ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

2027ರ ಭಾರತದ ಜನಗಣತಿ ಯೋಜನೆಗೆ ಸಂಪುಟದ ಅನುಮೋದನೆ

प्रविष्टि तिथि: 12 DEC 2025 4:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 11,718.24 ಕೋಟಿ ರೂ. ವೆಚ್ಚದಲ್ಲಿ 2027ರ ಭಾರತದ ಜನಗಣತಿಯನ್ನು ನಡೆಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ.

ಯೋಜನೆಯ ವಿವರಗಳು:

  • ಭಾರತದ ಜನಗಣತಿಯು ವಿಶ್ವದ ಅತಿದೊಡ್ಡ ಆಡಳಿತಾತ್ಮಕ ಮತ್ತು ಸಂಖ್ಯಾಶಾಸ್ತ್ರೀಯ ಕಾರ್ಯವಾಗಿದೆ. ಭಾರತದ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ:  (i) ಮನೆಪಟ್ಟಿ ಮತ್ತು ವಸತಿ ಗಣತಿ - ಏಪ್ರಿಲ್ ನಿಂದ ಸೆಪ್ಟೆಂಬರ್, 2026 ಮತ್ತು (ii) ಜನಸಂಖ್ಯಾ ಗಣತಿ (ಪಿಇ) - ಫೆಬ್ರವರಿ 2027 (ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಹಿಮಾವೃತ ಪ್ರದೇಶಗಳು ಮತ್ತು ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಿಗೆ, ಜನಸಂಖ್ಯಾ ಗಣತಿಯನ್ನು ಸೆಪ್ಟೆಂಬರ್, 2026 ರಲ್ಲಿ ನಡೆಸಲಾಗುವುದು).
  • ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರು ರಾಷ್ಟ್ರೀಯ ಪ್ರಾಮುಖ್ಯತೆಯ ಈ ಬೃಹತ್ ಕಾರ್ಯವನ್ನು ಪೂರ್ಣಗೊಳಿಸುತ್ತಾರೆ.
  • ದತ್ತಾಂಶ ಸಂಗ್ರಹಣೆಗಾಗಿ ಮೊಬೈಲ್ ಅಪ್ಲಿಕೇಶನ್ ಮತ್ತು ಮೇಲ್ವಿಚಾರಣಾ ಉದ್ದೇಶಕ್ಕಾಗಿ ಕೇಂದ್ರೀಯ ಪೋರ್ಟಲ್ ಅನ್ನು ಬಳಸುವುದು ಉತ್ತಮ ಗುಣಮಟ್ಟದ ಡೇಟಾವನ್ನು ಖಚಿತಪಡಿಸುತ್ತದೆ.
  • ದತ್ತಾಂಶ ಪ್ರಸರಣವು ಹೆಚ್ಚು ಉತ್ತಮವಾಗಿರುತ್ತದೆ ಮತ್ತು ಬಳಕೆದಾರ ಸ್ನೇಹಿ ರೀತಿಯಲ್ಲಿರುತ್ತದೆ, ಇದರಿಂದಾಗಿ ನೀತಿ ನಿರೂಪಣೆಗೆ ಅಗತ್ಯವಿರುವ ನಿಯತಾಂಕಗಳ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಒಂದು ಗುಂಡಿಯನ್ನು ಒತ್ತುವುದರ ಮೂಲಕ ಉತ್ತರಿಸಲು ಲಭ್ಯವಾಗುತ್ತವೆ.
  • ಜನಗಣತಿ-ಒಂದು-ಸೇವೆಯಾಗಿ (CaaS) ಸಚಿವಾಲಯಗಳಿಗೆ ದತ್ತಾಂಶವನ್ನು ಸ್ವಚ್ಛ, ಸುಲಭವಾಗಿ ಓದಬಲ್ಲ (ಮಷೀನ್‌ ರೀಡಬಲ್‌) ಮತ್ತು ಕಾರ್ಯಸಾಧ್ಯ ಸ್ವರೂಪದಲ್ಲಿ ತಲುಪಿಸುತ್ತದೆ.

ಪ್ರಯೋಜನಗಳು:

ಭಾರತ ಜನಗಣತಿ 2027 ದೇಶದ ಸಂಪೂರ್ಣ ಜನಸಂಖ್ಯೆಯನ್ನು ಒಳಗೊಳ್ಳುತ್ತದೆ.

ಅನುಷ್ಠಾನ ತಂತ್ರ ಮತ್ತು ಗುರಿಗಳು:

  • ಜನಗಣತಿ ಪ್ರಕ್ರಿಯೆಯು ಪ್ರತಿ ಮನೆಗೆ ಭೇಟಿ ನೀಡಿ ಮನೆ ಪಟ್ಟಿ ಮತ್ತು ವಸತಿ ಜನಗಣತಿ ಮತ್ತು ಜನಸಂಖ್ಯಾ ಎಣಿಕೆಗಾಗಿ ವಿವಿಧ ಪ್ರಶ್ನಾವಳಿಗಳಿಗಳನ್ನು ಒಳಗೊಂಡಿರುತ್ತದೆ.
  • ರಾಜ್ಯ ಸರ್ಕಾರಗಳಿಂದ ನೇಮಕಗೊಂಡ ಮತ್ತು ಸರ್ಕಾರಿ ಶಿಕ್ಷಕರು ಸೇರಿದಂತೆ ಗಣತಿದಾರರು ತಮ್ಮ ನಿಯಮಿತ ಕರ್ತವ್ಯಗಳ ಜೊತೆಗೆ ಜನಗಣತಿಯ ಕ್ಷೇತ್ರ ಕಾರ್ಯವನ್ನು ನಿರ್ವಹಿಸುತ್ತಾರೆ.
  • ಉಪ-ಜಿಲ್ಲೆ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಇತರ ಜನಗಣತಿ ಕಾರ್ಯಕರ್ತರನ್ನು ರಾಜ್ಯ/ಜಿಲ್ಲಾ ಆಡಳಿತವು ನೇಮಿಸುತ್ತದೆ.
  • 2027ರ ಜನಗಣತಿಗಾಗಿ ತೆಗೆದುಕೊಂಡ ಹೊಸ ಉಪಕ್ರಮಗಳು:
  1. ದೇಶದಲ್ಲಿ ಮೊದಲ ಡಿಜಿಟಲ್ ವಿಧಾನದ ಜನಗಣತಿ. ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳಿಗೆ ಲಭ್ಯವಿರುವ ಮೊಬೈಲ್ ಅಪ್ಲಿಕೇಶನ್‌ ಗಳನ್ನು ಬಳಸಿಕೊಂಡು ಡೇಟಾವನ್ನು ಸಂಗ್ರಹಿಸಲಾಗುತ್ತದೆ.
  2. ಸಂಪೂರ್ಣ ಜನಗಣತಿ ಪ್ರಕ್ರಿಯೆಯನ್ನು ನೈಜ ಸಮಯದಲ್ಲಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಜನಗಣತಿ ನಿರ್ವಹಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (ಸಿಎಂಎಂಎಸ್) ಪೋರ್ಟಲ್ ಎಂಬ ಮೀಸಲಾದ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
  3. ಮನೆಪಟ್ಟಿ ಬ್ಲಾಕ್ (ಎಚ್‌ ಎಲ್‌ ಬಿ) ಕ್ರಿಯೇಟರ್ ವೆಬ್ ಮ್ಯಾಪ್ ಅಪ್ಲಿಕೇಶನ್: ಜನಗಣತಿ 2027 ರ ಮತ್ತೊಂದು ನಾವೀನ್ಯತೆ ಎಂದರೆ ಅಧಿಕಾರಿಗಳು ಬಳಸಬೇಕಾದ ಎಚ್‌ ಎಲ್‌ ಬಿ ಕ್ರಿಯೇಟರ್ ವೆಬ್ ಮ್ಯಾಪ್ ಅಪ್ಲಿಕೇಶನ್.
  4. ಸ್ವಯಂ-ಗಣತಿ ಮಾಡುವ ಆಯ್ಕೆಯನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು.
  5. ಈ ಬೃಹತ್ ಡಿಜಿಟಲ್ ಕಾರ್ಯಾಚರಣೆಗೆ ಸೂಕ್ತವಾದ ಭದ್ರತಾ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.
  6. 2027 ರ ಜನಗಣತಿಯು ದೇಶಾದ್ಯಂತ ಜಾಗೃತಿ ಮೂಡಿಸಲು, ಎಲ್ಲರೊಂದಿಗೆ ತೊಡಗಿಸಿಕೊಳ್ಳಲು, ಕೊನೆಯ ಮೈಲಿ ಸಂಪರ್ಕವನ್ನು ಬೆಂಬಲಿಸಲು ಮತ್ತು ಕ್ಷೇತ್ರ ಕಾರ್ಯಾಚರಣೆಗಳಿಗೆ ಕೇಂದ್ರೀಕೃತ ಮತ್ತು ಸಮಗ್ರ ಪ್ರಚಾರ ಅಭಿಯಾನವನ್ನು ಒಳಗೊಂಡಿರುತ್ತದೆ. ಇದು ನಿಖರ, ಅಧಿಕೃತ ಮತ್ತು ಸಕಾಲಿಕ ಮಾಹಿತಿಯನ್ನು ಹಂಚಿಕೊಳ್ಳಲು ಒತ್ತು ನೀಡುತ್ತದೆ, ಸಂಘಟಿತ ಮತ್ತು ಪರಿಣಾಮಕಾರಿ ಸಂಪರ್ಕ ಪ್ರಯತ್ನವನ್ನು ಖಚಿತಪಡಿಸುತ್ತದೆ.
  7. ಏಪ್ರಿಲ್ 30, 2025 ರಂದು ನಡೆದ ರಾಜಕೀಯ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿಯ ಸಭೆಯು ಮುಂಬರುವ ಜನಗಣತಿಯಲ್ಲಿ ಅಂದರೆ 2027 ರ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಸೇರಿಸಲು ನಿರ್ಧರಿಸಿತು. ನಮ್ಮ ದೇಶದಲ್ಲಿನ ಬೃಹತ್ ಸಾಮಾಜಿಕ ಮತ್ತು ಜನಸಂಖ್ಯಾ ವೈವಿಧ್ಯತೆ ಮತ್ತು ಸಂಬಂಧಿತ ಸವಾಲುಗಳೊಂದಿಗೆ, 2027 ರ ಜನಗಣತಿಯು ಎರಡನೇ ಹಂತದಲ್ಲಿ, ಅಂದರೆ ಜನಸಂಖ್ಯಾ ಎಣಿಕೆಯಲ್ಲಿ ಜಾತಿ ದತ್ತಾಂಶವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸುತ್ತದೆ.
  8. ಜನಗಣತಿ ಕಾರ್ಯಾಚರಣೆಗಳ ದತ್ತಾಂಶ ಸಂಗ್ರಹಣೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ಗಣತಿದಾರರು, ಮೇಲ್ವಿಚಾರಕರು, ಮಾಸ್ಟರ್ ತರಬೇತುದಾರರು, ಚಾರ್ಜ್ ಅಧಿಕಾರಿಗಳು ಮತ್ತು ಪ್ರಧಾನ/ಜಿಲ್ಲಾ ಜನಗಣತಿ ಅಧಿಕಾರಿಗಳು ಸೇರಿದಂತೆ ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರನ್ನು ನಿಯೋಜಿಸಲಾಗುವುದು. ಜನಗಣತಿ ಮಾಡುವ ಎಲ್ಲರಿಗೂ ಸೂಕ್ತ ಗೌರವಧನವನ್ನು ನೀಡಲಾಗುತ್ತದೆ, ಏಕೆಂದರೆ ಅವರು ತಮ್ಮ ನಿಯಮಿತ ಕರ್ತವ್ಯಗಳ ಜೊತೆಗೆ ಈ ಕೆಲಸವನ್ನು ಮಾಡುತ್ತಾರೆ.

ಉದ್ಯೋಗ ಸೃಷ್ಟಿ ಸಾಮರ್ಥ್ಯ ಸೇರಿದಂತೆ ಪ್ರಮುಖ ಪರಿಣಾಮ:

  • ಮುಂಬರುವ ಜನಗಣತಿ ದತ್ತಾಂಶವನ್ನು ದೇಶಾದ್ಯಂತ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಲಭ್ಯವಾಗುವಂತೆ ಮಾಡುವುದು ಪ್ರಸ್ತುತ ಪ್ರಯತ್ನವಾಗಿದೆ. ಹೆಚ್ಚು ಕಸ್ಟಮೈಸ್ ಮಾಡಿದ ದೃಶ್ಯೀಕರಣ ಸಾಧನಗಳೊಂದಿಗೆ ಜನಗಣತಿ ಫಲಿತಾಂಶಗಳನ್ನು ಪ್ರಸಾರ ಮಾಡಲು ಸಹ ಪ್ರಯತ್ನಿಸಲಾಗುವುದು. ಅತ್ಯಂತ ತಳಮಟ್ಟದ ಆಡಳಿತ ಘಟಕದವರೆಗೆ ಅಂದರೆ ಗ್ರಾಮ/ವಾರ್ಡ್ ಮಟ್ಟದವರೆಗೆ ಎಲ್ಲರಿಗೂ ದತ್ತಾಂಶ ಹಂಚಿಕೆ ಮಾಡಲಾಗುವುದು.
  • 2027 ರ ಜನಗಣತಿಯನ್ನು ಯಶಸ್ವಿಯಾಗಿ ನಡೆಸಲು, ಸುಮಾರು 18,600 ತಾಂತ್ರಿಕ ಮಾನವಶಕ್ತಿಯನ್ನು ಸ್ಥಳೀಯ ಮಟ್ಟದಲ್ಲಿ ಸುಮಾರು 550 ದಿನಗಳವರೆಗೆ ವಿವಿಧ ಕಾರ್ಯಗಳನ್ನು ಪೂರ್ಣಗೊಳಿಸಲು ನಿಯೋಜಿಸಲಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸರಿಸುಮಾರು 1.02 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಾಗುತ್ತದೆ. ಇದಲ್ಲದೆ, ಚಾರ್ಜ್/ಜಿಲ್ಲೆ/ರಾಜ್ಯ ಮಟ್ಟದಲ್ಲಿ ತಾಂತ್ರಿಕ ಮಾನವಶಕ್ತಿಯನ್ನು ಒದಗಿಸುವುದರಿಂದ ಸಾಮರ್ಥ್ಯ ವೃದ್ಧಿಯೂ ಅನುಕೂಲವಾಗುತ್ತದೆ, ಏಕೆಂದರೆ ಕೆಲಸದ ಸ್ವರೂಪವು ಡಿಜಿಟಲ್ ಡೇಟಾ ನಿರ್ವಹಣೆ, ಮೇಲ್ವಿಚಾರಣೆ ಮತ್ತು ಸಮನ್ವಯವನ್ನು ಒಳಗೊಂಡಿರುತ್ತದೆ. ಇದು ಈ ವ್ಯಕ್ತಿಗಳ ಭವಿಷ್ಯದ ಉದ್ಯೋಗಾವಕಾಶಗಳನ್ನು ಸುಧಾರಿಸುತ್ತದೆ.

ಹಿನ್ನೆಲೆ:

2027ರ ಜನಗಣತಿಯು ದೇಶದಲ್ಲಿ 16ನೇ ಮತ್ತು ಸ್ವಾತಂತ್ರ್ಯದ ನಂತರದ 8ನೇ ಜನಗಣತಿಯಾಗಲಿದೆ. ಜನಗಣತಿಯು ಗ್ರಾಮ, ಪಟ್ಟಣ ಮತ್ತು ವಾರ್ಡ್ ಮಟ್ಟದಲ್ಲಿ ಪ್ರಾಥಮಿಕ ದತ್ತಾಂಶದ ಅತಿದೊಡ್ಡ ಮೂಲವಾಗಿದ್ದು, ವಸತಿ ಪರಿಸ್ಥಿತಿಗಳು, ಸೌಕರ್ಯಗಳು ಮತ್ತು ಸ್ವತ್ತುಗಳು, ಜನಸಂಖ್ಯಾಶಾಸ್ತ್ರ, ಧರ್ಮ, ಎಸ್‌ ಸಿ ಮತ್ತು ಎಸ್‌ ಟಿ, ಭಾಷೆ, ಸಾಕ್ಷರತೆ ಮತ್ತು ಶಿಕ್ಷಣ, ಆರ್ಥಿಕ ಚಟುವಟಿಕೆ, ವಲಸೆ ಮತ್ತು ಫಲವತ್ತತೆಯಂತಹ ವಿವಿಧ ನಿಯತಾಂಕಗಳ ಕುರಿತು ಸೂಕ್ಷ್ಮ ದತ್ತಾಂಶವನ್ನು ಒದಗಿಸುತ್ತದೆ. ಜನಗಣತಿ ಕಾಯ್ದೆ, 1948 ಮತ್ತು ಜನಗಣತಿ ನಿಯಮಗಳು, 1990 ಜನಗಣತಿಯನ್ನು ನಡೆಸಲು ಕಾನೂನು ಚೌಕಟ್ಟನ್ನು ಒದಗಿಸುತ್ತವೆ.

 

*****


(रिलीज़ आईडी: 2203150) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Marathi , Gujarati , Malayalam