ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ವರ್ಚುವಲ್ ಮೂಲಕ "ಉತ್ತಮವಾಗಿ ಕಾರ್ಯನಿರ್ವಹಿಸುವ ಆರೈಕೆ ಆರ್ಥಿಕತೆಯನ್ನು  ಸೃಷ್ಟಿಸುವುದು" ಎಂಬ ವಿಷಯದ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಿತು


ಕೇಂದ್ರ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರಿಂದ  ಹಿರಿಯ ನಾಗರಿಕರಿಗಾಗಿ 'ಜೀವನ್' (JEEVAN) ಮೊಬೈಲ್ ಆ್ಯಪ್ ಮತ್ತು ವೃದ್ಧಾಪ್ಯದ ಆರೈಕೆದಾರರಿಗಾಗಿ (Geriatric Caregivers) 'ಶತಾಯು' (SHATAYU) ಡ್ಯಾಶ್ಬೋರ್ಡ್ ಲೋಕಾರ್ಪಣೆ

ಪ್ರಕಟಣಾ ದಿನಾಂಕ: 22 MAY 2026 6:34PM by PIB Bengaluru

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು 22 ಮೇ 2026 ರಂದು " ಉತ್ತಮವಾಗಿ ಕಾರ್ಯನಿರ್ವಹಿಸುವ ಆರೈಕೆ ಆರ್ಥಿಕತೆಯನ್ನು ಸೃಷ್ಟಿಸುವುದು" ಎನ್ನುವ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ವರ್ಚುವಲ್ ಮೂಲಕ ಯಶಸ್ವಿಯಾಗಿ ಆಯೋಜಿಸಿತು. ದೇಶದಲ್ಲಿ ಆರೈಕೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಚರ್ಚಿಸಲು ಕೇಂದ್ರ ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಪ್ರತಿನಿಧಿಗಳು, ವಿಷಯ ತಜ್ಞರು ಮತ್ತು ಶಿಕ್ಷಣ ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಕಾರ್ಯಾಗಾರವು ಜಂಟಿ ಕಾರ್ಯದರ್ಶಿಗಳ (ಹಿರಿಯ ನಾಗರಿಕರು) ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು. ನಂತರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್ ಅವರು ಮಾತನಾಡಿ, ಹಿರಿಯ ನಾಗರಿಕರಿಗಾಗಿ ಸ್ಪಂದನಾಶೀಲ, ಸಮಗ್ರ ಮತ್ತು ಸುಸ್ಥಿರ ಆರೈಕೆ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿಹೇಳಿದರು.

ಗೌರವಾನ್ವಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ಬಿ. ಎಲ್. ವರ್ಮಾ ಮತ್ತು ಗೌರವಾನ್ವಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಶ್ರೀ ರಾಮದಾಸ್ ಆಠವಲೆ ಅವರೂ ಸಹ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದರು. ದೀರ್ಘಕಾಲೀನ ಆರೈಕೆ ವ್ಯವಸ್ಥೆಗಳು, ಆರೈಕೆದಾರರ ಬೆಂಬಲ ಮತ್ತು ಸಮಗ್ರ ಜೀವನೋಪಾಯದ ಅವಕಾಶಗಳನ್ನು ಬಲಪಡಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಅವರು ಉಲ್ಲೇಖಿಸಿದರು.

ಗೌರವಾನ್ವಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಹಿರಿಯ ನಾಗರಿಕರಿಗೆ ಕಲ್ಯಾಣ ಸೇವೆಗಳು, ಮಾಹಿತಿ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸುಲಭವಾಗಿ ಒದಗಿಸಲು 'ಜೀವನ್' (JEEVAN) (ಜಂಟಿ ಹಿರಿಯ ಸಬಲೀಕರಣ ಮತ್ತು ವರ್ಚುವಲ್ ಸಹಾಯ ಜಾಲ) ಮೊಬೈಲ್ ಆ್ಯಪ್ ಅನ್ನು ಬಿಡುಗಡೆ ಮಾಡಿದರು. ಇದರೊಂದಿಗೆ, ದೇಶಾದ್ಯಂತ ತರಬೇತಿ ಪಡೆದ ವೃದ್ಧಾಪ್ಯದ ಆರೈಕೆದಾರರ ಮಾಹಿತಿಗಾಗಿ ಕೇಂದ್ರೀಕೃತ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸಲು 'ಶತಾಯು' - SHATAYU (ಸೀನಿಯರ್ ಹೋಲಿಸ್ಟಿಕ್-ಕೇರ್ ಅಸಿಸ್ಟೆನ್ಸ್ ಮತ್ತು ಟ್ರೈನಿಂಗ್ ಫಾರ್ ಯುವರ್ ಯುಟಿಲಿಟಿ) ಡ್ಯಾಶ್ ಬೋರ್ಡ್ ಅನ್ನು ಬಿಡುಗಡೆ ಮಾಡಿದರು.

ಗೌರವಾನ್ವಿತ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಮೊದಲು ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು, ನಂತರ ʻವ್ಯಸನ ಮುಕ್ತ ಭಾರತʼದ ಪ್ರತಿಜ್ಞೆಯನ್ನು ಬೋಧಿಸಿದರು.

ತಮ್ಮ ಭಾಷಣದಲ್ಲಿ ಗೌರವಾನ್ವಿತ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಬದಲಾಗುತ್ತಿರುವ ಸಾಮಾಜಿಕ ರಚನೆಗಳು, ಪರಿವರ್ತನೆಗೊಳ್ಳುತ್ತಿರುವ ಕೌಟುಂಬಿಕ ಪರಿಸರ ವ್ಯವಸ್ಥೆಗಳು ಮತ್ತು ದೇಶದಲ್ಲಿ ಆರೈಕೆದಾರರ) ಹೆಚ್ಚುತ್ತಿರುವ ಅಗತ್ಯವನ್ನು ಉಲ್ಲೇಖಿಸಿದರು. ಆರೈಕೆದಾರರಿಗೆ ತರಬೇತಿ ನೀಡುವುದರ ಜೊತೆಗೆ ಅವರು ಹೆಚ್ಚು ಸಹಾನುಭೂತಿ ಹೊಂದಿರುವಂತೆ ಸಂವೇದನಾಶೀಲರನ್ನಾಗಿಸುವ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಗೌರವಾನ್ವಿತ ಸಚಿವರು ಒತ್ತಿಹೇಳಿದರು.

ದೇಶದಲ್ಲಿ ದೃಢವಾದ ಆರೈಕೆ ಪರಿಸರ ವ್ಯವಸ್ಥೆಯ ಅಭಿವೃದ್ಧಿಯು ಮಹಿಳಾ ಸಬಲೀಕರಣವನ್ನು ಬಲಪಡಿಸಲು ಮತ್ತು ಜಾಗತಿಕವಾಗಿ ಆರೈಕೆ ಸೇವೆಗಳ ರಫ್ತನ್ನು ವಿಸ್ತರಿಸಲು ಅಪಾರ ಅವಕಾಶಗಳನ್ನು ಒದಗಿಸುತ್ತದೆ ಎಂದು ಗೌರವಾನ್ವಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ತಿಳಿಸಿದರು. ಕಾರ್ಯಾಗಾರದ ಚಿಂತನಶೀಲ ವಿಷಯಗಳನ್ನು ಶ್ಲಾಘಿಸಿದ ಅವರು, ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಕಾರ್ಯಾಗಾರದ ಉದ್ದೇಶಗಳನ್ನು ಸಾಧಿಸಲು ಪ್ರಾಯೋಗಿಕ, ಕ್ರಿಯಾಶೀಲ ಪರಿಹಾರಗಳನ್ನು ಪ್ರಸ್ತಾಪಿಸಲು ಭಾಗವಹಿಸುವವರಿಗೆ ಕರೆ ನೀಡಿದರು.

ಉದ್ಘಾಟನಾ ಅಧಿವೇಶನದ ನಂತರ, ಆರೈಕೆ ಆರ್ಥಿಕತೆಯ ಪ್ರಮುಖ ಅಂಶಗಳ ಬಗ್ಗೆ ಆಳವಾದ ಚರ್ಚೆಗಾಗಿ ಭಾಗವಹಿಸುವವರನ್ನು ನಾಲ್ಕು ವಿಷಯಾಧಾರಿತ ಚರ್ಚಾ ಗುಂಪುಗಳಾಗಿ ವಿಂಗಡಿಸಲಾಯಿತು. ಇಲಾಖೆಯ ಹಿರಿಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿದ್ದ ಈ ನಾಲ್ಕು ಗುಂಪುಗಳಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು, ವಿಷಯ ತಜ್ಞರು ಮತ್ತು ಶಿಕ್ಷಣ ತಜ್ಞರು ಸೇರಿದ್ದರು. ಈ ಗುಂಪುಗಳು ಈ ಕೆಳಗಿನ ವಿಷಯಗಳ ಕುರಿತು ಚರ್ಚಿಸಿದವು:

  1. ಆರೈಕೆ ಕೆಲಸದ ಮೌಲ್ಯಮಾಪನ ಮತ್ತು ನಗದೀಕರಣ: ಸಾಮಾಜಿಕ ಒಳಿತಿನಿಂದ ಆರ್ಥಿಕ ಆಸ್ತಿಯವರೆಗೆ  
  2. ಮಹಿಳಾ ಸಬಲೀಕರಣ ಮತ್ತು ಸಮಗ್ರ ಜೀವನೋಪಾಯದ ಹಾದಿಯಾಗಿ ಆರೈಕೆ ಆರ್ಥಿಕತೆ
  3. ಆರೈಕೆ ಕಾರ್ಯಪಡೆಯ ಬಲವರ್ಧನೆ:  ಕೌಶಲ್ಯಗಳು, ಮಾನದಂಡಗಳು ಮತ್ತು ಚಲನಶೀಲತೆ  
  4. ಆರೈಕೆ ಆರ್ಥಿಕತೆಯನ್ನು ಅರಿಯುವುದು: ದೀರ್ಘಕಾಲೀನ ಆರೈಕೆಗೆ ಧನಸಹಾಯ  

ಭಾಗವಹಿಸುವವರು ತಮಗೆ ನೀಡಲಾದ ವಿಷಯಗಳ ಕುರಿತು ಯಶಸ್ವಿಯಾಗಿ ಚರ್ಚಿಸಿದರು ಮತ್ತು ರಾಜ್ಯಗಳು ಮತ್ತುಕೇಂದ್ರಾಡಳಿತ ಪ್ರದೇಶಗಳು ತಮ್ಮ ಆಂತರಿಕ ಕಾರ್ಯಾಗಾರಗಳನ್ನು ನಡೆಸಲು ಈ ಕಾರ್ಯಾಗಾರದಲ್ಲಿ ಕಲಿತ ಅಂಶಗಳನ್ನು ಪ್ರಸ್ತುತಪಡಿಸಿದರು.

ಈ ಉಪಕ್ರಮವು ಭಾರತದಲ್ಲಿ ವ್ಯವಸ್ಥಿತ, ಸಮಗ್ರ ಮತ್ತು ತಂತ್ರಜ್ಞಾನ ಆಧಾರಿತ ಆರೈಕೆ ಆರ್ಥಿಕತೆಯ ಚೌಕಟ್ಟನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.

 

*****

 

 


(ಪ್ರಕಟಣೆ ಐ.ಡಿ.: 2264437) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी