ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಮತ್ತು ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರಿಂದ ರಾಷ್ಟ್ರವ್ಯಾಪಿ ಮೊಬೈಲ್ ಆಧಾರಿತ ವಿಪತ್ತು ಸಂವಹನ ವ್ಯವಸ್ಥೆಗಳಿಗೆ ಚಾಲನೆ ನೀಡಲಿದ್ದಾರೆ


ವಿಪತ್ತು ಎಚ್ಚರಿಕೆಗಳ ತ್ವರಿತ ಪ್ರಸರಣವನ್ನು ಖಚಿತಪಡಿಸಿಕೊಳ್ಳಲು ದೇಶೀಯವಾಗಿ ಅಭಿವೃದ್ಧಿಪಡಿಸಿದ 'ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್'ನ ರಾಷ್ಟ್ರವ್ಯಾಪಿ ಪರೀಕ್ಷೆ ಪ್ರಗತಿಯಲ್ಲಿದೆ

ಮೊಬೈಲ್ ಫೋನ್‌ ಗಳಲ್ಲಿ ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷಾರ್ಥ ಸಂದೇಶಗಳನ್ನು ಸ್ವೀಕರಿಸಬಹುದು; ಪರೀಕ್ಷಾ ಹಂತದಲ್ಲಿ ಸಂದೇಶ ಸ್ವೀಕರಿಸುವವರು ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ

ಪ್ರಕಟಣಾ ದಿನಾಂಕ: 30 APR 2026 7:56PM by PIB Bengaluru

 

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು, ಕೇಂದ್ರ ಸಂವಹನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರ ಉಪಸ್ಥಿತಿಯಲ್ಲಿ 2026ರ ಮೇ 2ರಂದು ಮೊಬೈಲ್ ಆಧಾರಿತ ವಿಪತ್ತು ಸಂವಹನ ವ್ಯವಸ್ಥೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಾಗರಿಕರಿಗೆ ನಿರ್ಣಾಯಕ ಮಾಹಿತಿಯನ್ನು ಸಮಯೋಚಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ ಡಿ ಎಂ ಎ) ಸಹಯೋಗದೊಂದಿಗೆ ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯು (ಡಿಒಟಿ) ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

ದೂರಸಂಪರ್ಕ ಇಲಾಖೆಯ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಅಭಿವೃದ್ಧಿಪಡಿಸಿದ ಇಂಟಿಗ್ರೇಟೆಡ್ ಅಲರ್ಟ್ ಸಿಸ್ಟಮ್ (ಸಚೇತ್) ಅನ್ನು ಎನ್‌ ಡಿ ಎಂ ಎ ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ. ಈ ವ್ಯವಸ್ಥೆಯು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟವು ಶಿಫಾರಸು ಮಾಡಿದ ಸಾಮಾನ್ಯ ಎಚ್ಚರಿಕೆ ಪ್ರೊಟೊಕಾಲ್ (ಸಿಎಪಿ) ಅನ್ನು ಆಧರಿಸಿದೆ. ಇದು ಪ್ರಸ್ತುತ ಭಾರತದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಿರ್ದಿಷ್ಟ ಭೌಗೋಳಿಕ ಪ್ರದೇಶಗಳಲ್ಲಿನ ಮೊಬೈಲ್ ಬಳಕೆದಾರರಿಗೆ ಎಸ್‌ ಎಂ ಎಸ್ ಮೂಲಕ ವಿಪತ್ತು ಮತ್ತು ತುರ್ತು ಪರಿಸ್ಥಿತಿಗೆ ಸಂಬಂಧಿಸಿದ ಎಚ್ಚರಿಕೆಗಳನ್ನು ನೀಡುತ್ತದೆ.

ವಿಪತ್ತು ನಿರ್ವಹಣಾ ಅಧಿಕಾರಿಗಳು ಈ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಸಿಕೊಂಡಿದ್ದು, ನೈಸರ್ಗಿಕ ವಿಕೋಪಗಳು, ಹವಾಮಾನ ಎಚ್ಚರಿಕೆಗಳು ಮತ್ತು ಚಂಡಮಾರುತದ ಸಂದರ್ಭಗಳಲ್ಲಿ ಈವರೆಗೆ 19ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ 134 ಶತಕೋಟಿಗೂ ಅಧಿಕ ಎಸ್‌ ಎಂ ಎಸ್ ಎಚ್ಚರಿಕೆಗಳನ್ನು ರವಾನಿಸಲಾಗಿದೆ.

ಸುನಾಮಿಗಳು, ಭೂಕಂಪಗಳು, ಮಿಂಚು ಮತ್ತು ಅನಿಲ ಸೋರಿಕೆ ಅಥವಾ ರಾಸಾಯನಿಕ ಅಪಾಯಗಳಂತಹ ಮಾನವ ನಿರ್ಮಿತ ತುರ್ತು ಪರಿಸ್ಥಿತಿಗಳಂತಹ ಸಮಯದ ಅಗತ್ಯವಿರುವ ಸಂದರ್ಭಗಳಲ್ಲಿ ಎಚ್ಚರಿಕೆ ಪ್ರಸರಣವನ್ನು ಮತ್ತಷ್ಟು ಬಲಪಡಿಸಲು, ಎಸ್‌ ಎಂ ಎಸ್ ಜೊತೆಗೆ ಸೆಲ್ ಬ್ರಾಡ್‌ಕಾಸ್ಟ್ (ಸಿಬಿ) ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ. ಸೆಲ್ ಬ್ರಾಡ್‌ಕಾಸ್ಟ್ ವ್ಯವಸ್ಥೆಯಲ್ಲಿ, ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲಾ ಮೊಬೈಲ್ ಸಾಧನಗಳಿಗೆ ಏಕಕಾಲದಲ್ಲಿ ಎಚ್ಚರಿಕೆಗಳನ್ನು ರವಾನಿಸಲಾಗುತ್ತದೆ, ಇದು ಸರಿಸುಮಾರು ನೈಜ ಸಮಯದಲ್ಲಿ ಎಚ್ಚರಿಕೆಗಳು ತಲುಪುವುದನ್ನು ಖಚಿತಪಡಿಸುತ್ತದೆ. ಈ ಸೆಲ್ ಬ್ರಾಡ್‌ಕಾಸ್ಟ್ ಆಧಾರಿತ ಸಾರ್ವಜನಿಕ ತುರ್ತು ಎಚ್ಚರಿಕೆ ವ್ಯವಸ್ಥೆಯ ಸ್ಥಳೀಯ ಅಭಿವೃದ್ಧಿ ಮತ್ತು ಅನುಷ್ಠಾನದ ಜವಾಬ್ದಾರಿಯನ್ನು ಸಿ-ಡಾಟ್ ಗೆ ವಹಿಸಲಾಗಿದೆ.

ಚಾಲನೆಯ ಅಭ್ಯಾಸದ ಭಾಗವಾಗಿ ದೆಹಲಿ ಮತ್ತು ಎನ್‌ ಸಿ ಆರ್ ಸೇರಿದಂತೆ ಭಾರತದ ಎಲ್ಲಾ ರಾಜಧಾನಿ ನಗರಗಳಲ್ಲಿನ ಮೊಬೈಲ್ ಸಾಧನಗಳಿಗೆ ಈ ಕೆಳಗಿನ ಸಂದೇಶವನ್ನು ಕಳುಹಿಸಲಾಗುತ್ತದೆ. ಸಂದೇಶಗಳನ್ನು ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಕಳುಹಿಸಲಾಗುವುದು:

ಕನ್ನಡದಲ್ಲಿ ಸಂದೇಶ: “ಭಾರತವು ತನ್ನ ನಾಗರಿಕರಿಗೆ ತ್ವರಿತ ವಿಪತ್ತು ಎಚ್ಚರಿಕೆ ಸೇವೆಗಾಗಿ, ದೇಶೀಯ ತಂತ್ರಜ್ಞಾನವನ್ನು ಬಳಸಿಕೊಂಡು ಸೆಲ್ ಬ್ರಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದೆ. ಜಾಗೃತ ನಾಗರಿಕರು, ಸುರಕ್ಷಿತ ರಾಷ್ಟ್ರ. ಈ ಸಂದೇಶವನ್ನು ಸ್ವೀಕರಿಸಿದ ನಂತರ ಸಾರ್ವಜನಿಕರು ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ. ಇದು ಪರೀಕ್ಷಾರ್ಥ ಸಂದೇಶವಾಗಿದೆ.”

ಸಾರ್ವಜನಿಕರು ಆತಂಕಕ್ಕೊಳಗಾಗಬಾರದು ಎಂದು ವಿನಂತಿಸಲಾಗಿದೆ. ಈ ಸಂದೇಶವನ್ನು ಸ್ವೀಕರಿಸಿದ ನಂತರ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ.

ಹೆಚ್ಚಿನ ಮಾಹಿತಿಗಾಗಿ ದೂರಸಂಪರ್ಕ ಇಲಾಖೆಯ ಈ ಸಾಮಾಜಿಕ ಜಾಲತಾಣಗಳನ್ನು ಅನುಸರಿಸಿ:

ಎಕ್ಸ್- https://x.com/DoT_India

ಇನ್ಸ್ಟಾಗ್ರಾಂ- https://www.instagram.com/department_of_telecom?igsh=MXUxbHFjd3llZTU0YQ==

ಫೇಸ್‌ ಬುಕ್ - https://www.facebook.com/DoTIndia

ಯೂಟ್ಯೂಬ್: https://youtube.com/@departmentoftelecom?si=DALnhYkt89U5jAaa

 

****

 


(ಪ್ರಕಟಣೆ ಐ.ಡಿ.: 2257157) ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati