೈ 2026ರಿಂದ ಜಾರಿಗೆ ಬರಲಿದೆ. ಸರ್ಕಾರದ ಬೆಲೆ ಸ್ಥಿರೀಕರಣ ಕಾಪು ದಾಸ್ತಾನಿಗಾಗಿ ʻನಾಫೆಡ್ʼ ಮತ್ತು ʻಎನ್‌ಸಿಸಿಎಫ್ʼ ಮೂಲಕ ಈರುಳ್ಳಿ ಖರೀದಿ ಪ್ರಗತಿಯಲ್ಲಿದೆ. ಪರಿಷ್ಕೃತ ಖರೀದಿ ಬೆಲೆಯು ಈರುಳ್ಳಿ ಬೆಳೆಗಾರರಿಗೆ ಉತ್ತಮ ಆದಾಯವನ್ನು ಖಾತ್ರಿಪಡಿಸುತ್ತದೆ ಮತ್ತು ಜೊತೆಗೆ ಕಾಪು ದಾಸ್ತಾನು ಪ್ರಯತ್ನಗಳನ್ನು ಬೆಂಬಲಿಸುತ್ತದೆ.

2025-26ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಎರಡನೇ ಮುಂಗಡ ಅಂದಾಜಿನ ಪ್ರಕಾರ, ಈರುಳ್ಳಿ ಉತ್ಪಾದನೆಯನ್ನು 307.37 ಲಕ್ಷ ಮೆಟ್ರಿಕ್ ಟನ್ (ಎಲ್ಎಂಟಿ) ಎಂದು ಅಂದಾಜಿಸಲಾಗಿದೆ. 2024-25ರಲ್ಲಿ 307.67 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗೆ ಇದನ್ನು ಹೋಲಿಸಬಹುದಾಗಿದೆ. ಉತ್ಪಾದನಾ ಅಂದಾಜುಗಳ ಪ್ರಕಾರ, ಈರುಳ್ಳಿಯ ಒಟ್ಟಾರೆ ಲಭ್ಯತೆಯು ಈ ಹಂತದಲ್ಲಿ ಕಳವಳಕಾರಿಯಾಗಿಲ್ಲ, ಆದರೂ ಋತುಮಾನ ಆಧರಿತ ಸಾಮಾನ್ಯ ಬೆಲೆ ಏರಿಕೆಗೆ ಅನುಗುಣವಾಗಿ ಬೆಲೆಗಳು ಹೆಚ್ಚಾಗುವ ನಿರೀಕ್ಷೆಯಿದೆ.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಪ್ರಸ್ತುತ ದಾಸ್ತಾನು ಮಟ್ಟವು ಸಮರ್ಪಕವಾಗಿದೆ. ಪ್ರಸ್ತುತ, ಈರುಳ್ಳಿಯ ದಾಸ್ತಾನು ಕೊರತೆಯ ಯಾವುದೇ ಸೂಚನೆಗಳಿಲ್ಲ.

ಅಖಿಲ ಭಾರತ ಮಟ್ಟದಲ್ಲಿ ಮಂಡಿಗಳಿಗೆ ದೈನಂದಿನ ಈರುಳ್ಳಿ ಆವಕವು 50,000 ಮೆಟ್ರಿಕ್ ಟನ್‌ಗಿಂತ (ಎಂಟಿ) ಹೆಚ್ಚಾಗಿದ್ದು, ದೃಢವಾಗಿದೆ. ಇದೇವೇಳೆ, ಮಹಾರಾಷ್ಟ್ರದಲ್ಲಿ ಮಂಡಿಗಳಿಗೆ ಈರುಳ್ಳಿ ಆವಕವು 30,000 ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಾಗಿದ್ದು, ಸರಾಸರಿ ಮಾದರಿ ಬೆಲೆಗಳು ಪ್ರತಿ ಕೆ.ಜಿ.ಗೆ ಸುಮಾರು 18 ರೂ. ನಷ್ಟಿದೆ. ಉತ್ತಮ-ಗುಣಮಟ್ಟದ ಈರುಳ್ಳಿ ದಾಸ್ತಾನು ಮುಂದುವರಿಯಲಿದ್ದು, ಪೂರೈಕೆ ಕಡಿಮೆಯಾದ ಅವಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಖಿಲ ಭಾರತ ಸರಾಸರಿ ಚಿಲ್ಲರೆ ದರ ಪ್ರತಿ ಕೆ.ಜಿ.ಗೆ 31 ರೂ. ಆಗಿದೆ.

ಮುಂಗಾರು ಆಗಮನದ ವಿಳಂಬ ಮತ್ತು ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಿಂದಾಗಿ ವ್ಯಾಪಾರಿಗಳ ಒಂದು ವರ್ಗವು ಊಹಾಪೋಹದಲ್ಲಿ ಮುಂಗಡವಾಗಿ ಈರುಳ್ಳಿ ಖರೀದಿಗೆ ಮುಂದಾಗಿದೆ.  ಆದರೂ ಪ್ರಮುಖ ಬಳಕೆ ಕೇಂದ್ರಗಳಲ್ಲಿ ಚಾಲ್ತಿಯಲ್ಲಿರುವ ಬೆಲೆ ಮಟ್ಟದಲ್ಲಿ ಯಾವುದೇ ಗಮನಾರ್ಹ ಬೇಡಿಕೆ ಕಂಡುಬಂದಿಲ್ಲ. ಗ್ರಾಹಕ ಮಾರುಕಟ್ಟೆಗಳಲ್ಲಿನ ಸ್ಥಿರತೆಯ ಹೊರತಾಗಿಯೂ, ನಾಸಿಕ್ ಮತ್ತು ಮಧ್ಯಪ್ರದೇಶದ ಕೆಲವು ಉತ್ಪಾದನಾ ಕೇಂದ್ರಗಳಲ್ಲಿ ಬೆಲೆ ಹೆಚ್ಚಳ ನಿರೀಕ್ಷೆಯಲ್ಲಿ ಮುಂಗಡ ಖರೀದಿ ಚಟುವಟಿಕೆ ಹೆಚ್ಚುತ್ತಿದೆ.  ಬೇಡಿಕೆಗಿಂತ ಹೆಚ್ಚಾಗಿ, ಭವಿಷ್ಯದ ಮಾರುಕಟ್ಟೆ ಚೇತರಿಕೆಯ ನಿರೀಕ್ಷೆಗಳ ಮೇಲೆ ಈ ಖರೀದಿ ನಡೆಯುತ್ತಿದೆ.

ಈರುಳ್ಳಿ ರಫ್ತು ಸಾಮಾನ್ಯವಾಗಿದ್ದು ಜೂನ್ 2026ರಲ್ಲಿ ಸುಮಾರು 1.50 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ. ಆದಾಗ್ಯೂ, ಈರುಳ್ಳಿ ರಫ್ತು ವೇಗವು ಅಲ್ಪಾವಧಿಗೆ ನಿಧಾನವಾಗಬಹುದು ಎಂದು ವ್ಯಾಪಾರಿಗಳು ನಿರೀಕ್ಷಿಸಿದ್ದಾರೆ.  ಏಕೆಂದರೆ, ಕೊಲ್ಲಿ ದೇಶಗಳು, ಶ್ರೀಲಂಕಾ ಮತ್ತು ಪೂರ್ವಪ್ರಾಚ್ಯದಂತಹ ಪ್ರಮುಖ ರಫ್ತು ತಾಣಗಲ್ಲಿ ಪಾಕಿಸ್ತಾನ ಮತ್ತು ಚೀನಾದಲ್ಲಿ ಬೆಳೆದ ತಾಜಾ ಈರುಳ್ಳಿ ಫಸಲು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.

ಮಹಾರಾಷ್ಟ್ರದ ನಾಸಿಕ್ ಪ್ರದೇಶದಲ್ಲಿ ಖಾರಿಫ್ ಬಿತ್ತನೆಯಲ್ಲಿ 15 ದಿನಗಳ ವಿಳಂಬ ವರದಿಯಾಗಿದ್ದರೆ, ಕರ್ನಾಟಕದ ಚಿತ್ರದುರ್ಗ ಮತ್ತು ಚಳ್ಳಕೆರೆ ಪ್ರದೇಶದಲ್ಲಿ ಬಿತ್ತನೆ ಪ್ರಗತಿಯು ವಾಡಿಕೆಗಿಂತ ಶೇಕಡಾ 60 ರಷ್ಟಿದೆ ಎಂದು ಅಂದಾಜಿಸಲಾಗಿದೆ.

 

*****


(रिलीज़ आईडी: 2281008) आगंतुक पटल : 17
इस विज्ञप्ति को इन भाषाओं में पढ़ें: English , Marathi , हिन्दी , Gujarati , Tamil