ಲೋಕಸಭಾ ಸಚಿವಾಲಯ
ಒಂದು ರಾಷ್ಟ್ರದ ಅಭಿವೃದ್ಧಿಯ ಬಲ ಮತ್ತು ದಿಕ್ಕು ಅದರ ಐತಿಹಾಸಿಕ ಪ್ರಜ್ಞೆಯಿಂದ ಪ್ರಭಾವಿತವಾಗುತ್ತದೆ: ಲೋಕ ಸಭಾ ಸ್ಪೀಕರ್
ಸಂವಿಧಾನ ಸದನದಲ್ಲಿ ಕಂಡುಬರುವ ಭಿತ್ತಿಚಿತ್ರಗಳು ಭಾರತದ ಅಪ್ರತಿಮ ಪ್ರಯಾಣದ ದೃಶ್ಯ ನಿರೂಪಣೆಯಾಗಿವೆ: ಲೋಕ ಸಭಾ ಸ್ಪೀಕರ್
ತಮ್ಮ ಪರಂಪರೆಯೊಂದಿಗೆ ಸಂಪರ್ಕ ಹೊಂದಿರುವ ರಾಷ್ಟ್ರಗಳು, ಶಕ್ತಿ ಮತ್ತು ಸ್ಫೂರ್ತಿಯನ್ನು ತಮ್ಮ ಪರಂಪರೆಯಿಂದ ಪಡೆದು, ಭವಿಷ್ಯದತ್ತ ವಿಶ್ವಾಸಾರ್ಹದ ಹಾದಿಯನ್ನು ಹೊಂದಿವೆ: ಲೋಕ ಸಭಾ ಸ್ಪೀಕರ್
ಸಂಸದರಾದ ಶ್ರೀಮತಿ ಸುಧಾ ಮೂರ್ತಿಯವರು ಬರೆದ "ಟೈಡ್ಸ್ ಆಫ್ ಟೈಮ್: ಭಾರತ್'ಸ್ ಹಿಸ್ಟರಿ ಥ್ರೂ ಮ್ಯೂರಲ್ಸ್ ಇನ್ ಪಾರ್ಲಿಮೆಂಟ್" ("ಕಾಲದ ಅಲೆಗಳು: ಸಂಸತ್ತಿನಲ್ಲಿ ಭಿತ್ತಿಚಿತ್ರಗಳ ಮೂಲಕ ಭಾರತದ ಇತಿಹಾಸ") ಎಂಬ ಕಾಫಿ ಟೇಬಲ್ ಪುಸ್ತಕವನ್ನು ಭಾರತದ ಉಪರಾಷ್ಟ್ರಪತಿ ಮತ್ತು ಲೋಕ ಸಭಾ ಸ್ಪೀಕರ್ ಅವರು ಬಿಡುಗಡೆ ಮಾಡಿದ್ದಾರೆ
ಪ್ರಕಟಣಾ ದಿನಾಂಕ:
01 APR 2026 6:46PM by PIB Bengaluru
ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ಒಂದು ರಾಷ್ಟ್ರದ ಭೂತಕಾಲದ ಮತ್ತು ಅದರ ಭವಿಷ್ಯದ ನಡುವಿನ ಆಂತರಿಕ ಸಂಬಂಧವನ್ನು ಒತ್ತಿ ಹೇಳಿದ್ದಾರೆ. ಒಂದು ರಾಷ್ಟ್ರದ ಅಭಿವೃದ್ಧಿಯ ಶಕ್ತಿ ಮತ್ತು ಅದರ ದಿಕ್ಕು ಆ ದೇಶದ ಐತಿಹಾಸಿಕ ಪ್ರಜ್ಞೆಯ ಅಂತರಾಳದಿಂದ ಪ್ರಭಾವಿತವಾಗಿರುತ್ತದೆ ಎಂದು ಅವರು ಹೇಳಿದರು. ಭಾರತದ ನಾಗರಿಕತೆಯ ಬಗ್ಗೆ ಮಾತನಾಡುತ್ತಾ, ನಮ್ಮ ದೇಶವು ಶತಮಾನಗಳಿಂದ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ, ನಿರಂತರವಾಗಿ ಸ್ಥಿತಿಸ್ಥಾಪಕತ್ವ, ಧೈರ್ಯ ಮತ್ತು ಪ್ರಗತಿಗೆ ಅಚಲ ಬದ್ಧತೆಯನ್ನು ತೋರಿಸಿದೆ ಎಂದು ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಗಮನಿಸಿದರು.
ನವದೆಹಲಿಯ ಸಂವಿಧಾನ ಸದನದ ಪ್ರಿನ್ಸಸ್ ಚೇಂಬರ್‌ನಲ್ಲಿ ಸಂಸದರಾದ ಶ್ರೀಮತಿ ಸುಧಾ ಮೂರ್ತಿಯವರು ಬರೆದ "ಟೈಡ್ಸ್ ಆಫ್ ಟೈಮ್: ಭಾರತ್'ಸ್ ಹಿಸ್ಟರಿ ಥ್ರೂ ಮ್ಯೂರಲ್ಸ್ ಇನ್ ಪಾರ್ಲಿಮೆಂಟ್ " ಎಂಬ ಕಾಫಿ ಟೇಬಲ್ ಪುಸ್ತಕವನ್ನು ಭಾರತದ ಉಪಾಧ್ಯಕ್ಷ ಮತ್ತು ರಾಜ್ಯಸಭಾ ಅಧ್ಯಕ್ಷರಾದ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರೊಂದಿಗೆ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಶ್ರೀ ಬಿರ್ಲಾ ಅವರು ಈ ಹೇಳಿಕೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರು, ಸಂಸತ್ ಸದಸ್ಯರು, ಮಾಜಿ ಸಂಸದರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಸಂಸತ್ತಿನ ಭಿತ್ತಿಚಿತ್ರಗಳಲ್ಲಿ ಚಿತ್ರಿಸಲಾದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯ ಪರಂಪರೆಯನ್ನು ಜನರಿಗೆ ತಲುಪಿಸುವ ಪ್ರಬಲ ಮಾಧ್ಯಮ ಮತ್ತು ಸುಲಭವಾಗಿ ತಲುಪಬಹುದಾದದ್ದಾಗಿದೆ ಎಂದು ಈ ಪುಸ್ತಕವನ್ನು ಶ್ರೀ ಬಿರ್ಲಾ ಅವರು ಬಣ್ಣಿಸಿದ್ದಾರೆ. ಐತಿಹಾಸಿಕ ಸಂವಿದಾನ ಸದನದಲ್ಲಿರುವ ಭಿತ್ತಿಚಿತ್ರಗಳು ಭಾರತದ ಅಸಾಧಾರಣ ಪ್ರಯಾಣ ಪ್ರತೀಕದ ದೃಶ್ಯ ನಿರೂಪಣೆಯಾಗಿ ಕಾರ್ಯನಿರ್ವಹಿಸುತ್ತವೆ ಹಾಗೂ ಅದರ ಪ್ರಾಚೀನ ಸಂಪ್ರದಾಯಗಳು, ಸಾಂಸ್ಕೃತಿಕ ವಿಕಸನ ಮತ್ತು ಸ್ವಾತಂತ್ರ್ಯಕ್ಕಾಗಿ ಸ್ಮರಣೀಯ ಹೋರಾಟದ ದ್ಯೋತಕವಾಗಿವೆ ಎಂದು ಅವರು ಹೇಳಿದ್ದಾರೆ. ಈ ಪುಸ್ತಕವು ಸಂಸತ್ತಿನ ಕಲಾತ್ಮಕ ಪರಂಪರೆ, ಪ್ರಜಾಪ್ರಭುತ್ವ ಮನೋಭಾವ ಮತ್ತು ಸಾಮೂಹಿಕ ರಾಷ್ಟ್ರೀಯ ಸ್ಮರಣೆಯನ್ನು ನಿರೂಪಿಸುತ್ತದೆ. ಈ ನಿರೂಪಣೆಗಳನ್ನು ಬಲವಾದ ಮತ್ತು ಆಕರ್ಷಕ ಸ್ವರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ, ಈ ಪುಸ್ತಕವು ಭೂತ ಮತ್ತು ವರ್ತಮಾನದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಭವಿಷ್ಯದ ಪೀಳಿಗೆಗಳನ್ನು ಸೇವೆ, ಸಮರ್ಪಣೆ ಮತ್ತು ರಾಷ್ಟ್ರ ನಿರ್ಮಾಣದ ಮೌಲ್ಯಗಳನ್ನು ಸ್ವೀಕರಿಸಲು ಈ ಪುಸ್ತಕವು ಪ್ರೇರೇಪಿಸುತ್ತದೆ ಎಂದು ಅವರು ಗಮನಿಸಿದರು.
ಶ್ರೀಮತಿ ಸುಧಾ ಮೂರ್ತಿಯವರ ಸರಳ ಅಭಿವ್ಯಕ್ತಿ ಮತ್ತು ಒಳನೋಟಕ್ಕಾಗಿ ಶ್ರೀ ಬಿರ್ಲಾ ಅವರನ್ನು ಶ್ಲಾಘಿಸಿದರು. ಅವರ ಸ್ಪಷ್ಟ ಮತ್ತು ಸೂಕ್ಷ್ಮ ಬರವಣಿಗೆಯ ಶೈಲಿಯು ಸಂಕೀರ್ಣವಾದ ಐತಿಹಾಸಿಕ ವಿಷಯಗಳನ್ನು ವ್ಯಾಪಕ ಪ್ರೇಕ್ಷಕರಿಗೆ, ವಿಶೇಷವಾಗಿ ಯುವಜನತೆಗೆ ಕೈಗೆಟಕುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಯುವ ಪೀಳಿಗೆಯನ್ನು ಭಾರತದ ಮೂಲ, ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಗುರುತಿನೊಂದಿಗೆ ಮತ್ತೆ ಬೆಸೆಯುವಲ್ಲಿ ಈ ಪುಸ್ತಕವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು, ಇದರಿಂದಾಗಿ ಯುವಜನತೆಯಲ್ಲಿ ಹೆಮ್ಮೆ ಮತ್ತು ರಾಷ್ಟ್ರಪ್ರೇಮ ಬೆಳೆಯುತ್ತದೆ. ತಮ್ಮ ಪರಂಪರೆಯೊಂದಿಗೆ ಆಳವಾಗಿ ಸಂಪರ್ಕ ಹೊಂದಿರುವ ರಾಷ್ಟ್ರಗಳು ಅದರಿಂದ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆಯುತ್ತವೆ ಮತ್ತು ಭವಿಷ್ಯದ ಕಡೆಗೆ ಆತ್ಮವಿಶ್ವಾಸದ ಹಾದಿಯನ್ನು ರೂಪಿಸಲು ಸಹಾಯ ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ, ದೇಶದ ಸಾಂಸ್ಕೃತಿಕ ಮತ್ತು ಬೌದ್ಧಿಕ ಅಡಿಪಾಯಗಳನ್ನು ಬಲಪಡಿಸುವಲ್ಲಿ ಈ ಪುಸ್ತಕವು ಮಹತ್ವದ ಕೊಡುಗೆಯಾಗಿದೆ ಎಂದು ಅವರು ಬಣ್ಣಿಸಿದರು.
ಶ್ರೀಮತಿ ಸುಧಾ ಮೂರ್ತಿಯವರು ತಮ್ಮ ಹೇಳಿಕೆಯಲ್ಲಿ, ಪುಸ್ತಕವನ್ನು ಹೊರತರುವಲ್ಲಿ ನೀಡಿದ ಬೆಂಬಲಕ್ಕಾಗಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ, ಲೋಕಸಭಾ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಮತ್ತು ಲೋಕಸಭಾ ಸಚಿವಾಲಯದ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ತಮ್ಮ ಕೆಲಸದ ಹಿಂದಿನ ಸ್ಫೂರ್ತಿಯನ್ನು ಹಂಚಿಕೊಂಡ ಅವರು, ದೇಶಾದ್ಯಂತ ಯುವಜನರೊಂದಿಗಿನ ತಮ್ಮ ಸಂವಹನವು ಭಾರತದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಅರಿವಿನ ಅಂತರವನ್ನು ತಿಳಿಸುತ್ತದೆ ಎಂದು ಅವರು ಹೇಳಿದರು. ಇತಿಹಾಸವು ಕೇವಲ ದಿನಾಂಕಗಳು ಅಥವಾ ಪ್ರತ್ಯೇಕ ಘಟನೆಗಳ ಸಂಗ್ರಹವಲ್ಲ, ಆದರೆ ನಮ್ಮ ಗುರುತು, ಮೌಲ್ಯಗಳು ಮತ್ತು ವಿಶ್ವ ದೃಷ್ಟಿಕೋನವನ್ನು ರೂಪಿಸುವ ಜೀವಂತ ನಿರಂತರತೆ ಎಂದು ಅವರು ಒತ್ತಿ ಹೇಳಿದರು. ನಮ್ಮ ಪೂರ್ವಜರ ತ್ಯಾಗಗಳು, ಹೋರಾಟಗಳು ಮತ್ತು ಸಾಧನೆಗಳನ್ನು ಯುವ ಪೀಳಿಗೆಗೆ ಆಕರ್ಷಕವಾಗಿ ಮತ್ತು ಅರ್ಥಪೂರ್ಣ ರೀತಿಯಲ್ಲಿ ತಿಳಿಸಬೇಕು ಎಂದು ಅವರು ಒತ್ತಿ ಹೇಳಿದರು. ಹಾಗೆ ಮಾಡುವುದರಿಂದ, ಯುವಕರಲ್ಲಿ ಆತ್ಮವಿಶ್ವಾಸ, ಹೆಮ್ಮೆ ಮತ್ತು ರಾಷ್ಟ್ರಪ್ರೇಮದ ಭಾವನೆಯನ್ನು ಹುಟ್ಟುಹಾಕಲು ಸಾಧ್ಯ ಮತ್ತು ರಾಷ್ಟ್ರದ ಭವಿಷ್ಯಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಅವರನ್ನು ಪ್ರೋತ್ಸಾಹಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಲೋಕಸಭೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಉತ್ಪಲ್ ಕುಮಾರ್ ಸಿಂಗ್ ಸ್ವಾಗತ ಭಾಷಣ ಮಾಡಿ, ಸಂಸತ್ತಿನ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯ ದಾಖಲೀಕರಣಕ್ಕೆ ಪ್ರಮುಖ ಸೇರ್ಪಡೆಯಾಗಿ ಲೋಕಸಭಾ ಸಚಿವಾಲಯದ ಪ್ರಕಟಣೆಯ ಮಹತ್ವವನ್ನು ಉಲ್ಲೇಖಿಸಿದರು.
ಈ ಕಾಫಿ ಟೇಬಲ್ ಪುಸ್ತಕವನ್ನು ಲೋಕಸಭಾ ಸಚಿವಾಲಯವು ಪ್ರಕಟಿಸಿದೆ.
*****
(ಪ್ರಕಟಣೆ ಐ.ಡಿ.: 2248153)
ವಿಸಿಟರ್ ಕೌಂಟರ್ : 8