ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಮುಂಬೈನಲ್ಲಿ ನೂತನ ಪರೀಕ್ಷಾ ಸೌಲಭ್ಯಗಳನ್ನು ಉದ್ಘಾಟಿಸಿದ ಮತ್ತು ರಾಷ್ಟ್ರೀಯ ಪರೀಕ್ಷಾ ಭವನದ ಮೂಲಸೌಕರ್ಯ ವಿಸ್ತರಣೆಗೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಭಾರತದ ಗುಣಮಟ್ಟ ಖಾತರಿ ಪರಿಸರ ವ್ಯವಸ್ಥೆಯನ್ನು ಬಲಪಡಿಸಲಿರುವ ಹಾಗೂ ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ವೃದ್ಧಿಸಲಿರುವ ನೂತನ ಪರೀಕ್ಷಾ ಸೌಲಭ್ಯಗಳು
प्रविष्टि तिथि:
19 JUN 2026 6:03PM by PIB Bengaluru
ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTH), ದೇಶದ ಗುಣಮಟ್ಟ ಭರವಸೆ ಹಾಗೂ ಪರೀಕ್ಷಾ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಇಂದು ಒಂದು ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಮುಂಬೈನ ಎನ್ ಟಿ ಎಚ್ ಪಶ್ಚಿಮ ವಲಯದ ಆವರಣಕ್ಕೆ ಇಂದು ಭೇಟಿ ನೀಡಿದರು.
ಕೇಂದ್ರ ಸಚಿವರ ಆಗಮನದೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ತದನಂತರ, ಭವಿಷ್ಯದ ಪರೀಕ್ಷಾ ಮೂಲಸೌಕರ್ಯ ವಿಸ್ತರಣಾ ಕಾಮಗಾರಿಗಳಿಗೆ ಅವರು ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಈ ಉಪಕ್ರಮವು ಕೈಗಾರಿಕೆ, ವ್ಯಾಪಾರ ಮತ್ತು ಗ್ರಾಹಕ ಕಲ್ಯಾಣವನ್ನು ಬೆಂಬಲಿಸಲು ವಿಶ್ವದರ್ಜೆಯ ಗುಣಮಟ್ಟದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರದ ನಿರಂತರ ಬದ್ಧತೆಯನ್ನು ಉಲ್ಲೇಖಿಸುತ್ತದೆ.

ತಮ್ಮ ಉದ್ಘಾಟನಾ ಭಾಷಣದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ, ಉತ್ಪನ್ನಗಳ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಲ್ಲಿ ಮತ್ತು ಸುಗಮ ವ್ಯಾಪಾರ-ವಹಿವಾಟಿಗೆ ಅನುವು ಮಾಡಿಕೊಡುವಲ್ಲಿ ದೃಢವಾದ ಪರೀಕ್ಷಾ ಮತ್ತು ಪ್ರಮಾಣೀಕರಣ ಮೂಲಸೌಕರ್ಯವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳಿದರು. ಭಾರತೀಯ ಉತ್ಪನ್ನಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ವೃದ್ಧಿಸಲು ಹಾಗೂ 'ಆತ್ಮನಿರ್ಭರ್ ಭಾರತ್' ದೃಷ್ಟಿಕೋನವನ್ನು ಮುನ್ನಡೆಸಲು ದೇಶದ ಗುಣಮಟ್ಟದ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯಗತ್ಯ ಎಂದು ತಿಳಿಸಿದರು.

ದೇಶದ ವಿವಿಧ ಪ್ರದೇಶಗಳಲ್ಲಿ ಅತ್ಯಾಧುನಿಕ ಪರೀಕ್ಷಾ ಸೌಲಭ್ಯಗಳನ್ನು ವಿಸ್ತರಿಸುವ ಹಾಗೂ ಕೈಗಾರಿಕೆಗಳು ಮತ್ತು ಗ್ರಾಹಕರ ಸನಿಹಕ್ಕೆ ಪರೀಕ್ಷಾ ಸೇವೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ರಾಷ್ಟ್ರೀಯ ಪರೀಕ್ಷಾ ಭವನ (NTH) ಮಾಡುತ್ತಿರುವ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು. ತರುವಾಯ ಅವರು ಮುಂಬೈನ NTH ಪ್ರಯೋಗಾಲಯಗಳಿಗೆ ಭೇಟಿ ನೀಡಿದರು ಮತ್ತು ಸಂಸ್ಥೆಯ ಪರೀಕ್ಷಾ ಸಾಮರ್ಥ್ಯಗಳು ಹಾಗೂ ಪ್ರಸ್ತುತ ನಡೆಯುತ್ತಿರುವ ಆಧುನೀಕರಣದ ಉಪಕ್ರಮಗಳನ್ನು ಪರಿಶೀಲಿಸಲು ವಿಜ್ಞಾನಿಗಳು, ತಾಂತ್ರಿಕ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಂಬೈ ವಾಯುವ್ಯ ಕ್ಷೇತ್ರದ ಸಂಸದರಾದ ಶ್ರೀ ರವೀಂದ್ರ ವಾಯ್ಕರ್ ಅವರು, ಕೈಗಾರಿಕಾ ಅಭಿವೃದ್ಧಿ ಮತ್ತು ಗ್ರಾಹಕರ ಕಲ್ಯಾಣವನ್ನು ಉತ್ತೇಜಿಸುವಲ್ಲಿ ದೃಢವಾದ ಗುಣಮಟ್ಟದ ಮೂಲಸೌಕರ್ಯದ ಮಹತ್ವವನ್ನು ಎತ್ತಿ ತೋರಿಸಿದರು. ಅಲ್ಲದೆ, ದೇಶದ ಪರೀಕ್ಷಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಉದಯೋನ್ಮುಖ ವಲಯಗಳಿಗೆ ಗುಣಮಟ್ಟ ಖಾತರಿ ಸೇವೆಗಳನ್ನು ವಿಸ್ತರಿಸುವಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ರಾಷ್ಟ್ರೀಯ ಪರೀಕ್ಷಾ ಭವನದ ಪ್ರಯತ್ನಗಳನ್ನು ಅವರು ಮೆಚ್ಚಿದರು.

ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಈ ಕೆಳಗಿನ ಸೌಲಭ್ಯಗಳನ್ನು ಉದ್ಘಾಟಿಸಿದರು:
- ಮುಂಬೈನ ರಾಷ್ಟ್ರೀಯ ಪರೀಕ್ಷಾ ಭವನದಲ್ಲಿ ಮೈಕ್ರೋಬಯಾಲಜಿಕಲ್ (ಸೂಕ್ಷ್ಮಜೀವಿ ವಿಜ್ಞಾನ) ಪರೀಕ್ಷಾ ಪ್ರಯೋಗಾಲಯ;
- ಗಾಜಿಯಾಬಾದ್ನ ರಾಷ್ಟ್ರೀಯ ಪರೀಕ್ಷಾ ಭವನದಲ್ಲಿ (ಉತ್ತರ ವಲಯ) ಪಾದರಕ್ಷೆಗಳ (Shoe) ಪರೀಕ್ಷಾ ಸೌಲಭ್ಯ; ಮತ್ತು
- ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಔರಿಕ್ (AURIC) ಸಿಟಿಯ ಎನ್ ಐ ಸಿ ಡಿ ಸಿ (NICDC) ಯಲ್ಲಿರುವ ಎನ್ ಟಿ ಹೆಚ್- ಔರಿಕ್ ಉಪಕೇಂದ್ರ (NTH-AURIC Satellite Centre).
ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಮತ್ತು ಹೆಚ್ಚುವರಿ ಕಾರ್ಯದರ್ಶಿ (ಗ್ರಾಹಕ ವ್ಯವಹಾರಗಳು) ಶ್ರೀಮತಿ ರಿಚಾ ಮಿಶ್ರಾ ಅವರು, ಉತ್ಪನ್ನಗಳ ಗುಣಮಟ್ಟವನ್ನು ಖಾತರಿಪಡಿಸುವಲ್ಲಿ, ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಮತ್ತು ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ವೃದ್ಧಿಸುವಲ್ಲಿ NTH ವಹಿಸುವ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ರಾಷ್ಟ್ರೀಯ ಪರೀಕ್ಷಾ ಭವನದ ಮಹಾನಿರ್ದೇಶಕರಾದ ಡಾ. ಅಲೋಕ್ ಕುಮಾರ್ ಶ್ರೀವಾಸ್ತವ ಅವರು, NTH ನ ವಿಸ್ತೃತಗೊಳ್ಳುತ್ತಿರುವ ಸಾಮರ್ಥ್ಯಗಳು, ಪ್ರಸ್ತುತ ನಡೆಯುತ್ತಿರುವ ಉಪಕ್ರಮಗಳು ಮತ್ತು ಭವಿಷ್ಯದ ಕಾರ್ಯತಂತ್ರದ ರೂಪುರೇಷೆಗಳ ಕುರಿತು ಸಮಗ್ರ ನೋಟವನ್ನು ಒದಗಿಸಿದರು.
ನೂತನವಾಗಿ ಉದ್ಘಾಟನೆಗೊಂಡ ಈ ಸೌಲಭ್ಯಗಳು ಪ್ರಮುಖ ವಲಯಗಳಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಿವೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳ ಪಾಲನೆಯನ್ನು ಉತ್ತೇಜಿಸಲಿವೆ ಹಾಗೂ ಗ್ರಾಹಕರ ಸುರಕ್ಷತೆ, ಗುಣಮಟ್ಟದ ಖಾತರಿ ಮತ್ತು ಕೈಗಾರಿಕಾ ಸ್ಪರ್ಧಾತ್ಮಕತೆಯ ಉದ್ದೇಶಗಳಿಗೆ ಬೆಂಬಲ ನೀಡಲಿವೆ ಎಂದು ನಿರೀಕ್ಷಿಸಲಾಗಿದೆ.
ಒಂದು ಶತಮಾನಕ್ಕೂ ಮೀರಿದ ಉತ್ಕೃಷ್ಟತೆಯ ಹಿನ್ನೆಲೆಯುಳ್ಳ ರಾಷ್ಟ್ರೀಯ ಪರೀಕ್ಷಾ ಭವನವು, ವಿಶ್ವಾಸಾರ್ಹ, ವೈಜ್ಞಾನಿಕ ಮತ್ತು ಜಾಗತಿಕ ಮಟ್ಟದ ಮಾನದಂಡಗಳ ಪರೀಕ್ಷಾ ಸೇವೆಗಳನ್ನು ಒದಗಿಸುವ ಮೂಲಕ ಕೈಗಾರಿಕೆಗಳನ್ನು ಸಬಲೀಕರಣಗೊಳಿಸುತ್ತಾ, ಗ್ರಾಹಕರನ್ನು ರಕ್ಷಿಸುತ್ತಾ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಬೆಂಬಲ ನೀಡುತ್ತಾ, ಭಾರತದ ಗುಣಮಟ್ಟದ ಮೂಲಸೌಕರ್ಯದ ಮುಂಚೂಣಿಯಲ್ಲಿ ಮುಂದುವರಿದಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯ ಅಡಿಯಲ್ಲಿ ಭಾರತದ ಗುಣಮಟ್ಟ ಖಾತರಿ, ಉತ್ಪನ್ನ ಪರೀಕ್ಷೆ ಮತ್ತು ಗ್ರಾಹಕರ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಒಂದು ಮಹತ್ವದ ಹೆಜ್ಜೆಯಾಗಿ ಗುರುತಿಸಿಕೊಂಡಿದೆ.
*****
(रिलीज़ आईडी: 2275454)
आगंतुक पटल : 12