ಉಕ್ಕು ಸಚಿವಾಲಯ
ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಸ್ಪೆಷಾಲಿಟಿ ಸ್ಟೀಲ್ ಪ್ರೋತ್ಸಾಹಕ ಯೋಜನೆಯ ಮೂರನೇ ಸುತ್ತಿನ (ಪಿ.ಎಲ್.ಐ 1.2) ಉದ್ಘಾಟನೆ
ಹೊಸ ಹಂತದಲ್ಲಿ ಭಾರತದಲ್ಲಿ ಹೂಡಿಕೆ, ನಾವೀನ್ಯತೆ ಮತ್ತು ಉನ್ನತ ದರ್ಜೆಯ ಉಕ್ಕು ಉತ್ಪಾದನೆ ಹೆಚ್ಚಳಕ್ಕೆ ಕ್ರಮ
43,800 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆಯ ಬದ್ಧತೆಯ ಪ್ರದರ್ಶನ: ಹಿಂದಿನ ಸುತ್ತುಗಳಲ್ಲಿ ಸುಮಾರು 31,000 ಉದ್ಯೋಗಗಳ ಸೃಷ್ಟಿ
ಜಾಗತಿಕ ಮೌಲ್ಯ ಸರಣಿಯಲ್ಲಿ ಭಾರತದ ಪಾತ್ರ ಬಲವರ್ಧನೆಗೆ ಪಿ.ಎಲ್.ಐ 1.2, ವಿಕಸಿತ ಭಾರತ 2047 ದೂರದೃಷ್ಟಿ ಸಾಕಾರಕ್ಕೆ ನೆರವು
ವಿಶೇಷ ಉಕ್ಕಿನ ಉತ್ಪಾದನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿ.ಎಲ್.ಐ) ಯೋಜನೆಯ
Posted On:
04 NOV 2025 3:04PM by PIB Bengaluru
ಮೂರನೇ ಸುತ್ತಿನ (ಪಿ.ಎಲ್.ಐ 1.2) ಯೋಜನೆಗೆ ಚಾಲನೆ ನೀಡಿದೆ. ಇದು ಭಾರತವನ್ನು ಅತ್ಯಾಧುನಿಕ ಉಕ್ಕಿನ ಉತ್ಪಾದನೆಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವ ತನ್ನ ಬದ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತದೆ. ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಘೋಷಣೆಯನ್ನು ಮಾಡಿದ್ದಾರೆ, ಅವರು ಈ ಉಪಕ್ರಮವನ್ನು ”ಭಾರತದ ಕೈಗಾರಿಕೆಗಳ ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯತ್ತ ಸಾಗುವ ಪಯಣಣದಲ್ಲಿ ಒಂದು ಪ್ರಮುಖ ಮೈಲಿಗಲ್ಲು’’ ಎಂದು ಬಣ್ಣಿಸಿದ್ದಾರೆ.
ಈ ಯೋಜನೆಗೆ ಚಾಲನೆ ನೀಡಿದ ಕುರಿತು ಮಾತನಾಡಿದ ಶ್ರೀ ಕುಮಾರಸ್ವಾಮಿ, ಪಿ.ಎಲ್.ಐ ಯೋಜನೆಯು “ಆತ್ಮನಿರ್ಭರ ಭಾರತ ಅಭಿಯಾನದ ಹೊಳೆಯುವ ಆಧಾರಸ್ತಂಭವಾಗಿ ನಿಂತಿದ್ದು, ಇದು ಭಾರತವನ್ನು ಸ್ವಾವಲಂಬಿ, ಜಾಗತಿಕವಾಗಿ ಸ್ಪರ್ಧಾತ್ಮಕ ಮತ್ತು ಕೈಗಾರಿಕಾ ಉತ್ಪಾದನೆಯ ಪ್ರತಿಯೊಂದು ಕ್ಷೇತ್ರದಲ್ಲಿ ತಾಂತ್ರಿಕವಾಗಿ ಮುಂದುವರಿಯುವಂತೆ ಮಾಡುವ ಧ್ಯೇಯವನ್ನು ಹೊಂದಿದೆ’’ ಎಂದು ಹೇಳಿದರು.
ಭಾರತದ ಉಕ್ಕು ವಲಯಕ್ಕೆ ಒಂದು ಪರಿವರ್ತನಾ ನೀತಿ
2021ರ ಜುಲೈ ನಲ್ಲಿ ಕೇಂದ್ರ ಸಚಿವರಾದ ಸಂಪುಟವು ಅನುಮೋದಿಸಿದ ವಿಶೇಷ ಉಕ್ಕಿಗಾಗಿ ಪಿ.ಎಲ್.ಐ ಯೋಜನೆಯನ್ನು ಒಟ್ಟು 6,322 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭಿಸಲಾಯಿತು. ಇದು ರಕ್ಷಣೆ, ಬಾಹ್ಯಾಕಾಶ, ಇಂಧನ, ಆಟೋಮೊಬೈಲ್‌ಗಳು ಮತ್ತು ಮೂಲಸೌಕರ್ಯದಂತಹ ವಲಯಗಳಲ್ಲಿ ಬಳಸಲಾಗುವ ಹೆಚ್ಚಿನ ಮೌಲ್ಯದ, ಉನ್ನತ ದರ್ಜೆಯ ಉಕ್ಕುಗಳ ಉತ್ಪಾದನೆಯನ್ನು ಉತ್ತೇಜಿಸಲು ಉದ್ದೇಶಿಸಲಾಗಿದೆ.
ಈ ಯೋಜನೆಯು ಆರಂಭವಾದಾಗಿನಿಂದ 43,874 ಕೋಟಿ ರೂಪಾಯಿ ಮೌಲ್ಯದ ಹೂಡಿಕೆ ಬದ್ಧತೆಗಳನ್ನು ಆಕರ್ಷಿಸಿದೆ, 30,760 ನೇರ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಭಾರತದಲ್ಲಿ 14.3 ಮಿಲಿಯನ್ ಟನ್ ಹೊಸ ವಿಶೇಷ ಉಕ್ಕಿನ ಸಾಮರ್ಥ್ಯವನ್ನು ಸೇರಿಸುವ ನಿರೀಕ್ಷೆಯಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, 2025ರ ಸೆಪ್ಟೆಂಬರ್ ವೇಳೆಗೆ ಮೊದಲ ಎರಡು ಸುತ್ತುಗಳಲ್ಲಿ ಭಾಗವಹಿಸಿರುವ ಕಂಪನಿಗಳು ಈಗಾಗಲೇ 22,973 ಕೋಟಿ ರೂಪಾಯಿ ಹೂಡಿಕೆ ಮಾಡಿ 13,284 ಉದ್ಯೋಗಗಳನ್ನು ಸೃಷ್ಟಿಸಿವೆ.
ಮೊದಲ ಎರಡು ಸುತ್ತುಗಳಿಗೆ ಸ್ಪಂದನೆ ಹೆಚ್ಚು ಉತ್ತೇಜನಕಾರಿಯಾಗಿದೆ. ಈ ಯಶಸ್ಸು ಭಾರತದ ಸುಧಾರಣೆ-ಆಧಾರಿತ ಮತ್ತು ಉದ್ಯಮ-ಚಾಲಿತ ನೀತಿ ಚೌಕಟ್ಟಿನ ಬಲವರ್ಧನೆಯನ್ನು ಪ್ರದರ್ಶಿಸುತ್ತದೆ’’ ಎಂದು ಸಚಿವರು ಹೇಳಿದರು.
ಪಿ.ಎಲ್.ಐ 1.2: ಅತ್ಯಾಧುನಿಕ ಉಕ್ಕು ಕ್ಯಾಟಗರಿಗಳಿಗೆ ಒತ್ತು
ಹೊಸದಾಗಿ ಆರಂಭಿಸಲಾದ ಪಿ.ಎಲ್.ಐ 1.2 ಸುತ್ತು, ಮುಂದಿನ ಪೀಳಿಗೆಯ ಕೈಗಾರಿಕಾ ಮತ್ತು ರಕ್ಷಣಾ ಅನ್ವಯಿಕೆಗಳಿಗೆ ಅಗತ್ಯವಾದ ವಸ್ತುಗಳಾದ ಸೂಪರ್ ಮಿಶ್ರಲೋಹಗಳು, ಸಿಆರ್ ಜಿಒ ಉಕ್ಕು, ಸ್ಟೇನ್‌ಲೆಸ್ ಸ್ಟೀಲ್ ಉದ್ದ ಮತ್ತು ಚಪ್ಪಟೆ ಉತ್ಪನ್ನಗಳು, ಟೈಟಾನಿಯಂ ಮಿಶ್ರಲೋಹಗಳು ಮತ್ತು ಲೇಪಿತ ಉಕ್ಕುಗಳಂತಹ ಅತ್ಯಾಧುನಿಕ ಮತ್ತು ಉದಯೋನ್ಮುಖ ವಿಭಾಗಗಳಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ಕೇಂದ್ರ ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ”ಮೂರನೇ ಸುತ್ತಿನ ಉಕ್ಕು ಎಂಎಸ್ ಎಂಇ ಗಳು ಮತ್ತು ಹಿಂದಿನ ಹಂತಗಳನ್ನು ಅನುಸರಿಸಿ ತಮ್ಮ ಸಾಮರ್ಥ್ಯವನ್ನು ವಿಸ್ತರಿಸುತ್ತಾ ಅಥವಾ ನವೀಕರಿಸುತ್ತಾ ಹಾಲಿ ಇರುವ ಉತ್ಪಾದಕರಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ’’ ಎಂದು ಹೇಳಿದರು.
“ಉನ್ನತ ದರ್ಜೆಯ ಉಕ್ಕು ಉತ್ಪಾದನೆಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಪಯಣಕ್ಕೆ ವೇಗ ನೀಡಲು ಪಿ.ಎಲ್.ಐ 1.2 ಅನ್ನು ರೂಪಿಸಲಾಗಿದೆ’’ ಎಂದು ಶ್ರೀ ಕುಮಾರಸ್ವಾಮಿ ಹೇಳಿದರು. ಹೊಸ ಹಂತವು ಭಾರತೀಯ ಉಕ್ಕು ತಯಾರಕರನ್ನು ಜಾಗತಿಕ ವೇದಿಕೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಅವರು ತಿಳಿಸಿದರು.
ಜಾಗತಿಕ ಉತ್ಪಾದನಾ ಕೇಂದ್ರವಾಗಿ ನಿರ್ಮಾಣ
ಭಾರತವು ವಿಶ್ವದ ಅಗ್ರ ಉಕ್ಕು ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿ ಸ್ಥಿರವಾಗಿ ಹೊರಹೊಮ್ಮುತ್ತಿರುವುದರಿಂದ, ಪಿ.ಎಲ್.ಐ ಯೋಜನೆಯು ಜಾಗತಿಕ ಮೌಲ್ಯ ಸರಣಿಯಲ್ಲಿ ದೇಶದ ಪಾತ್ರವನ್ನು ಮತ್ತಷ್ಟು ದೃಢಗೊಳಿಸುವ ನಿರೀಕ್ಷೆಯಿದೆ. ರಫ್ತು ಆಧಾರಿತ ಬೆಳವಣಿಗೆ, ತಾಂತ್ರಿಕ ನಾವೀನ್ಯತೆ ಮತ್ತು ಉತ್ಪಾದನೆಯಲ್ಲಿ ಸುಸ್ಥಿರತೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುವುದು.
”ಈ ಉಪಕ್ರಮದ ಮೂಲಕ, ನಾವು ಭಾರತಕ್ಕೆ ಉಕ್ಕನ್ನು ಉತ್ಪಾದಿಸುವುದಲ್ಲದೆ, ಭಾರತದಿಂದ ಇಡೀ ಜಗತ್ತಿಗೆ ಉಕ್ಕು ಪೂರೈಕೆ ಮಾಡುವ ಗುರಿಯನ್ನು ಹೊಂದಿದ್ದೇವೆ" ಎಂದು ಸಚಿವರು ಉಲ್ಲೇಖಿಸಿದರು.
ಈ ಯೋಜನೆಯು ಶುದ್ಧ ತಂತ್ರಜ್ಞಾನಗಳು ಮತ್ತು ಹೆಚ್ಚಿನ ಮೌಲ್ಯವರ್ಧನೆಯ ಮೂಲಕ ಪರಿಸರ ಸುಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವ ಜತೆಗೆ ಭಾರತವನ್ನು ಉತ್ಪಾದನಾ ಶಕ್ತಿ ಕೇಂದ್ರವನ್ನಾಗಿ ಮಾಡುವ ಸರ್ಕಾರದ ವಿಶಾಲ ದೂರದೃಷ್ಟಿಗೆ ಹೊಂದಿಕೆಯಾಗುತ್ತದೆ.
2047ರ ವೇಳೆಗೆ ವಿಕಸಿತ ಭಾರತದೆಡೆಗೆ
ಶ್ರೀ ಕುಮಾರಸ್ವಾಮಿ, ಸ್ಥಿತಿಸ್ಥಾಪಕತ್ವ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಉಕ್ಕಿನ ಉದ್ಯಮವನ್ನು ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು. ಪಿ.ಎಲ್.ಐ 1.2 ಸುತ್ತು, 2047ರ ವೇಳೆಗೆ ಆತ್ಮನಿರ್ಭರ ಭಾರತ, ವಿಕಸಿತ ಭಾರತ ನಿರ್ಮಾಣ ಮತ್ತು 2070ರ ವೇಳೆಗೆ ಭಾರತದ ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕಿಳಿಸುವ ಗುರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
”ಭಾರತೀಯ ಉಕ್ಕಿನ ಕಥೆಯು ಭಾರತದ ಪ್ರಗತಿಯ ಕಥೆಯಾಗಿದೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಮಾರ್ಗದರ್ಶಿಸಲ್ಪಟ್ಟ ಆಕಾಂಕ್ಷೆಯಿಂದ ಸಾಧನೆಯತ್ತ ಪಯಣವಾಗಿದೆ’’ ಎಂದು ಅವರು ಹೇಳಿದರು.
ನಿರಂತರ ಬಂಡವಾಳ ಹೂಡಿಕೆಯ ಒಳಹರಿವು, ತಂತ್ರಜ್ಞಾನ ಪಾಲುದಾರಿಕೆಗಳು ಮತ್ತು ರಫ್ತು ವಿಸ್ತರಣೆಯೊಂದಿಗೆ ಭಾರತವು ತನ್ನ ಅಗತ್ಯಕ್ಕೆ ತಕ್ಕಂತೆ ತನ್ನ ದೇಶೀಯ ಉಕ್ಕಿನ ಬೇಡಿಕೆಯನ್ನು ಪೂರೈಸುವುದಲ್ಲದೆ, ಮುಂಬರುವ ವರ್ಷಗಳಲ್ಲಿ ಸುಧಾರಿತ ಉಕ್ಕಿನ ಉತ್ಪನ್ನಗಳ ಜಾಗತಿಕ ಪೂರೈಕೆದಾರನಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ‘
ಪಿ.ಎಲ್.ಐ 1.2 ಬಿಡುಗಡೆಯೊಂದಿಗೆ, ಭಾರತದ ಉಕ್ಕಿನ ವಲಯದ ಪ್ರಗತಿ, ನಾವೀನ್ಯತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯು ಹೊಸ ಎತರಕ್ಕೇರಲಿದ್ದು, ಇದು ಸ್ವಾವಲಂಬಿ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ರಾಷ್ಟ್ರದ ಬೆನ್ನೆಲುಬನ್ನು ಬಲಪಡಿಸುವ ಭರವಸೆಯ ಒಂದು ಉಪಕ್ರಮವಾಗಿದೆ.
****
(Release ID: 2186312)
Visitor Counter : 15