ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಉದ್ಭವಿಸುತ್ತಿರುವ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ನಡುವೆ ವ್ಯಾಪಾರದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ವಾಣಿಜ್ಯ ಇಲಾಖೆಯಿಂದ ಪಾಲುದಾರರ ಸಮಾಲೋಚನಾ ಸಭೆ

ಪ್ರಕಟಣಾ ದಿನಾಂಕ: 02 MAR 2026 4:44PM by PIB Bengaluru

ಭಾರತದ ರಫ್ತು-ಆಮದು (EXIM) ಸರಕು ಸಾಗಣೆ ಮತ್ತು ರಫ್ತು ವ್ಯವಸ್ಥೆಯ ಮೇಲೆ ಪ್ರಸ್ತುತ ಉದ್ಭವಿಸುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳ ಸಂಭಾವ್ಯ ಪರಿಣಾಮಗಳನ್ನು ಪರಾಮರ್ಶಿಸಲು, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಾಣಿಜ್ಯ ಇಲಾಖೆಯು ಎಲ್ಲಾ ಸಂಬಂಧಿತ ಸಚಿವಾಲಯಗಳು, ಪ್ರಮುಖ ಲಾಜಿಸ್ಟಿಕ್ಸ್ ಮತ್ತು ವ್ಯಾಪಾರ ಸೌಲಭ್ಯ ಪಾಲುದಾರರೊಂದಿಗೆ ಸಮಾಲೋಚನಾ ಸಭೆಯನ್ನು ನಡೆಸಿತು.

ವಾಣಿಜ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ಶ್ರೀ ಸುಚಿಂದ್ರ ಮಿಶ್ರಾ ಮತ್ತು ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ ಮಹಾನಿರ್ದೇಶಕ ಶ್ರೀ ಲವ್ ಅಗರ್ವಾಲ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಲಾಜಿಸ್ಟಿಕ್ಸ್ ನಿರ್ವಾಹಕರು ಮತ್ತು ಶಿಪ್ಪಿಂಗ್ ಲೈನ್ಸ್/ಫಾರ್ವರ್ಡರ್‌ ಗಳು, ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ನ ಕೇಂದ್ರೀಯ ಮಂಡಳಿ, ಹಣಕಾಸು ಸೇವೆಗಳ ಇಲಾಖೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ರಫ್ತು ಉತ್ತೇಜನ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಏಜೆನ್ಸಿಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

"ಬದಲಾಗುತ್ತಿರುವ ಕಾರ್ಯಾಚರಣಾ ಪರಿಸರದ ಮೌಲ್ಯಮಾಪನವನ್ನು ಮಂಡಿಸಿದ ಪಾಲುದಾರರು; ಸರಕು ಸಾಗಣೆ ಮಾರ್ಗ ಮತ್ತು ಸಮಯದ ಬದಲಾವಣೆಗಳು, ಹಡಗುಗಳ ವೇಳಾಪಟ್ಟಿ ಹೊಂದಾಣಿಕೆ, ಕಂಟೇನರ್ ಹಾಗೂ ಉಪಕರಣಗಳ ಲಭ್ಯತೆ, ಸರಕು ಸಾಗಣೆ ಮತ್ತು ವಿಮಾ ವೆಚ್ಚದ ಏರಿಳಿತಗಳು ಹಾಗೂ ಸಮಯಕ್ಕೆ ಸರಿಯಾಗಿ ತಲುಪಬೇಕಾದ ರಫ್ತುಗಳ ಮೇಲಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಸರಕು ಸಾಗಣೆಯಲ್ಲಿ ನಿಶ್ಚಿತತೆಯನ್ನು ಕಾಯ್ದುಕೊಳ್ಳುವುದು, ಅನಗತ್ಯ ವಿಳಂಬಗಳನ್ನು ತಪ್ಪಿಸುವುದು ಮತ್ತು ರಫ್ತು-ಆಮದುದಾರರಿಗೆ ದಾಖಲೆ ಸಲ್ಲಿಕೆ ಹಾಗೂ ಪಾವತಿ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಅಗತ್ಯತೆಯ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.

ಭಾರತದ ರಫ್ತು-ಆಮದು (EXIM) ಲಾಜಿಸ್ಟಿಕ್ಸ್‌ ನ ನಿರಂತರತೆಯನ್ನು ಖಚಿತಪಡಿಸುವುದು ಮತ್ತು ವ್ಯಾಪಾರ ಹರಿವಿಗೆ ಉಂಟಾಗುವ ಯಾವುದೇ ಅಡಚಣೆಗಳನ್ನು ತಗ್ಗಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ವಾಣಿಜ್ಯ ಇಲಾಖೆಯು ಪುನರುಚ್ಚರಿಸಿತು. ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಕಾಪಾಡುವುದು, ರಫ್ತುದಾರರ—ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂ ಎಸ್‌ ಎಂ ಇ)—ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ದೇಶೀಯ ಉತ್ಪಾದನೆ ಹಾಗೂ ಬಳಕೆಗೆ ಅಗತ್ಯವಾದ ಆಮದುಗಳ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಸಮನ್ವಯದಿಂದ ಮತ್ತು ಸಹಕಾರಿಯಾಗಿ ಕಾರ್ಯನಿರ್ವಹಿಸುವ ಬಗ್ಗೆ ಒತ್ತು ನೀಡಲಾಯಿತು.

ಮಾರ್ಗ ಮತ್ತು ಸಾಮರ್ಥ್ಯದ ಬೆಳವಣಿಗೆಗಳು, ಹೆಚ್ಚುವರಿ ಶುಲ್ಕಗಳು ಮತ್ತು ಉಪಕರಣಗಳ ಲಭ್ಯತೆಯನ್ನು ಮೇಲ್ವಿಚಾರಣೆ ಮಾಡಲು ಪಾಲುದಾರರ ನಡುವೆ ನಿಕಟ ಮತ್ತು ನೈಜ-ಸಮಯದ ಸಮನ್ವಯವನ್ನು ಕಾಯ್ದುಕೊಳ್ಳಲು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು. ಬೇಗನೆ ಹಾಳಾಗುವ ವಸ್ತುಗಳು, ಔಷಧಗಳು ಮತ್ತು ಹೆಚ್ಚಿನ ಮೌಲ್ಯದ ತಯಾರಿಕಾ ರಫ್ತುಗಳಂತಹ ಸಮಯದ ಮಿತಿಯಿರುವ ರಫ್ತು ವಿಭಾಗಗಳಿಗೆ ಅನುಕೂಲ ಮಾಡಿಕೊಡುವ ಕಾರ್ಯವಿಧಾನಗಳ ಬಗ್ಗೆಯೂ ಚರ್ಚಿಸಲಾಯಿತು. ಬಂದರುಗಳು/ಐಸಿಡಿಗಳಲ್ಲಿ ಸೌಲಭ್ಯಗಳನ್ನು ಬಲಪಡಿಸುವುದು ಮತ್ತು ಸರಕು ದಟ್ಟಣೆಯನ್ನು ತಪ್ಪಿಸಲು ಸುಗಮವಾಗಿ ಸರಕುಗಳನ್ನು ತೆರವುಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸಭೆಯು ಒತ್ತು ನೀಡಿತು.

ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಸರ್ಕಾರವು ತನ್ನ ಸಿದ್ಧತೆಯನ್ನು ಪುನರುಚ್ಚರಿಸಿದ್ದು, ಕೆಳಗಿನ ಕ್ರಮಗಳನ್ನು ಕೈಗೊಳ್ಳಲಿದೆ:

  • ನಿಜವಾದ ಅಡಚಣೆಗಳ ಸಂದರ್ಭದಲ್ಲಿ ರಫ್ತು ಸಂಬಂಧಿತ ಕಾರ್ಯವಿಧಾನದಲ್ಲಿ ನಮ್ಯತೆ
  • ಸುಗಮ ಅನುಮತಿ ಖಚಿತಪಡಿಸಿಕೊಳ್ಳಲು ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಸಮನ್ವಯ
  • ರಫ್ತುದಾರರ ಹಿತಾಸಕ್ತಿಗಳನ್ನು ಬೆಂಬಲಿಸಲು ಹಣಕಾಸು ಮತ್ತು ವಿಮಾ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳುವುದು
  • ನಿರಂತರ ಅಂತರ-ಸಚಿವಾಲಯ ಸಮನ್ವಯ

ಭಾರತದ ವ್ಯಾಪಾರವು ಸಮರ್ಥವಾಗಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಉದ್ಭವಿಸುವ ಯಾವುದೇ ಸಮಸ್ಯೆಗಳನ್ನು ಸಮಯೋಚಿತವಾಗಿ ಪರಿಹರಿಸಲು ಎಲ್ಲಾ ಪಾಲುದಾರರು ಮತ್ತು ಸಂಬಂಧಿತ ಸಚಿವಾಲಯಗಳು/ಇಲಾಖೆಗಳೊಂದಿಗೆ ನಿಕಟವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುವುದಾಗಿ ಇಲಾಖೆಯು ಪುನರುಚ್ಚರಿಸಿತು.

ಭಾರತದ ವ್ಯಾಪಾರ ಸ್ಥಿತಿಸ್ಥಾಪಕತ್ವ

ಭಾರತವು ಇತ್ತೀಚಿನ ವರ್ಷಗಳಲ್ಲಿ ಅನೇಕ ಜಾಗತಿಕ ಅಡಚಣೆಗಳನ್ನು ಯಶಸ್ವಿಯಾಗಿ ಎದುರಿಸಿದೆ ಮತ್ತು ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವುದನ್ನು ಮುಂದುವರಿಸಿದೆ. ಭಾರತವು ಸ್ಥಿರ ಮತ್ತು ವಿಶ್ವಾಸಾರ್ಹ ವ್ಯಾಪಾರ ಪಾಲುದಾರನಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬದ್ಧವಾಗಿದೆ.

 

*****

 


(ಪ್ರಕಟಣೆ ಐ.ಡಿ.: 2234609) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी