ಭೂವಿಜ್ಞಾನ ಸಚಿವಾಲಯ
'ಸಂಭ್ರಮಾಚರಣೆ, ಸಂವಹನ ಮತ್ತು ವೃತ್ತಿ' ಬುನಾದಿಯ ಮೇಲೆ ಐಐಎಸ್‌ಎಫ್; ಪಂಚಕುಲದಲ್ಲಿ ವಿಜ್ಞಾನ ಉತ್ಸವಕ್ಕೆ ಚಾಲನೆ ನೀಡಿದ ಡಾ. ಜಿತೇಂದ್ರ ಸಿಂಗ್
'ಆತ್ಮನಿರ್ಭರ ವಿಜ್ಞಾನ'ದತ್ತ ಭಾರತದ ದಾಪುಗಾಲು; ವಿಜ್ಞಾನದಲ್ಲಿನ ಸ್ವಾವಲಂಬನೆ ಈಗ ಕೇವಲ ಆಶಯವಷ್ಟೇ ಅಲ್ಲ ಎಂದು ಪ್ರತಿಪಾದಿಸಿದ ಸಚಿವರು
ಧ್ರುವೀಯ ಸಂಶೋಧನೆಯಿಂದ ‘ಡೀಪ್ ಟೆಕ್’ವರೆಗೆ: ಭಾರತದ ವಿಸ್ತಾರವಾಗುತ್ತಿರುವ ವಿಜ್ಞಾನ ಪರಿಸರ ವ್ಯವಸ್ಥೆಗೆ ಐಐಎಸ್‌ಎಫ್ ಕನ್ನಡಿ
प्रविष्टि तिथि:
06 DEC 2025 6:30PM by PIB Bengaluru
ಹರಿಯಾಣದ ಪಂಚಕುಲದಲ್ಲಿ ಇಂದಿನಿಂದ (ಡಿ. 6) ಆರಂಭವಾಗಿರುವ ನಾಲ್ಕು ದಿನಗಳ 'ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ'ವನ್ನು (India International Science Festival - IISF 2025) ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ. ಜಿತೇಂದ್ರ ಸಿಂಗ್ ಉದ್ಘಾಟಿಸಿದರು. ಈ ಉತ್ಸವವನ್ನು ಅವರು ಮೂರು "ಸಿ"ಗಳು— ಸಂಭ್ರಮಾಚರಣೆ (Celebration), ಸಂವಹನ (Communication) ಮತ್ತು ವೃತ್ತಿ (Career) — ಎಂದು ಬಣ್ಣಿಸಿದರು. ಭಾರತದ ವೈಜ್ಞಾನಿಕ ಪ್ರಗತಿಯು ಕೇವಲ ಪ್ರಯೋಗಾಲಯಗಳಿಗೆ ಸೀಮಿತವಾಗಬಾರದು, ಅದು ನಾಗರಿಕರು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರನ್ನು ಅರ್ಥಪೂರ್ಣವಾಗಿ ತಲುಪಬೇಕು ಎಂದು ಹೇಳಿದರು. ಈ ಉತ್ಸವದ 11ನೇ ಆವೃತ್ತಿಯು ಡಿಸೆಂಬರ್ 6 ರಿಂದ 9 ರವರೆಗೆ ನಡೆಯಲಿದೆ.
ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್, "ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವವನ್ನು (IISF) ಕೇವಲ ಒಂದು ಸಾಂಪ್ರದಾಯಿಕ ಶೈಕ್ಷಣಿಕ ಸಮಾವೇಶವನ್ನಾಗಿ ರೂಪಿಸಿಲ್ಲ. ಬದಲಿಗೆ, ಇದೊಂದು ವಿಜ್ಞಾನವನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸುವ ಮುಕ್ತ ಹಾಗೂ ಸಾರ್ವಜನಿಕ ವೇದಿಕೆಯಾಗಿದೆ," ಎಂದು ಹೇಳಿದರು. ವಿಜ್ಞಾನಿಗಳು ಮತ್ತು ವೈಜ್ಞಾನಿಕ ಸಂಶೋಧನೆಯ ಉದ್ದೇಶಿತ ಫಲಾನುಭವಿಗಳ ನಡುವೆ ಸಂವಾದವನ್ನು ಈ ಉತ್ಸವ ಪ್ರೋತ್ಸಾಹಿಸುತ್ತದೆ. ಇದು ವಿವಿಧ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ ಹೆಚ್ಚಿನ ಸಮನ್ವಯ ಮತ್ತು ಒಗ್ಗಟ್ಟನ್ನು ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ನೀಡುತ್ತಿರುವ ಒತ್ತನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.
ಮೂರು 'ಸಿ'ಗಳ (Three C's) ಬಗ್ಗೆ ವಿವರಣೆ ನೀಡಿದ ಸಚಿವರು, "IISF ವಿವಿಧ ವಲಯಗಳಲ್ಲಿನ ಭಾರತದ ವೈಜ್ಞಾನಿಕ ಪಯಣ ಮತ್ತು ಸಾಧನೆಗಳನ್ನು 'ಸಂಭ್ರಮಿಸುತ್ತದೆ', ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಆಚೆಗೆ ವೈಜ್ಞಾನಿಕ ಜ್ಞಾನವನ್ನು 'ಸಂವಹನ' ಮಾಡುತ್ತದೆ ಮತ್ತು ಯುವ ಪಾಲ್ಗೊಳ್ಳುವವರಿಗೆ ಇದೊಂದು 'ವೃತ್ತಿ' ಅನ್ವೇಷಣೆಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ," ಎಂದು ಹೇಳಿದರು. ಉತ್ಸವದ ಸಮಯದಲ್ಲಿ ನಡೆಯುವ ವ್ಯವಸ್ಥಿತ ಗೋಷ್ಠಿಗಳು ಹಾಗೂ ಅನೌಪಚಾರಿಕ ನೆಟ್ ವರ್ಕಿಂಗ್ ಮೂಲಕ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಹೊಸದಾಗಿ ಕಲಿಯುವವರು ಸಂಶೋಧನೆ, ಸ್ಟಾರ್ಟಪ್ ಗಳು ಮತ್ತು ಉದ್ಯಮ ವಲಯದಲ್ಲಿನ ಉದಯೋನ್ಮುಖ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
'ವಿಕಸಿತ ಭಾರತ@2047'ರ ವಿಶಾಲವಾದ ರಾಷ್ಟ್ರೀಯ ದೃಷ್ಟಿಕೋನದ ಅಡಿಯಲ್ಲಿ ಐಐಎಸ್‌ಎಫ್ ಅನ್ನು ಗುರುತಿಸಿದ ಡಾ. ಜಿತೇಂದ್ರ ಸಿಂಗ್, "ವಿಜ್ಞಾನ ಮತ್ತು ತಂತ್ರಜ್ಞಾನವು ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪರಿವರ್ತನೆಗೆ ಅಡಿಪಾಯವಾಗಿವೆ," ಎಂದು ಹೇಳಿದರು. ಕಳೆದ ದಶಕದಲ್ಲಿ, ಸುಧಾರಣೆಗಳು, ಮೂಲಸೌಕರ್ಯದಲ್ಲಿ ಹೆಚ್ಚಿದ ಹೂಡಿಕೆ ಮತ್ತು ಪ್ರತಿಭೆಗಳ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಭಾರತವು ವಿಜ್ಞಾನಕ್ಕೆ 'ಮಿಷನ್-ಚಾಲಿತ' (Mission-driven) ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. ಸುಧಾರಿತ ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳಿಂದ ಹಿಡಿದು ಧ್ರುವೀಯ ಸಂಶೋಧನೆ ಹಾಗೂ ಡಿಜಿಟಲ್ ತಂತ್ರಜ್ಞಾನಗಳವರೆಗೆ, ವೈಜ್ಞಾನಿಕ ಪ್ರಗತಿಯು ಈಗ ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಗೆ ನೇರವಾಗಿ ಬೆಂಬಲ ನೀಡುತ್ತಿದೆ ಎಂದು ಅವರು ಹೇಳಿದರು.
ಐಐಎಸ್‌ಎಫ್ 2025ರ ಧ್ಯೇಯವಾಕ್ಯವಾದ "ವಿಜ್ಞಾನದಿಂದ ಸಮೃದ್ಧಿ: ಆತ್ಮನಿರ್ಭರ ಭಾರತದತ್ತ" ಎಂಬುದನ್ನು ಉಲ್ಲೇಖಿಸಿದ ಸಚಿವರು, ವಿಜ್ಞಾನದಲ್ಲಿ ಸ್ವಾವಲಂಬನೆ ಸ್ಥಿರವಾಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು. 2028ರಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆಯಿರುವ ಬಹುಪಯೋಗಿ ಸರ್ವ-ಋತು ಸಂಶೋಧನಾ ನೌಕೆ ಮತ್ತು ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಮಾನವ ಸಹಿತ ಸಬ್‌ಮರ್ಸಿಬಲ್ (ಜಲಾಂತರ್ಗಾಮಿ) ಯೋಜನೆ ಸೇರಿದಂತೆ, ಪ್ರಮುಖ ವೈಜ್ಞಾನಿಕ ಆಸ್ತಿಗಳನ್ನು ದೇಶೀಯವಾಗಿಯೇ ನಿರ್ಮಿಸುವ ಉಪಕ್ರಮಗಳನ್ನು ಅವರು ಎತ್ತಿ ತೋರಿಸಿದರು. ಭಾರತೀಯ ಸಂಸ್ಥೆಗಳು ನೀಡುತ್ತಿರುವ ಹವಾಮಾನ ದತ್ತಾಂಶ ಮತ್ತು ಮಾದರಿಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ನಾವೀನ್ಯತೆ , ಸಂಶೋಧನಾ ಫಲಿತಾಂಶ ಮತ್ತು ಉದ್ಯಮಶೀಲತೆಯಲ್ಲಿ ಭಾರತದ ಜಾಗತಿಕ ಸ್ಥಾನಮಾನವು ಗಮನಾರ್ಹವಾಗಿ ಸುಧಾರಿಸಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಎತ್ತಿ ತೋರಿಸಿದರು. ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಟಾರ್ಟಪ್ ಪರಿಸರ ವ್ಯವಸ್ಥೆ , ಭಾರತೀಯರಿಂದ ಹೆಚ್ಚುತ್ತಿರುವ ಪೇಟೆಂಟ್ ಅರ್ಜಿಗಳ ಸಲ್ಲಿಕೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಉದಯೋನ್ಮುಖ ಕ್ಷೇತ್ರಗಳಲ್ಲಿ ಭಾರತಕ್ಕೆ ದೊರೆಯುತ್ತಿರುವ ಮನ್ನಣೆಯನ್ನು ಅವರು ಇದಕ್ಕೆ ಸಾಕ್ಷಿಯಾಗಿ ನೀಡಿದರು. ಸಂಶೋಧನೆಯು ಹೇಗೆ ನೈಜ ಮತ್ತು ಸ್ಪಷ್ಟ ಫಲಿತಾಂಶಗಳನ್ನು ನೀಡುತ್ತಿದೆ ಎಂಬುದನ್ನು ವಿವರಿಸಲು, ಚಂದ್ರಯಾನ-3 ಮಿಷನ್‌ನ ಯಶಸ್ಸು, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಸ್ವದೇಶಿ ಲಸಿಕೆಯ ಅಭಿವೃದ್ಧಿ ಹಾಗೂ ಜೈವಿಕ ತಂತ್ರಜ್ಞಾನ ವಲಯದಲ್ಲಿನ ಪ್ರಗತಿಯನ್ನು ಅವರು ಪ್ರಮುಖ ಉದಾಹರಣೆಗಳಾಗಿ ಉಲ್ಲೇಖಿಸಿದರು.
ಯುವ ಸಮೂಹವನ್ನು ತಲುಪುವುದಕ್ಕೆ ವಿಶೇಷ ಒತ್ತು ನೀಡಿದ ಸಚಿವರು, ಐಐಎಸ್‌ಎಫ್ ಚಟುವಟಿಕೆಗಳ ಗಮನಾರ್ಹ ಭಾಗವನ್ನು ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಸಂಶೋಧಕರಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. ವಿಜ್ಞಾನ ವಲಯದ ವೃತ್ತಿಜೀವನದ ಬಗೆಗಿನ ಗ್ರಹಿಕೆ ಅಥವಾ ದೃಷ್ಟಿಕೋನವನ್ನು ವಿಸ್ತರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. "ಇಂದಿನ ದಿನಗಳಲ್ಲಿ ಅವಕಾಶಗಳು ಕೇವಲ ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಸೀಮಿತವಾಗಿಲ್ಲ; ಅವು ಸ್ಟಾರ್ಟಪ್ ಗಳು, ಉದ್ಯಮ ನೇತೃತ್ವದ ಸಂಶೋಧನೆ ಮತ್ತು ಅನ್ವಯಿಕ ನಾವೀನ್ಯತೆಗಳನ್ನೂ ಒಳಗೊಂಡಂತೆ ವ್ಯಾಪಕವಾಗಿ ವಿಸ್ತರಿಸಿವೆ," ಎಂದು ಅವರು ತಿಳಿಸಿದರು. ಕ್ವಾಂಟಮ್ ತಂತ್ರಜ್ಞಾನಗಳು, ಜೈವಿಕ ತಂತ್ರಜ್ಞಾನ, ಬ್ಲೂ ಎಕಾನಮಿ (ನೀಲಿ ಆರ್ಥಿಕತೆ) ಮತ್ತು ಡೀಪ್-ಟೆಕ್ ಉದ್ಯಮಶೀಲತೆಯಂತಹ ವಿಷಯಗಳ ಕುರಿತಾದ ಗೋಷ್ಠಿಗಳು ಈ ವರ್ಷದ ಕಾರ್ಯಕ್ರಮದ ಭಾಗವಾಗಿವೆ ಎಂದು ಅವರು ಮಾಹಿತಿ ನೀಡಿದರು.
ಸಾರ್ವಜನಿಕ ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ಉದ್ಯಮದ ನಡುವೆ ಬಲವಾದ ಸಹಯೋಗದ ಮಹತ್ವವನ್ನು ಡಾ. ಜಿತೇಂದ್ರ ಸಿಂಗ್ ಇದೇ ವೇಳೆ ಒತ್ತಿ ಹೇಳಿದರು. "ನೀತಿ ಬೆಂಬಲ, ಹಣಕಾಸು ನೆರವು ಮತ್ತು ಉದ್ಯಮಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನಾವೀನ್ಯತೆ ಅಭಿವೃದ್ಧಿ ಹೊಂದಲು ಸಾಧ್ಯ," ಎಂದು ಅವರು ಅಭಿಪ್ರಾಯಪಟ್ಟರು. "ಬಾಹ್ಯಾಕಾಶ, ಆರೋಗ್ಯ ತಂತ್ರಜ್ಞಾನ ಮತ್ತು ಸುಧಾರಿತ ಉತ್ಪಾದನೆಯಂತಹ ವಲಯಗಳಲ್ಲಿ ಹೆಚ್ಚಿನ ಖಾಸಗಿ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡುವ ಇತ್ತೀಚಿನ ನೀತಿ ಕ್ರಮಗಳು, ಹೆಚ್ಚು ಪೂರಕವಾದ ನಾವೀನ್ಯತಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ" ಎಂದು ಅವರು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ, ಸಚಿವರು ‘ವಿಜ್ಞಾನ-ತಂತ್ರಜ್ಞಾನ-ರಕ್ಷಣೆ-ಬಾಹ್ಯಾಕಾಶ ಪ್ರದರ್ಶನ’ಕ್ಕೆ ಚಾಲನೆ ನೀಡಿದರು. ಜೊತೆಗೆ, ಭಾರತದ ವೈಜ್ಞಾನಿಕ ಸಾಮರ್ಥ್ಯಗಳು ಮತ್ತು ಪ್ರಸ್ತುತ ನಡೆಯುತ್ತಿರುವ ಸಂಶೋಧನೆಗಳನ್ನು ಸಂವಾದಾತ್ಮಕವಾಗಿ ವಿವರಿಸುವ ವಿನೂತನ "ಸೈನ್ಸ್ ಆನ್ ಎ ಸ್ಫಿಯರ್" (Science on a Sphere) ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ, ಅಂಟಾರ್ಕ್ಟಿಕಾದಲ್ಲಿರುವ ಭಾರತದ ಸಂಶೋಧನಾ ಕೇಂದ್ರವಾದ 'ಭಾರತಿ'ಯ ವಿಜ್ಞಾನಿಗಳೊಂದಿಗೆ ಲೈವ್ (ನೇರ) ಸಂಪರ್ಕ ಸಾಧಿಸಿ ಸಮಾಲೋಚನೆ ನಡೆಸಿದರು. ಅಲ್ಲಿನ ಕಠಿಣ ಹವಾಮಾನ ವೈಪರೀತ್ಯಗಳ ನಡುವೆಯೂ ನಡೆಯುತ್ತಿರುವ ವೈಜ್ಞಾನಿಕ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಇದು ಧ್ರುವ ಪ್ರದೇಶಗಳಲ್ಲಿ ಭಾರತದ ಸಂಶೋಧನಾ ವ್ಯಾಪ್ತಿಯ ವಿಸ್ತರಣೆ ಮತ್ತು ನಮ್ಮ ದೇಶೀಯ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಬಣ್ಣಿಸಿದರು.
ಮುಂದಿನ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ವೈವಿಧ್ಯಮಯ ಪ್ರದರ್ಶನಗಳು, ವಿಶೇಷ ಉಪನ್ಯಾಸಗಳು ಮತ್ತು ಸಂವಾದ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಂಶೋಧನೆ, ನಾವೀನ್ಯತೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಯಂತಹ ದೀರ್ಘಕಾಲೀನ ರಾಷ್ಟ್ರೀಯ ಗುರಿಗಳಿಗೆ ಕೊಡುಗೆ ನೀಡುವುದರ ಜೊತೆಗೆ, ಜನಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ, ಅವರನ್ನು ವಿಜ್ಞಾನದೊಂದಿಗೆ ಹೆಚ್ಚು ಆಳವಾಗಿ ಬೆಸೆಯುವುದು ಈ ವಿಜ್ಞಾನ ಹಬ್ಬದ ಪ್ರಮುಖ ಆಶಯವಾಗಿದೆ.




*****
(रिलीज़ आईडी: 2199965)
आगंतुक पटल : 13