ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಹಸಿರು ಜಲಜನಕ ಉತ್ಪಾದನೆಗಾಗಿ ಇಂಧನ ಮಿಶ್ರಣವನ್ನು ಉತ್ತಮಗೊಳಿಸಲು ಮತ್ತು ವೆಚ್ಚವನ್ನು ತಗ್ಗಿಸಲು ಸರ್ಕಾರ ಕ್ರಮ ಕೈಗೊಂಡಿದೆ

ಪ್ರಕಟಣಾ ದಿನಾಂಕ: 03 FEB 2026 1:30PM by PIB Bengaluru

ಭಾರತವನ್ನು ಹಸಿರು ಜಲಜನಕ ಮತ್ತು ಅದರ ಉತ್ಪನ್ನಗಳ ಉತ್ಪಾದನೆ, ಬಳಕೆ ಮತ್ತು ರಫ್ತಿನ ಜಾಗತಿಕ ಕೇಂದ್ರವನ್ನಾಗಿ ಮಾಡುವ ಉದ್ದೇಶದೊಂದಿಗೆ ಭಾರತ ಸರ್ಕಾರವು ರಾಷ್ಟ್ರೀಯ ಹಸಿರು ಜಲಜನಕ ಮಿಷನ್ (ಎನ್ಜಿ ಎಚ್ಎಂ) ಅನ್ನು ಜಾರಿಗೆ ತರುತ್ತಿದೆ. ಭಾರತದ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯವು 2030 ವೇಳೆಗೆ ವಾರ್ಷಿಕ 5 ಮಿಲಿಯನ್ ಮೆಟ್ರಿಕ್ ಟನ್ಗಳನ್ನು ತಲುಪುವ ಸಾಧ್ಯತೆಯಿದೆ.

ಹಸಿರು ಜಲಜನಕದ ವೆಚ್ಚವನ್ನು ಕಡಿಮೆ ಮಾಡಲು ರಾಷ್ಟ್ರೀಯ ಹಸಿರು ಜಲಜನಕ ಮಿಷನ್ (ಎನ್ಜಿ ಎಚ್ಎಂ) ಅಡಿಯಲ್ಲಿ ಗಮನಾರ್ಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ, ಅದರ ವಿವರಗಳನ್ನು ಕೆಳಗೆ ನೀಡಲಾಗಿದೆ:

  1. ಎಲೆಕ್ಟ್ರೋಲೈಸರ್ ಉತ್ಪಾದನೆಗಾಗಿ ಪ್ರೋತ್ಸಾಹಕ ಯೋಜನೆಯಡಿ, 15 ಕಂಪನಿಗಳಿಗೆ ವಾರ್ಷಿಕ ಒಟ್ಟು 3,000 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ನೀಡಲಾಗಿದೆ. ನೀಡಲಾದ ಒಟ್ಟು ಪ್ರೋತ್ಸಾಹಧನ 4,440 ಕೋಟಿ ರೂ.ಗಳಾಗಿದೆ.
  2. ಹಸಿರು ಜಲಜನಕ ಉತ್ಪಾದನೆಯ ಪ್ರೋತ್ಸಾಹಕ ಯೋಜನೆಯಡಿ, 18 ಕಂಪನಿಗಳಿಗೆ ವಾರ್ಷಿಕ ಒಟ್ಟು 8,62,000 ಟನ್ ಉತ್ಪಾದನಾ ಸಾಮರ್ಥ್ಯವನ್ನು ನೀಡಲಾಗಿದೆ.
  3. ರಿಫೈನರಿಗಳಿಗಾಗಿ ಹಸಿರು ಜಲಜನಕ ಸಂಗ್ರಹಣೆಯ ಪ್ರೋತ್ಸಾಹಕ ಯೋಜನೆಯಡಿ, 2 ಕಂಪನಿಗಳಿಗೆ ಒಟ್ಟು 20,000 ಟನ್ ವಾರ್ಷಿಕ ಸಾಮರ್ಥ್ಯವನ್ನು ನೀಡಲಾಗಿದೆ.
  4. ಭಾರತದಾದ್ಯಂತ ಇರುವ 13 ರಸಗೊಬ್ಬರ ಘಟಕಗಳಿಗೆ ವಾರ್ಷಿಕ 7,24,000 ಟನ್ ಹಸಿರು ಅಮೋನಿಯಾವನ್ನು (ಹಸಿರು ಜಲಜನಕದ ಒಂದು ಉತ್ಪನ್ನ) ಉತ್ಪಾದಿಸಲು ಮತ್ತು ಪೂರೈಸಲು ಭಾರತೀಯ ಸೌರಶಕ್ತಿ ನಿಗಮದ (ಎಸ್ ಸಿ ) ಮೂಲಕ ದರಗಳನ್ನು ನಿಗದಿಪಡಿಸಲಾಗಿದೆ.

ಹಸಿರು ಜಲಜನಕದ ವೆಚ್ಚ ಇಳಿಕೆಗೆ ಅನುಕೂಲವಾಗುವಂತೆ ತೆಗೆದುಕೊಂಡಿರುವ ಇತರ ಕ್ರಮಗಳು ಕೆಳಗಿನಂತಿವೆ:

  1. 31.12.2030 ರೊಳಗೆ ಕಾರ್ಯಾರಂಭ ಮಾಡುವ ಮತ್ತು ಹಸಿರು ಜಲಜನಕ ಅಥವಾ ಹಸಿರು ಅಮೋನಿಯಾ ಉತ್ಪಾದನೆಗೆ ನವೀಕರಿಸಬಹುದಾದ ಇಂಧನವನ್ನು ಬಳಸುವ ಹಸಿರು ಜಲಜನಕ/ಹಸಿರು ಅಮೋನಿಯಾ ಘಟಕಗಳಿಗೆ, ಯೋಜನೆಯು ಕಾರ್ಯಾರಂಭ ಮಾಡಿದ ದಿನಾಂಕದಿಂದ 25 ವರ್ಷಗಳ ಅವಧಿಗೆ ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ ( ಎಸ್ಟಿ ಎಸ್) ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
  2. ಎಸ್ ಝಡ್ಕಾಯ್ದೆ 2005 ಸೆಕ್ಷನ್ 26 ಅಡಿಯಲ್ಲಿ ಸುಂಕದ ಸೌಲಭ್ಯಗಳನ್ನು, ಘಟಕದ ಸ್ವಂತ ಬಳಕೆಗಾಗಿ ಮಾತ್ರ ನವೀಕರಿಸಬಹುದಾದ ಇಂಧನ ಉಪಕರಣಗಳ ಸ್ಥಾಪನೆ ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಅನುಮತಿಸಲಾಗಿದೆ.

ಮೇಲಿನ ಪ್ರೋತ್ಸಾಹಕ ಕ್ರಮಗಳು ದೀರ್ಘಕಾಲೀನ ಆಫ್-ಟೇಕ್ ಒಪ್ಪಂದಗಳನ್ನು ಭದ್ರಪಡಿಸುವ ಮೂಲಕ ಹಸಿರು ಜಲಜನಕಕ್ಕೆ ಸ್ಥಿರ ಮತ್ತು ನಿರೀಕ್ಷಿತ ಬೇಡಿಕೆಯನ್ನು ಖಚಿತಪಡಿಸುತ್ತವೆ ಮತ್ತು ಕೈಗಾರಿಕಾ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹಸಿರು ಜಲಜನಕದ ಏಕೀಕರಣಕ್ಕೆ ಸಹಕರಿಸುತ್ತವೆ.

ಸ್ಪರ್ಧಾತ್ಮಕ ದರ ಆಧಾರಿತ ಬಿಡ್ಡಿಂಗ್, ದೊಡ್ಡ ಪ್ರಮಾಣದ ಸೌರ ಮತ್ತು ಪವನ ಇಂಧನ ನಿಯೋಜನೆ ಮತ್ತು ಪೂರಕ ನೀತಿ ಚೌಕಟ್ಟುಗಳ ಬೆಂಬಲದೊಂದಿಗೆ ಕಡಿಮೆ-ವೆಚ್ಚದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವೇಗವಾಗಿ ವಿಸ್ತರಿಸುವ ಮೂಲಕ ಭಾರತವು ಹಸಿರು ಜಲಜನಕ ಉತ್ಪಾದನೆಗಾಗಿ ತನ್ನ ಇಂಧನ ಮಿಶ್ರಣವನ್ನು ಉತ್ತಮಗೊಳಿಸುತ್ತಿದೆ. ಉದ್ದೇಶವನ್ನು ಬೆಂಬಲಿಸಲು ಕೆಳಗಿನ ನೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ:

  • ಗ್ರಿಡ್ ಸಂಪರ್ಕಿತ ಸೌರ, ಪವನ, ಪವನ-ಸೌರ ಹೈಬ್ರಿಡ್ ಮತ್ತು ಫರ್ಮ್ ಅಂಡ್ ಡಿಸ್ಪ್ಯಾಚಬಲ್ ನವೀಕರಿಸಬಹುದಾದ ಇಂಧನ ಯೋಜನೆಗಳಿಂದ ವಿದ್ಯುತ್ ಖರೀದಿಗಾಗಿ ದರ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಪ್ರಮಾಣಿತ ಬಿಡ್ಡಿಂಗ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
  • ವಿಶೇಷ ಆರ್ಥಿಕ ವಲಯ (ಎಸ್ ಝಡ್) ಅಥವಾ ರಫ್ತು ಆಧಾರಿತ ಘಟಕದ (ಇಒಯು) ಒಳಗೆ ಇರುವ ಮತ್ತು ಎಸ್ ಝಡ್ ಅಥವಾ ಇಒಯು ಆಗಿ ಸ್ಥಾಪಿಸಲಾದ ಹಸಿರು ಜಲಜನಕ (ಅಥವಾ ಅದರ ಉತ್ಪನ್ನಗಳ) ಉತ್ಪಾದನಾ ಘಟಕಗಳಿಗೆ ಮಾತ್ರ ವಿದ್ಯುತ್ ಪೂರೈಸುವ ನವೀಕರಿಸಬಹುದಾದ ಇಂಧನ ಸ್ಥಾವರಗಳಿಗೆ, ಸೌರ ಪಿವಿ ಮಾಡ್ಯೂಲ್ಗಳಿಗಾಗಿ 'ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿ' ( ಎಲ್ಎಂ ಎಂ) ಮತ್ತು ಪವನ ಟರ್ಬೈನ್ ಮಾದರಿಗಳಿಗಾಗಿ 'ಪರಿಷ್ಕೃತ ಮಾದರಿಗಳು ಮತ್ತು ತಯಾರಕರ ಪಟ್ಟಿ' (ಆರ್ಎಲ್ಎಂ ಎಂ) ಅವಶ್ಯಕತೆಗಳಿಂದ ವಿನಾಯಿತಿ ನೀಡಲಾಗಿದೆ.
  • ವಿದೇಶಿ ನೇರ ಹೂಡಿಕೆಗೆ ಸ್ವಯಂಚಾಲಿತ ಮಾರ್ಗದ ಅಡಿಯಲ್ಲಿ ಶೇಕಡಾ 100 ರಷ್ಟು ಅವಕಾಶ ನೀಡಲಾಗಿದೆ.
  • ದೊಡ್ಡ ಪ್ರಮಾಣದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳ ಸ್ಥಾಪನೆಗಾಗಿ ಅಭಿವರ್ಧಕರಿಗೆ ಭೂಮಿ ಮತ್ತು ಪ್ರಸರಣ ಸೌಲಭ್ಯ ಒದಗಿಸಲು ಸೌರ ಪಾರ್ಕ್ಗಳು ಮತ್ತು ಅಲ್ಟ್ರಾ ಮೆಗಾ ಸೋಲಾರ್ ಪವರ್ ಪ್ರಾಜೆಕ್ಟ್ಗಳ ಸ್ಥಾಪನೆಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
  • 30 ಜೂನ್ 2025 ರೊಳಗೆ ಕಾರ್ಯಾರಂಭ ಮಾಡುವ ಯೋಜನೆಗಳ ಸೌರ ಮತ್ತು ಪವನ ವಿದ್ಯುತ್ ಅಂತರ-ರಾಜ್ಯ ಮಾರಾಟಕ್ಕೆ, ಡಿಸೆಂಬರ್ 2030 ರವರೆಗೆ ಹಸಿರು ಜಲಜನಕ ಯೋಜನೆಗಳಿಗೆ ಮತ್ತು ಡಿಸೆಂಬರ್ 2032 ರವರೆಗೆ ಕಡಲತೀರದ ಪವನ ವಿದ್ಯುತ್  ಯೋಜನೆಗಳಿಗೆ ಅಂತರ-ರಾಜ್ಯ ಪ್ರಸರಣ ವ್ಯವಸ್ಥೆ ಶುಲ್ಕವನ್ನು ಮನ್ನಾ ಮಾಡಲಾಗಿದೆ.
  • ನವೀಕರಿಸಬಹುದಾದ ವಿದ್ಯುತ್ ಪ್ರಸರಣಕ್ಕಾಗಿ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯಡಿ ಹೊಸ ಪ್ರಸರಣ ಮಾರ್ಗಗಳನ್ನು ನಿರ್ಮಿಸಲು ಮತ್ತು ಹೊಸ ಸಬ್-ಸ್ಟೇಷನ್ ಸಾಮರ್ಥ್ಯವನ್ನು ರಚಿಸಲು ಹಣ ಒದಗಿಸಲಾಗಿದೆ.
  • ಹೆಚ್ಚುತ್ತಿರುವ ನವೀಕರಿಸಬಹುದಾದ ಇಂಧನ ಪಥಕ್ಕೆ ಅಗತ್ಯವಾದ ಪ್ರಸರಣ ಮೂಲಸೌಕರ್ಯವನ್ನು ಹೆಚ್ಚಿಸಲು 2030 ರವರೆಗೆ ಪ್ರಸರಣ ಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಮಾಹಿತಿಯನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ಕೇಂದ್ರ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೋ ನಾಯಕ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

 

*****

 


(ಪ್ರಕಟಣೆ ಐ.ಡಿ.: 2222568) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी