ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

2025-26ನೇ ಆರ್ಥಿಕ ವರ್ಷಕ್ಕೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿ.ಎಂ.ಯು.ವೈ) ಅಡಿಯಲ್ಲಿ 25 ಲಕ್ಷ ಹೆಚ್ಚುವರಿ ಎಲ್.ಪಿ.ಜಿ ಸಂಪರ್ಕಗಳನ್ನು ನೀಡಲು ಸರ್ಕಾರ ಅನುಮೋದನೆ ನೀಡಿದೆ

प्रविष्टि तिथि: 04 DEC 2025 4:33PM by PIB Bengaluru

ದೇಶದ ಬಡ ಕುಟುಂಬಗಳ ಮಹಿಳೆಯರಿಗೆ ಠೇವಣಿ ರಹಿತ ಎಲ್.ಪಿ.ಜಿ ಸಂಪರ್ಕವನ್ನು ಒದಗಿಸುವ ಉದ್ದೇಶದಿಂದ ಮೇ 2016ರಲ್ಲಿ 'ಪ್ರಧಾನ ಮಂತ್ರಿ ಉಜ್ವಲ ಯೋಜನೆ'ಯನ್ನು (ಪಿ.ಎಂ.ಯು.ವೈ) ಜಾರಿಗೆ ತರಲಾಯಿತು. ದಿನಾಂಕ 01.11.2025ರ ಮಾಹಿತಿಯಂತೆ, ದೇಶಾದ್ಯಂತ ಸುಮಾರು 10.33 ಕೋಟಿ ಉಜ್ವಲ ಸಂಪರ್ಕಗಳನ್ನು ನೀಡಲಾಗಿದೆ.

ಬಾಕಿ ಉಳಿದಿರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಮತ್ತು ದೇಶದಲ್ಲಿ ಪ್ರತಿಯೊಬ್ಬರಿಗೂ ಎಲ್ ಪಿ ಜಿ ಸಂಪರ್ಕ ಸಿಗುವಂತೆ ಮಾಡಲು, 2025-26ನೇ ಸಾಲಿನಲ್ಲಿ ಇನ್ನೂ ಹೆಚ್ಚುವರಿಯಾಗಿ 25 ಲಕ್ಷ ಹೊಸ ಎಲ್.ಪಿ.ಜಿ ಸಂಪರ್ಕಗಳನ್ನು ನೀಡಲು ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ. ಸಂಪರ್ಕ ಪಡೆಯುವುದನ್ನು ಇನ್ನಷ್ಟು ಸುಲಭಗೊಳಿಸಲು, ಅರ್ಹತಾ ಮಾನದಂಡವನ್ನು ಸರಳಗೊಳಿಸಲಾಗಿದ್ದು, ಬಡ ಕುಟುಂಬದ ವಯಸ್ಕ ಮಹಿಳೆಯರು ಕೇವಲ "ದೃಢೀಕರಣ ಪತ್ರ" (Deprivation Declaration) ಸಲ್ಲಿಸುವ ಮೂಲಕ ಸಂಪರ್ಕ ಪಡೆಯಬಹುದಾಗಿದೆ.

ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್.ಪಿ.ಜಿ ದರ ಹೊರೆಯಾಗದಂತೆ ನೋಡಿಕೊಳ್ಳಲು ಮತ್ತು ಅವರು ಸತತವಾಗಿ ಗ್ಯಾಸ್ ಬಳಸುವಂತೆ ಪ್ರೋತ್ಸಾಹಿಸಲು, ಮೇ 2022ರಲ್ಲಿ ಸರ್ಕಾರವು ಪ್ರತಿ 14.2 ಕೆಜಿ ಸಿಲಿಂಡರ್ ಗೆ ₹200 ಸಬ್ಸಿಡಿ (5 ಕೆಜಿ ಸಿಲಿಂಡರ್ ಗೆ ಅದಕ್ಕೆ ತಕ್ಕಂತೆ) ನೀಡಲು ಆರಂಭಿಸಿತು. ನಂತರ ಅದನ್ನು ₹300ಕ್ಕೆ ಏರಿಸಲಾಯಿತು.

ಪ್ರಸ್ತುತ 2025-26ನೇ ಆರ್ಥಿಕ ಸಾಲಿಗೆ, ಉಜ್ವಲ ಯೋಜನೆಯಡಿ ಪ್ರತಿ 14.2 ಕೆಜಿ ಸಿಲಿಂಡರ್ಗೆ ₹300 ರಂತೆ ವರ್ಷಕ್ಕೆ ಗರಿಷ್ಠ 9 ಸಿಲಿಂಡರ್ ಗಳವರೆಗೆ ಸಬ್ಸಿಡಿಯನ್ನು ಸರ್ಕಾರ ನೀಡುತ್ತಿದೆ (5 ಕೆಜಿ ಸಂಪರ್ಕಗಳಿಗೆ ಇದೇ ಪ್ರಮಾಣದಲ್ಲಿ ಸಬ್ಸಿಡಿ ಅನ್ವಯವಾಗುತ್ತದೆ).

ಸರ್ಕಾರವು ಪಿಪಿಎಸಿ ಮತ್ತು ತೈಲ ಮಾರುಕಟ್ಟೆ ಕಂಪನಿಗಳ (OMCs) ವರದಿಗಳು ಹಾಗೂ ಎಂ.ಐ.ಎಸ್ ಮೂಲಕ ಎಲ್.ಪಿ.ಜಿ ಬಳಕೆಯ ಮೇಲೆ ನಿಗಾ ಇರಿಸುತ್ತದೆ. ಇದಲ್ಲದೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯು (ಪಿ.ಎಂ.ಯು.ವೈ) ಗ್ರಾಮೀಣ ಕುಟುಂಬಗಳ, ವಿಶೇಷವಾಗಿ ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳ ಮಹಿಳೆಯರ ಜೀವನದ ಮೇಲೆ ಗಮನಾರ್ಹವಾದ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹಲವಾರು ಸ್ವತಂತ್ರ ಅಧ್ಯಯನಗಳು ಮತ್ತು ವರದಿಗಳು ತೋರಿಸಿವೆ. ಇದರ ಕೆಲವು ಪ್ರಮುಖ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ಕೆಳಗೆ ವಿವರಿಸಲಾಗಿದೆ:

(i) ಸೌದೆ, ಬೆರಣಿ ಮತ್ತು ಕೃಷಿ ತ್ಯಾಜ್ಯಗಳಂತಹ ಘನ ಇಂಧನಗಳನ್ನು ಬಳಸುವ ಸಾಂಪ್ರದಾಯಿಕ ಅಡುಗೆ ವಿಧಾನಗಳಿಂದ ಜನರು ಬದಲಾಗಲು ಪಿಎಂಯುವೈ (ಪಿ.ಎಂ.ಯು.ವೈ) ಕಾರಣವಾಗಿದೆ. ಸ್ವಚ್ಛ ಇಂಧನದ (ಎಲ್.ಪಿ.ಜಿ) ಬಳಕೆಯು ಮನೆಯೊಳಗಿನ ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದ ಸಾಂಪ್ರದಾಯಿಕವಾಗಿ ಅಡುಗೆಮನೆಯ ಹೊಗೆಗೆ ಹೆಚ್ಚು ಒಡ್ಡಿಕೊಳ್ಳುವ ಮಹಿಳೆಯರು ಮತ್ತು ಮಕ್ಕಳ ಉಸಿರಾಟದ ಆರೋಗ್ಯ ಸುಧಾರಿಸಿದೆ.

(ii) ಗ್ರಾಮೀಣ ಭಾಗದ, ಅದರಲ್ಲೂ ಮುಖ್ಯವಾಗಿ ದುರ್ಗಮ ಪ್ರದೇಶಗಳ ಕುಟುಂಬಗಳು ಸಾಂಪ್ರದಾಯಿಕ ಅಡುಗೆ ಇಂಧನವನ್ನು (ಸೌದೆ) ಸಂಗ್ರಹಿಸಲು ತಮ್ಮ ಸಮಯ ಮತ್ತು ಶಕ್ತಿಯ ಹೆಚ್ಚಿನ ಭಾಗವನ್ನು ವ್ಯಯಿಸುತ್ತಿದ್ದವು. ಎಲ್.ಪಿ.ಜಿ ಬಳಕೆಯು ಬಡ ಕುಟುಂಬದ ಮಹಿಳೆಯರ ದೈಹಿಕ ಶ್ರಮವನ್ನು ಮತ್ತು ಅಡುಗೆಗೆ ತಗಲುವ ಸಮಯವನ್ನು ಕಡಿಮೆ ಮಾಡಿದೆ. ಇದರಿಂದ ಉಳಿತಾಯವಾಗುವ ಸಮಯವನ್ನು ಅವರು ಆರ್ಥಿಕವಾಗಿ ಲಾಭದಾಯಕವಾಗುವಂತಹ ಇತರೆ ಉತ್ಪಾದಕ ಕೆಲಸಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಿದೆ.

(iii) ಸೌದೆ ಮತ್ತು ಸಾಂಪ್ರದಾಯಿಕ ಇಂಧನಗಳಿಂದ ಎಲ್.ಪಿ.ಜಿ ಯತ್ತ ಬದಲಾಗುತ್ತಿರುವುದರಿಂದ ಅಡುಗೆಗಾಗಿ ಮರಮುಟ್ಟುಗಳು ಮತ್ತು ಇತರೆ ಜೈವಿಕ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಇದು ಅರಣ್ಯ ನಾಶ ಮತ್ತು ಪರಿಸರ ಹಾನಿಯನ್ನು ತಡೆಯಲು ಕಾರಣವಾಗಿದೆ. ಇದು ಕೇವಲ ಆಯಾ ಕುಟುಂಬಗಳಿಗೆ ಮಾತ್ರವಲ್ಲದೆ, ಒಟ್ಟಾರೆ ಪರಿಸರ ಸಂರಕ್ಷಣೆಗೂ ಮಹತ್ವದ ಕೊಡುಗೆ ನೀಡುತ್ತದೆ.

(iv) ಸುಧಾರಿತ ಅಡುಗೆ ಸೌಲಭ್ಯಗಳು ಲಭ್ಯವಿರುವುದರಿಂದ, ಕುಟುಂಬದ ಪೋಷಣೆ ಮತ್ತು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಇದರಿಂದ ಕುಟುಂಬಗಳು ವೈವಿಧ್ಯಮಯ ಮತ್ತು ಪೌಷ್ಟಿಕ ಆಹಾರವನ್ನು ಸುಲಭವಾಗಿ ತಯಾರಿಸಲು ಸಾಧ್ಯವಾಗುತ್ತಿದ್ದು, ಇದು ಎಲ್ಲರ ಒಟ್ಟಾರೆ ಆರೋಗ್ಯ ಸುಧಾರಣೆಗೆ ಕಾರಣವಾಗಿದೆ.

ಈ ಮಾಹಿತಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವರಾದ ಶ್ರೀ ಸುರೇಶ್ ಗೋಪಿ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.

 

*****


(रिलीज़ आईडी: 2198817) आगंतुक पटल : 6
इस विज्ञप्ति को इन भाषाओं में पढ़ें: English , हिन्दी , Marathi , Gujarati , Tamil