ಭಾರೀ ಕೈಗಾರಿಕೆಗಳ ಸಚಿವಾಲಯ
ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಎಚ್ಇಎಲ್ ಹರಿದ್ವಾರಕ್ಕೆ ಭೇಟಿ ನೀಡಿ, ಪ್ರಮುಖ ಇಂಧನ, ರಕ್ಷಣೆ ಮತ್ತು ಉತ್ಪಾದನಾ ಮೈಲಿಗಲ್ಲುಗಳಿಗೆ ಹಸಿರು ನಿಶಾನೆ ತೋರಿದರು
ಪ್ರಧಾನಮಂತ್ರಿ ಮೋದಿ ಅವರ ಆತ್ಮನಿರ್ಭರ ಭಾರತ್ ದೃಷ್ಟಿಕೋನದಡಿಯಲ್ಲಿ ಭಾರತದ ವರ್ಧಿಸುತ್ತಿರುವ ಕೈಗಾರಿಕಾ ಮತ್ತು ಕಾರ್ಯತಂತ್ರದ ಉತ್ಪಾದನಾ ಸಾಮರ್ಥ್ಯವನ್ನು ಬಿಎಚ್‌ಇಎಲ್ ಹರಿದ್ವಾರ ಪ್ರದರ್ಶಿಸಿದೆ
ಪ್ರಧಾನಮಂತ್ರಿ ಮೋದಿ ಅವರ ಆತ್ಮನಿರ್ಭರ ಭಾರತ್ ಮತ್ತು ನಿವ್ವಳ ಶೂನ್ಯ 2070 ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ ಬಿಎಚ್‌ಇಎಲ್ ಪಾತ್ರವನ್ನು ಕೇಂದ್ರ ಸಚಿವರು ಉಲ್ಲೇಖಿಸಿದರು
ಪ್ರಕಟಣಾ ದಿನಾಂಕ:
12 MAR 2026 9:22PM by PIB Bengaluru
ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವರಾದ ಶ್ರೀ. ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಹರಿದ್ವಾರದಲ್ಲಿರುವ ಬಿಎಚ್‌ಇಎಲ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು, ಅಲ್ಲಿ ಅವರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು ಮತ್ತು ಪ್ರಮುಖ ಕೈಗಾರಿಕಾ ಹಾಗು ರಕ್ಷಣಾ ಉಪಕರಣಗಳ ರವಾನೆಗೆ ಹಸಿರು ನಿಶಾನೆ ತೋರಿದರು. ಇದು ಭಾರತದ ಭಾರೀ ಎಂಜಿನಿಯರಿಂಗ್ ಪರಿಸರ ವ್ಯವಸ್ಥೆಯ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಉಲ್ಲೇಖಿಸಿದರು.

ವಿದ್ಯುತ್ ಉತ್ಪಾದನೆ, ಶುದ್ಧ ಇಂಧನ, ರಕ್ಷಣಾ ಉತ್ಪಾದನೆ ಮತ್ತು ಆಧುನಿಕ ಭಾರೀ ಎಂಜಿನಿಯರಿಂಗ್‌ನಂತಹ ಕ್ಷೇತ್ರಗಳಲ್ಲಿ ಭಾರತದ ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ವಹಿಸಿದ ಪ್ರಮುಖ ಪಾತ್ರವನ್ನು ಈ ಭೇಟಿ ಒತ್ತಿಹೇಳಿದರು.
ಈ ಸೌಲಭ್ಯದಲ್ಲಿ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳು ಮತ್ತು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಬಿಎಚ್‌ಇಎಲ್‌ನಂತಹ ಸಂಸ್ಥೆಗಳು ಭಾರತದ ಕೈಗಾರಿಕಾ ಶಕ್ತಿಯ ತಿರುಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದರು. "ಬಿಎಚ್‌ಇಎಲ್‌ನಂತಹ ಸಂಸ್ಥೆಗಳು ಕೇವಲ ಉತ್ಪಾದನಾ ಘಟಕಗಳಲ್ಲ. ಅವು ರಾಷ್ಟ್ರೀಯ ಸಾಮರ್ಥ್ಯದ ಭಂಡಾರಗಳಾಗಿವೆ" ಎಂದು ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತ ಸರ್ಕಾರವು ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸಿದೆ ಹಾಗು ಸಾರ್ವಜನಿಕ ವಲಯದ ಉದ್ಯಮಗಳು ಈ ದೃಷ್ಟಿಕೋನವನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು.
“ಭಾರತ ಇಂಧನ ಭದ್ರತೆ, ಕೈಗಾರಿಕಾ ದೃಢತೆ, ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಸ್ವಾವಲಂಬಿ ಬೆಳವಣಿಗೆಯ ಬಗ್ಗೆ ಮಾತನಾಡುವಾಗ, ಆ ರಾಷ್ಟ್ರೀಯ ಆಕಾಂಕ್ಷೆಗಳನ್ನು ದೇಶಕ್ಕೆ ಬಲಿಷ್ಟ ಆಸ್ತಿಗಳಾಗಿ ಪರಿವರ್ತಿಸುವುದು ಬಿಎಚ್‌ಇಎಲ್‌ನಂತಹ ಸಂಸ್ಥೆಗಳು" ಎಂದೂ ಕುಮಾರಸ್ವಾಮಿ ಹೇಳಿದರು.
ಶುದ್ಧ ಇಂಧನಕ್ಕೆ ಉತ್ತೇಜನ
ಭೇಟಿಯ ಸಮಯದಲ್ಲಿ, ಕೇಂದ್ರ ಸಚಿವರು, ಹರಿದ್ವಾರ ಸೌಲಭ್ಯದಲ್ಲಿ ಭೂಮಿಯ ಮೇಲೆ ಸ್ಥಾಪಿಸಲಾಗಿರುವ 5 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಸುಸ್ಥಿರ ಇಂಧನ ಪರಿಹಾರಗಳತ್ತ ಬಿಎಚ್‌ಇಎಲ್‌ನ ಪರಿವರ್ತನೆಯಲ್ಲಿ ಈ ಯೋಜನೆಯು ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.

ಕಾರ್ಯಕ್ರಮದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕುಮಾರಸ್ವಾಮಿ, "5 ಮೆಗಾವ್ಯಾಟ್ ಭೂಗತ ಸೌರ ವಿದ್ಯುತ್ ಸ್ಥಾವರವನ್ನು ರಾಷ್ಟ್ರಕ್ಕೆ ಅರ್ಪಿಸುವ ಅವಕಾಶ ಪಡೆದಿದ್ದೇನೆ. 11,000 ಕ್ಕೂ ಹೆಚ್ಚು ಸೌರ ಮಾಡ್ಯೂಲ್‌ಗಳು ಮತ್ತು ಸುಮಾರು 90 ಲಕ್ಷ ಕಿಲೋವ್ಯಾಟ್ ವಾರ್ಷಿಕ ಉತ್ಪಾದನೆಯೊಂದಿಗೆ, ಈ ಯೋಜನೆಯು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ ಹಾಗು ಶುದ್ಧ ಇಂಧನ ಉತ್ಪಾದನೆಗೆ ಕೊಡುಗೆ ನೀಡುತ್ತದೆ. ಈ ಉಪಕ್ರಮವು ಬಿಎಚ್‌ಇಎಲ್ ಹರಿದ್ವಾರದ ಶುದ್ಧ ಇಂಧನ ಪ್ರಯಾಣವನ್ನು ಬಲಪಡಿಸುತ್ತದೆ ಮತ್ತು ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ 2070 ರ ನಿವ್ವಳ ಶೂನ್ಯ ದೃಷ್ಟಿಕೋನವನ್ನು ಮುನ್ನಡೆಸುತ್ತದೆ" ಎಂದು ಹೇಳಿದ್ದಾರೆ.
ಈ ಸ್ಥಾವರವು ವಾರ್ಷಿಕವಾಗಿ ಸುಮಾರು 90 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ, ಅದೇ ಸಮಯದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಕಾರ್ಯಾಚರಣೆಯ ವೆಚ್ಚದಲ್ಲಿ ಗಣನೀಯ ಪ್ರಮಾಣದ ಉಳಿತಾಯವನ್ನು ಸಾಧ್ಯವಾಗಿಸುತ್ತದೆ.
ಫೌಂಡ್ರಿ ಮತ್ತು ಫೋರ್ಜಿಂಗ್ ಸಾಮರ್ಥ್ಯಗಳನ್ನು ಬಲಪಡಿಸುವುದು
ಕೇಂದ್ರ ಸಚಿವರು ಬಿಎಚ್‌ಇಎಲ್‌ನ ಸೆಂಟ್ರಲ್ ಫೌಂಡ್ರಿ ಮತ್ತು ಫೋರ್ಜ್ ಪ್ಲಾಂಟ್ (ಲೋಹಗಳನ್ನು ಕರಗಿಸಿ ಬೇಕಾದ ರೂಪಕ್ಕೆ ತರುವ ಸೌಲಭ್ಯ/ಸ್ಥಾವರ) ನಲ್ಲಿ 30 ಟನ್ ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ (ವಿದ್ಯುತ್ ಕುಲುಮೆ-ಇಎಎಫ್) ಉದ್ಘಾಟಿಸಿದರು, ಇದು ಕಂಪನಿಯ ಲೋಹ ವಿಜ್ಞಾನದ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ.
ಈ ಸೌಲಭ್ಯದ ಮಹತ್ವವನ್ನು ಉಲ್ಲೇಖಿಸಿದಸಿದ ಕುಮಾರಸ್ವಾಮಿ, ವಿದ್ಯುತ್, ಭಾರೀ ಎಂಜಿನಿಯರಿಂಗ್ ಮತ್ತು ಕಾರ್ಯತಂತ್ರದ ವಲಯಗಳಲ್ಲಿ ಬಳಸುವ ನಿರ್ಣಾಯಕ ಘಟಕಗಳಿಗೆ ಸಂಬಂಧಿಸಿ ಭಾರತದ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಕುಲುಮೆ ಬಲಪಡಿಸುತ್ತದೆ ಎಂದು ಹೇಳಿದರು. "ಹರಿದ್ವಾರದಲ್ಲಿರುವ ಬಿಎಚ್‌ಇಎಲ್‌ನ ಸೆಂಟ್ರಲ್ ಫೌಂಡ್ರಿ ಮತ್ತು ಫೋರ್ಜ್ ಪ್ಲಾಂಟ್‌ನಲ್ಲಿ 30 ಟಿ ಎಲೆಕ್ಟ್ರಿಕ್ ಆರ್ಕ್ ಫರ್ನೇಸ್ ಉದ್ಘಾಟನೆ, ಭಾರತದ ನಿರ್ಣಾಯಕ ಫೌಂಡ್ರಿ ಮತ್ತು ಫೋರ್ಜಿಂಗ್ ಸಾಮರ್ಥ್ಯಗಳನ್ನು ಬಲಪಡಿಸಿದೆ. ಈ ಸೌಲಭ್ಯವು ಆಧುನಿಕ ಕೈಗಾರಿಕಾ ಅವಶ್ಯಕತೆಗಳಿಗಾಗಿ ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ" ಎಂದು ಅವರು ಹೇಳಿದರು.
ದೇಶೀಯ ರಕ್ಷಣಾ ಉತ್ಪಾದನೆ
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಭಾರತೀಯ ನೌಕಾಪಡೆಗಾಗಿ ಮೇಲ್ದರ್ಜೆಗೇರಿಸಿದ ಸೂಪರ್ ರಾಪಿಡ್ ಗನ್ ಮೌಂಟ್ (ಎಸ್.ಆರ್.ಜಿ.ಎಂ.-SRGM)ಗೆ ಸಚಿವರು ಹಸಿರು ನಿಶಾನೆ ತೋರಿದರು, ಇದು ಭಾರತದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯಲ್ಲಿ ಬಿ.ಎಚ್.ಇ.ಎಲ್.ನ ನ ಪಾತ್ರ ಬೆಳೆಯುತ್ತಿರುವುದನ್ನು ಪ್ರದರ್ಶಿಸುತ್ತದೆ.
ಈ ಆಧುನಿಕ ನೌಕಾ ಶಸ್ತ್ರಾಸ್ತ್ರ ವ್ಯವಸ್ಥೆಯು ವಿಮಾನ ನಿಗ್ರಹ ಮತ್ತು ಭೂ ಮೇಲ್ಮೈ ದಾಳಿ ನಿಗ್ರಹ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ 35 ಕಿಲೋಮೀಟರ್‌ಗಳವರೆಗೆ ಗುಂಡು ಹಾರಿಸಬಲ್ಲ ವ್ಯಾಪ್ತಿಯೊಂದಿಗೆ, ಪ್ರತಿ ನಿಮಿಷಕ್ಕೆ 120 ಸುತ್ತುಗಳವರೆಗೆ ಕ್ಷಿಪ್ರ ಗುಂಡು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ದೇಶೀಯ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಅಭಿವೃದ್ಧಿಯ ಮಹತ್ವವನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಎತ್ತಿ ತೋರಿಸಿದರು. "ಈ ಮೈಲಿಗಲ್ಲು ಭಾರತದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯ ಬೆಳೆಯುತ್ತಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಭಾರತ ಹಾಗು ಜಗತ್ತಿಗೆ ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಪ್ರತಿಧ್ವನಿಸುತ್ತದೆ.
ಟರ್ಬೊ ಜನರೇಟರ್ಗೆ ಹಸಿರು ನಿಶಾನೆ
ಭೇಟಿಯ ಸಮಯದಲ್ಲಿ, ಸಚಿವರು ಸೌಲಭ್ಯದಿಂದ ದೊಡ್ಡ ಟರ್ಬೊ ಜನರೇಟರ್‌ನ ರವಾನೆಗೆ ಹಸಿರು ನಿಶಾನೆ ತೋರಿದರು, ಇದು ಭಾರತದ ಭಾರೀ ವಿದ್ಯುತ್ ಉತ್ಪಾದನಾ ಸಾಮರ್ಥ್ಯಗಳ ಪ್ರಮಾಣ ಮತ್ತು ಅತ್ಯಾಧುನಿಕತೆಯನ್ನು ಒತ್ತಿಹೇಳುತ್ತದೆ. ದೊಡ್ಡ ವಿದ್ಯುತ್ ಯೋಜನೆಗಾಗಿ ನಿರ್ಮಿಸಲಾದ ಈ ಜನರೇಟರ್, ಭಾರತದ ಇಂಧನ ಮೂಲಸೌಕರ್ಯಕ್ಕೆ ಅಗತ್ಯವಾದ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಉಪಕರಣಗಳನ್ನು ತಯಾರಿಸುವಲ್ಲಿ ಬಿಎಚ್‌ಇಎಲ್‌ನ ಪರಿಣತಿಯನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆಯು ಭಾರತದ ಸುಧಾರಿತ ವಿದ್ಯುತ್ ಉಪಕರಣಗಳನ್ನು ದೇಶೀಯವಾಗಿ ತಯಾರಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಭಾರತದ ಕೈಗಾರಿಕಾ ಸಾಮರ್ಥ್ಯದ ಬೆನ್ನೆಲುಬು
ಭಾರತದ ಕೈಗಾರಿಕಾ ಪರಿಸರ ವ್ಯವಸ್ಥೆಯಲ್ಲಿ ಬಿಎಚ್‌ಇಎಲ್ ಹರಿದ್ವಾರವು ಪ್ರಮುಖ ಸ್ತಂಭವಾಗಿದೆ ಎಂಬುದರತ್ತ ಕೇಂದ್ರ ಸಚಿವರು ಗಮನ ಸೆಳೆದರು, ಇದು ಉಷ್ಣ ವಿದ್ಯುತ್ ಸ್ಥಾವರಗಳಿಗೆ ಟರ್ಬೈನ್‌ಗಳು ಮತ್ತು ಜನರೇಟರ್‌ಗಳನ್ನು ಉತ್ಪಾದಿಸುವ ಹೆವಿ ಎಲೆಕ್ಟ್ರಿಕಲ್ ಸಲಕರಣೆ ಸ್ಥಾವರ ಮತ್ತು ದೊಡ್ಡ ಎರಕಹೊಯ್ದ ಹಾಗು ಫೋರ್ಜಿಂಗ್‌ಗಳನ್ನು ಪೂರೈಸುವ ಸೆಂಟ್ರಲ್ ಫೌಂಡ್ರಿ ಮತ್ತು ಫೋರ್ಜ್ ಸ್ಥಾವರ ಎರಡನ್ನೂ ಹೊಂದಿದೆ. "ಈ ಸಾಮರ್ಥ್ಯಗಳನ್ನು ಭಾರತದೊಳಗೆ ನಿರ್ಮಿಸಿದಾಗ ಮತ್ತು ಉಳಿಸಿಕೊಳ್ಳುವಾಗ, ರಾಷ್ಟ್ರವು ಸ್ಥಿತಿಸ್ಥಾಪಕತ್ವವನ್ನು ಪಡೆಯುತ್ತದೆ. ಇದು ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ದೇಶೀಯ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ, ಕಾರ್ಯತಂತ್ರದ ಜ್ಞಾನವನ್ನು ರಕ್ಷಿಸುತ್ತದೆ ಮತ್ತು ಭವಿಷ್ಯಕ್ಕಾಗಿ ಬಾಳಿಕೆ ಬರುವ ಕೈಗಾರಿಕಾ ನೆಲೆಯನ್ನು ಸೃಷ್ಟಿಸುತ್ತದೆ" ಎಂದು ಕುಮಾರಸ್ವಾಮಿ ಹೇಳಿದರು.
ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಬಿಎಚ್‌ಇಎಲ್ ನಿರ್ಣಾಯಕ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂದು ಕೇಂದ್ರ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಶುದ್ಧ ಇಂಧನ, ಆಧುನಿಕ ಉತ್ಪಾದನೆ, ರಕ್ಷಣಾ ಉತ್ಪಾದನೆ ಮತ್ತು ವಿದ್ಯುತ್ ಉಪಕರಣ ಎಂಜಿನಿಯರಿಂಗ್‌ನ ಏಕೀಕರಣವನ್ನು ಈ ಭೇಟಿಯು ಉಲ್ಲೇಖಿಸಿತು, ಬಿಎಚ್‌ಇಎಲ್‌ನಂತಹ ಸಂಸ್ಥೆಗಳು ಬಲವಾದ, ತಾಂತ್ರಿಕವಾಗಿ ಸಮರ್ಥ ಮತ್ತು ಸ್ವಾವಲಂಬಿ ಕೈಗಾರಿಕಾ ಭವಿಷ್ಯದತ್ತ ಭಾರತದ ಪ್ರಯಾಣದಲ್ಲಿ ಹೇಗೆ ಕೇಂದ್ರವಾಗಿ ಉಳಿದಿವೆ ಎಂಬುದನ್ನು ಪ್ರದರ್ಶಿಸಿತು.
*****
(ಪ್ರಕಟಣೆ ಐ.ಡಿ.: 2239431)
ವಿಸಿಟರ್ ಕೌಂಟರ್ : 4