ಪರಿಸರ ಮತ್ತು ಅರಣ್ಯ ಸಚಿವಾಲಯ
ಜೈವಿಕ ವೈವಿಧ್ಯತೆಯ ಸಮಾವೇಶಕ್ಕೆ ಏಳನೇ ರಾಷ್ಟ್ರೀಯ ವರದಿಯನ್ನು ಸಲ್ಲಿಸಿದ ಭಾರತ
ಪ್ರಕಟಣಾ ದಿನಾಂಕ:
16 MAR 2026 1:46PM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (ಎಂ.ಒ.ಇ.ಎಫ್.ಸಿ.ಸಿ.) ಭಾರತದ ಏಳನೇ ರಾಷ್ಟ್ರೀಯ ವರದಿಯನ್ನು (ಎನ್ ಆರ್ -7) ಜೈವಿಕ ವೈವಿಧ್ಯತೆಯ ಸಮಾವೇಶಕ್ಕೆ (ಸಿಬಿಡಿ) ಸಲ್ಲಿಸಿದೆ, ಈ ಮೂಲಕ ಸಮಾವೇಶದ ಮೂರು ಉದ್ದೇಶಗಳಿಗೆ ಸಚಿವಾಲಯವು ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಅದರ ಘಟಕಗಳ ಸುಸ್ಥಿರ ಬಳಕೆ ಮತ್ತು ಆನುವಂಶಿಕ ಸಂಪನ್ಮೂಲಗಳಿಂದ ಉಂಟಾಗುವ ಪ್ರಯೋಜನಗಳ ನ್ಯಾಯಯುತ ಮತ್ತು ಸಮಾನ ಹಂಚಿಕೆಗಳಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.
ಜೈವಿಕ ವೈವಿಧ್ಯತೆಯ ಸಮಾವೇಶಕ್ಕೆ (ಸಿ.ಬಿ.ಡಿ) ರಾಷ್ಟ್ರೀಯ ವರದಿಗಳನ್ನು ಸಲ್ಲಿಸುವುದು ಕಡ್ಡಾಯ ಬಾಧ್ಯತೆಯಾಗಿದೆ. ಜವಾಬ್ದಾರಿಯುತ ರಾಷ್ಟ್ರವಾಗಿ, ಭಾರತವು ತನ್ನ ಅಂತಾರಾಷ್ಟ್ರೀಯ ಬದ್ಧತೆಗಳನ್ನು ನಿರಂತರವಾಗಿ ಗೌರವಿಸಿದೆ ಮತ್ತು ಹಿಂದಿನ ಎಲ್ಲಾ ರಾಷ್ಟ್ರೀಯ ವರದಿಗಳನ್ನು 26ನೇ ವಿಧಿಯ ಅಡಿಯಲ್ಲಿ ಅಗತ್ಯವಿರುವಂತೆ ಜೈವಿಕ ವೈವಿಧ್ಯತೆಯ ಸಮಾವೇಶಕ್ಕೆ (ಸಿ.ಬಿ.ಡಿ) ಸಕಾಲಿಕವಾಗಿ ಸಲ್ಲಿಸಿದೆ. ಸಿ.ಒ.ಪಿ ನಿರ್ಧಾರ 15/6 ರ ಪ್ರಕಾರ, ಭಾರತವು ಫೆಬ್ರವರಿ 28, 2026 ರ ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿ ಫೆಬ್ರವರಿ 26, 2026 ರಂದು ತನ್ನ ಏಳನೇ ರಾಷ್ಟ್ರೀಯ ವರದಿಯನ್ನು (ಎನ್. ಆರ್-7) ಸಲ್ಲಿಸಿದೆ.
ಎನ್ ಆರ್-7 ಭಾರತದ ನವೀಕರಿಸಿದ ರಾಷ್ಟ್ರೀಯ ಜೀವವೈವಿಧ್ಯ ತಂತ್ರ ಮತ್ತು ಕ್ರಿಯಾ ಯೋಜನೆ (ಎನ್.ಬಿ.ಎಸ್.ಎ.ಪಿ 2024-2030) ಮತ್ತು ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೀವವೈವಿಧ್ಯ ಚೌಕಟ್ಟು (ಕೆ.ಎಂ.ಜಿ.ಬಿ.ಎಫ್) ನೊಂದಿಗೆ ಹೊಂದಿಕೆಯಾಗುವ ಸಮಗ್ರ, ಸೂಚಕ ಆಧಾರಿತ ರಾಷ್ಟ್ರೀಯ ಮೌಲ್ಯಮಾಪನವನ್ನು ಪ್ರಸ್ತುತಪಡಿಸುತ್ತದೆ. ವರದಿಯು 23 ರಾಷ್ಟ್ರೀಯ ಜೀವವೈವಿಧ್ಯ ಗುರಿಗಳ (ಎನ್.ಬಿ.ಟಿ.) ವಿರುದ್ಧ ಮ್ಯಾಪ್ ಮಾಡಲಾದ 142 ರಾಷ್ಟ್ರೀಯ ಸೂಚಕಗಳನ್ನು ಆಧರಿಸಿದೆ. ಈ ಮೌಲ್ಯಮಾಪನವು 33 ಕೇಂದ್ರ ಸಚಿವಾಲಯಗಳು/ ಇಲಾಖೆಗಳು, ರಾಜ್ಯ ಸರ್ಕಾರಗಳು, ಶಾಸನಬದ್ಧ ಪ್ರಾಧಿಕಾರಗಳು, ಸಂಶೋಧನಾ ಸಂಸ್ಥೆಗಳು ಮತ್ತು ಇತರ ಪಾಲುದಾರರಿಂದ ಸಂಘಟಿತ ಮಾಹಿತಿ ಒಳಹರಿವುಗಳನ್ನು ಪ್ರತಿಬಿಂಬಿಸುತ್ತದೆ.
ಭಾರತದ ಎನ್ ಆರ್-7 ಎಲ್ಲಾ 23 ರಾಷ್ಟ್ರೀಯ ಜೀವವೈವಿಧ್ಯ ಗುರಿಗಳು (ಎನ್.ಬಿ.ಟಿ) ಪ್ರಸ್ತುತ "ಸಾಧಿಸುವ ಹಾದಿಯಲ್ಲಿವೆ" ಎಂದು ವರದಿ ಮಾಡಿದೆ, ಇದು ರಾಷ್ಟ್ರೀಯ ಆದ್ಯತೆಗಳು ಮತ್ತು ಜಾಗತಿಕ ಜೀವವೈವಿಧ್ಯ ಬದ್ಧತೆಗಳ ನಡುವೆ ಬಲವಾದ ಹೊಂದಾಣಿಕೆಯನ್ನು ಪ್ರದರ್ಶಿಸುತ್ತದೆ. ಭಾರತದ ಜೀವವೈವಿಧ್ಯ ಸಂರಕ್ಷಣಾ ಪ್ರಯತ್ನಗಳಲ್ಲಿ ದೀರ್ಘಕಾಲೀನ ಅಭ್ಯಾಸಗಳನ್ನು ಪ್ರತಿಬಿಂಬಿಸುವ "ಇಡೀ ಸರ್ಕಾರ" ಮತ್ತು "ಇಡೀ ಸಮಾಜದ" ವಿಧಾನವನ್ನು ವರದಿಯು ಒತ್ತಿಹೇಳುತ್ತದೆ. ಇದು 33 ಕೇಂದ್ರ ಸಚಿವಾಲಯಗಳು/ಇಲಾಖೆಗಳ ತೊಡಗಿಸಿಕೊಳ್ಳುವಿಕೆಯನ್ನು ಉಲ್ಲೇಖಿಸುತ್ತದೆ, ಮೂಲಸೌಕರ್ಯ, ಕೃಷಿ, ಅರಣ್ಯ ಮತ್ತು ಕರಾವಳಿ ವಲಯದ ನೀತಿಗಳಲ್ಲಿ ಜೀವವೈವಿಧ್ಯ ಸುರಕ್ಷತೆಗಳನ್ನು ಸಂಯೋಜಿಸುತ್ತದೆ.
ಭಾರತವು ಜೀವವೈವಿಧ್ಯ-ಒಳಗೊಂಡ ಭೂಮಿ ಮತ್ತು ಸಮುದ್ರ ದೃಶ್ಯ ಯೋಜನೆಯನ್ನು ಗಣನೀಯವಾಗಿ ಬಲಪಡಿಸಿದೆ. ದಾಖಲಾದ ಅರಣ್ಯ ಪ್ರದೇಶವು 7,75,377 ಕಿಮೀ 2 (ಭೌಗೋಳಿಕ ಪ್ರದೇಶದ 23.59%) ರಷ್ಟಿದೆ, ಇದರಲ್ಲಿ ಅರಣ್ಯ ಪ್ರದೇಶವು 5,20,365 ಕಿಮೀ 2 (15.83%) ರಷ್ಟಿದೆ. ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿ 8,27,356.95 ಕಿಮೀ 2 (25.17%) ತಲುಪಿದೆ, ಇದು ನಿರಂತರ ಪ್ರಾದೇಶಿಕ ಯೋಜನಾ ಏಕೀಕರಣವನ್ನು ಪ್ರತಿಬಿಂಬಿಸುತ್ತದೆ. ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಅಧಿಸೂಚಿತ “ರಾಮ್ಸರ್ ಜೌಗು” ಪ್ರದೇಶಗಳ ಸಂಖ್ಯೆ 2014 ರಲ್ಲಿ 26 ರಿಂದ 2026 ರ ವೇಳೆಗೆ 98 ಕ್ಕೆ ವಿಸ್ತರಿಸಿದೆ.
ಭಾರತದ ಸಂರಕ್ಷಣಾ ಜಾಲವು ಈಗ 58 ಹುಲಿ ಮೀಸಲು ಪ್ರದೇಶಗಳು, 33 ಆನೆ ಮೀಸಲು ಪ್ರದೇಶಗಳು, 18 ಜೀವಗೋಳ ಮೀಸಲು ಪ್ರದೇಶಗಳು, 106 ರಾಷ್ಟ್ರೀಯ ಉದ್ಯಾನವನಗಳು ಮತ್ತು 574 ವನ್ಯಜೀವಿ ಅಭಯಾರಣ್ಯಗಳನ್ನು ಒಳಗೊಂಡಿದೆ. ಭಾರತವು 3,682 ಹುಲಿಗಳನ್ನು ಬೆಂಬಲಿಸುತ್ತದೆ, (ಜಾಗತಿಕ ಹುಲಿ ಜನಸಂಖ್ಯೆಯ 70% ಕ್ಕಿಂತ ಹೆಚ್ಚು). 4,014 ದೊಡ್ಡ ಒಂಟಿ ಕೊಂಬಿನ ಖಡ್ಗಮೃಗಗಳು, 22,446 ಕಾಡು ಆನೆಗಳು, 891 ಏಷ್ಯಾಟಿಕ್ ಸಿಂಹಗಳು ಮತ್ತು ಮೊದಲ ಹಿಮ ಚಿರತೆ ಸಂಖ್ಯಾ ಮೌಲ್ಯಮಾಪನ ಮೂಲಕ ಅಂದಾಜಿಸಲಾಗಿದೆ. ಡಾಲ್ಫಿನ್ ಯೋಜನೆಯಡಿಯಲ್ಲಿ, ಮೊಟ್ಟಮೊದಲ ನದಿ ಡಾಲ್ಫಿನ್ ಜನಸಂಖ್ಯಾ ಅಂದಾಜಿನ ವರದಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಲಾಗಿದೆ, ಇದು ದೇಶದಲ್ಲಿ 6,327 ನದಿ ಡಾಲ್ಫಿನ್ಗಳ ಜನಸಂಖ್ಯೆಯನ್ನು ವರದಿ ಮಾಡಿದೆ.
ಭಾರತವು 22 ಕೃಷಿ ಜೀವವೈವಿಧ್ಯ ತಾಣಗಳನ್ನು ದಾಖಲಿಸಿದೆ ಮತ್ತು ವೈವಿಧ್ಯತೆ, ಅನನ್ಯತೆ ಮತ್ತು ಕೃಷಿ ಪರಂಪರೆಯ ಆಧಾರದ ಮೇಲೆ 171 ಸ್ಥಳೀಯ ಬೆಳೆಗಳು ಮತ್ತು 230 ಸ್ಥಳೀಯ ಪ್ರಾಣಿ ತಳಿಗಳಲ್ಲಿ 769 ಬೆಳೆ ಕಾಡು ಸಂಬಂಧಿಗಳ ಆದ್ಯತೆಯ ಸಂರಕ್ಷಣೆಯನ್ನು ಮಾಡಿದೆ.
ಭಾರತದ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವು 140 ಕೋಟಿ ರೂಪಾಯಿ ವಿತರಿಸುವ 5,600 ಕ್ಕೂ ಹೆಚ್ಚು ಎ.ಬಿ.ಎಸ್. ಒಪ್ಪಂದಗಳನ್ನು ಹೊರಡಿಸಿದೆ, ಆದರೆ 2,76,653 ಬಿ.ಎಂ.ಸಿ. ಗಳು ಮತ್ತು 2,72, 648 ಪಿ.ಬಿ.ಆರ್.ಗಳು ಜೀವವೈವಿಧ್ಯ ಸ್ನೇಹಿ ಅಭ್ಯಾಸಗಳನ್ನು ಉತ್ತೇಜಿಸಲು ಸ್ಥಳೀಯ ಸಮುದಾಯಗಳು ಮತ್ತು ಸಾಂಪ್ರದಾಯಿಕ ಜ್ಞಾನವನ್ನು ತೊಡಗಿಸಿಕೊಂಡಿವೆ.
ವರ್ಷಗಳಲ್ಲಿ, ಭಾರತವು ಅಗತ್ಯವಿರುವ ಮೂಲಸೌಕರ್ಯ ಮತ್ತು ಪ್ರಮಾಣೀಕೃತ ಮೇಲ್ವಿಚಾರಣಾ ಪ್ರೋಟೋಕಾಲ್ ಗಳ ಜೊತೆಗೆ ಗಾಳಿ, ನೀರು ಮತ್ತು ಶಬ್ದ ಮೇಲ್ವಿಚಾರಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಸೂಕ್ತವಾದ ಕಾನೂನು ಬೆಂಬಲದೊಂದಿಗೆ ಹೆಚ್ಚು ಅಪೇಕ್ಷಿತ ಸಾಂಸ್ಥಿಕ ಚೌಕಟ್ಟನ್ನು ಅಭಿವೃದ್ಧಿಪಡಿಸಿದೆ.
ಸಂರಕ್ಷಿತ ಪ್ರದೇಶಗಳು ದೇಶದ ಪ್ರಮುಖ ಕಾನೂನುಗಳ ಅಡಿಯಲ್ಲಿ (ಭಾರತೀಯ ಅರಣ್ಯ ಕಾಯ್ದೆ, 1927; ವನ್ಯಜೀವಿ (ರಕ್ಷಣೆ) ಕಾಯ್ದೆ, 1972; ಪರಿಸರ (ರಕ್ಷಣೆ) ಕಾಯ್ದೆ, 1986; ಜೈವಿಕ ವೈವಿಧ್ಯತೆ ಕಾಯ್ದೆ, 2002; ವ್ಯಾನ್ ಪಂಚಾಯತ್ ಕಾಯ್ದೆ, (1931) ಅಪೇಕ್ಷಿತ ಕಾನೂನು ರಕ್ಷಣೆಯನ್ನು ಪಡೆಯುತ್ತವೆ. ಭಾರತದ ಸಂರಕ್ಷಣಾ ಕಾರ್ಯತಂತ್ರವು ನೈಸರ್ಗಿಕ ಪರಿಸರ ವ್ಯವಸ್ಥೆಗಳು ಮತ್ತು ಕೃಷಿ ಜೀವವೈವಿಧ್ಯ ಎರಡರ ಸುಸ್ಥಿರ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಆವಾಸಸ್ಥಾನ ಪುನಃಸ್ಥಾಪನೆ ಮತ್ತು ಜಾತಿಗಳ ಚೇತರಿಕೆ ಕಾರ್ಯಕ್ರಮಗಳಿಂದ ಹಿಡಿದು “ಸಿತು” ಮತ್ತು “ಎಕ್ಸ್ ಸಿತು” ಕ್ರಮಗಳನ್ನು ಸಂಯೋಜಿಸುತ್ತದೆ. ಭಾರತವು ಅರಣ್ಯ ಸಂಪನ್ಮೂಲಗಳು ಮತ್ತು ಮುಕ್ತ ಶ್ರೇಣಿಯ ಪ್ರಭೇದಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಆನುವಂಶಿಕ ಸಂಪನ್ಮೂಲಗಳ ಸಂರಕ್ಷಣೆಗಾಗಿ ರಿಮೋಟ್ ಸೆನ್ಸಿಂಗ್ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ, ಉಪಗ್ರಹ ಟೆಲಿಮೆಟ್ರಿ, ಮಾನವರಹಿತ ವೈಮಾನಿಕ ವಾಹನ (ಯು.ಎ.ವಿ), ಕ್ಯಾಮೆರಾ ಟ್ರ್ಯಾಪ್ ಮತ್ತು ಡಿ.ಎನ್. ಎ. ಆಧಾರಿತ ಪರಿಕರಗಳಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತಿದೆ.
‘ಡಿಜಿಟಲ್ ಇಂಡಿಯಾ’ಕ್ಕೆ ಅನುಗುಣವಾಗಿ ಮತ್ತು “ಕನಿಷ್ಠ ಸರ್ಕಾರ” ಮತ್ತು “ಗರಿಷ್ಠ ಆಡಳಿತ”ದ ಮನೋಭಾವವನ್ನು ಸೆರೆಹಿಡಿಯುವ ಸಲುವಾಗಿ, ಪಾರದರ್ಶಕತೆ ಮತ್ತು ಕೆಲಸದ ಸುಲಭತೆಯನ್ನು ಖಚಿತಪಡಿಸಿಕೊಳ್ಳಲು ಪರಿವೇಶ್ (ಪರ-ಸಕ್ರಿಯ ಮತ್ತು ಸ್ಪಂದಿಸುವ ಸೌಲಭ್ಯ) ಎಂಬ ಹೆಸರಿನ ಏಕ-ಗವಾಕ್ಷಿ ಯನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (ಎಂ.ಒ.ಇ.ಎಫ್.ಸಿ.ಸಿ.) ಅಭಿವೃದ್ಧಿಪಡಿಸಿದೆ. ಭಾರತದ ಎನ್.ಆರ್-7 ನಾಗರಿಕರ ಕೊಡುಗೆಗಳನ್ನು ಸಹ ಸೆರೆಹಿಡಿಯುತ್ತದೆ, ಇದರಲ್ಲಿ 'ಮಿಷನ್ ಲೈಫ್' (ಪರಿಸರಕ್ಕಾಗಿ ಜೀವನಶೈಲಿ) ಮತ್ತು 'ತಾಯಿಯ ಹೆಸರಲ್ಲಿ ಒಂದು ಸಸಿ(ಏಕ್ ಪೆಡ್ ಮಾ ಕೆ ನಾಮ್)' ನಂತಹ ಉಪಕ್ರಮಗಳ ಮೂಲಕವೂ ಸೇರಿದೆ.
ಭಾರತದ ಏಳನೇ ರಾಷ್ಟ್ರೀಯ ವರದಿಯು ಸಂರಕ್ಷಣೆ, ಪುನಃಸ್ಥಾಪನೆ, ಸುಸ್ಥಿರ ಬಳಕೆ, ಆಡಳಿತ ಸುಧಾರಣೆ, ಹವಾಮಾನ ತಗ್ಗಿಸುವಿಕೆ ಮತ್ತು ಸಮುದಾಯ ಭಾಗವಹಿಸುವಿಕೆಯಾದ್ಯಂತ ಅಳೆಯಬಹುದಾದ ಪ್ರಗತಿಯನ್ನು ಪ್ರದರ್ಶಿಸುವ ದೃಢವಾದ, ಸೂಚಕ-ಚಾಲಿತ ರಾಷ್ಟ್ರೀಯ ಮೌಲ್ಯಮಾಪನವನ್ನು ಪ್ರಸ್ತುತಪಡಿಸುತ್ತದೆ. ಕುನ್ಮಿಂಗ್-ಮಾಂಟ್ರಿಯಲ್ ಜಾಗತಿಕ ಜೀವವೈವಿಧ್ಯ ಚೌಕಟ್ಟಿನ ಅಡಿಯಲ್ಲಿ 2030ರ ವೇಳೆಗೆ ಜೈವಿಕ ವೈವಿಧ್ಯತೆಯ ಸಮಾವೇಶದ ಉದ್ದೇಶಗಳನ್ನು ಸಾಧಿಸಲು ಮತ್ತು ಜಾಗತಿಕ ಜೀವವೈವಿಧ್ಯ ಗುರಿಗಳನ್ನು ತಲುಪಿಸಲು ಭಾರತದ ಬಲವಾದ ಬದ್ಧತೆಯನ್ನು ಈ ವರದಿ ಸಲ್ಲಿಕೆಯು ಪುನರುಚ್ಚರಿಸುತ್ತದೆ.
ಪೂರ್ಣ ವರದಿಯನ್ನು ಸಿಬಿಡಿ ಕ್ಲಿಯರಿಂಗ್-ಹೌಸ್ ಮೆಕ್ಯಾನಿಸಂ (ಸಿ ಎಚ್ ಎಂ) ಜಾಲತಾಣದಲ್ಲಿ ಪಡೆಯಬಹುದು: https://ort.cbd.int/national-reports/nr7/359D8BAC-9FD6-0ACE-BB25-309292A6A97D
*****
(ಪ್ರಕಟಣೆ ಐ.ಡಿ.: 2240632)
ವಿಸಿಟರ್ ಕೌಂಟರ್ : 15