ಇಂಧನ ಸಚಿವಾಲಯ
azadi ka amrit mahotsav

ಕೇಂದ್ರ ಇಂಧನ ಸಚಿವರಿಂದ ‘ಪ್ರಕೃತಿ 2026’ ಉದ್ಘಾಟನೆ ಮತ್ತು ಭಾರತೀಯ ಇಂಗಾಲ ಮಾರುಕಟ್ಟೆ ಪೋರ್ಟಲ್ ಲೋಕಾರ್ಪಣೆ; ಭಾರತದ ಹವಾಮಾನ ಬದ್ಧತೆಗಳ ಪುನರುಚ್ಚರಣೆ


ಇಂಗಾಲ ಮಾರುಕಟ್ಟೆಗಳು ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಯ ಚಾಲಕ ಶಕ್ತಿಗಳಾಗಿವೆ

ಪ್ರಕಟಣಾ ದಿನಾಂಕ: 21 MAR 2026 5:01PM by PIB Bengaluru

ಇಂಧನ ಸಚಿವಾಲಯ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಆಶ್ರಯದಲ್ಲಿ ಇಂಧನ ದಕ್ಷತೆ ಬ್ಯೂರೋ (ಬಿಇಇ) ಆಯೋಜಿಸಿರುವ ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ಇಂಗಾಲ ಮಾರುಕಟ್ಟೆಗಳ ಕುರಿತಾದ ಅಂತರರಾಷ್ಟ್ರೀಯ ಸಮ್ಮೇಳನ - ಪ್ರಕೃತಿ 2026 ಇಂದು ನವದೆಹಲಿಯಲ್ಲಿ ಪ್ರಾರಂಭವಾಯಿತು. ಭಾರತ್ ವಿದ್ಯುತ್‌ ಶೃಂಗಸಭೆ 2026 ರ ಭಾಗವಾಗಿ ಆಯೋಜಿಸಲಾದ ಈ ಸಮ್ಮೇಳನವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರು, ನೀತಿ ನಿರೂಪಕರು, ಉದ್ಯಮದ ಮುಖಂಡರು, ಸಂಶೋಧಕರು ಮತ್ತು ವೃತ್ತಿಪರರಿಗೆ ಕಾರ್ಬನ್ ಮಾರುಕಟ್ಟೆಗಳ ವಿಕಸನಶೀಲ ಡೈನಾಮಿಕ್ಸ್, ಹವಾಮಾನ ಕ್ರಿಯೆಯಲ್ಲಿ ಅವುಗಳ ಪಾತ್ರ ಮತ್ತು ಭಾರತದ ಹಸಿರು ಬೆಳವಣಿಗೆಯ ಅವಕಾಶಗಳ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ವೇದಿಕೆಯನ್ನು ಒದಗಿಸುತ್ತದೆ. ಈ ವರ್ಷದ ವಿಷಯ - "ಜಾಗತಿಕ ಪಾಲುದಾರಿಕೆಗಳು ಮತ್ತು ಡಿಜಿಟಲ್ ಮಾರ್ಗಗಳ ಮೂಲಕ ಎನ್‌ ಡಿ ಸಿ ಅನುಷ್ಠಾನಕ್ಕಾಗಿ ಕಾರ್ಬನ್ ಹಣಕಾಸು ಅನಾವರಣ ಮಾಡುವುದು" ಎಂಬುದು ಹಣಕಾಸು ಕ್ರೋಡೀಕರಣ, ಸಹಕಾರವನ್ನು ಬಲಪಡಿಸುವುದು ಮತ್ತು ಹವಾಮಾನ ಕ್ರಿಯೆಯನ್ನು ವೇಗಗೊಳಿಸಲು ಡಿಜಿಟಲ್ ನಾವೀನ್ಯತೆಯನ್ನು ಬಳಸಿಕೊಳ್ಳುವ ಭಾರತದ ಗಮನವನ್ನು ಪ್ರತಿಬಿಂಬಿಸುತ್ತದೆ. ಈ ಸಂದರ್ಭದಲ್ಲಿ, ಭಾರತೀಯ ಕಾರ್ಬನ್ ಮಾರುಕಟ್ಟೆಯನ್ನು ಅನುಷ್ಠಾನಗೊಳಿಸಲು ಮತ್ತು ನಿರ್ವಹಿಸಲು ಕೇಂದ್ರ ವೇದಿಕೆಯಾಗಿರುವ ಭಾರತೀಯ ಇಂಗಾಲ ಮಾರುಕಟ್ಟೆ ಪೋರ್ಟಲ್ (www.indiancarbonmarket.gov.in) ಅನ್ನು ಕೇಂದ್ರ ಇಂಧನ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್, ಇಂಧನ ರಾಜ್ಯ ಖಾತೆ ಸಚಿವರಾದ ಶ್ರೀ ಶ್ರೀಪಾದ್ ನಾಯ್ಕ್ ಮತ್ತು ಇತರ ಗಣ್ಯರು ಬಿಡುಗಡೆ ಮಾಡಿದರು.

ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಶ್ರೀ ಮನೋಹರ್ ಲಾಲ್ ಅವರು, ಪ್ರಧಾನಮಂತ್ರಿಯವರ ದೂರದರ್ಶಿ ಮಾರ್ಗದರ್ಶನದಲ್ಲಿ ಹವಾಮಾನ ಬದ್ಧತೆಗಳನ್ನು ಮುನ್ನಡೆಸುವಲ್ಲಿ ಭಾರತದ ನಾಯಕತ್ವವನ್ನು ಉಲ್ಲೇಖಿಸಿದರು. "ಹವಾಮಾನ ಜವಾಬ್ದಾರಿ ಮತ್ತು ಆರ್ಥಿಕ ಅಭಿವೃದ್ಧಿ ಎರಡೂ ಜೊತೆಜೊತೆಯಾಗಿ ಸಾಗಬಹುದು ಎಂಬುದನ್ನು ಭಾರತವು ಪ್ರದರ್ಶಿಸಿದೆ. ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ (ಸಿಸಿಟಿಎಸ್), ನವೀಕರಿಸಬಹುದಾದ ಇಂಧನ ವಿಸ್ತರಣೆ ಮತ್ತು ಇಂಧನ ದಕ್ಷತೆಯ ಕಾರ್ಯಕ್ರಮಗಳಂತಹ ಉಪಕ್ರಮಗಳ ಮೂಲಕ, ಭಾರತವು ಪಾರದರ್ಶಕ ಮತ್ತು ವಿಶ್ವಾಸಾರ್ಹ ಇಂಗಾಲ ಮಾರುಕಟ್ಟೆ ಚೌಕಟ್ಟನ್ನು ನಿರ್ಮಿಸುತ್ತಿದೆ, ಇದು ದೀರ್ಘಕಾಲದ ರಾಷ್ಟ್ರೀಯ ಆಸ್ತಿಯಾಗಿ ಕಾರ್ಯನಿರ್ವಹಿಸಲಿದೆ" ಎಂದು ಅವರು ಹೇಳಿದರು.

ಭಾರತವು ಈಗಾಗಲೇ ಒಂಬತ್ತು ಅಧಿಸೂಚಿತ ವಿಧಾನಗಳೊಂದಿಗೆ ಪಾರದರ್ಶಕ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಯೋಜನೆಯನ್ನು ಸ್ಥಾಪಿಸಿದೆ ಮತ್ತು ಜೈವಿಕ ಅನಿಲ, ಹೈಡ್ರೋಜನ್ ಮತ್ತು ಅರಣ್ಯ ಯೋಜನೆಗಳನ್ನು ಸಲ್ಲಿಸುವ 40 ಕ್ಕೂ ಹೆಚ್ಚು ನೋಂದಾಯಿತ ಘಟಕಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು. ಅನುಸರಣೆಯ ಭಾಗವಾಗಿ, ಏಳು ಹೆಚ್ಚು ಇಂಧನ ಬೇಡಿಕೆಯ ವಲಯಗಳಾದ್ಯಂತ ಸುಮಾರು 490 ಕಡ್ಡಾಯ ಘಟಕಗಳಿಗೆ ಜಿಇಐ ಗುರಿಗಳನ್ನು ಅಧಿಸೂಚಿತಗೊಳಿಸಲಾಗಿದ್ದು, ಹೊರಸೂಸುವಿಕೆ ಕಡಿತವು ಪರಿಶೀಲಿಸಬಹುದಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಚಿತಪಡಿಸಲಾಗಿದೆ.

ಉದ್ಯಮಗಳು ಇಂಗಾಲ ಮಾರುಕಟ್ಟೆಗಳನ್ನು ಕೇವಲ ಒಂದು ಅನುಸರಣೆಯ ಅವಶ್ಯಕತೆಯಾಗಿ ನೋಡದೆ, ನಾವೀನ್ಯತೆ, ಹೂಡಿಕೆ, ಸುಸ್ಥಿರ ಬೆಳವಣಿಗೆ ಮತ್ತು ಉದ್ಯಮಶೀಲತೆಗಾಗಿ ಒಂದು ಕಾರ್ಯತಂತ್ರದ ಅವಕಾಶವಾಗಿ ನೋಡಬೇಕೆಂದು ಅವರು ಕರೆ ನೀಡಿದರು ಮತ್ತು ಇವುಗಳನ್ನು ಸುಗಮಗೊಳಿಸಲು ಇದು ಆರ್ಥಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.

ಇಂಧನ ಖಾತೆ ರಾಜ್ಯ ಸಚಿವ ಶ್ರೀ ಶ್ರೀಪಾದ್ ನಾಯ್ಕ್ ಅವರು ಮಾತನಾಡಿ, ಬಲವಾದ ಇಂಗಾಲ ಮಾರುಕಟ್ಟೆಗಳಿಗೆ ಅಗತ್ಯವಾದ ಮೂರು ಸ್ತಂಭಗಳು ಅಥವಾ ಮೂರು 'C'ಗಳಾದ - ಪರಿಶೀಲಿಸಬಹುದಾದ ಹೊರಸೂಸುವಿಕೆ ಕಡಿತಕ್ಕಾಗಿ ಡಿಜಿಟಲ್ ಎಂ ಆರ್‌ ವಿ ಮೂಲಕ ವಿಶ್ವಾಸಾರ್ಹತೆ (Credibility), ನವೀಕರಿಸಬಹುದಾದ ಇಂಧನ ಮತ್ತು ಹಸಿರು ಹೈಡ್ರೋಜನ್‌ ನಂತಹ ಶುದ್ಧ ತಂತ್ರಜ್ಞಾನಗಳಿಗೆ ಟ್ರಿಲಿಯನಗ ಗಟ್ಟಲೆ ಹಣವನ್ನು ಹರಿಸಲು ಬಂಡವಾಳ (Capital), ಮತ್ತು ಪ್ಯಾರಿಸ್ ಒಪ್ಪಂದದ ಆರ್ಟಿಕಲ್ 6 ರ ಮೂಲಕ ಸಹಯೋಗ (Collaboration) ಗಳ ಬಗ್ಗೆ ಒತ್ತಿಹೇಳಿದರು. ಭಾರತವು ಜಾಗತಿಕ ನವೀಕರಿಸಬಹುದಾದ ಇಂಧನ ನಾಯಕನಾಗಿ ವೇಗವಾಗಿ ಬೆಳೆಯುತ್ತಿರುವುದನ್ನು, ಇಂಧನ ದಕ್ಷತೆಯ ಲಾಭಗಳನ್ನು ಮತ್ತು ವಿವಿಧ ವಲಯಗಳಲ್ಲಿ ವಿಸ್ತರಿಸುತ್ತಿರುವ ವಿಧಾನಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಬನ್ ಕ್ರೆಡಿಟ್ ಟ್ರೇಡಿಂಗ್ ಸ್ಕೀಮ್ (ಸಿಸಿಟಿಎಸ್) 2023 ಅನ್ನು ಅವರು ಎತ್ತಿ ತೋರಿಸಿದರು. ಈ ಪ್ರಗತಿಗಳು ಹವಾಮಾನ ಕ್ರಮ ಮತ್ತು ಆರ್ಥಿಕ ಬೆಳವಣಿಗೆ ಹೇಗೆ ಪೂರಕವಾಗಿವೆ ಎಂಬುದನ್ನು ತೋರಿಸುತ್ತವೆ, ಇಂಗಾಲ ಮಾರುಕಟ್ಟೆಗಳು ಉನ್ನತ-ಸಮಗ್ರತೆಯ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸಲು, ಎಂ ಎಸ್ ಎಂ ಇ ಗಳು ಮತ್ತು ರೈತರನ್ನು ಸಬಲೀಕರಣಗೊಳಿಸಲು ಮತ್ತು ಪಾರದರ್ಶಕ ಜಾಗತಿಕ ಮಾರ್ಗಗಳನ್ನು ರೂಪಿಸಲು ಸಜ್ಜಾಗಿವೆ ಎಂದು ಅವರು ಪ್ರತಿಪಾದಿಸಿದರು.

ಎರಡು ದಿನಗಳ ಈ ಸಮ್ಮೇಳನವು ಪ್ಯಾರಿಸ್ ಒಪ್ಪಂದದ ಕ್ರೆಡಿಟಿಂಗ್ ಮೆಕ್ಯಾನಿಸಂ (ಪಿಎಸಿಎಂ) ಅಡಿಯಲ್ಲಿ ಜಾಗತಿಕ ಇಂಗಾಲ ಮಾರುಕಟ್ಟೆಗಳು, ಅನುಸರಣೆ ಚೌಕಟ್ಟುಗಳು, ಡಿಜಿಟಲ್ ಎಂ.ಆರ್.ವಿ. ತಂತ್ರಜ್ಞಾನಗಳು, ಕಾರ್ಬನ್ ಬಾರ್ಡರ್ ನೀತಿಗಳು, ಭಾರತದ ಸಿಸಿಟಿಎಸ್‌ ನಲ್ಲಿ ಕಟ್ಟಡಗಳು ಮತ್ತು ಕೂಲಿಂಗ್ ವ್ಯವಸ್ಥೆಗಳ ಏಕೀಕರಣ, ರೈತರ ಸಬಲೀಕರಣ, ಶುದ್ಧ ತಂತ್ರಜ್ಞಾನಗಳಿಗಾಗಿ ಹಣಕಾಸು ಮುಕ್ತಗೊಳಿಸುವುದು ಮತ್ತು ಕಾರ್ಪೊರೇಟ್ ಹವಾಮಾನ ಕ್ರಮ ಕುರಿತಾದ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಒಟ್ಟಾರೆಯಾಗಿ, ಈ ಅಧಿವೇಶನಗಳು ವಿಶ್ವಾಸಾರ್ಹ, ಒಳಗೊಳ್ಳುವ ಮತ್ತು ಜಾಗತಿಕವಾಗಿ ಜೋಡಿಸಲಾದ ಇಂಗಾಲ ಮಾರುಕಟ್ಟೆಗಳನ್ನು ರೂಪಿಸುವಲ್ಲಿ ಭಾರತದ ಸಕ್ರಿಯ ವಿಧಾನವನ್ನು ಒತ್ತಿಹೇಳುತ್ತವೆ.

ಪ್ರಕೃತಿ 2026 ಹವಾಮಾನ ಕ್ರಮದಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವುದನ್ನು ಪುನರುಚ್ಚರಿಸುತ್ತದೆ. ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ನಾವೀನ್ಯತೆ ಆಧಾರಿತವಾದ ಇಂಗಾಲ ಮಾರುಕಟ್ಟೆಯನ್ನು ನಿರ್ಮಿಸುವ ಮೂಲಕ, ಭಾರತವು ತನ್ನ ದೇಶೀಯ ಹಸಿರು ಪರಿವರ್ತನೆಯನ್ನು ವೇಗಗೊಳಿಸುವುದಲ್ಲದೆ ಸುಸ್ಥಿರ ಬೆಳವಣಿಗೆಗಾಗಿ ಅಂತರರಾಷ್ಟ್ರೀಯ ಮಾರ್ಗಗಳನ್ನು ರೂಪಿಸುತ್ತಿದೆ. ಈ ಸಮ್ಮೇಳನವು ಹವಾಮಾನ ಪರಿಹಾರಗಳಿಗಾಗಿ ಭಾರತವನ್ನು ವಿಶ್ವಾಸಾರ್ಹ ಕೇಂದ್ರವಾಗಿ ಮತ್ತು ಕಡಿಮೆ ಇಂಗಾಲದ ಭವಿಷ್ಯದತ್ತ ಜಾಗತಿಕ ವೇಗದಲ್ಲಿ ಪ್ರೇರಕ ಶಕ್ತಿಯಾಗಿ ಗುರುತಿಸುವಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿದೆ.

 

*****


(ಪ್ರಕಟಣೆ ಐ.ಡಿ.: 2243530) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी