ನೌಕಾ ಸಚಿವಾಲಯ
azadi ka amrit mahotsav

ನವ ಮಂಗಳೂರು ಬಂದರು ಪ್ರಾಧಿಕಾರ (ಎನ್ಎಂಪಿಎ) ಸುವರ್ಣ ಮಹೋತ್ಸವದ ಅಂಗವಾಗಿ ಎಂಟು ಸಾಗರ ಯೋಜನೆಗಳಿಗೆ ಕೇಂದ್ರ ಸಚಿವರಾದ ಶ್ರೀ ಸರ್ಬಾನಂದ ಸೋನೊವಾಲ್ ಅವರಿಂದ ಚಾಲನೆ


ಸಾಗರಮಾಲಾ ಯೋಜನೆಯಡಿಯಲ್ಲಿ, 2035 ರ ವೇಳೆಗೆ ₹5.8 ಲಕ್ಷ ಕೋಟಿ ಮೌಲ್ಯದ 840 ಯೋಜನೆಗಳ ಅನುಷ್ಠಾನ; 272 ಯೋಜನೆಗಳು ಪೂರ್ಣ ಮತ್ತು 217 ಪ್ರಗತಿಯಲ್ಲಿ

ಭಾರತದ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮುನ್ನೋಟ ಸಾಕಾರಗೊಳ್ಳುವಲ್ಲಿ ಬಂದರುಗಳ ಪಾತ್ರ ಪ್ರಮುಖ - ಕೇಂದ್ರ ಸಚಿವರ ಪ್ರತಿಪಾದನೆ

Posted On: 15 OCT 2025 7:26PM by PIB Bengaluru

ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಸುವರ್ಣ ಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಮಾರಂಭವನ್ನು ಕೇಂದ್ರ ಬಂದರು, ನೌಕಾಯಾನ ಮತ್ತು ಜಲಮಾರ್ಗ ಸಚಿವರಾದ ಶ್ರೀ ಸರ್ಬಾನಂದ ಸೋನೋವಾಲ್ ಅವರು ಇಂದು ಭಾರತ ಮಂಟಪದಲ್ಲಿ ಉದ್ಘಾಟಿಸಿದರು.

ಸುವರ್ಣ ಮಹೋತ್ಸವದ ಈ ಮೈಲಿಗಲ್ಲನ್ನು ಗುರುತಿಸಲು, ಭಾರತದ ಬಂದರು ಮೂಲಸೌಕರ್ಯ, ಸಾಗಣೆ ದಕ್ಷತೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಎಂಟು ಪ್ರಮುಖ ಸಾಗರ ಅಭಿವೃದ್ಧಿ ಯೋಜನೆಗಳಿಗೆ ಸಚಿವರು ಚಾಲನೆ ನೀಡಿದರು. 

ಅತ್ಯಾಧುನಿಕ ಕ್ರೂಸ್ ಟರ್ಮಿನಲ್, ಆಧುನಿಕ ಮುಚ್ಚಲ್ಪಡಬಹುದಾದ ಶೇಖರಣಾ ಸೌಲಭ್ಯಗಳು, 150 ಹಾಸಿಗೆಗಳ ಬಹು-ವಿಶೇಷ ಆಸ್ಪತ್ರೆ, ವಿಸ್ತೃತ ಟ್ರಕ್ ಟರ್ಮಿನಲ್ ಗಳು ಮತ್ತು ಬಳಕೆದಾರರ ಅನುಭವ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ನವೀಕರಿಸಿದ ಬಂದರು ಪ್ರವೇಶ ಮೂಲಸೌಕರ್ಯಗಳು ಈ ಯೋಜನೆಗಳ ಪೈಕಿ ಸೇರಿವೆ.

ಭಾರತದ ಕಡಲ ವ್ಯಾಪಾರ ಮತ್ತು ಪ್ರಾದೇಶಿಕ ಬೆಳವಣಿಗೆಗೆ ಬಂದರಿನ ಐದು ದಶಕಗಳ ಕೊಡುಗೆಯನ್ನು ಗುರುತಿಸಲು ಶ್ರೀ ಸರ್ಬಾನಂದ ಸೋನೋವಾಲ್ ಅವರು ಸ್ಮರಣಾರ್ಥ ಅಂಚೆ ಚೀಟಿ, ಸ್ಮರಣಾರ್ಥ ನಾಣ್ಯ ಮತ್ತು NMPA ಯ ಅಧಿಕೃತ ಸುವರ್ಣ ಮಹೋತ್ಸವ ಗೀತೆಯನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸೋನೋವಾಲ್ ಅವರು, “ನಮ್ಮೆಲ್ಲರಿಗೂ ಇಂದು ಒಂದು ಮಹತ್ವದ ಮೈಲಿಗಲ್ಲಿನ ದಿನ. 1975 ರಲ್ಲಿ ಒಂಭತ್ತನೇ ಪ್ರಮುಖ ಬಂದರಾದ ಸ್ಥಾಪನೆಯಾದ ನಮ್ಮ ನವ ಮಂಗಳೂರು ಬಂದರು, ಈ ಪ್ರದೇಶದ ಆಮದುದಾರರು ಮತ್ತು ರಫ್ತುದಾರರಿಗೆ ಪ್ರಮುಖ ಕೇಂದ್ರವಾಗಿ ವಿಕಸನಗೊಂಡಿದೆ. ಆರಂಭಿಕ ವರ್ಷಗಳಲ್ಲಿ ಕೆಲವೇ ಸಾವಿರ ಟನ್ ಸರಕುಗಳನ್ನು ನಿರ್ವಹಿಸುತ್ತಿದ್ದ ಈ ಬಂದರು, ಒಟ್ಟು ವಾರ್ಷಿಕ 104 ದಶಲಕ್ಷ ಟನ್ಗಳ ಸಾಮರ್ಥ್ಯದೊಂದಿಗೆ ಕಳೆದ ಹಣಕಾಸು ವರ್ಷದಲ್ಲಿ 46.01 ದಶಲಕ್ಷ ಟನ್ಗಳನ್ನು ನಿರ್ವಹಿಸುವಷ್ಟು ಬೆಳೆದಿದೆ. ಹೊಸ ಡೀಪ್-ಡ್ರಾಫ್ಟ್ ಜನರಲ್ ಕಾರ್ಗೋ ಬರ್ತ್ ಕೂಡ ನಿರ್ಮಾಣ ಹಂತದಲ್ಲಿದ್ದು ಶೀಘ್ರದಲ್ಲೇ ಕಾರ್ಯಾಚರಣೆ ಆರಂಭಿಸಲಿದೆ” ಎಂದರು.

ಭಾರತದ ದೀರ್ಘಕಾಲೀನ ಗುರಿಗಳ ಬಗ್ಗೆ ತಿಳಿಸುತ್ತಾ ಅವರು, "ವಿಕಸಿತ ಭಾರತ 2047ರ ಮುನ್ನೋಟವನ್ನು ಸಾಕಾರಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ನಾವು ಸಾಗುತ್ತಿರುವಾಗ, ಭಾರತವನ್ನು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಸಾಧಿಸುವಲ್ಲಿ ನಮ್ಮ ಬಂದರುಗಳು ನಿರ್ಣಾಯಕ ಪಾತ್ರ ವಹಿಸಿವೆ. 'ವಿಕಸಿತ ಭಾರತ' ಮತ್ತು 'ಆತ್ಮನಿರ್ಭರ ಭಾರತ' ಗುರಿ ಸಾಧಿಸಲು ನಾವು 2047 ರ ವೇಳೆಗೆ ವಿಕಸಿತ ಆತ್ಮನಿರ್ಭರ (ಸ್ವಾವಲಂಬಿ) ಕಡಲ ರಾಷ್ಟ್ರವೂ ಆಗಬೇಕು" ಎಂದು ಅವರು ಹೇಳಿದರು.

ಪರಿಸರ ಸ್ನೇಹಿ ಕಾರ್ಯಾಚರಣೆಗಳಿಗೆ ಎನ್‌ ಎಂ ಪಿ ಎ ದ ಪ್ರಯತ್ನಗಳನ್ನು ಶ್ಲಾಘಿಸುತ್ತಾ, ಸುಸ್ಥಿರ ಮತ್ತು ಪರಿಸರ ಜವಾಬ್ದಾರಿಯುತ ಬೆಳವಣಿಗೆಯ ಅಗತ್ಯವನ್ನು ಬಂದರು ಸಚಿವರು ಒತ್ತಿ ಹೇಳಿದರು. ಪರಿಸರ ವಿಜ್ಞಾನ ಮತ್ತು ಪರಿಸರಕ್ಕೆ ಮಾರಕವಾಗಿ ಆರ್ಥಿಕತೆ ಬೆಳೆಯಬಾರದು. ಈ ನಿಟ್ಟಿನಲ್ಲಿ ಎನ್‌ ಎಂ ಪಿ ಎ ಕೈಗೊಂಡಿರುವ ಹಸಿರು ಉಪಕ್ರಮಗಳು ಶ್ಲಾಘನೀಯ. ಸುಸ್ಥಿರತೆಯನ್ನು ಮಾರ್ಗದರ್ಶಿ ತತ್ವವಾಗಿ ಬಂದರು ಅಳವಡಿಸಿಕೊಂಡಿದೆ ಮತ್ತು ಅದರ ಕಾರ್ಯಾಚರಣೆಗಳಲ್ಲಿ ಪರಿಸರ ಪ್ರಜ್ಞೆಯ ಅಭ್ಯಾಸಗಳ ಸಂಯೋಜನೆಯನ್ನು ಮುಂದುವರಿಸಿದೆ" ಎಂದು ಶ್ರೀ ಸೋನೋವಾಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ಬಂದರುಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸ್ಮಾರ್ಟ್ (ಚತುರ), ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಮಾರ್ಗ (ಗೇಟ್‌ವೇ) ಗಳಾಗಿ ರೂಪಾಂತರಗೊಳ್ಳುತ್ತಿವೆ ಎಂದು ಸಚಿವರು ವಿವರಿಸಿದರು. 'ಹರಿತ್ ಸಾಗರ್ ಮಾರ್ಗಸೂಚಿಗಳು', 'ಗ್ರೀನ್ ಟಗ್ ಟ್ರಾನ್ಸಿಷನ್ ಪ್ರೋಗ್ರಾಂ', 'ಹರಿತ್ ನೌಕಾ ಯೋಜನೆ' ಮತ್ತು 'ಗ್ರೀನ್ ಶಿಪ್ಪಿಂಗ್ ಕಾರಿಡಾರ್' ನಂತಹ ವಿವಿಧ ಉಪಕ್ರಮಗಳು ಶುದ್ಧ ಇಂಧನ, ವಿದ್ಯುತ್ ಹಡಗು ಮತ್ತು ಹಸಿರು ಕಡಲ ಪರಿಸರ ವ್ಯವಸ್ಥೆಯೆಡೆಗೆ ಭಾರತದ ಪರಿವರ್ತನೆಗೆ ವೇಗ ನೀಡುತ್ತಿವೆ.

ಸಾಗರ ವಲಯದಲ್ಲಿ ಒಂದು ದಶಕದ ಪರಿವರ್ತನೆಯನ್ನು ಮೆಲುಕು ಹಾಕಿದ ಸಚಿವರು, ಪ್ರಧಾನಮಂತ್ರಿ ಮೋದಿ ಅವರ ನಾಯಕತ್ವದಲ್ಲಿ ಭಾರತ "ಅಭೂತಪೂರ್ವ ಪ್ರಗತಿ" ಸಾಧಿಸಿದೆ ಎಂದು ಹೇಳಿದರು. ನೀಲಿ ಆರ್ಥಿಕತೆಯ ತತ್ವಗಳಿಗೆ ಹೊಂದಿಕೊಂಡಂತೆ, ಸಾಗರಮಾಲಾ ಕಾರ್ಯಕ್ರಮದ ಮೂಲಕ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯ ₹80 ಲಕ್ಷ ಕೋಟಿ ಯೋಜಿತ ಹೂಡಿಕೆಗಳೊಂದಿಗೆ, ಭಾರತದ ಕಡಲ ಸಾಮರ್ಥ್ಯಗಳನ್ನು ಬಲಪಡಿಸಲು ದೀರ್ಘಾವಧಿಯ ಮಾರ್ಗ ನಕ್ಷೆಯನ್ನು ಕಡಲ ಅಮೃತ ಕಾಲ ಮುನ್ನೋಟ 2047 ರೂಪಿಸಿದೆ. 

ಸಾಗರಮಾಲಾ ಯೋಜನೆಯಡಿಯಲ್ಲಿ, 2035 ರ ವೇಳೆಗೆ ₹5.8 ಲಕ್ಷ ಕೋಟಿ ಮೌಲ್ಯದ 840 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ಪೈಕಿ ₹1.41 ಲಕ್ಷ ಕೋಟಿ ಮೌಲ್ಯದ 272 ಯೋಜನೆಗಳು ಪೂರ್ಣಗೊಂಡಿದ್ದು, ₹1.65 ಲಕ್ಷ ಕೋಟಿ ಮೌಲ್ಯದ 217 ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ.

ಎನ್‌ ಎಂ ಪಿ ಎ ಅಡಿಯಲ್ಲಿ ಪ್ರಾರಂಭಿಸಲಾಗಿರುವ ಎಂಟು ಹೊಸ ಯೋಜನೆಗಳು ಇಂತಿವೆ:

•   ಎರಡು ಮುಚ್ಚಲ್ಪಡಬಹುದಾದ ಸಂಗ್ರಹಣಾ ಶೆಡ್ ಗಳ ನಿರ್ಮಾಣ (14,000 ಮೆಟ್ರಿಕ್‌ ಟನ್ ಸಾಮರ್ಥ್ಯ, ಪ್ರಿ-ಎಂಜಿನಿಯರ್ಡ್ ವಿನ್ಯಾಸ)
•   ಅಂತಾರಾಷ್ಟ್ರೀಯ ಪ್ರವಾಸಿಗರಿಗಾಗಿ ಮೀಸಲಾದ ಕ್ರೂಸ್ ಗೇಟ್ ನಿರ್ಮಾಣ.
•  RFID-ಚಾಲಿತ ಸರಕು ನಿರ್ವಹಣೆ, ಕಸ್ಟಮ್ಸ್ ಮತ್ತು CISF ಸೌಲಭ್ಯಗಳ ಅಳವಡಿಕೆಯೊಂದಿಗೆ ಕೆಕೆ ಗೇಟ್ ಪ್ರವೇಶ ಮತ್ತು ನಿರ್ಗಮನದಲ್ಲಿ ಮಾರ್ಪಾಡು 
•   ದಿನಕ್ಕೆ 50–80 ಟ್ರಕ್ ಗಳ ಸಾಮರ್ಥ್ಯದೊಂದಿಗೆ ಟ್ರಕ್ ಪಾರ್ಕಿಂಗ್ ಟರ್ಮಿನಲ್ (ಕಸ್ಟಮ್ಸ್ ಹೌಸ್) ವಿಸ್ತರಣೆ
•   MDL ಯಾರ್ಡ್ ನಲ್ಲಿ PQC ರಸ್ತೆಗಳ ನಿರ್ಮಾಣ (675 ಮೀಟರ್, ಒಳಚರಂಡಿ ಸೌಲಭ್ಯದೊಂದಿಗೆ)
•   ಬೈಕಂಪಾಡಿಯಲ್ಲಿ ಟ್ರಕ್ ಪಾರ್ಕಿಂಗ್ ಟರ್ಮಿನಲ್ ಅಭಿವೃದ್ಧಿ (20,000 ಚದರ ಮೀ., 180–200 ಟ್ರಕ್ ನಿರ್ವಹಣೆ ಸಾಮರ್ಥ್ಯ)
•  ಸಾರ್ವಜನಿಕ – ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿ ಅಡಿಯಲ್ಲಿ ₹107 ಕೋಟಿ ಹೂಡಿಕೆಯೊಂದಿಗೆ 150 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
•  ಫಲಾನುಭವಿಗಳಿಗೆ ಪ್ರತ್ಯೇಕ ವೈದ್ಯಕೀಯ ಅಪ್ಲಿಕೇಶನ್ ಬಿಡುಗಡೆ

ಭಾರತದ ಕಡಲ ವ್ಯಾಪಾರ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ 50 ವರ್ಷಗಳ ಬಂದರಿನ ಪಾತ್ರವನ್ನು ಗುರುತಿಸಲು ಈ ವರ್ಷದ ಕೊನೆಯಲ್ಲಿ NMPA ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಚರಿಸಲಾಗುವುದು.

ಜಂಟಿ ಕಾರ್ಯದರ್ಶಿ (ಬಂದರುಗಳು) ಆರ್. ಲಕ್ಷ್ಮಣನ್ ಸೇರಿದಂತೆ ಬಂದರುಗಳು, ನೌಕಾಯಾನ ಮತ್ತು ಜಲಮಾರ್ಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಮತ್ತು ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಅಧ್ಯಕ್ಷರಾದ ಡಾ. ವೆಂಕಟ ರಮಣ ಅಕ್ಕರಾಜು, ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

*****


(Release ID: 2179703) Visitor Counter : 6