ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

ಶೇ. 99.67ರಷ್ಟು ಸಕ್ರಿಯ ಮನ್ ರೇಗಾ ಕಾರ್ಮಿಕರ ಆಧಾರ್ – ಸೀಡಿಂಗ್ ಪೂರ್ಣ; ಪಾರದರ್ಶಕತೆ, ದಕ್ಷತೆ ಮತ್ತು ಸೇವಾ ವಿತರಣೆ ವರ್ಧನೆಗೆ ಇ-ಕೆವೈಸಿ ಏಕೀಕರಣ

Posted On: 21 NOV 2025 3:23PM by PIB Bengaluru

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ನಿಬಂಧನೆಗಳ ಪ್ರಯೋಜನವು ಗ್ರಾಮೀಣ ಕುಟುಂಬಗಳಿಗೆ ಸಿಗುವಂತಾಗಲು ಈ ಕಾಯ್ದೆಯ ಪಾರದರ್ಶಕ ಮತ್ತು ಪರಿಣಾಮಕಾರಿ ಅನುಷ್ಠಾನ ಖಚಿತಪಡಿಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಸಚಿವಾಲಯವು ನಿರಂತರವಾಗಿ ಶ್ರಮಿಸುತ್ತಿದೆ. ದೇಶಾದ್ಯಂತ 2.69 ಲಕ್ಷ ಗ್ರಾಮ ಪಂಚಾಯತ್‌ ಗಳ 26 ಕೋಟಿಗೂ ಹೆಚ್ಚು ನೋಂದಾಯಿತ ಕಾರ್ಮಿಕರ ವಿಸ್ತೃತ ವ್ಯಾಪ್ತಿಯನ್ನು ಎಂ.ಜಿ.ಎನ್.ಆರ್.ಇ.ಜಿ.ಎ ಹೊಂದಿದೆ.

ಕಾಯ್ದೆಯ ಷೆಡ್ಯೂಲ್ II ರ ಕಂಡಿಕೆ 2ರ ಪ್ರಕಾರ, " ಸೂಕ್ತ ವಿಚಾರಣೆಯನ್ನು ನಡೆಸಿದ ನಂತರ, ನೋಂದಾಯಿತ ಸಂಖ್ಯೆ, ವಿಮಾ ಪಾಲಿಸಿ ಸಂಖ್ಯೆ ಮತ್ತು ಆಧಾರ್ ಸಂಖ್ಯೆ, ಇದ್ದಲ್ಲಿ ಅವುಗಳ ವಿವರಗಳೊಂದಿಗೆ ವಿಶಿಷ್ಟ ಜಾಬ್ ಕಾರ್ಡ್ ಸಂಖ್ಯೆಯನ್ನು ಹೊಂದಿರುವ ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳ ಒಳಗೆ ಉದ್ಯೋಗ ಕಾರ್ಡ್ ಅನ್ನು ನೀಡುವುದು ಗ್ರಾಮ ಪಂಚಾಯಿತಿಯ ಕರ್ತವ್ಯವಾಗಿರುತ್ತದೆ."

ಮುಂದುವರಿದು, ಷೆಡ್ಯೂಲ್ II ರ ಕಂಡಿಕೆ 3ರನ್ವಯ "ಸಮಪರ್ಕ ಪರಿಶೀಲನೆ ಮಾಡಿ ಐದು ವರ್ಷಗಳ ನಂತರ ಉದ್ಯೋಗ ಕಾರ್ಡ್‌ ಗಳನ್ನು ನವೀಕರಿಸಲಾಗುತ್ತದೆ". ಉದ್ಯೋಗ ಕಾರ್ಡ್‌ಗಳ ವಿತರಣೆ, ಪರಿಶೀಲನೆ, ನವೀಕರಣ ಮೊದಲಾದ ಉದ್ಯೋಗ ಕಾರ್ಡ್‌ ಗಳಿಗೆ ಸಂಬಂಧಿಸಿದ ಈ ಚಟುವಟಿಕೆಗಳನ್ನು ಗ್ರಾಮ ಪಂಚಾಯಿತಿಗಳಂತಹ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ನಡೆಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ.

ಜಾಬ್ ಕಾರ್ಡ್ ಪರಿಶೀಲನೆ ನಿರಂತರ ಪ್ರಕ್ರಿಯೆಯಾಗಿದ್ದು, ಜಾಬ್ ಕಾರ್ಡ್ ನವೀಕರಣ 5 ವರ್ಷಗಳಿಗೊಮ್ಮೆ ಮಾಡಬೇಕಾಗುತ್ತದೆ. ಈ ಶಾಸನಬದ್ಧ ಪ್ರಕ್ರಿಯೆಗಳನ್ನು ಸರಳೀಕರಿಸಲು ಮತ್ತು ಬೆಂಬಲಿಸಲು, ಎನ್.ಎಂ.ಎಂ.ಎಸ್ (ರಾಷ್ಟ್ರೀಯ ಮೊಬೈಲ್ ನಿಗಾ ವ್ಯವಸ್ಥೆ) ಅಪ್ಲಿಕೇಷನ್‌ನಲ್ಲಿ ಈಗಾಗಲೇ ಲಭ್ಯವಿರುವ ಇ-ಕೆವೈಸಿ ವೈಶಿಷ್ಟ್ಯವನ್ನು ಜಾಬ್ ಕಾರ್ಡ್ ಪರಿಶೀಲನೆ ಮತ್ತು ನವೀಕರಣಕ್ಕೆ ಅಸ್ತಿತ್ವದಲ್ಲಿರುವ ಪ್ರಕ್ರಿಯೆಗಳನ್ನು ಅನುಸರಿಸಿದ ನಂತರ ಬಳಸುವಂತೆ  ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ವಿನಂತಿಸಲಾಗಿದೆ. ರಾಜ್ಯಗಳು ಪರಿಶೀಲನೆಯನ್ನು ಸಕಾಲಿಕವಾಗಿ, ಪಾರದರ್ಶಕವಾಗಿ ಮತ್ತು ಪರಿಣಾಮಕಾರಿ ರೀತಿಯಲ್ಲಿ ಪೂರ್ಣಗೊಳಿಸಲು ನೆರವಾಗುವುದು ಈ ಅನುಕೂಲಕರ ಕ್ರಮದ ಉದ್ದೇಶವಾಗಿದೆ. ಶೇಕಡ 99.67 ರಷ್ಟು ಸಕ್ರಿಯ ಕಾರ್ಮಿಕರು ಈಗಾಗಲೇ ಆಧಾರ್ ಸಂಪರ್ಕಿಸುವ (ಸೀಡಿಂಗ್) ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಜಾಬ್ ಕಾರ್ಡ್‌ಗಳ ಪರಿಶೀಲನೆಯ ಸರಳ, ವಿಶ್ವಾಸಾರ್ಹ, ನಿಖರ ಮತ್ತು ಪರಿಣಾಮಕಾರಿ ಮಾರ್ಗವಾಗಿ ಇ-ಕೆವೈಸಿ ಸೌಲಭ್ಯವನ್ನು ಬಳಸಬಹುದಾಗಿದೆ. ಇ-ಕೆವೈಸಿ ಪ್ರಕ್ರಿಯೆ ಸಮಯದಲ್ಲಿ, ಗ್ರಾಮ ರೋಜ್‌ ಗಾರ್ ಸಹಾಯಕರು / ಕಾರ್ಯಸ್ಥಳ ಮೇಲ್ವಿಚಾರಕರು / ಸಹೋದ್ಯೋಗಿಗಳು / ಯಾವುದೇ ಇತರ ಗ್ರಾಮ ಪಂಚಾಯತ್ ಮಟ್ಟದ ಕಾರ್ಯನಿರ್ವಾಹಕರು ಎಂ.ಜಿ.ಎನ್.ಆರ್.ಇ.ಜಿ.ಎ ಕಾರ್ಮಿಕರ ಭಾವಚಿತ್ರವನ್ನು ಸೆರೆಹಿಡಿದು (ಎನ್.ಎಂ.ಎಂ.ಎಸ್ ಅಪ್ಲಿಕೇಶನ್ ಇ-ಕೆವೈಸಿ ಮೂಲಕ) ನೈಜ ಸಮಯದಲ್ಲಿ ಅವರವರ ಆಧಾರ್ ವಿವರಗಳೊಂದಿಗೆ ಡಿಜಿಟಲ್ ರೂಪದಲ್ಲಿ / ಸ್ವಯಂಚಾಲಿತವಾಗಿ ಪರಿಶೀಲಿಸಲು ಅವಕಾಶವಿದೆ. ಒಬ್ಬ ಕಾರ್ಮಿಕರಿಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೇವಲ ಒಂದು ನಿಮಿಷ ಸಾಕಾಗುತ್ತದೆ. ನೆಟ್‌ವರ್ಕ್ ಸಂಪರ್ಕ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸುಗಮಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಇ-ಕೆವೈಸಿ ಪ್ರಕ್ರಿಯೆಯನ್ನು ರಾಜ್ಯಗಳು ನಿರ್ಧರಿಸಿದಂತೆ ಕೆಲಸದ ಸ್ಥಳದಲ್ಲಿ, ಗ್ರಾಮ ಪಂಚಾಯತ್ ಆಯೋಜಿಸುವ ವಿಶೇಷ ಶಿಬಿರಗಳಲ್ಲಿ ಹೀಗೆ ಎಲ್ಲಿ ಬೇಕಾದರೂ ಮಾಡಬಹುದು. ಇದು ಮಹಾತ್ಮ ಗಾಂಧಿ ನರೇಗಾ ಅಡಿಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸುಲಲಿತ ಸೇವಾ ವಿತರಣೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪ್ರಗತಿಪರ ಹೆಜ್ಜೆಯಾಗಿದೆ.  ಪರಿಶೀಲನಾ ಪ್ರಕ್ರಿಯೆಯನ್ನು ಸಾಧ್ಯವಾದಷ್ಟು ಸುಗಮವಾಗಿಸಲು ರಾಜ್ಯಗಳು ಮತ್ತು ತಳಮಟ್ಟದ ಸಂಸ್ಥೆಗಳನ್ನು ವಿವಿಧ ವೇದಿಕೆಗಳ ಮೂಲಕ ಸಮರ್ಪಕವಾಗಿ ಸಜ್ಜುಗೊಳಿಸಿ, ಸಂವೇದನಾಶೀಲವಾಗಿಸಿ, ಸೂಕ್ತ ತರಬೇತಿ ನೀಡಲಾಗಿದೆ. ಇಲ್ಲಿಯವರೆಗೆ ಶೇ.56 ಕ್ಕಿಂತ ಹೆಚ್ಚು ಸಕ್ರಿಯ ಕಾರ್ಮಿಕರ ಇ-ಕೆವೈಸಿ ಪ್ರಕ್ರಿಯೆಯನ್ನು ರಾಜ್ಯಗಳು ಪೂರ್ಣಗೊಳಿಸಿವೆ.

ಯೋಜನೆಯ ಅನುಷ್ಠಾನದಲ್ಲಿ ಕ್ಷೇತ್ರ ಮಟ್ಟದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರತಿಯೊಬ್ಬ ನೈಜ ಕಾರ್ಮಿಕರು ಯಾವುದೇ ಅಡ್ಡಿಯಿಲ್ಲದೇ ಕಾಯ್ದೆಯಡಿಯಲ್ಲಿ ತಮ್ಮ ನ್ಯಾಯಯುತ ವೇತನದ ಉದ್ಯೋಗವನ್ನು ಪಡೆಯುವಂತಾಗಲು ಅವರ ಹಕ್ಕುಗಳನ್ನು ರಕ್ಷಿಸಲು ಸಚಿವಾಲಯವು ದೃಢವಾಗಿ ಬದ್ಧವಾಗಿದೆ.

ಜಾಬ್ ಕಾರ್ಡ್‌ಗಳು/ಕಾರ್ಮಿಕರ ಹೆಸರು ತೆಗೆದು ಹಾಕುವುದಕ್ಕೆ ಸಂಬಂಧಿಸಿದಂತೆ, ಸಚಿವಾಲಯವು 2025ರ ಜನವರಿ 24 ರಂದು ವಿವರವಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್.ಒ.ಪಿ) ಅನ್ನು ಹೊರಡಿಸಿದೆ. ರಾಜ್ಯಗಳು ಅನುಸರಿಸಬೇಕಾದ ಸ್ಪಷ್ಟ, ಏಕರೂಪದ ಮತ್ತು ಪಾರದರ್ಶಕ ಮಾರ್ಗಸೂಚಿಗಳನ್ನು ಈ ಎಸ್.ಒ.ಪಿ ನೀಡಿದ್ದು, ಇದು ಉದ್ಯೋಗ ಕಾರ್ಡ್ ದಾಖಲೆಗಳ ನಿರ್ವಹಣೆಯಲ್ಲಿ ನ್ಯಾಯಪರತೆ, ಹೊಣೆಗಾರಿಕೆ ಮತ್ತು ಕಾರ್ಮಿಕರ ಹಿತಾಸಕ್ತಿಯ ರಕ್ಷಣೆಯನ್ನು ಖಚಿತಪಡಿಸುತ್ತದೆ. ಸಮರ್ಪಕವಲ್ಲದ /ತಪ್ಪಾದ ಅಳಿಸುವಿಕೆಯನ್ನು ತಡೆಗಟ್ಟಲು ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಎಸ್.ಒ.ಪಿ ಯಲ್ಲಿ ನೀಡಲಾಗಿದೆ. ಎಸ್.ಒ.ಪಿ ಯ ಕಟ್ಟುನಿಟ್ಟಿನ ಪಾಲನೆ ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿಯಾದರೂ, ಸಚಿವಾಲಯವು ಈ ಬಗ್ಗೆ ಸೂಕ್ಷ್ಮ ನಿಗಾ ವಹಿಸಲಿದೆ.

ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪರಿಣಾಮಕಾರಿತ್ವವನ್ನು ಕಾಪಾಡಿಕೊಳ್ಳುವ ಜೊತೆಗೆ ಎಂ.ಜಿ.ಎನ್.ಆರ್.ಇ.ಜಿ.ಎ ಅಡಿಯಲ್ಲಿನ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವ ಎಲ್ಲಾ ಗ್ರಾಮೀಣ ಕುಟುಂಬಗಳ ಸಬಲೀಕರಣ ಖಚಿತಪಡಿಸಿಕೊಳ್ಳಲು ಸಚಿವಾಲಯ ಬದ್ಧವಾಗಿದೆ.

 

****


(Release ID: 2192711) Visitor Counter : 2