ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ಕರ್ನಾಟಕದ ಬೆಂಗಳೂರಿನಲ್ಲಿರುವ ಐಟಿ ಕಂಪನಿಯೊಂದರ ಶಿಶುವಿಹಾರದಲ್ಲಿ ದಾದಿಯರು ಪುಟ್ಟ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡಿರುವುದಾಗಿ ವರದಿಯಾದ ಘಟನೆಗಳ ಬಗ್ಗೆ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಯಿಂದ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು
ಕರ್ನಾಟಕದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ, ಎರಡು ವಾರಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಸೂಚನೆ
प्रविष्टि तिथि:
03 JUL 2026 5:30PM by PIB Bengaluru
ಕರ್ನಾಟಕದ ಬೆಂಗಳೂರಿನಲ್ಲಿರುವ ಐಟಿ ಕಂಪನಿಯೊಂದರ ಆವರಣದಲ್ಲಿ ನಡೆಸುತ್ತಿರುವ ಶಿಶುವಿಹಾರದಲ್ಲಿ ಕೆಲವು ಪುಟ್ಟ ಮಕ್ಕಳನ್ನು ದಾದಿಯರು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬ ಮಾಧ್ಯಮ ವರದಿಯನ್ನಾಧರಿಸಿ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ), ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ. ಕ್ಯಾಂಪಸ್ ನಲ್ಲಿರುವ ಕಂಪೆನಿಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ತಮ್ಮ ಮಕ್ಕಳನ್ನು ಈ ಶಿಶುವಿಹಾರದಲ್ಲಿ ಬಿಡುತ್ತಿದ್ದು, ಈ ಮಕ್ಕಳ ಮೇಲೆ ಕ್ರೌರ್ಯ ಎಸಗಿರುವ ವಿಡಿಯೋಗಳು ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಯೊಬ್ಬರಿಗೆ ಸ್ವೀಕೃತವಾದ ನಂತರ ಘಟನೆಯು ಬೆಳಕಿಗೆ ಬಂದಿದೆ.
ಮಾಧ್ಯಮ ವರದಿಯ ಅಂಶಗಳು ನಿಜವೇ ಆಗಿದ್ದರೆ, ಅವು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಲಿವೆ ಎಂದು ಹೇಳಿರುವ ಆಯೋಗವು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿ, ಎರಡು ವಾರಗಳಲ್ಲಿ ಈ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸೂಚಿಸಿದೆ.
2026ರ ಜುಲೈ 2 ರಂದು ಪ್ರಸಾರವಾದ ಮಾಧ್ಯಮ ವರದಿಯ ಪ್ರಕಾರ, ಈ ವಿಡಿಯೋದಲ್ಲಿ ದಾದಿಯರು ಮಕ್ಕಳನ್ನು ವಾಷಿಂಗ್ ಮಷೀನ್ ಒಳಗೆ ಇರಿಸುವುದು, ಟಾಯ್ಲೆಟ್ ಜೆಟ್ ಸ್ಪ್ರೇ ನಿಂದ ಬಾಯಿಗೆ ನೀರನ್ನು ಸಿಂಪಡಿಸುವುದು; ಶೌಚಾಲಯದಲ್ಲಿ ಕೂಡಿ ಹಾಕಿ ಬೀಗ ಹಾಕುವ ಮೂಲಕ ಮಕ್ಕಳನ್ನು ಮೌನವಾಗಿಸುವ ದೃಶ್ಯಗಳಿವೆ. ಮಕ್ಕಳು ಅಳಲಾರಂಭಿಸಿದರೆ ಪಾಶ್ಚಿಮಾತ್ಯ ಶೈಲಿಯ ಕಮೋಡ್ ಗಳಲ್ಲಿ ಕುಳಿತುಕೊಳ್ಳುವಂತೆ ಬಲವಂತ ಮಾಡುತ್ತಾ ಸುಮ್ಮನಿರುವಂತೆ ಬೆದರಿಸುವ ದೃಶ್ಯವೂ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಿಶುವಿಹಾರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
******
(रिलीज़ आईडी: 2280948)
आगंतुक पटल : 34