ಕೃಷಿ ಸಚಿವಾಲಯ
azadi ka amrit mahotsav

ಪಿಎಂಎಫ್‌ಬಿವೈ ಸಮಗ್ರ ಬೆಳೆ ವಿಮೆಯನ್ನು ಒದಗಿಸುತ್ತದೆ; ವನ್ಯಮೃಗಗಳಿಂದಾಗುವ ಹಾನಿಗೆ ರಾಜ್ಯಗಳಿಗೆ ಹೆಚ್ಚುವರಿ ರಕ್ಷಣೆ ನೀಡಲು ಅವಕಾಶ

ಪ್ರಕಟಣಾ ದಿನಾಂಕ: 03 FEB 2026 8:09PM by PIB Bengaluru

2016-17 ರಿಂದ ದೇಶದಲ್ಲಿ ಜಾರಿಗೆ ತರಲಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು (PMFBY), ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಅಧಿಸೂಚಿಸಿದ ಬೆಳೆಗಳು ಅಥವಾ ಪ್ರದೇಶಗಳಿಗೆ ಬಿತ್ತನೆ ಪೂರ್ವದಿಂದ ಕೊಯ್ಲಿನ ನಂತರದ ಅವಧಿಯವರೆಗೆ, ತಡೆಯಲಾಗದ ನೈಸರ್ಗಿಕ ಅಪಾಯಗಳಿಂದ ಉಂಟಾಗುವ ಬೆಳೆ ಹಾನಿಗೆ ಸಮಗ್ರ ವಿಮಾ ರಕ್ಷಣೆಯನ್ನು ಒದಗಿಸುತ್ತಿದೆ. ಕಾಡು ಪ್ರಾಣಿಗಳಿಂದ ಬೆಳೆಗಳಿಗೆ ಆಗುವ ನಷ್ಟವು ತಡೆಗಟ್ಟಬಹುದಾದ ಸ್ವರೂಪದ್ದಾಗಿರುವುದರಿಂದ, ಇದನ್ನು ಈ ಮೊದಲು ವಿಮೆಯ ಅಡಿಯಲ್ಲಿ ಸೇರಿಸಲಾಗಿರಲಿಲ್ಲ. ಆದರೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳ ಕೋರಿಕೆಯ ಮೇರೆಗೆ, ಕಾಡು ಪ್ರಾಣಿಗಳಿಂದ ಉಂಟಾಗುವ ನಷ್ಟವನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ 'ಹೆಚ್ಚುವರಿ ರಕ್ಷಣೆ'ಯಾಗಿ ವೈಯಕ್ತಿಕ ಮೌಲ್ಯಮಾಪನದ ಆಧಾರದ ಮೇಲೆ ಅಧಿಸೂಚಿಸಲು ರಾಜ್ಯಗಳಿಗೆ ಈಗ ಅನುಮತಿ ನೀಡಲಾಗಿದೆ. ಇಂತಹ ವಿಮಾ ರಕ್ಷಣೆಯ ಕುರಿತಾದ ವಿವರವಾದ ಪ್ರೋಟೋಕಾಲ್ ಅನ್ನು ಯೋಜನೆಯ ಕಾರ್ಯಾಚರಣೆಯ ಮಾರ್ಗಸೂಚಿಗಳಲ್ಲಿ ನೀಡಲಾಗಿದೆ.

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಅಧಿಸೂಚಿಸಲಾದ ಎಲ್ಲಾ ಬೆಳೆಗಳಿಗೆ 'ಜಲಾವೃತಗೊಳ್ಳುವಿಕೆ'ಯನ್ನು ಒಂದು ಅಪಾಯವೆಂದು ಪರಿಗಣಿಸಿ ವಿಮಾ ರಕ್ಷಣೆ ನೀಡಲಾಗುತ್ತದೆ. ಆದರೆ, ಭತ್ತ, ಸೆಣಬು, ಮೆಸ್ತ ಮತ್ತು ಕಬ್ಬಿನಂತಹ ಜಲಪ್ರಿಯ ಬೆಳೆಗಳಿಗೆ, ಸ್ಥಳೀಯ ಕ್ಲೈಮ್‌ ಗಳ ಸಂದರ್ಭಗಳನ್ನು ಹೊರತುಪಡಿಸಿ ಈ ರಕ್ಷಣೆ ಲಭ್ಯವಿರುತ್ತದೆ. PMFBY ಅಡಿಯಲ್ಲಿ ಈ ಅಪಾಯಗಳನ್ನು ಸ್ಥಳೀಯ ವಿಕೋಪಗಳ ಪಟ್ಟಿಗೆ ಸೇರಿಸಲು ವಿವಿಧ ಪಾಲುದಾರರಿಂದ ಬಂದ ವಿನಂತಿಗಳನ್ನು ಪರಿಗಣಿಸಿ, "ಸ್ಥಳೀಯ ಅಪಾಯದ ಅಡಿಯಲ್ಲಿ ಕಾಡು ಪ್ರಾಣಿಗಳ ದಾಳಿ ಮತ್ತು ಭತ್ತದ ಬೆಳೆಗೆ ಜಲಾವೃತದಿಂದ ಉಂಟಾಗುವ ಬೆಳೆ ನಷ್ಟದ ವಿಧಾನಗಳನ್ನು ವ್ಯಾಖ್ಯಾನಿಸಲು" ಒಂದು ಸಮಿತಿಯನ್ನು ರಚಿಸಲಾಯಿತು. ಈ ಅಪಾಯಗಳನ್ನು ವಿಮೆಯ ವ್ಯಾಪ್ತಿಗೆ ಒಳಪಡಿಸಲು ಸಮಿತಿಯು ತನ್ನ ವರದಿ, ಶಿಫಾರಸುಗಳು ಮತ್ತು ಪ್ರಮಾಣಿತ ಕಾರ್ಯಾಚರಣೆಯ ವಿಧಾನಗಳನ್ನು (SOPs) ಸಲ್ಲಿಸಿದೆ.

ಇದಲ್ಲದೆ, ಬೆಳೆ ವಿಮಾ ಯೋಜನೆಗಳಲ್ಲಿನ ವಿಮರ್ಶೆ, ಪರಿಷ್ಕರಣೆ ಮತ್ತು ಸುಧಾರಣೆಗಳು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಪಾಲುದಾರರ ಅಥವಾ ಅಧ್ಯಯನಗಳ ಸಲಹೆಗಳು, ಪ್ರಾತಿನಿಧ್ಯಗಳು ಮತ್ತು ಶಿಫಾರಸುಗಳ ಮೇಲೆ ಕಾಲಕಾಲಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಪಡೆದ ಅನುಭವ ಮತ್ತು ವಿವಿಧ ಪಾಲುದಾರರ ಅಭಿಪ್ರಾಯಗಳ ಆಧಾರದ ಮೇಲೆ, ಉತ್ತಮ ಪಾರದರ್ಶಕತೆ, ಹೊಣೆಗಾರಿಕೆ, ರೈತರಿಗೆ ಕ್ಲೈಮ್‌ಗಳ ಸಕಾಲಿಕ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಯೋಜನೆಯನ್ನು ಹೆಚ್ಚು ರೈತ ಸ್ನೇಹಿಯನ್ನಾಗಿ ಮಾಡಲು, ಸರ್ಕಾರವು 2018, 2020 ಮತ್ತು 2023 ರಲ್ಲಿ PMFBY ನ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಕಾಲಕಾಲಕ್ಕೆ ಸಮಗ್ರವಾಗಿ ಪರಿಷ್ಕರಿಸಿದೆ.

ಯೋಜನೆಯ ಕಾರ್ಯಾಚರಣೆಯ ಮಾರ್ಗಸೂಚಿಗಳ ಪ್ರಕಾರ, ಬಹುಪಾಲು ವಿಮಾ ಕ್ಲೈಮ್‌ ಗಳನ್ನು ವಿಮಾ ಕಂಪನಿಗಳು ನಿಗದಿತ ಸಮಯದೊಳಗೆ ಇತ್ಯರ್ಥಪಡಿಸುತ್ತಿವೆ. ಆದಾಗ್ಯೂ, PMFBY ಅನುಷ್ಠಾನದ ಸಮಯದಲ್ಲಿ, ಕ್ಲೈಮ್‌ಗಳ ಪಾವತಿಯ ಬಗ್ಗೆ ಈ ಹಿಂದೆ ಕೆಲವು ದೂರುಗಳು ಬಂದಿವೆ. ಇವುಗಳು ಪ್ರಮುಖವಾಗಿ (ಅ) ರಾಜ್ಯ ಸರ್ಕಾರದ ಸಬ್ಸಿಡಿ ಪಾಲನ್ನು ಒದಗಿಸುವಲ್ಲಿನ ವಿಳಂಬ (ಆ) ಬ್ಯಾಂಕುಗಳಿಂದ ವಿಮಾ ಪ್ರಸ್ತಾವನೆಗಳನ್ನು ತಪ್ಪು ಮಾಹಿತಿಯೊಂದಿಗೆ ಸಲ್ಲಿಸಿರುವುದು ಅಥವಾ ವಿಳಂಬವಾಗಿ ಸಲ್ಲಿಸಿರುವುದರಿಂದ ಉಂಟಾದ ಪಾವತಿ ಸಮಸ್ಯೆಗಳು ಅಥವಾ ಕಡಿಮೆ ಮೊತ್ತದ ಪಾವತಿ (ಇ) ಇಳುವರಿ ದತ್ತಾಂಶದಲ್ಲಿನ ವ್ಯತ್ಯಾಸ ಮತ್ತು ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳ ನಡುವೆ ಉಂಟಾಗುವ ವಿವಾದಗಳು ಇತ್ಯಾದಿ ಕಾರಣಗಳಿಂದಾಗಿವೆ. ಈ ಸಮಸ್ಯೆಗಳಿಂದ ಬಾಕಿ ಉಳಿದಿರುವ ಕ್ಲೈಮ್‌ ಗಳನ್ನು ಯೋಜನೆಯ ನಿಬಂಧನೆಗಳ ಪ್ರಕಾರ ಪರಿಹರಿಸಿದ ನಂತರ ಇತ್ಯರ್ಥಪಡಿಸಲಾಗುತ್ತದೆ.

ಈ ಯೋಜನೆಯ ಅನುಷ್ಠಾನವನ್ನು ಬಲಪಡಿಸಲು, ಪಾರದರ್ಶಕತೆಯನ್ನು ತರಲು ಮತ್ತು ಕ್ಲೈಮ್‌ ಗಳ ಸಕಾಲಿಕ ಇತ್ಯರ್ಥವನ್ನು ಖಚಿತಪಡಿಸಲು ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಂಡಿದೆ:

  • ಸಬ್ಸಿಡಿ ಪಾವತಿ, ಸಮನ್ವಯತೆ, ಪಾರದರ್ಶಕತೆ, ಮಾಹಿತಿ ಪ್ರಸಾರ ಮತ್ತು ಸೇವೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ರಾಷ್ಟ್ರೀಯ ಬೆಳೆ ವಿಮೆ ಪೋರ್ಟಲ್ (NCIP) ಅನ್ನು ಏಕೈಕ ದತ್ತಾಂಶ ಮೂಲವಾಗಿ ಅಭಿವೃದ್ಧಿಪಡಿಸಿದೆ. ಇದು ರೈತರ ನೇರ ಆನ್‌ಲೈನ್ ನೋಂದಣಿ, ಉತ್ತಮ ಮೇಲ್ವಿಚಾರಣೆಗಾಗಿ ವೈಯಕ್ತಿಕ ವಿಮೆದಾರ ರೈತರ ವಿವರಗಳನ್ನು ಅಪ್‌ಲೋಡ್ ಮಾಡುವುದು ಅಥವಾ ಪಡೆಯುವುದು ಮತ್ತು ಕ್ಲೈಮ್ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಎಲೆಕ್ಟ್ರಾನಿಕ್ ಮೂಲಕ ವರ್ಗಾಯಿಸುವುದನ್ನು ಖಚಿತಪಡಿಸುತ್ತದೆ.
  • ಕ್ಲೈಮ್ ವಿತರಣಾ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು, 2022ರ ಖಾರಿಫ್ ಹಂಗಾಮಿನಿಂದ ಕ್ಲೈಮ್‌ಗಳ ಪಾವತಿಗಾಗಿ 'ಡಿಜಿಕ್ಲೈಮ್ ಮಾಡ್ಯೂಲ್' ಎಂಬ ವಿಶೇಷ ವಿಭಾಗವನ್ನು ಕಾರ್ಯಗತಗೊಳಿಸಲಾಗಿದೆ. ಇದು 2024ರ ಖಾರಿಫ್ ಹಂಗಾಮಿನಿಂದ ಜಾರಿಗೆ ಬರುವಂತೆ ಎಲ್ಲಾ ಕ್ಲೈಮ್‌ಗಳ ಸಕಾಲಿಕ ಮತ್ತು ಪಾರದರ್ಶಕ ಪ್ರಕ್ರಿಯೆಗಾಗಿ ರಾಷ್ಟ್ರೀಯ ಬೆಳೆ ವಿಮೆ ಪೋರ್ಟಲ್ (NCIP) ಅನ್ನು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS) ಮತ್ತು ವಿಮಾ ಕಂಪನಿಗಳ ಲೆಕ್ಕಪತ್ರ ವ್ಯವಸ್ಥೆಯೊಂದಿಗೆ ಸಂಯೋಜಿಸುವುದನ್ನು ಒಳಗೊಂಡಿದೆ.
  • ರೈತರು ಕೇಂದ್ರ ಸರ್ಕಾರದ ಪಾಲಿಗೆ ಸಂಬಂಧಿಸಿದ ಅನುಪಾತದ ಕ್ಲೈಮ್‌ ಗಳನ್ನು ಪಡೆಯುವಂತಾಗಲು, ಪ್ರೀಮಿಯಂ ಸಬ್ಸಿಡಿಯಲ್ಲಿ ಕೇಂದ್ರ ಸರ್ಕಾರದ ಪಾಲನ್ನು ರಾಜ್ಯ ಸರ್ಕಾರಗಳ ಪಾಲಿನಿಂದ ಪ್ರತ್ಯೇಕಿಸಲಾಗಿದೆ. 
  • ಅಲ್ಲದೆ, ಯೋಜನೆಯ ಅನುಷ್ಠಾನದಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ಈಗಾಗಲೇ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ 'CCE-Agri App' ಮೂಲಕ ಇಳುವರಿ ದತ್ತಾಂಶ ಅಥವಾ ಬೆಳೆ ಕಟಾವು ಪ್ರಯೋಗಗಳ (CCEs) ದತ್ತಾಂಶವನ್ನು ಸಂಗ್ರಹಿಸಿ ಅದನ್ನು ರಾಷ್ಟ್ರೀಯ ಬೆಳೆ ವಿಮೆ ಪೋರ್ಟಲ್‌ ನಲ್ಲಿ (NCIP) ಅಪ್‌ ಲೋಡ್ ಮಾಡುವುದು, ಬೆಳೆ ಕಟಾವು ಪ್ರಯೋಗಗಳು ನಡೆಯುವಾಗ ವಿಮಾ ಕಂಪನಿಗಳು ಸಾಕ್ಷಿಯಾಗಿರಲು ಅವಕಾಶ ನೀಡುವುದು ಮತ್ತು ರಾಜ್ಯದ ಭೂ ದಾಖಲೆಗಳನ್ನು NCIP ನೊಂದಿಗೆ ಸಂಯೋಜಿಸುವುದು ಮುಂತಾದವು ಸೇರಿವೆ. ಈ ಎಲ್ಲಾ ಕ್ರಮಗಳು ರೈತರಿಗೆ ಸಕಾಲದಲ್ಲಿ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಲು ಸಹಕಾರಿಯಾಗಿವೆ.
  • ಒಂದು ವೇಳೆ ವಿಮಾ ಕಂಪನಿಗಳು ಕ್ಲೈಮ್ ಪಾವತಿಯಲ್ಲಿ ವಿಳಂಬ ಮಾಡಿದರೆ, ಅಂತಹ ಸಂದರ್ಭಗಳಲ್ಲಿ ಶೇ. 12 ರಷ್ಟು ದಂಡ ವಿಧಿಸುವ ನಿಬಂಧನೆಯನ್ನು ರಾಷ್ಟ್ರೀಯ ಬೆಳೆ ವಿಮೆ ಪೋರ್ಟಲ್‌ ನಲ್ಲಿ (NCIP) ಸ್ವಯಂಚಾಲಿತವಾಗಿ ಲೆಕ್ಕಹಾಕಲಾಗುತ್ತದೆ.
  • ಯೋಜನೆಯ ನಿಬಂಧನೆಗಳ ಪ್ರಕಾರ, 2025ರ ಖಾರಿಫ್ ಹಂಗಾಮಿನಿಂದ ಜಾರಿಗೆ ಬರುವಂತೆ, ಸಂಬಂಧಪಟ್ಟ ರಾಜ್ಯ ಸರ್ಕಾರಗಳು ತಮ್ಮ ಪ್ರೀಮಿಯಂ ಪಾಲನ್ನು ಮುಂಚಿತವಾಗಿಯೇ ಜಮೆ ಮಾಡಲು 'ಎಸ್ಕ್ರೋ ಖಾತೆ' (ESCROW Account) ತೆರೆಯುವುದನ್ನು ಕಡ್ಡಾಯಗೊಳಿಸಲಾಗಿದೆ.


ಯೋಜನೆಯ ಅಡಿಯಲ್ಲಿ ವಸ್ತುನಿಷ್ಠ ಬೆಳೆ ಹಾನಿ ಮತ್ತು ನಷ್ಟದ ಮೌಲ್ಯಮಾಪನ ಹಾಗೂ ಪಾರದರ್ಶಕತೆಗಾಗಿ ಈ ಕೆಳಗಿನ ತಂತ್ರಜ್ಞಾನಗಳನ್ನು ಇತ್ತೀಚೆಗೆ ಅಂದರೆ 2023-24 ರಿಂದ ಜಾರಿಗೆ ತರಲಾಗಿದೆ:

i.YES-TECH (ತಂತ್ರಜ್ಞಾನ ಆಧಾರಿತ ಇಳುವರಿ ಅಂದಾಜು ವ್ಯವಸ್ಥೆ): ಬೆಳೆ ಇಳುವರಿಯನ್ನು ನಿಖರವಾಗಿ ಮತ್ತು ನ್ಯಾಯಯುತವಾಗಿ ಅಂದಾಜು ಮಾಡಲು, ಹಂತಹಂತವಾಗಿ 'ರಿಮೋಟ್ ಸೆನ್ಸಿಂಗ್' (ದೂರ ಸಂವೇದಿ) ಆಧಾರಿತ ವ್ಯವಸ್ಥೆಗೆ ಬದಲಾಗಲು ಇದನ್ನು ಬಳಸಲಾಗುತ್ತಿದೆ. 2023ರ ಖಾರಿಫ್ ಹಂಗಾಮಿನಿಂದ ಭತ್ತ ಮತ್ತು ಗೋಧಿ ಬೆಳೆಗಳಿಗೆ ಈ ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು, ಇಳುವರಿ ಅಂದಾಜಿನಲ್ಲಿ ಶೇ. 30 ರಷ್ಟು ತೂಕವನ್ನು ಕಡ್ಡಾಯವಾಗಿ YES-TECH ಮೂಲಕ ಪಡೆದ ದತ್ತಾಂಶಕ್ಕೆ ನೀಡಲಾಗುತ್ತದೆ. 2024ರ ಖಾರಿಫ್ ಹಂಗಾಮಿನಿಂದ ಸೋಯಾಬೀನ್ ಬೆಳೆಯನ್ನೂ ಇದಕ್ಕೆ ಸೇರಿಸಲಾಗಿದೆ.

ii.WINDS (ಹವಾಮಾನ ಮಾಹಿತಿ ಜಾಲ ಮತ್ತು ದತ್ತಾಂಶ ವ್ಯವಸ್ಥೆ): ಗ್ರಾಮ ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಅತಿ ಸ್ಥಳೀಯ ಹವಾಮಾನ ದತ್ತಾಂಶವನ್ನು ಸಂಗ್ರಹಿಸಲು, ಪ್ರಸ್ತುತ ಇರುವ ಜಾಲಕ್ಕಿಂತ 5 ಪಟ್ಟು ಹೆಚ್ಚು ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು (AWS) ಮತ್ತು ಸ್ವಯಂಚಾಲಿತ ಮಳೆ ಮಾಪಕಗಳನ್ನು (ARG) ಸ್ಥಾಪಿಸಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ದತ್ತಾಂಶವನ್ನು ಭಾರತೀಯ ಹವಾಮಾನ ಇಲಾಖೆಯ (IMD) ಸಮನ್ವಯದೊಂದಿಗೆ ರಾಷ್ಟ್ರೀಯ ದತ್ತಾಂಶ ಕೇಂದ್ರಕ್ಕೆ ಒದಗಿಸಲಾಗುತ್ತದೆ. WINDS ವ್ಯವಸ್ಥೆಯು ಕೇವಲ YES-TECH ಗೆ ಮಾತ್ರವಲ್ಲದೆ, ಸಮರ್ಥ ಬರ ಮತ್ತು ವಿಪತ್ತು ನಿರ್ವಹಣೆ, ನಿಖರ ಹವಾಮಾನ ಮುನ್ಸೂಚನೆ ಮತ್ತು ಉತ್ತಮ ವಿಮಾ ಉತ್ಪನ್ನಗಳನ್ನು ನೀಡಲು ಸಹಕಾರಿಯಾಗಿದೆ.

ಈ ಮಾಹಿತಿಯನ್ನು ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ರಾಮನಾಥ್ ಠಾಕೂರ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರವಾಗಿ ನೀಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2222905) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी