ರಕ್ಷಣಾ ಸಚಿವಾಲಯ
2026 ರ ಏಪ್ರಿಲ್ 9 ಮತ್ತು 10 ರಂದು ಮೂರು ರಕ್ಷಣಾ ಸೇವೆಗಳಿಂದ ‘ರಣ ಸಂವಾದ’ ವಿಚಾರ ಸಂಕಿರಣ
ಪ್ರಕಟಣಾ ದಿನಾಂಕ:
06 APR 2026 5:48PM by PIB Bengaluru
ಬೆಂಗಳೂರಿನ ವಾಯುಪಡೆಯ ತರಬೇತಿ ಕಮಾಂಡ್‌ನಲ್ಲಿ ಮೂರು ರಕ್ಷಣಾ ಸೇವೆಗಳ ವಿಚಾರ ಸಂಕಿರಣ "ರಣ ಸಂವಾದ” 2026ರ ಏಪ್ರಿಲ್ 09 ಮತ್ತು 10 ರಂದು ನಿಗದಿಯಾಗಿದೆ. ಈ ಆವೃತ್ತಿಯು ಯುದ್ಧದ ಉದಯೋನ್ಮುಖ ಮಾದರಿಗಳ ಕುರಿತ ನಿರಂತರ ಮತ್ತು ರಚನಾತ್ಮಕ ಸಂವಾದದ ಆರಂಭವಾಗಿದೆ. "ಬಹು-ವಲಯ ಕಾರ್ಯಾಚರಣೆಗಳು: ಸಾಂಪ್ರದಾಯಿಕ ಮತ್ತು ಅನಿಯಮಿತ ಬೆದರಿಕೆಗಳನ್ನು ಎದುರಿಸಲು ಈಗಿನ ತುರ್ತು" ಎಂಬುದು ಈ ಸಂವಾದದ ವಿಷಯವಾಗಿದೆ.
ಭೂಮಿ, ವಾಯು, ಸಾಗರ, ಸೈಬರ್, ಬಾಹ್ಯಾಕಾಶ ಮತ್ತು ಜ್ಞಾನಾರ್ಜನೆಯ ಕ್ಷೇತ್ರಗಳನ್ನು ಒಳಗೊಂಡ ಬಹು ಕ್ಷೇತ್ರ ಸಂಘರ್ಷಕ್ಕೆ ಭಾರತದ ರಕ್ಷಣಾ ಪಡೆಗಳನ್ನು ಸಜ್ಜುಗೊಳಿಸಲು ಮಾರ್ಗಸೂಚಿಯನ್ನು ರೂಪಿಸುವ ಕುರಿತು ಈ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಚರ್ಚೆಗಳು ನಡೆಯಲಿವೆ. ಬಹು ಕ್ಷೇತ್ರ ಕಾರ್ಯಾಚರಣೆಗಳ ವಿಕಸನ, ಆಧುನಿಕ ಯುದ್ಧಭೂಮಿಗಳನ್ನು ರೂಪಿಸುವಲ್ಲಿ ಜಾಗತಿಕ ಪ್ರವೃತ್ತಿಗಳು, ರಾಷ್ಟ್ರೀಯ ಸಂಪನ್ಮೂಲಗಳನ್ನು ಇಡೀ ದೇಶಕ್ಕಾಗಿ ಸಮರ್ಪಕವಾಗಿ ಬಳಸುವ ವಿಧಾನ, ಸೈದ್ಧಾಂತಿಕ ರೂಪಾಂತರದ ವಿಕಸನ ಮತ್ತು ತರಬೇತಿ ಹಾಗೂ ಸಂಕೀರ್ಣ ಪರಿಸರದಲ್ಲಿ ಪರಿಣಾಮಕಾರಿ ಕಮಾಂಡ್ ಮತ್ತು ಕಂಟ್ರೋಲ್ ಕಾರ್ಯಾಚರಣೆ ವಿಧಾನದ ಮರುವಿನ್ಯಾಸ ಮುಂತಾದ ಪ್ರಮುಖ ಅಂಶಗಳ ಬಗ್ಗೆ ವಿವಿಧ ಚರ್ಚಾ ಸಭೆಗಳಲ್ಲಿ ಅನ್ವೇಷಿಸಲಾಗುತ್ತದೆ.
ಬಹು ಕ್ಷೇತ್ರ ಕಾರ್ಯಾಚರಣೆಗಳ ಸನ್ನಿವೇಶದಲ್ಲಿ ನಾಗರಿಕ-ಮಿಲಿಟರಿ ಸಮ್ಮಿಲನದ ಸಮಗ್ರ ತಿಳುವಳಿಕೆಯನ್ನು ಸಹ ಈ ವಿಚಾರ ಸಂಕಿರಣ ಒದಗಿಸಲಿದೆ. ಬಹು-ಕ್ಷೇತ್ರ ಪರಿಸರದಲ್ಲಿ ಸಾಂಪ್ರದಾಯಿಕ ಮತ್ತು ಅನಿಯಮಿತ ಬೆದರಿಕೆಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸಲು ಕಾರ್ಯತಂತ್ರಗಳನ್ನು ರೂಪುಗೊಳಿಸುವಲ್ಲಿ ಭಾರತೀಯ ರಕ್ಷಣಾ ಪಡೆಗಳಿಗೆ ಈ ವಿಚಾರ ಸಂಕಿರಣವು ಮಾರ್ಗದರ್ಶಿಯಾಗಲಿದೆ.
ತಾಂತ್ರಿಕ ಪ್ರಗತಿಯಿಂದಾಗಿ ಯುದ್ಧದ ಸ್ವರೂಪ ಮತ್ತು ವಿಧಾನದಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದ್ದು ಕಾರ್ಯಾಚರಣೆಯ ಯೋಜನೆ, ತಂತ್ರಗಳು ಮತ್ತು ಕಾರ್ಯತಂತ್ರಗಳಿಗೆ ಸಂಬಂಧಿಸಿದಂತೆ ಯುದ್ಧ ತಂತ್ರಗಾರರ ಮೇಲೆ ಅದೇ ರೀತಿಯ ಪರಿಣಾಮ ಬೀರಲಿದೆ. ಈ ವಿಕಸನಗೊಳ್ಳುತ್ತಿರುವ ಮಾದರಿಯ ಬಗ್ಗೆ ಚರ್ಚಿಸಲು, 'ರಣ ಸಂವಾದ - ಯುದ್ಧ, ಪ್ರಸ್ತುತ ನಡೆಯುತ್ತಿರುವ ಸಮರ ಮತ್ತು ಯುದ್ಧ ಹೋರಾಟದ ಕುರಿತು ಚರ್ಚೆಯ ಪರಿಕಲ್ಪನೆಯನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾದ ಜನರಲ್ ಅನಿಲ್ ಚೌಹಾಣ್ ನೀಡಿದ್ದಾರೆ. ಮೂರು ರಕ್ಷಣಾ ಪಡೆಗಳಿಂದ ಇಂತಹ ಮೊದಲ ಉಪಕ್ರಮ ಇದಾಗಿದೆ. ಮ್ಹೋವ್ ನ ಆರ್ಮಿ ವಾರ್ ಕಾಲೇಜಿನಲ್ಲಿ ನಡೆದ ರಣ ಸಂವಾದದ ಉದ್ಘಾಟನಾ ಆವೃತ್ತಿಯು "ಯುದ್ಧದ ಮೇಲೆ ತಂತ್ರಜ್ಞಾನದ ಪ್ರಭಾವ" ಎಂಬ ವಿಷಯದ ಮೇಲೆ ಕೇಂದ್ರೀಕರಿಸಿತ್ತು. ಇದು ಮಿಲಿಟರಿ ವೃತ್ತಿಪರರು ಮತ್ತು ತಜ್ಞರ ನಡುವೆ ರಚನಾತ್ಮಕ ಕಾರ್ಯತಂತ್ರದ ಸಂವಾದಕ್ಕೆ ಬುನಾದಿ ಹಾಕಿದೆ.
*****
(ಪ್ರಕಟಣೆ ಐ.ಡಿ.: 2249498)
ವಿಸಿಟರ್ ಕೌಂಟರ್ : 11