ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
“ಶ್ರಮಿಕನೇ ರಾಷ್ಟ್ರದ ವಿಶ್ವಕರ್ಮ”: ರಾಷ್ಟ್ರ ನಿರ್ಮಾಣದಲ್ಲಿ ಕಾರ್ಮಿಕರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ ಮನ್ಸುಖ್ ಮಾಂಡವೀಯ
ಡಾ. ಮನ್ಸುಖ್ ಮಾಂಡವೀಯ ಅವರಿಂದ ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇ ಎಸ್ ಐ ಸಿ (ESIC) ಆಸ್ಪತ್ರೆ ಉದ್ಘಾಟನೆ; ಕರ್ನಾಟಕದ ಬಳ್ಳಾರಿಯಲ್ಲಿ 100 ಹಾಸಿಗೆಗಳ ಇ ಎಸ್ ಐ ಸಿ ಆಸ್ಪತ್ರೆಗೆ ವರ್ಚುವಲ್ ಮೂಲಕ ಶಂಕುಸ್ಥಾಪನೆ
ಮೇ 7 ರಿಂದ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ 40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ರಾಷ್ಟ್ರವ್ಯಾಪಿ ಉಚಿತ ಆರೋಗ್ಯ ತಪಾಸಣಾ ಅಭಿಯಾನ: ಡಾ. ಮಾಂಡವೀಯ
ಶೇ. 19 ರಿಂದ ಶೇ. 64 ಕ್ಕೆ ವ್ಯಾಪ್ತಿ ಹೆಚ್ಚಳ: ಸಾಮಾಜಿಕ ಭದ್ರತೆಯಲ್ಲಿ ಭಾರತವು ಐತಿಹಾಸಿಕ ವಿಸ್ತರಣೆಗೆ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಿದ ಡಾ. ಮಾಂಡವೀಯ
ಪ್ರಕಟಣಾ ದಿನಾಂಕ:
03 MAY 2026 2:37PM by PIB Bengaluru
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು, ಕರ್ನಾಟಕದ ದೊಡ್ಡಬಳ್ಳಾಪುರದಲ್ಲಿ ನೂತನವಾಗಿ ನಿರ್ಮಿಸಲಾದ 100 ಹಾಸಿಗೆಗಳ ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ಇ ಎಸ್ ಐ ಸಿ) ಆಸ್ಪತ್ರೆಯನ್ನು ಇಂದು ಉದ್ಘಾಟಿಸಿದರು ಮತ್ತು ಇದೇ ವೇಳೆ ದೊಡ್ಡಬಳ್ಳಾಪುರದಿಂದಲೇ ಕರ್ನಾಟಕದ ಬಳ್ಳಾರಿಯಲ್ಲಿ ನಿರ್ಮಾಣವಾಗಲಿರುವ 100 ಹಾಸಿಗೆಗಳ ಇ.ಎಸ್ ಐ ಸಿ ಆಸ್ಪತ್ರೆಗೆ ವರ್ಚುವಲ್ ಆಗಿ ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಲಘು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕೇಂದ್ರ ರಾಜ್ಯ ಖಾತೆ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಮತ್ತು ಲೋಕಸಭಾ ಸದಸ್ಯರಾದ ಶ್ರೀ ಕೆ. ಸುಧಾಕರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು, ಗುಣಮಟ್ಟದ ಆರೋಗ್ಯ ಸೇವೆಯ ಲಭ್ಯತೆಯು ಕಾರ್ಮಿಕರ ಸಾಮಾಜಿಕ ಭದ್ರತೆಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. ಅವರು ಮಾತನಾಡುತ್ತಾ, “ಶ್ರಮಿಕರು ರಾಷ್ಟ್ರದ ನಿಜವಾದ ನಿರ್ಮಾಣಕಾರರು ಮತ್ತು ನಮ್ಮ ವಿಶ್ವಕರ್ಮರು. ಅವರ ಕಲ್ಯಾಣಕ್ಕಾಗಿ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಖಚಿತಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ತಿಳಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಕಾರ್ಮಿಕರ ಘನತೆ ಮತ್ತು ಸಬಲೀಕರಣವು ಆಡಳಿತ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಕೇಂದ್ರಬಿಂದುವಾಗಿದೆ ಎಂದು ಅವರು ಇದೇ ವೇಳೆ ಉಲ್ಲೇಖಿಸಿದರು.

ಕಳೆದ ಒಂದು ದಶಕದಲ್ಲಿ ಇ ಎಸ್ ಐ ಸಿ (ESIC) ವ್ಯಾಪ್ತಿಯು ಗಣನೀಯವಾಗಿ ವಿಸ್ತರಣೆಯಾಗಿರುವುದನ್ನು ಡಾ. ಮಾಂಡವಿಯಾ ಅವರು ಹೇಳಿದರು. ಸಾಮಾಜಿಕ ಭದ್ರತೆಯ ಅಡಿಯಲ್ಲಿ ವಿಮಾದಾರರ ಸಂಖ್ಯೆಯು ಸುಮಾರು 2 ಕೋಟಿಯಿಂದ 4 ಕೋಟಿಗೆ ದ್ವಿಗುಣಗೊಂಡಿದೆ ಎಂದು ಅವರು ಪ್ರತಿಪಾದಿಸಿದರು. “ದೇಶದ 40 ಕೋಟಿಗೂ ಹೆಚ್ಚು ಕಾರ್ಮಿಕರು ಈಗ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಇದು 2015 ರಲ್ಲಿ ಇದ್ದ ಶೇ. 19 ರಷ್ಟು ವ್ಯಾಪ್ತಿಯಿಂದ ಇಂದು ಶೇ. 64 ಕ್ಕಿಂತ ಹೆಚ್ಚು ಗಣನೀಯ ಏರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಗುರುತಿಸಿದೆ,” ಎಂದು ಅವರು ತಿಳಿಸಿದರು.
ಕಾರ್ಮಿಕ ಸುಧಾರಣೆಗಳ ಕುರಿತು ಮಾತನಾಡಿದ ಕೇಂದ್ರ ಸಚಿವರು, ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದರು. ಕಡ್ಡಾಯ ನೇಮಕಾತಿ ಪತ್ರಗಳನ್ನು ಪರಿಚಯಿಸಲಾಗಿದೆ, ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ಖಚಿತಪಡಿಸಲಾಗಿದೆ ಮತ್ತು ಅಪಾಯಕಾರಿ ಉದ್ಯೋಗಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಈಗ ಇ ಎಸ್ ಐ ಸಿ ವ್ಯಾಪ್ತಿಯ ಭರವಸೆ ನೀಡಲಾಗಿದೆ ಎಂದು ಅವರು ವಿವರಿಸಿದರು. ಕಾರ್ಮಿಕರ ಕುಟುಂಬಗಳಿಗೆ ವೈದ್ಯಕೀಯ ಶಿಕ್ಷಣವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲು 20 ಇ ಎಸ್ ಐ ಸಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದು ಡಾ. ಮಾಂಡವಿಯಾ ಅವರು ಮಾಹಿತಿ ನೀಡಿದರು. ವಿಮಾದಾರರ ಮಕ್ಕಳಿಗೆ ಶೇ. 40-50 ರಷ್ಟು ಸೀಟುಗಳನ್ನು ಮೀಸಲಿಡುವುದರೊಂದಿಗೆ, ಈ ಸಂಸ್ಥೆಗಳು ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಹೊಸ ಹಾದಿಗಳನ್ನು ಮತ್ತು ಅವಕಾಶಗಳನ್ನು ಕಲ್ಪಿಸಿಕೊಡುತ್ತಿವೆ.

ಮುನ್ನೆಚ್ಚರಿಕೆಯ ಆರೋಗ್ಯ ರಕ್ಷಣೆಗೆ ಒತ್ತು ನೀಡಿದ ಸಚಿವರು, ಹೊಸ ಕಾರ್ಮಿಕ ಚೌಕಟ್ಟಿನ ಅಡಿಯಲ್ಲಿ, ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು 40 ವರ್ಷಕ್ಕಿಂತ ಮೇಲ್ಪಟ್ಟ ಕಾರ್ಮಿಕರು ಕಡ್ಡಾಯ ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ಘೋಷಿಸಿದರು. ಈ ಉಪಕ್ರಮದ ಅಡಿಯಲ್ಲಿ ಕಾರ್ಮಿಕರಿಗಾಗಿ ದೇಶಾದ್ಯಂತ ಆರೋಗ್ಯ ತಪಾಸಣಾ ಅಭಿಯಾನವನ್ನು, ಬೃಹತ್ ಪ್ರಮಾಣದಲ್ಲಿ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಮೇ 7 ರಿಂದ ದೇಶಾದ್ಯಂತದ ಇಎಸ್‌ಐಸಿ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಡಾ. ಮಾಂಡವಿಯಾ ಘೋಷಿಸಿದರು.
ಹೊಸದಾಗಿ ಉದ್ಘಾಟನೆಗೊಂಡ ಆಸ್ಪತ್ರೆಯ ಪ್ರಾದೇಶಿಕ ಪ್ರಭಾವವನ್ನು ಎತ್ತಿ ತೋರಿಸಿದ ಸಚಿವರು, ಈ ಪ್ರದೇಶವು 1.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಕಾರ್ಮಿಕರನ್ನು ಹೊಂದಿರುವ ಹಲವಾರು ಜವಳಿ ಉದ್ಯಮಗಳಿಗೆ ನೆಲೆಯಾಗಿದೆ ಎಂದು ಬೆಟ್ಟು ಮಾಡಿದರು. ಅವರ ಕುಟುಂಬಗಳನ್ನು ಒಳಗೊಂಡಂತೆ ಸುಮಾರು 5.5 ಲಕ್ಷ ಜನರು ಇಎಸ್‌ಐಸಿ ಆರೋಗ್ಯ ಸೌಲಭ್ಯಗಳಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ಅವರು ಹೇಳಿದರು. ಈ ಆಸ್ಪತ್ರೆಗಳು ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ವರದಾನವಾಗಲಿದ್ದು, ವಿಮಾದಾರರಿಗೆ ಮತ್ತು ಅವರ ಅವಲಂಬಿತರಿಗೆ ಸಂಪೂರ್ಣ ಉಚಿತ ವೈದ್ಯಕೀಯ ಸೇವೆಗಳನ್ನು ನೀಡಲಿವೆ ಎಂದು ಅವರು ಹೇಳಿದರು.
ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವರು, ಕಾರ್ಮಿಕರ ಕಲ್ಯಾಣವು ಪ್ರಮುಖ ಆದ್ಯತೆಯಾಗಿ ಮುಂದುವರಿಯುತ್ತದೆ ಮತ್ತು ಸಾಮಾಜಿಕ ಭದ್ರತಾ ಕಾರ್ಯವಿಧಾನಗಳನ್ನು ಬಲಪಡಿಸಲು ಹಾಗೂ ಭಾರತದ ಕಾರ್ಮಿಕ ವರ್ಗದ ಜೀವನದ ಗುಣಮಟ್ಟವನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು, ಈ ಆಸ್ಪತ್ರೆಯ ಸ್ಥಾಪನೆಯು ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಕಾರ್ಮಿಕ ಕಲ್ಯಾಣಕ್ಕೆ ಸರ್ಕಾರದ ಬದ್ಧತೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ ಎಂದು ತಿಳಿಸಿದರು. ದೊಡ್ಡಬಳ್ಳಾಪುರದ ಈ ಸೌಲಭ್ಯವು ಹೊರರೋಗಿ ವಿಭಾಗ (OPD), ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿಗಳು, ತುರ್ತು ಚಿಕಿತ್ಸೆ, ಸ್ತ್ರೀರೋಗ ಶಾಸ್ತ್ರ, ಮಕ್ಕಳ ಚಿಕಿತ್ಸೆ, ಮೂಳೆ ಚಿಕಿತ್ಸೆ, ನೇತ್ರ ಚಿಕಿತ್ಸೆ, ದಂತ ಸೇವೆಗಳು, ಔಷಧಾಲಯ ಮತ್ತು ರೋಗನಿರ್ಣಯ ಸೇರಿದಂತೆ ಸಮಗ್ರ ವೈದ್ಯಕೀಯ ಸೇವೆಗಳನ್ನು ನೀಡಲಿದೆ. ಈ ಆಸ್ಪತ್ರೆಯಿಂದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶದ 1.50 ಲಕ್ಷ ವಿಮೆ ಚಂದಾದಾರರು ಮತ್ತು 5.50 ಲಕ್ಷ ಫಲಾನುಭವಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ದೊರೆಯಲಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಕಾರ್ಮಿಕರು ಮತ್ತು ಅವರ ಕುಟುಂಬದವರು ತಮಗೆ ಅರ್ಹವಾದ ಸಾಮಾಜಿಕ ಭದ್ರತೆ ಮತ್ತು ವೈದ್ಯಕೀಯ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಮತ್ತು ಇಎಸ್‌ಐಸಿಯ ಅಚಲ ಸಂಕಲ್ಪವನ್ನು ಈ ಉದ್ಘಾಟನೆಯು ಪ್ರತಿಬಿಂಬಿಸುತ್ತದೆ. ಇದು 'ವಿಕಸಿತ ಭಾರತ'ಕ್ಕಾಗಿ ಆರೋಗ್ಯವಂತ, ಸಂರಕ್ಷಿತ ಮತ್ತು ಉತ್ಪಾದಕ ಕಾರ್ಮಿಕ ವರ್ಗದ ಸರ್ಕಾರದ ದೃಷ್ಟಿಕೋನವನ್ನು ಬಲಪಡಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ವಿಶೇಷ ಗೌರವದ ಸಂಕೇತವಾಗಿ, ಡಾ. ಮಾಂಡವೀಯ ಅವರು ಆಸ್ಪತ್ರೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ನಿರ್ಮಾಣ ಕಾರ್ಮಿಕರನ್ನು ಸನ್ಮಾನಿಸಿದರು ಮತ್ತು ಕಾರ್ಯಕ್ರಮದ ಸಮಯದಲ್ಲಿ ಇ ಎಸ್ ಐ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿದರು.

ಕರ್ನಾಟಕದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ಇ ಎಸ್ ಐ ಸಿ (ESIC) ಆಸ್ಪತ್ರೆಯು 5 ಎಕರೆ ಪ್ರದೇಶದಲ್ಲಿ 101.14 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 100 ಹಾಸಿಗೆಗಳ ಬಹು-ಸ್ಪೆಷಾಲಿಟಿ ಸೆಕೆಂಡರಿ ಕೇರ್ ಸೌಲಭ್ಯವಾಗಿದೆ. ಇದು 32 ಸಿಬ್ಬಂದಿ ವಸತಿಗೃಹಗಳನ್ನು ಒಳಗೊಂಡಿದ್ದು, ಜನರಲ್ ಮೆಡಿಸಿನ್, ಸರ್ಜರಿ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಮಕ್ಕಳ ಚಿಕಿತ್ಸೆ, ಮೂಳೆ ಚಿಕಿತ್ಸೆ, ತುರ್ತು ಚಿಕಿತ್ಸೆ ಹಾಗೂ ರೇಡಿಯಾಲಜಿ, ಪ್ರಯೋಗಾಲಯ ಮತ್ತು ರಕ್ತನಿಧಿ ಸೇರಿದಂತೆ ಸಮಗ್ರ ರೋಗನಿರ್ಣಯ ಸೌಲಭ್ಯಗಳಂತಹ ಪ್ರಮುಖ ಸೇವೆಗಳನ್ನು ಒದಗಿಸುತ್ತದೆ. ಬಳ್ಳಾರಿಯಲ್ಲಿ ಉದ್ದೇಶಿತ ಇ ಎಸ್ ಐ ಸಿ ಆಸ್ಪತ್ರೆಯನ್ನು 5.21 ಎಕರೆ ಪ್ರದೇಶದಲ್ಲಿ ಅಂದಾಜು 150 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಇದು ಇ ಎಸ್ ಐ ಯೋಜನೆಯಡಿ ವಿಮೆ ಚಂದಾದಾರರು ಮತ್ತು ಅವರ ಕುಟುಂಬಗಳಿಗೆ ಆಧುನಿಕ ಹಾಗೂ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸಲಿದೆ.

******
(ಪ್ರಕಟಣೆ ಐ.ಡಿ.: 2257632)
ವಿಸಿಟರ್ ಕೌಂಟರ್ : 23