ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಜೈಪುರದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ, ಉದ್ಯೋಗ ಮತ್ತು ಕೈಗಾರಿಕಾ ಕಾರ್ಯದರ್ಶಿಗಳ ಎರಡು ದಿನಗಳ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರು

प्रविष्टि तिथि: 14 JAN 2026 4:46PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಖಾತೆ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು 2026ರ ಜನವರಿ 14ರಂದು ಜೈಪುರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಮಿಕ, ಉದ್ಯೋಗ ಹಾಗೂ ಕೈಗಾರಿಕಾ ಕಾರ್ಯದರ್ಶಿಗಳ ಎರಡು ದಿನಗಳ ಪ್ರಾದೇಶಿಕ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದರು. ರಾಜಸ್ಥಾನ ಸರ್ಕಾರದ ಸಹಕಾರ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ರಾಜ್ಯ ಸಚಿವರು (ಸ್ವತಂತ್ರ ಹೊಣೆಗಾರಿಕೆ) ಶ್ರೀ ಗೌತಮ್ ಕುಮಾರ್ ದಾಕ್ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ವಂದನಾ ಗುರ್ನಾನಿ, ವಿವಿಧ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಇಎಸ್ಐಸಿ, ಇಪಿಎಫ್‌ಒ ಮತ್ತು ವಿ.ವಿ. ಗಿರಿ ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (VVGNLI) ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಸಚಿವಾಲಯವು ಯೋಜಿಸಿರುವ ಐದು ಪ್ರಾದೇಶಿಕ ಸಮ್ಮೇಳನಗಳ ಸರಣಿಯಲ್ಲಿ ಇದು ಎರಡನೆಯದಾಗಿದೆ. ನಾಲ್ಕು ಕಾರ್ಮಿಕ ಸಂಹಿತೆಗಳ ಸುಗಮ ಅನುಷ್ಠಾನಕ್ಕೆ ಅನುವು ಮಾಡಿಕೊಡುವುದು ಹಾಗೂ ಇಎಸ್ಐಸಿ, ಇಪಿಎಫ್ಒ ಮತ್ತು ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆ (PMVBRY) ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.

ಕೇಂದ್ರ ರಾಜ್ಯ ಸಚಿವರು ತಮ್ಮ ಭಾಷಣದಲ್ಲಿ ಕಾರ್ಮಿಕ ಸಂಹಿತೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ರಾಜ್ಯಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಾಗಿ ಕ್ರೋಡೀಕರಿಸಿರುವುದು ಕಳೆದ 78 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೈಗೊಂಡ ಐತಿಹಾಸಿಕ ಸುಧಾರಣೆಯಾಗಿದೆ ಎಂದು ಅವರು ಉಲ್ಲೇಖಿಸಿದರು. ವಿವಿಧ ಹಂತಗಳಲ್ಲಿ ನಡೆದ ಸುಮಾರು 100 ಸಭೆಗಳು ಸೇರಿದಂತೆ, ವ್ಯಾಪಕ ಪಾಲುದಾರರ ಸಮಾಲೋಚನೆಯ ನಂತರ ಈ ಸಂಹಿತೆಗಳನ್ನು ರೂಪಿಸಲಾಗಿದೆ ಮತ್ತು ಇವುಗಳ ಅನುಷ್ಠಾನಕ್ಕಾಗಿ ಮೀಸಲಾದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಮನೆಯಿಂದ ಕೆಲಸ ಮಾಡುವ (Work-from-home) ಸೌಲಭ್ಯ ಮತ್ತು ಗಿಗ್, ಪ್ಲಾಟ್ ಫಾರ್ಮ್ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುವಂತಹ ಸಂಹಿತೆಗಳ ಪ್ರಮುಖ ಪ್ರಗತಿಪರ ಲಕ್ಷಣಗಳನ್ನು ಸಚಿವರು ಎತ್ತಿ ತೋರಿಸಿದರು. ಇದು ಭಾರತವನ್ನು ಈ ಕ್ಷೇತ್ರದಲ್ಲಿ ಜಾಗತಿಕ ಮಾದರಿಯನ್ನಾಗಿ ರೂಪಿಸಿದೆ ಎಂದು ಸಚಿವರು ವಿವರಿಸಿದರು. ನಿಯಮಗಳ ಸರಳೀಕರಣವು ಕಾರ್ಮಿಕರು ಮತ್ತು ಉದ್ಯೋಗದಾತರು ಇಬ್ಬರಿಗೂ ಇದ್ದ ಸಂಕೀರ್ಣತೆಯನ್ನು ಕಡಿಮೆ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡಿದ ಅವರು, ಕೇಂದ್ರ ಮತ್ತು ರಾಜ್ಯಗಳ ನಡುವೆ ಬಲವಾದ ಸಮನ್ವಯ, ಮಾಹಿತಿಯನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು, ಇ ಎಸ್ ಐ ಸಿ (ESIC) ವ್ಯಾಪ್ತಿಯ ವಿಸ್ತರಣೆ, ಅಂತಾರಾಷ್ಟ್ರೀಯ ಕಾರ್ಮಿಕ ಚಲನಶೀಲತೆಯನ್ನು  ನಿರ್ವಹಿಸಲು ಯೋಜನೆಗಳ ರೂಪಿಸುವಿಕೆ ಮತ್ತು ‘ವಿಕಸಿತ ಭಾರತ’ ಉಪಕ್ರಮಕ್ಕೆ ಅನುಗುಣವಾಗಿ ‘ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆ’ಯ ಮೂಲಕ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವಂತೆ ಕರೆ ನೀಡಿದರು.

ರಾಜಸ್ಥಾನ ಸರ್ಕಾರದ ಸಹಕಾರ ಮತ್ತು ನಾಗರಿಕ ವಿಮಾನಯಾನ ಇಲಾಖೆಯ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಶ್ರೀ ಗೌತಮ್ ಕುಮಾರ್ ದಕ್ ಅವರು, ಕಾರ್ಮಿಕ ಸಂಹಿತೆಗಳ ಅನುಷ್ಠಾನವು 'ವಿಕಸಿತ ಭಾರತ' ಅಭಿಯಾನಕ್ಕೆ ಪೂರಕವಾದ ಒಂದು ಐತಿಹಾಸಿಕ ಸುಧಾರಣೆಯಾಗಿದೆ ಮತ್ತು ಇದರ ಸಕಾರಾತ್ಮಕ ಪರಿಣಾಮಗಳು ಈಗ ತಳಮಟ್ಟದಲ್ಲಿ ಗೋಚರಿಸುತ್ತಿವೆ ಎಂದು ತಿಳಿಸಿದರು. ಉಚಿತ ವೈದ್ಯಕೀಯ ತಪಾಸಣೆಯಂತಹ ಕ್ರಮಗಳ ಮೂಲಕ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಬಲಪಡಿಸಿರುವುದನ್ನು ಅವರು ಉಲ್ಲೇಖಿಸಿದರು, ಹಾಗೂ ವಿವಾದಗಳನ್ನು ರಚನಾತ್ಮಕವಾಗಿ ಬಗೆಹರಿಸಲು ಉದ್ಯೋಗದಾತರು ಮತ್ತು ಕಾರ್ಮಿಕರ ನಡುವೆ ಉತ್ತಮ ಸಮನ್ವಯದ ಅಗತ್ಯವಿದೆ ಎಂದು ಒತ್ತಿಹೇಳಿದರು. ಸಂಹಿತೆಗಳ ಅಡಿಯಲ್ಲಿ ಕಾರ್ಮಿಕರಿಗಿರುವ ಹಕ್ಕುಗಳ ಬಗ್ಗೆ ಮಾಹಿತಿಯನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಂತೆ ಸೂಚಿಸಿದ ಅವರು, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ರಕ್ಷಣೆಯ ಸೌಲಭ್ಯಗಳನ್ನು ಹೆಚ್ಚಿಸಲು ಹೊಸ ಆಸ್ಪತ್ರೆಗಳ ಸ್ಥಾಪನೆ ಸೇರಿದಂತೆ ESIC ವ್ಯಾಪ್ತಿಯನ್ನು ವಿಸ್ತರಿಸಲು ಕರೆ ನೀಡಿದರು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿಯಾದ ಶ್ರೀಮತಿ ವಂದನಾ ಗುರ್ನಾನಿ ಅವರು, ಕಾರ್ಮಿಕ ಸಂಹಿತೆಗಳ ಅನುಷ್ಠಾನವು ಕಾರ್ಮಿಕರ ಕಲ್ಯಾಣ ಮತ್ತು ಔಪಚಾರಿಕತೆಯನ್ನು  ಉತ್ತೇಜಿಸುವ ಜೊತೆಗೆ ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ತಿಳಿಸಿದರು. ಹಿಂದಿನ ಕಾರ್ಮಿಕ ಕಾಯ್ದೆಗಳ ತರ್ಕಬದ್ಧಗೊಳಿಸುವಿಕೆಯು ಕಾರ್ಮಿಕರ ಕಲ್ಯಾಣವನ್ನು ಸಮತೋಲನಗೊಳಿಸುವ ಮೂಲಕ ಸಂಕೀರ್ಣತೆಗಳನ್ನು ಕಡಿಮೆ ಮಾಡಿದೆ ಎಂದು ಅವರು ಒತ್ತಿಹೇಳಿದರು. ESIC ಸೌಲಭ್ಯಗಳ ವರ್ಗಾವಣೆ ಮತ್ತು ಸಕಾಲಿಕ ವೇತನ ಪಾವತಿಯಂತಹ ಕ್ರಮಗಳು ಹಾಗೂ ಸಂಹಿತೆಗಳ ಅಡಿಯಲ್ಲಿ ಅಪರಾಧಗಳ ರಾಜಿ ಸಂಧಾನಕ್ಕೆ  ಅವಕಾಶ ಕಲ್ಪಿಸುವ ಮೂಲಕ ಉದ್ಯೋಗದಾತರ ಅನುಸರಣಾ ಹೊರೆಯನ್ನು ತಗ್ಗಿಸಿರುವುದನ್ನು ಅವರು ಉಲ್ಲೇಖಿಸಿದರು. 'ಇನ್ಸ್ ಪೆಕ್ಟರ್-ಕಮ್-ಫೆಸಿಲಿಟೇಟರ್' ವ್ಯವಸ್ಥೆಯ ಮೂಲಕ ಕೇವಲ ಕಾನೂನು ಜಾರಿಗಿಂತಲೂ ಸುಗಮಗೊಳಿಸುವಿಕೆಗೆ ಹೆಚ್ಚಿನ ಒತ್ತು ನೀಡುವ ಆಮೂಲಾಗ್ರ ಬದಲಾವಣೆಯನ್ನು ಅವರು ಗುರುತಿಸಿದರು. ಇದರ ಪರಿಣಾಮಕಾರಿ ಅನುಷ್ಠಾನವು ಮಾಹಿತಿ ತಂತ್ರಜ್ಞಾನದ (IT) ಮಧ್ಯಸ್ಥಿಕೆಗಳಿಂದ ನಡೆಸಲ್ಪಡುತ್ತದೆ ಮತ್ತು ಕೇಂದ್ರದ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯಗಳು ಕಾರ್ಮಿಕ ನಿಯಮಗಳನ್ನು ಅಂತಿಮಗೊಳಿಸುವುದನ್ನು ತ್ವರಿತಗೊಳಿಸುವಂತೆ, ಸಚಿವಾಲಯ ಸಿದ್ಧಪಡಿಸಿರುವ ಎಫ್ ಎ ಕ್ಯೂ (FAQ) ಮತ್ತು ಕೈಪಿಡಿಯನ್ನು ಬಳಸಿಕೊಳ್ಳುವಂತೆ ಅವರು ಆಗ್ರಹಿಸಿದರು. ಅಲ್ಲದೆ, ಅಂಗಡಿಗಳು ಮತ್ತು ಸಂಸ್ಥೆಗಳ ಕಾಯಿದೆಯ ನಿಯಮಗಳು ಈ ಸಂಹಿತೆಗಳೊಂದಿಗೆ ಮರುಕಳಿಸದಂತೆ ನೋಡಿಕೊಳ್ಳಲು, PMVBRY ಡ್ಯಾಶ್ ಬೋರ್ಡ್ ಅನ್ನು ಸಕ್ರಿಯವಾಗಿ ಬಳಸಲು ಮತ್ತು ರಾಜ್ಯ ಸೌಲಭ್ಯಗಳು ಹಾಗೂ PMJAY ನೊಂದಿಗೆ ಸಮನ್ವಯ ಸಾಧಿಸುವ ಮೂಲಕ ಇ ಎಸ್ ಐ ಸಿ ವ್ಯಾಪ್ತಿ ಮತ್ತು ವೈದ್ಯಕೀಯ ಮೂಲಸೌಕರ್ಯಗಳನ್ನು ಬಲಪಡಿಸಲು ಕೇಂದ್ರ-ರಾಜ್ಯ ಸಹಯೋಗವನ್ನು ಹೆಚ್ಚಿಸಲು ಅವರು ಕರೆ ನೀಡಿದರು.

ಉದ್ಘಾಟನೆಯ ನಂತರ ಸಚಿವಾಲಯ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳು ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ನಿಯಮಗಳ ಸಿದ್ಧತೆ ಮತ್ತು ಮಾಹಿತಿ ತಂತ್ರಜ್ಞಾನದ (IT) ಸನ್ನದ್ಧತೆಯ ಸ್ಥಿತಿಗತಿಗಳ ಬಗ್ಗೆ ಪ್ರಸ್ತುತಿಗಳನ್ನು ನೀಡಿದರು. ಸಂಹಿತೆಗಳ ಅಡಿಯಲ್ಲಿ ನಿಯಮಗಳ ರಚನೆ, ಸಂಹಿತೆಯ ನಿಬಂಧನೆಗಳಿಗೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಐಟಿ ವ್ಯವಸ್ಥೆಗಳ ಮೇಲ್ದರ್ಜೆಗೆ ಏರಿಸುವುದು ಮತ್ತು ಕೇಂದ್ರ ಐಟಿ ಚೌಕಟ್ಟಿನೊಂದಿಗೆ ರಾಜ್ಯದ ವ್ಯವಸ್ಥೆಗಳನ್ನು ಸಂಯೋಜಿಸುವ ಕಾರ್ಯಸಾಧ್ಯತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆಗಳನ್ನು ನಡೆಸಲಾಯಿತು.

ಸಚಿವಾಲಯ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಈ ಸಮ್ಮೇಳನವು, ನಿಯಮಗಳು ಮತ್ತು ನಿಬಂಧನೆಗಳ ಕುರಿತಾದ ಚರ್ಚೆಗಳು, ನ್ಯೂನತೆಗಳು ಮತ್ತು ಭಿನ್ನಾಭಿಪ್ರಾಯಗಳ ಗುರುತಿಸುವಿಕೆ, ಶಾಸನಬದ್ಧ ಅಧಿಸೂಚನೆಗಳನ್ನು ಹೊರಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದು ಹಾಗೂ ಮಂಡಳಿಗಳು, ನಿಧಿಗಳು ಮತ್ತು ಇತರ ಸಂಬಂಧಿತ ಸಾಂಸ್ಥಿಕ ಕಾರ್ಯವಿಧಾನಗಳ ರಚನೆಯ ಕುರಿತು ಸಮಾಲೋಚನೆ ನಡೆಸಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಇದು ನಾಲ್ಕು ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ಪ್ರಸ್ತಾವಿಸಲಾದ ಯೋಜನೆಗಳ ಕುರಿತು ಸಮಾಲೋಚನೆಗಳನ್ನು ಸುಗಮಗೊಳಿಸುವುದಲ್ಲದೆ, ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಐಟಿ ವ್ಯವಸ್ಥೆಗಳು ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಕುರಿತಾದ ಚರ್ಚೆಗಳಿಗೂ ಅವಕಾಶ ನೀಡಲಿದೆ. ಇದರ ಜೊತೆಗೆ, ಕ್ಷೇತ್ರ ಮಟ್ಟದ ಸಿಬ್ಬಂದಿಗಳ ಸಾಮರ್ಥ್ಯ ವೃದ್ಧಿ ಹಾಗೂ ಕಾರ್ಮಿಕ ಸಂಹಿತೆಗಳ ಉದ್ದೇಶಗಳು ಮತ್ತು ಅನುಷ್ಠಾನದ ಚೌಕಟ್ಟಿನ ಬಗ್ಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಪಾಲುದಾರರಲ್ಲಿ ಜಾಗೃತಿ ಮೂಡಿಸಲು ಈ ಸಮ್ಮೇಳನವು ಒತ್ತು ನೀಡುತ್ತದೆ.

 

*****


(रिलीज़ आईडी: 2214638) आगंतुक पटल : 6
इस विज्ञप्ति को इन भाषाओं में पढ़ें: English , Urdu , हिन्दी