ಸಹಕಾರ ಸಚಿವಾಲಯ
ಗುಜರಾತ್‌ನ ವಾವ್-ಥರಡ್ ಜಿಲ್ಲೆಯಲ್ಲಿ ನಡೆದ ಸಹಕಾರ ಸಚಿವಾಲಯದ ಸಂಸದೀಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರದಿಂದ ಸಮೃದ್ಧಿ' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ, ಡೈರಿ ಸಹಕಾರ ಸಂಘಗಳು ಇಂದು ರೈತರ ಕಲ್ಯಾಣಕ್ಕೆ ಬಲಿಷ್ಠವಾದ ಶಕ್ತಿಯಾಗಿವೆ
ಶ್ವೇತ ಕ್ರಾಂತಿ 2.0ರ ಉದ್ದೇಶವು ಪ್ರತಿ ಪಂಚಾಯತ್‌ನಲ್ಲಿ ಸಹಕಾರಿ ಸಂಘ ಮತ್ತು ಪ್ರತಿ ಜಿಲ್ಲೆಯಲ್ಲಿ ಡೈರಿಯನ್ನು ಸ್ಥಾಪಿಸುವುದಾಗಿದೆ
ರಾಷ್ಟ್ರೀಯ ಮಟ್ಟದಲ್ಲಿ ಡೈರಿ ವಲಯಕ್ಕಾಗಿ ಮೂರು ಬಹು-ರಾಜ್ಯ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದೆ
ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಪದವೀಧರರು ದೇಶಾದ್ಯಂತ ಬನಾಸ್ ಡೈರಿ ಮಾದರಿಯನ್ನು ಜಾರಿಗೆ ತರಲು ಕೊಡುಗೆ ನೀಡಲಿದ್ದಾರೆ
‘ವಿಮಾ ಸಹಕಾರಿ ಸಂಘಗಳು’ ಹಳ್ಳಿಗಳಲ್ಲಿ ವಿಮಾ ಸೇವೆಗಳಿಗೆ ಸುಲಭ ಪ್ರವೇಶವನ್ನು ಖಚಿತಪಡಿಸುತ್ತವೆ
ರೈತರಿಗೆ ಮಣ್ಣಿನ ಗುಣಮಟ್ಟದ ವೈಜ್ಞಾನಿಕ ಮೌಲ್ಯಮಾಪನವನ್ನು ಒದಗಿಸಲು ಪ್ರತಿ ಜಿಲ್ಲೆಯಲ್ಲಿ ನಾಲ್ಕು ಅತ್ಯಾಧುನಿಕ ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು
प्रविष्टि तिथि:
06 DEC 2025 9:34PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಗುಜರಾತ್‌ನ ವಾವ್-ಥರಡ್ ಜಿಲ್ಲೆಯ ಬನಾಸ್ ಡೈರಿಯಲ್ಲಿ ನಡೆದ ಸಹಕಾರ ಸಚಿವಾಲಯದ ಸಂಸದೀಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಹಕಾರ ರಾಜ್ಯ ಸಚಿವರಾದ ಶ್ರೀ ಕ್ರಿಶನ್ ಪಾಲ್ ಗುರ್ಜರ್ ಮತ್ತು ಸಮಿತಿಯ ಸಂಸತ್ ಸದಸ್ಯರು ಶ್ರೀ ಮುರಳೀಧರ್ ಮೊಹೋಲ್, ಸಹಕಾರ ಕಾರ್ಯದರ್ಶಿ ಡಾ. ಆಶಿಶ್ ಕುಮಾರ್ ಭೂತಾನಿ ಮತ್ತು ಸಹಕಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಭಾರತದ ಡೈರಿ ಸಹಕಾರಿ ವಲಯದ ಭವಿಷ್ಯದ ಕಾರ್ಯತಂತ್ರ ಮತ್ತು ಶ್ವೇತ ಕ್ರಾಂತಿ 2.0 ಕುರಿತು ಚರ್ಚಿಸಲಾಯಿತು. ಸಂಸದೀಯ ಸಲಹಾ ಸಮಿತಿಯ ಮುಂದೆ ಸಹಕಾರಿ ಡೈರಿ ವಲಯದ ಕುರಿತು ಸಮಗ್ರ ಪ್ರಸ್ತುತಿಯನ್ನು ಮಂಡಿಸಲಾಯಿತು, ಇದು ವಲಯದ ಸಾಮರ್ಥ್ಯ ಮತ್ತು ವೃತ್ತಾಕಾರ ಹಾಗು ಸುಸ್ಥಿರತೆಯನ್ನು ಉತ್ತೇಜಿಸುವಲ್ಲಿ ಡೈರಿ ಸಹಕಾರಿ ಸಂಸ್ಥೆಗಳ ಪಾತ್ರವನ್ನು ಉಲ್ಲೇಖಿಸಿತು.

ಸಹಾಯಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ, ಸಹಕಾರವು ಭಾರತದ ಗ್ರಾಮೀಣ ಆರ್ಥಿಕತೆ, ರೈತರ ಆದಾಯ ವರ್ಧನೆ, ಮಹಿಳಾ ಸಬಲೀಕರಣ ಮತ್ತು ಹಾಲು ಉತ್ಪಾದನೆಯಲ್ಲಿ ರಾಷ್ಟ್ರದ ಸ್ವಾವಲಂಬನೆಗೆ ಅಡಿಪಾಯವಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರದಿಂದ ಸಮೃದ್ಧಿ' ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ, ಡೈರಿ ಸಹಕಾರ ಸಂಘಗಳು ಇಂದು ರೈತರ ಅಭಿವೃದ್ಧಿಯ ಬಲವಾದ ಚಾಲಕ ಶಕ್ತಿಯಾಗಿ ಮಾರ್ಪಟ್ಟಿವೆ ಎಂದು ಅವರು ತಿಳಿಸಿದರು.
ಭಾರತದ ಪ್ರತಿಯೊಬ್ಬ ಮಹಿಳೆಯ ಆದಾಯವನ್ನು ಹೆಚ್ಚಿಸಲು ಮತ್ತು ಪ್ರತಿ ಮನೆಯನ್ನು ಸ್ವಾವಲಂಬಿಯನ್ನಾಗಿ ಮಾಡಲು ಡೈರಿ ಸಹಕಾರ ಸಂಘಗಳು ಅತ್ಯಂತ ಪರಿಣಾಮಕಾರಿ ಸಾಧನಗಳಾಗಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸಹಕಾರಿ ಚೌಕಟ್ಟನ್ನು ಮತ್ತಷ್ಟು ಬಲಪಡಿಸಲು ಅವರು ಹಲವಾರು ಹೊಸ ಸಲಹೆಗಳು ಮತ್ತು ಮಾರ್ಗಸೂಚಿಗಳನ್ನು ನೀಡಿದರು. ಗ್ರಾಮೀಣ ಸಮುದಾಯಗಳಿಗೆ ವಿಮಾ ಸೇವೆಗಳಿಗೆ ಸುಲಭ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಗ್ರಾಮ ಮಟ್ಟದ ಸಹಕಾರಿ ಸಂಘಗಳನ್ನು ವಿಮಾ ಸಹಕಾರಿ ಸಂಘಗಳೊಂದಿಗೆ ಜೋಡಿಸಲಾಗುವುದು ಎಂದು ಅವರು ಹೇಳಿದರು. ಗ್ರಾಮಸ್ಥರು ಸಹಕಾರಿ ಜಾಲದ ಮೂಲಕ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ ವಿಮೆಯನ್ನು ಪಡೆಯುವಂತೆ ಡೈರಿ ಸಹಕಾರಿ ಸಂಘಗಳನ್ನು ವಿಮಾ ಸೇವೆಗಳೊಂದಿಗೆ ಜೋಡಿಸಲಾಗುವುದು ಎಂದು ಅವರು ಹೇಳಿದರು. ಸಹಕಾರಿ ಪರಿಸರ ವ್ಯವಸ್ಥೆಯೊಳಗೆ ಪರಸ್ಪರ ಬಲವರ್ಧನೆ ಮತ್ತು ಬಂಡವಾಳ ವಿಸ್ತರಣೆ ನಡೆಯುವಂತೆ ಸಹಕಾರಿ ಸಂಸ್ಥೆಗಳು ಇತರ ಸಹಕಾರಿ ಸಂಸ್ಥೆಗಳಲ್ಲಿಯೂ ಹೂಡಿಕೆ ಮಾಡಬೇಕು ಎಂದು ಶ್ರೀ ಶಾ ಹೇಳಿದರು.
ರಾಷ್ಟ್ರೀಯ ಮಟ್ಟದಲ್ಲಿ ಡೈರಿ ವಲಯಕ್ಕಾಗಿ ಮೂರು ಬಹು-ರಾಜ್ಯ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಸಂಸ್ಥೆಗಳ ಮೂಲಕ, ಎನ್‌ಡಿಡಿಬಿ ಮತ್ತು ಪಶುಸಂಗೋಪನೆ ಹಾಗು ಹೈನುಗಾರಿಕೆ ಇಲಾಖೆಯು ಶ್ವೇತ ಕ್ರಾಂತಿ 2.0ವನ್ನು ಪ್ರಾರಂಭಿಸಿವೆ, ಇದರ ಉದ್ದೇಶ ಪ್ರತಿ ಪಂಚಾಯತ್‌ನಲ್ಲಿ ಸಹಕಾರಿ ಸಂಘ ಮತ್ತು ಪ್ರತಿ ಜಿಲ್ಲೆಯಲ್ಲಿ ಸಾಕಷ್ಟು ಹಾಲು ಉತ್ಪಾದನೆಯೊಂದಿಗೆ ಡೈರಿಯನ್ನು ಸ್ಥಾಪಿಸುವುದು. ಇದು ದೀರ್ಘಕಾಲೀನ ಕಾರ್ಯಕ್ರಮವಾಗಿದ್ದು, ಆನಂದ್‌ನಲ್ಲಿ ಸ್ಥಾಪಿಸಲಾದ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ (ಟಿ.ಎಸ್.ಯು) ಡೈರಿ ತಂತ್ರಜ್ಞಾನ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡು ಡೈರಿ ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ಬಿ.ಎಸ್ಸಿ ಮತ್ತು ಎಂ.ಎಸ್ಸಿ ಕೋರ್ಸ್‌ಗಳನ್ನು ಪ್ರಾರಂಭಿಸುತ್ತದೆ ಎಂದು ಶ್ರೀ ಶಾ ಹೇಳಿದರು. ಈ ಕಾರ್ಯಕ್ರಮಗಳ ಪದವೀಧರರು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ ದೇಶಾದ್ಯಂತ ಜಿಲ್ಲೆಗಳಲ್ಲಿ ಬನಾಸ್ ಡೈರಿ ಮಾದರಿಯನ್ನು ಜಾರಿಗೆ ತರಲು ಕೊಡುಗೆ ನೀಡುತ್ತಾರೆ. ರೈತರು ತಮ್ಮ ಹಾಲಿಗೆ ಸಂಪೂರ್ಣ ಮೌಲ್ಯವನ್ನು ಪಡೆಯುವ ರೀತಿಯಲ್ಲಿ ಈ ಉಪಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಹೇಳಿದರು.
ಬನಾಸ್ ಡೈರಿಯ ಉದಾಹರಣೆಯನ್ನು ಉಲ್ಲೇಖಿಸಿದ ಸಹಕಾರ ಸಚಿವರು, ರೈತರಿಗೆ ಮಣ್ಣಿನ ಗುಣಮಟ್ಟದ ವೈಜ್ಞಾನಿಕ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಜಿಲ್ಲೆಯಲ್ಲಿ ನಾಲ್ಕು ಅತ್ಯಾಧುನಿಕ ಮಣ್ಣು ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯು ಮಣ್ಣಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಆದ್ದರಿಂದ, ಮಣ್ಣು ಆರೋಗ್ಯಕರವಾಗಿ ಉಳಿಯಲು ಮತ್ತು ಬೆಳೆ ಉತ್ಪಾದಕತೆ ಹೆಚ್ಚಾಗಲು ಯೂರಿಯಾ, ಡಿಎಪಿ, ಸೂಕ್ಷ್ಮ ಪೋಷಕಾಂಶಗಳು - ಯಾವಾಗ ಮತ್ತು ಯಾವ ರಸಗೊಬ್ಬರಗಳನ್ನು ಬಳಸಬೇಕು ಎಂಬುದರ ಕುರಿತು ರೈತರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಅವರು ಸಮಿತಿಗೆ ತಿಳಿಸಿದರು.
****
(रिलीज़ आईडी: 2199941)
आगंतुक पटल : 7