ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಮೇಘಾಲಯ ಮತ್ತು ತ್ರಿಪುರಾದ ಪತ್ರಕರ್ತರು ಬೆಂಗಳೂರಿನ ಬಿ.ಎಚ್.ಇ.ಎಲ್ ನ ಎಲೆಕ್ಟ್ರಾನಿಕ್ಸ್ ಸಿಸ್ಟಂ ವಿಭಾಗಕ್ಕೆ ಭೇಟಿ 

ಪ್ರಕಟಣಾ ದಿನಾಂಕ: 15 OCT 2025 1:45PM by PIB Bengaluru

ಕರ್ನಾಟಕ ಮಾಧ್ಯಮ ಪ್ರವಾಸದಲ್ಲಿರುವ ಮೇಘಾಲಯ ಮತ್ತು ತ್ರಿಪುರಾದ 14 ಸದಸ್ಯರ ಪತ್ರಕರ್ತರ ನಿಯೋಗವು ಇಂದು ಬೆಂಗಳೂರಿನಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್)ನ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿಭಾಗಕ್ಕೆ (ಇ ಎಸ್ ಡಿ) ಭೇಟಿ ನೀಡಿತು. ಅಲ್ಲಿ ಅವರಿಗೆ ವಿಭಾಗದ ತಾಂತ್ರಿಕ ಸಾಮರ್ಥ್ಯಗಳು, ಕಾರ್ಯತಾಂತ್ರಿಕ ಕೊಡುಗೆಗಳು ಮತ್ತು ಪ್ರಮುಖ ರಾಷ್ಟ್ರೀಯ ವಲಯಗಳಲ್ಲಿ ಭವಿಷ್ಯದ-ಆಧಾರಿತ ಉಪಕ್ರಮಗಳ ಸಮಗ್ರ ಅವಲೋಕನದ ವಿವರವನ್ನು ನೀಡಲಾಯಿತು.

ಭಾರತ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಬಿಎಚ್ಇಎಲ್, ಭಾರತದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ ಮತ್ತು ಇಂಧನ, ಸಾರಿಗೆ, ರಕ್ಷಣೆ ಮತ್ತು ಮೂಲಸೌಕರ್ಯದಂತಹ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ಇತರ ಪ್ರಮುಖ ಕೈಗಾರಿಕೆಗಳಿಗೆ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.

ಮಾಧ್ಯಮ ನಿಯೋಗವನ್ನು ಸ್ವಾಗತಿಸಿದ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶ್ರೀ ಅನ್ಬಳಗನ್ ವಿಭಾಗದ ಕಾರ್ಯವೈಖರಿಯನ್ನು ತಿಳಿಸಿಕೊಟ್ಟರು. ತಮ್ಮ ಭಾಷಣದಲ್ಲಿ ಶ್ರೀ ಅನ್ಬಳಗನ್ ಅವರು ರಕ್ಷಣೆ, ವಿದ್ಯುತ್,  ಬಾಹ್ಯಾಕಾಶ ಮತ್ತು ಕೈಗಾರಿಕಾ ಅಪ್ಲಿಕೇಷನ್ ಗಳಿಗೆ ಸುಧಾರಿತ ಎಲೆಕ್ಟ್ರಾನಿಕ್ಸ್ ಪರಿಹಾರಗಳನ್ನು ಒದಗಿಸುವಲ್ಲಿ ಇ ಎಸ್ ಡಿಯ ನಿರ್ಣಾಯಕ ಪಾತ್ರವನ್ನು ವಿವರಿಸಿದರು. ಸೌರಶಕ್ತಿ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ನಿಯೋಜನೆಯ ಮೂಲಕ ಭಾರತದ ಇಂಧನ ಪರಿವರ್ತನೆಯಲ್ಲಿ ಬಿ.ಎಚ್.ಇ.ಎಲ್ ನ ಬೆಳೆಯುತ್ತಿರುವ ಒಳಗೊಳ್ಳುವಿಕೆ ಹಾಗೂ ಪರಿಣಾಮಕಾರಿ ಸ್ಥಾವರ ಕಾರ್ಯಾಚರಣೆಗೆ ಅಗತ್ಯವಾದ ನಿಯಂತ್ರಣ ವ್ಯವಸ್ಥೆಗಳು ಮತ್ತು ಯಾಂತ್ರೀಕೃತ ತಂತ್ರಜ್ಞಾನಗಳನ್ನು ಪೂರೈಸುವ ಮೂಲಕ ಉಷ್ಣ ವಿದ್ಯುತ್ ಕೇಂದ್ರಗಳಿಗೆ ಸಂಸ್ಥೆ ನೀಡುತ್ತಿರುವ ನಿರಂತರ ಬೆಂಬಲವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ನಿಯೋಗದೊಂದಿಗಿನ ಸಂವಾದದ ಸಮಯದಲ್ಲಿ ಒತ್ತಿ ಹೇಳಲಾದ ಪ್ರಮುಖ ಸಾಧನೆಗಳಲ್ಲಿ ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಐ ಎನ್ ಎಸ್  ವಿಕ್ರಾಂತ್‌ ಬಿ ಎಚ್ ಇ ಎಲ್ ನ ಕೊಡುಗೆಯಾಗಿದೆ. ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿಭಾಗವು ಹಡಗಿಗೆ ಪ್ರಮುಖ ನಿಯಂತ್ರಣ ಮತ್ತು ಸಲಕರಣೆ ವ್ಯವಸ್ಥೆಗಳನ್ನು ಪೂರೈಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು, ಇದು ರಾಷ್ಟ್ರೀಯ ರಕ್ಷಣೆ ಮತ್ತು ಸ್ವಾವಲಂಬನೆಗೆ ಬಿ ಎಚ್ ಇ ಎಲ್ ನ ಬದ್ಧತೆಯಲ್ಲಿ ಒಂದು ಮೈಲಿಗಲ್ಲಿ ಎಂದು ಗುರುತಿಸಲಾಗುತ್ತದೆ.

ಪತ್ರಕರ್ತರನ್ನು ಇ ಎಸ್ ಡಿ ಯ ಉತ್ಪಾದನಾ ಸೌಲಭ್ಯಗಳು, ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಹಾಗೂ ಪರೀಕ್ಷಾ ಪ್ರಯೋಗಾಲಯಗಳನ್ನು ಪರಿಚಯಿಸುವ ಪ್ರವಾಸಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರು ಬಿ.ಎಚ್.ಇ.ಎಲ್ ನ ಎಂಜಿನಿಯರಿಂಗ್ ಶ್ರೇಷ್ಠತೆಯನ್ನು ವ್ಯಾಖ್ಯಾನಿಸುವ ಸುಧಾರಿತ ಮೂಲಸೌಕರ್ಯ ಮತ್ತು ಕಠಿಣ ಗುಣಮಟ್ಟದ ಪ್ರಕ್ರಿಯೆಗಳನ್ನು ನೇರವಾಗಿ ವೀಕ್ಷಿಸಿದರು. ಈ ಭೇಟಿಯು ರಕ್ಷಣಾ ಎಲೆಕ್ಟ್ರಾನಿಕ್ಸ್, ಬಾಹ್ಯಾಕಾಶ ದರ್ಜೆಯ ವ್ಯವಸ್ಥೆಗಳು, ಸಾರಿಗೆ ಮತ್ತು ಕೈಗಾರಿಕಾ ಯಾಂತ್ರೀಕರಣದಲ್ಲಿ ವಿಭಾಗದ ಸಾಮರ್ಥ್ಯಗಳ ಬಗ್ಗೆ ಅವರಿಗೆ ತಿಳಿಸಿಕೊಟ್ಟಿತ್ತಲ್ಲದೆ, ಭಾರತ ಸರ್ಕಾರದ 'ಮೇಕ್ ಇನ್ ಇಂಡಿಯಾ' ಮತ್ತು 'ಆತ್ಮನಿರ್ಭರ ಭಾರತ' ಉಪಕ್ರಮಗಳೊಂದಿಗೆ ವಿಭಾಗದ ಕಾರ್ಯವೈಖರಿ ಹೇಗೆ ಹೊಂದಾಣಿಕೆಯಾಗುತ್ತದೆಂಬ ಬಗ್ಗೆ ಅಮೂಲ್ಯವಾದ ಒಳನೋಟವನ್ನು ಕಟ್ಟಿಕೊಟ್ಟಿತು. 

ನಿಯೋಗ, ವಿಭಾಗದ ಮುಖ್ಯಸ್ಥರೊಂದಿಗೆ ನಡೆಸಿದ ಸಂವಾದವು ಆಕರ್ಷಕ ಪ್ರಶ್ನೋತ್ತರ ಗೋಷ್ಠಿಯೊಂದಿಗೆ ಮುಕ್ತಾಯವಾಯಿತು, ಅಲ್ಲಿ ಹಿರಿಯ ಬಿ.ಎಚ್.ಇ.ಎಲ್ ನ ಅಧಿಕಾರಿಗಳು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು ಮತ್ತು ಮುಂಬರುವ ಯೋಜನೆಗಳು, ಡಿಜಿಟಲ್ ಪರಿವರ್ತನೆ ಮತ್ತು ಸುಸ್ಥಿರತೆ ಮತ್ತು ನಾವೀನ್ಯತೆಯ ನಿಟ್ಟಿನಲ್ಲಿ ಕಂಪನಿಯ ನೀಲನಕ್ಷೆಯ ಕುರಿತು ದೂರದೃಷ್ಟಿಯನ್ನು ಹಂಚಿಕೊಂಡರು. 

ಬಳಿಕ ಮಾಧ್ಯಮ ಪ್ರತಿನಿಧಿಗಳು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ, ಸೂಪರ್ ಕಂಪ್ಯೂಟರ್ ನ ಕಾರ್ಯವೈಖರಿ, ಸಂಸ್ಥೆಯ ಚಟುವಟಿಕೆಗಳು  ಹಾಗೂ ಸಂಶೋಧನೆಗಳ ‌ಕುರಿತು ಮಾಹಿತಿ ಪಡೆದುಕೊಂಡರು.

 

*****
 


(ಪ್ರಕಟಣೆ ಐ.ಡಿ.: 2179421) ವಿಸಿಟರ್ ಕೌಂಟರ್ : 59
ಪ್ರಕಟಣೆಯನ್ನು ಇದರಲ್ಲಿ ಓದಿ: English , Khasi