ನಾಗರೀಕ ವಿಮಾನಯಾನ ಸಚಿವಾಲಯ
azadi ka amrit mahotsav

ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಅಡಿಯಲ್ಲಿ ಖಾಸಗಿ ಪಾಲುದಾರರನ್ನು ಒಳಗೊಂಡ ದೀರ್ಘಾವಧಿಯ ಪರವಾನಗಿಯ ಮೂಲಕ ನಾಗಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ದರ್ಜೆ ಮತ್ತು ಆಧುನೀಕರಣಕ್ಕೆ ಸಂಪುಟ ಅನುಮೋದನೆ

ಪ್ರಕಟಣಾ ದಿನಾಂಕ: 13 MAY 2026 3:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟವು, ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಭೂಮಿಯನ್ನು ಎಂಐಎಲ್ (ಮಿಹಾನ್ ಇಂಡಿಯಾ ಲಿಮಿಟೆಡ್) ಗೆ ನೀಡಲಾಗಿರುವ ಗುತ್ತಿಗೆ ಅವಧಿಯನ್ನು 06.08.2039 ರ ನಂತರವೂ ವಿಸ್ತರಿಸಲು ಅನುಮೋದನೆ ನೀಡಿದೆ. ಇದು ವಾಣಿಜ್ಯ ಕಾರ್ಯಾಚರಣೆಯ ದಿನಾಂಕದಿಂದ (ಸಿಒಡಿ) 30 ವರ್ಷಗಳವರೆಗೆ ರಿಯಾಯಿತಿ ಪಡೆಯುವ ಸಂಸ್ಥೆಯಾದ ಜಿಎಂಆರ್ ನಾಗಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತಕ್ಕೆ (ಜಿ ಎನ್‌ ಐ ಎ ಎಲ್) ನಾಗ್ಪುರ ವಿಮಾನ ನಿಲ್ದಾಣದ ಪರವಾನಗಿ ನೀಡಲು ಎಂಐಎಲ್ ಗೆ ಅನುವು ಮಾಡಿಕೊಡುತ್ತದೆ.

ಇದು ನಾಗ್ಪುರದ ಮಲ್ಟಿ-ಮಾಡಲ್ ಇಂಟರ್ ನ್ಯಾಷನಲ್ ಕಾರ್ಗೋ ಹಬ್ ಮತ್ತು ಏರ್‌ಪೋರ್ಟ್ (ಎಂ ಐ ಎಚ್‌ ಎ ಎನ್) ಯೋಜನೆಯಡಿ ನಾಗ್ಪುರ ವಿಮಾನ ನಿಲ್ದಾಣವು ಪ್ರಾದೇಶಿಕ ವಿಮಾನಯಾನ ಕೇಂದ್ರವಾಗುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.

2009ರಲ್ಲಿ, ಎಎಐ ಮತ್ತು ಮಹಾರಾಷ್ಟ್ರ ವಿಮಾನ ನಿಲ್ದಾಣ ಅಭಿವೃದ್ಧಿ ಕಂಪನಿ ನಿಯಮಿತ (ಎಂಎಡಿಸಿ) ಕ್ರಮವಾಗಿ 49:51 ರ ಪಾಲುದಾರಿಕೆಯೊಂದಿಗೆ ಜಂಟಿ ಉದ್ಯಮ ಕಂಪನಿ (ಜೆವಿಸಿ)- ಎಂಐಎಲ್ ಅನ್ನು ರಚಿಸಿದವು. ವಿಮಾನ ನಿಲ್ದಾಣದ ಕಾರ್ಯಾಚರಣೆಗಾಗಿ 2009ರಲ್ಲಿ ಎಎಐ ನ ವಿಮಾನ ನಿಲ್ದಾಣದ ಆಸ್ತಿಗಳನ್ನು ಎಂಐಎಲ್ ಗೆ ವರ್ಗಾಯಿಸಲಾಗಿದ್ದರೂ, ಭೂ ಗಡಿ ಗುರುತಿಸುವಿಕೆಯ ಸಮಸ್ಯೆಗಳಿಂದಾಗಿ ಗುತ್ತಿಗೆ ಪತ್ರವು ವಿಳಂಬವಾಯಿತು. ತರುವಾಯ, ಎಎಐ ಭೂಮಿಯನ್ನು 06.08.2039 ರವರೆಗೆ ಎಂಐಎಲ್ ಗೆ ಗುತ್ತಿಗೆ ನೀಡಲಾಯಿತು.

2016ರಲ್ಲಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ವಹಿಸಲು ಪಾಲುದಾರರನ್ನು ಗುರುತಿಸಲು ಎಂಐಎಲ್ ಜಾಗತಿಕ ಟೆಂಡರ್ ಅನ್ನು ಆಹ್ವಾನಿಸಿತು. ಜಿಎಂಆರ್ ಏರ್‌ಪೋರ್ಟ್ಸ್ ಲಿಮಿಟೆಡ್ (ಜಿಎಎಲ್) 5.76% ರಷ್ಟು ಆದಾಯದ ಪಾಲನ್ನು ಉಲ್ಲೇಖಿಸುವ ಮೂಲಕ ಅತ್ಯಧಿಕ ಬಿಡ್ಡರ್ ಆಗಿ ಹೊರಹೊಮ್ಮಿತು. ಇದನ್ನು ನಂತರ ಒಟ್ಟು ಆದಾಯದ 14.49% ಕ್ಕೆ ಪರಿಷ್ಕರಿಸಲಾಯಿತು. ತರುವಾಯ, ಎಂಐಎಲ್ ಮಾರ್ಚ್ 2020 ರಲ್ಲಿ ಬಿಡ್ಡಿಂಗ್ ಪ್ರಕ್ರಿಯೆಯನ್ನು ರದ್ದುಗೊಳಿಸಿತು. ಈ ರದ್ದತಿಯನ್ನು ಜಿಎಎಲ್ ಗೌರವಾನ್ವಿತ ಬಾಂಬೆ ಹೈಕೋರ್ಟ್‌‌ ನಲ್ಲಿ ಪ್ರಶ್ನಿಸಿ ಯಶಸ್ವಿಯಾಯಿತು. ತದನಂತರ, ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಕೂಡ ಜಿಎಎಲ್ ಪರವಾಗಿ ತೀರ್ಪು ನೀಡಿತು. ಸೆಪ್ಟೆಂಬರ್ 27, 2024 ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಎಂಐಎಲ್ 8 ಅಕ್ಟೋಬರ್ 2024 ರಂದು 2ನೇ ಜಂಟಿ ಉದ್ಯಮ ಕಂಪನಿ (ಜೆವಿಸಿ), ಅಂದರೆ ಜಿಎಂಆರ್ ನಾಗ್ಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದೊಂದಿಗೆ ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಿತು.

ನಾಗಪುರ ವಿಮಾನ ನಿಲ್ದಾಣಕ್ಕೆ ಹೊಸ ಯುಗ:

ಎಂಐಎಲ್ ಗೆ ಗುತ್ತಿಗೆ ನೀಡಲಾದ ಎಎಐ ಭೂಮಿಯ ಗುತ್ತಿಗೆ ಅವಧಿಯನ್ನು 06.08.2039 ರ ನಂತರ ವಿಸ್ತರಿಸುವುದರೊಂದಿಗೆ, ಅದು ಈಗ ಜಿ ಎನ್‌ ಐ ಎ ಎಲ್ ನ 30 ವರ್ಷಗಳ ರಿಯಾಯಿತಿ ಅವಧಿಯೊಂದಿಗೆ ಏಕಕಾಲಕ್ಕೆ ಕೊನೆಗೊಳ್ಳುತ್ತದೆ. ಇದು ವಿಮಾನ ನಿಲ್ದಾಣವನ್ನು 2ನೇ ಜಂಟಿ ಉದ್ಯಮ ಕಂಪನಿಯಾದ ಜಿ ಎನ್‌ ಐ ಎ ಎಲ್ ಗೆ ಹಸ್ತಾಂತರಿಸಲು ದಾರಿ ಮಾಡಿಕೊಡುತ್ತದೆ. ಇದು ನಾಗ್ಪುರ ವಿಮಾನ ನಿಲ್ದಾಣಕ್ಕೆ ಬೆಳವಣಿಗೆ ಮತ್ತು ಮೂಲಸೌಕರ್ಯ ಪ್ರಗತಿಯ ಹೊಸ ಯುಗವನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ. ಖಾಸಗಿ ವಲಯದ ದಕ್ಷತೆ ಮತ್ತು ಸರ್ಕಾರದ ಮೇಲ್ವಿಚಾರಣೆಯೊಂದಿಗೆ, ವಿಮಾನ ನಿಲ್ದಾಣವು ಗಮನಾರ್ಹ ಹೂಡಿಕೆ, ಆಧುನೀಕರಣ ಮತ್ತು ಸುಧಾರಿತ ಪ್ರಯಾಣಿಕ ಮತ್ತು ಸರಕು ಸೇವೆಗಳನ್ನು ಕಾಣಲು ಸಜ್ಜಾಗಿದೆ — ಇದು ವಿಮಾನಯಾನ ಕ್ಷೇತ್ರದಲ್ಲಿ ದೃಢವಾದ ಮೂಲಸೌಕರ್ಯ ಅಭಿವೃದ್ಧಿಗಾಗಿ ಭಾರತ ಸರ್ಕಾರದ ದೂರದೃಷ್ಟಿಯಾಗಿದೆ.

ಜಿ ಎನ್‌ ಐ ಎ ಎಲ್ ನಾಗ್ಪುರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಶ್ವದರ್ಜೆಯ ಸೌಲಭ್ಯವನ್ನಾಗಿ ಪರಿವರ್ತಿಸುವ ಕಾರ್ಯವನ್ನು ಕೈಗೊಳ್ಳಲಿದೆ. ಹಂತಹಂತವಾಗಿ ಅಭಿವೃದ್ಧಿಪಡಿಸುವ ಮೂಲಕ ವಾರ್ಷಿಕವಾಗಿ 30 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಅಂತಿಮ ಸಾಮರ್ಥ್ಯವನ್ನು ತಲುಪುವ ಗುರಿಯನ್ನು ಹೊಂದಲಾಗಿದೆ, ಇದು ಮಧ್ಯ ಭಾರತದ ಪ್ರಮುಖ ವಿಮಾನ ನಿಲ್ದಾಣವಾಗಿ ಸ್ಥಾನ ಪಡೆಯಲಿದೆ. ಈ ರೂಪಾಂತರವು ವಿದರ್ಭ ಪ್ರದೇಶದ ಸಂಪರ್ಕವನ್ನು ಹೆಚ್ಚಿಸುವುದಲ್ಲದೆ, ಅದರ ಆರ್ಥಿಕ ಮೂಲಸೌಕರ್ಯವನ್ನು ಬಲಪಡಿಸುತ್ತದೆ. ಕಾರ್ಗೋ (ಸರಕು) ನಿರ್ವಹಣಾ ಸಾಮರ್ಥ್ಯಗಳೂ ಸಹ ಗಮನಾರ್ಹವಾಗಿ ಹೆಚ್ಚಲಿವೆ.

 

*****


(ಪ್ರಕಟಣೆ ಐ.ಡಿ.: 2260723) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Punjabi , Gujarati , Tamil , Malayalam