ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (ಐ.ಐ.ಎ.)ಯಲ್ಲಿ ₹75 ಕೋಟಿ ವೆಚ್ಚದ ಅತ್ಯಾಧುನಿಕ ಹೊಸ ಹೆಚ್ಚುವರಿ ಕಟ್ಟಡಕ್ಕೆ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಶಂಕುಸ್ಥಾಪನೆ ನೆರವೇರಿಸಿದರು; ಈ ಕಟ್ಟಡವು ಏಳು ಅಂತಸ್ತಿನದ್ದಾಗಿದ್ದು, 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ
ವಿಶ್ವ ದರ್ಜೆಯ, ಭವಿಷ್ಯಕ್ಕೆ ಸಿದ್ಧವಾಗಿರುವ ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರದತ್ತ ಇದೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಸಚಿವರು ವಿವರಿಸಿದರು
ಬಾಹ್ಯಾಕಾಶ, ರಕ್ಷಣಾ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಂತಹ ಇತರ ವಲಯಗಳಿಂದ ಸುಧಾರಿತ ಖಗೋಳಶಾಸ್ತ್ರ ಮತ್ತು ಬಾಹ್ಯಾಕಾಶ ಉಪಕರಣಗಳಲ್ಲಿನ ಭಾರತದ ಸ್ಥಳೀಯ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗುತ್ತಿದೆ: ಡಾ. ಜಿತೇಂದ್ರ ಸಿಂಗ್
2026 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ರಾಷ್ಟ್ರೀಯ ಬೃಹತ್ ಸೌರ ದೂರದರ್ಶಕ, ರಾಷ್ಟ್ರೀಯ ಬೃಹತ್ ಆಪ್ಟಿಕಲ್-ಇನ್ಫ್ರಾರೆಡ್ ದೂರದರ್ಶಕ, ಹಿಮಾಲಯನ್ ಚಂದ್ರ ದೂರದರ್ಶಕ ಉನ್ನತೀಕರಣ ಮತ್ತು ಕಾಸ್ಮೋಸ್-2 ತಾರಾಲಯ ಸೇರಿದಂತೆ ನಾಲ್ಕು ವಿಶ್ವ ದರ್ಜೆಯ ದೂರದರ್ಶಕಗಳನ್ನು ಐ.ಐ.ಎ ಅಭಿವೃದ್ಧಿಪಡಿಸಲಿದೆ ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಘೋಷಿಸಿದರು
ಪ್ರಕಟಣಾ ದಿನಾಂಕ:
28 APR 2026 5:57PM by PIB Bengaluru
ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪ್ರಧಾನ ಮಂತ್ರಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಇಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐ.ಐ.ಎ.) ನಲ್ಲಿ ₹75 ಕೋಟಿ ವೆಚ್ಚದ ಅತ್ಯಾಧುನಿಕ ಹೊಸ ಹೆಚ್ಚುವರಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡವು ಸುಮಾರು ಒಂದು ಲಕ್ಷ ಚದರ ಅಡಿಗೂ ಹೆಚ್ಚು ನಿರ್ಮಿತ ಪ್ರದೇಶವನ್ನು ಹೊಂದಿರುವ ಏಳು ಅಂತಸ್ತಿನ ಕಟ್ಟಡವಾಗಲಿದೆ. ದೇಶದ ಪ್ರಮುಖ ವೈಜ್ಞಾನಿಕ ಕೇಂದ್ರಗಳಲ್ಲಿ ಒಂದಾಗಿ ಅಭಿವೃದ್ಧಿಪಡಿಸಲಿರುವ ಈ ಕಟ್ಟಡವು, ಮುಂದುವರಿದ ಖಗೋಳ ಸಂಶೋಧನೆ ಮತ್ತು ಬಾಹ್ಯಾಕಾಶ ವಿಜ್ಞಾನ ಉಪಕರಣಗಳಲ್ಲಿ ಭಾರತದ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಬಲಪಡಿಸುತ್ತದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐ.ಐ.ಎ.) ನಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನಗಳನ್ನು ಇಸ್ರೋ ಮತ್ತು ಇತರ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತಿದೆ, ಇದು ಸಂಸ್ಥೆಯ ಜಾಗತಿಕ ಪ್ರಸ್ತುತತೆಯನ್ನು ಪ್ರತಿಬಿಂಬಿಸುತ್ತದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐ.ಐ.ಎ) ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಎಸ್. ಸೋಮನಾಥ್; ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐ.ಐ.ಎ) ನಿರ್ದೇಶಕಿ ಡಾ. ಅನ್ನಪೂರ್ಣಿ ಸುಬ್ರಮಣಿಯನ್; ಹಿರಿಯ ಅಧ್ಯಾಪಕ ಸದಸ್ಯರು, ವಿಜ್ಞಾನಿಗಳು, ಸಂಶೋಧಕರು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ) ಮತ್ತು ಕೇಂದ್ರ ಲೋಕೋಪಯೋಗಿ ಇಲಾಖೆಯ (ಸಿ.ಪಿ.ಡಬ್ಲ್ಯೂ.ಡಿ) ಅಧಿಕಾರಿಗಳ ಸಮ್ಮುಖದಲ್ಲಿ ಕೋರಮಂಗಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐ.ಐ.ಎ) ಕ್ಯಾಂಪಸ್ ನಲ್ಲಿ ಅಡಿಪಾಯ ಹಾಕುವ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಫಲಕ ಅನಾವರಣ, ಆಪ್ಟಿಕ್ಸ್ ಪ್ರಯೋಗಾಲಯದಲ್ಲಿ ಮಧ್ಯಮ ಗಾತ್ರದ ಆಸ್ಫೆರಿಕ್ ಗ್ರೈಂಡರ್ ಮತ್ತು ಪಾಲಿಷರ್ ಉದ್ಘಾಟನೆ, ಸಂಸ್ಥಾಪಕರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಸಂಸ್ಥೆಯ ಕೆಲಸ ಹಾಗೂ ಹೊಸ ಪ್ರಯೋಗಾಲಯ ಯೋಜನೆಯ ಪ್ರಸ್ತುತಿಗಳು ಸೇರಿದ್ದವು.
ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಮಾತನಾಡುತ್ತಾ, ಐತಿಹಾಸಿಕ ಮದ್ರಾಸ್ ವೀಕ್ಷಣಾಲಯದಿಂದ ಆರಂಭವಾದ ಮೂರು ಶತಮಾನಗಳ ಪ್ರಯಾಣವನ್ನು ಉಲ್ಲೇಖಿಸಿದ ಅವರು, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯನ್ನು ಖಗೋಳ ಸಂಶೋಧನೆಯಲ್ಲಿ ಶ್ರೀಮಂತ ಪರಂಪರೆ ಮತ್ತು ಜಾಗತಿಕ ಸ್ಥಾನಮಾನ ಹೊಂದಿರುವ ವಿಶಿಷ್ಟ ಸಂಸ್ಥೆ ಎಂದು ಬಣ್ಣಿಸಿದರು. ಹೊಸ ಸೌಲಭ್ಯವು ವಿದ್ಯಾರ್ಥಿಗಳು, ಸಂಶೋಧಕರು ಮತ್ತು ರಾಷ್ಟ್ರೀಯ ಕಾರ್ಯಾಚರಣೆಗಳ ಹೆಚ್ಚುತ್ತಿರುವ ಅಗತ್ಯಗಳನ್ನು ಬೆಂಬಲಿಸುತ್ತದೆ ಮತ್ತು ಅತ್ಯಾಧುನಿಕ ವೀಕ್ಷಣಾ ವಿಜ್ಞಾನದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಎಂದು ಹೇಳಿದರು.
ಕೊಡೈಕನಾಲ್, ಕವಲೂರು, ಗೌರಿಬಿದನೂರಿನಲ್ಲಿರುವ ಐ.ಐ.ಎ.ಯ ಸೌಲಭ್ಯಗಳ ಜಾಲ ಮತ್ತು ಹ್ಯಾನ್ಲೆಯಲ್ಲಿರುವ ಎತ್ತರದ ವೀಕ್ಷಣಾಲಯವನ್ನು ಉಲ್ಲೇಖಿಸಿದ ಸಚಿವರು, ಈ ಕೇಂದ್ರಗಳು ಸೌರ ಮತ್ತು ರಾತ್ರಿ-ಸಮಯದ ಖಗೋಳಶಾಸ್ತ್ರ ಎರಡರಲ್ಲೂ ಸುಧಾರಿತ ಸಂಶೋಧನೆಗೆ ಅನುವು ಮಾಡಿಕೊಡುತ್ತವೆ ಎಂದು ಹೇಳಿದರು. ಆಸ್ಟ್ರೋಸ್ಯಾಟ್‌ನಲ್ಲಿ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಮತ್ತು ಆದಿತ್ಯ-ಎಲ್-1 ಮಿಷನ್‌ಗೆ ನೀಡಿದ ಕೊಡುಗೆಗಳು ಸೇರಿದಂತೆ ರಾಷ್ಟ್ರೀಯ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಸಂಸ್ಥೆಯ ಪಾತ್ರದ ಬಗ್ಗೆಯೂ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿ ಮಾತನಾಡಿದರು.
2026 ರ ಕೇಂದ್ರ ಬಜೆಟ್‌ನಲ್ಲಿ ನಾಲ್ಕು ಪ್ರಮುಖ ದೂರದರ್ಶಕ ಯೋಜನೆಗಳ ಘೋಷಣೆಗಳಾದ - ರಾಷ್ಟ್ರೀಯ ಬೃಹತ್ ಸೌರ ದೂರದರ್ಶಕ, ರಾಷ್ಟ್ರೀಯ ಬೃಹತ್ ಆಪ್ಟಿಕಲ್-ಇನ್ಫ್ರಾರೆಡ್ ದೂರದರ್ಶಕ, ಹಿಮಾಲಯನ್ ಚಂದ್ರ ದೂರದರ್ಶಕ ಉನ್ನತೀಕರಣ ಮತ್ತು ಕಾಸ್ಮೋಸ್-2 ತಾರಾಲಯವನ್ನು ಸಚಿವರು ಉಲ್ಲೇಖಿಸಿದರು. ಇವುಗಳನ್ನು ಐ.ಐ.ಎ ಕಾರ್ಯಗತಗೊಳಿಸಲಿದ್ದು, ಭಾರತದ ಖಗೋಳ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ವಿಸ್ತರಿಸುವ ನಿರೀಕ್ಷೆಯಿದೆ.
ಹೊಸ ಮೂಲಸೌಕರ್ಯವು ಹೂಡಿಕೆಯ ಪ್ರಮಾಣಕ್ಕೆ ಹೊಂದಿಕೆಯಾಗುವ ಫಲಿತಾಂಶಗಳನ್ನು ತಲುಪಿಸುವ ಅವಕಾಶ ಮತ್ತು ಜವಾಬ್ದಾರಿ ಎರಡನ್ನೂ ತರುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. ವಿಜ್ಞಾನ ಮತ್ತು ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ವೈಜ್ಞಾನಿಕ ಸಂಸ್ಥೆಗಳನ್ನು ಯುವಜನರೊಂದಿಗೆ ಸಂಪರ್ಕ ಸಾಧಿಸುವ ಅಗತ್ಯವನ್ನು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.
ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕೈಗೊಂಡ ಇತ್ತೀಚಿನ ಉಪಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು, ಇದರಲ್ಲಿ ಬಜೆಟ್ ಬೆಂಬಲವನ್ನು ಹೆಚ್ಚಿಸುವುದು, ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳ ಉತ್ತೇಜನ ಮತ್ತು ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ (ಆರ್.ಡಿ.ಐ) ನಿಧಿ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದಂತಹ ಕಾರ್ಯವಿಧಾನಗಳು ಸೇರಿವೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐ.ಐ.ಎ) ನ ಸ್ಥಾಪಕ ನಿರ್ದೇಶಕರಾದ ಪ್ರೊ. ಮನಾಲಿ ಕಲ್ಲತ್ ವೈನು ಬಪ್ಪು ಅವರ ಗೌರವಾರ್ಥವಾಗಿ ಈ ನೂತನ ಕಟ್ಟಡವನ್ನು "ಎಂ.ಕೆ.ವಿ. ಬಪ್ಪು ಭವನ" ಎಂದು ಹೆಸರಿಸಲು ಪ್ರಸ್ತಾಪಿಸಲಾಗಿದೆ. ಈ ಹೊಸ ಕಟ್ಟಡವು ಆಧುನಿಕ ಪ್ರಯೋಗಾಲಯಗಳು, ತರಗತಿ ಕೊಠಡಿಗಳು, ಕಚೇರಿ ಸ್ಥಳಗಳು ಮತ್ತು ಸಮ್ಮೇಳನ ಸೌಲಭ್ಯವನ್ನು ಹೊಂದಿರುತ್ತದೆ. ಈ ಯೋಜನೆಯನ್ನು ಸಿಪಿಡಬ್ಲೂಡಿ ಎರಡು ವರ್ಷಗಳ ಅಂದಾಜು ಪೂರ್ಣಗೊಳಿಸುವ ಅವಧಿಯೊಂದಿಗೆ ಕಾರ್ಯಗತಗೊಳಿಸುತ್ತಿದೆ.
ಸಂಸ್ಥೆಯ ನಿರಂತರ ಪ್ರಗತಿಗಾಗಿ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಶುಭ ಹಾರೈಸಿದರು ಮತ್ತು ಭವಿಷ್ಯದ ವೈಜ್ಞಾನಿಕ ಆವಿಷ್ಕಾರಗಳು ಹಾಗೂ ನಾವೀನ್ಯತೆಗಳಿಗೆ ಈ ಸೌಲಭ್ಯವು ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.




****
(ಪ್ರಕಟಣೆ ಐ.ಡಿ.: 2256360)
ವಿಸಿಟರ್ ಕೌಂಟರ್ : 24