ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
5ನೇ ಹಾಕಿ ಇಂಡಿಯಾ ಸೀನಿಯರ್ ಮಹಿಳಾ ಅಂತರ-ಇಲಾಖೆಯ ರಾಷ್ಟ್ರೀಯ ಚಾಂಪಿಯನ್‌ಶಿಪ್ 2025ನ್ನು ಉದ್ಘಾಟಿಸಿದ ಶ್ರೀ ಹರ್ ದೀಪ್ ಸಿಂಗ್ ಪುರಿ
Posted On:
29 SEP 2025 6:30PM by PIB Bengaluru
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಇಂದು ನವದೆಹಲಿಯ ಶಿವಾಜಿ ಕ್ರೀಡಾಂಗಣದಲ್ಲಿ 5ನೇ ಹಾಕಿ ಇಂಡಿಯಾ ಸೀನಿಯರ್ ಮಹಿಳಾ ಅಂತರ- ಇಲಾಖೆಯ ರಾಷ್ಟ್ರೀಯ ಚಾಂಪಿಯನ್‌ಶಿಪ್ 2025ನ್ನು ಉದ್ಘಾಟಿಸಿದರು. ಇಂಡಿಯನ್ ಆಯಿಲ್ ಅಧ್ಯಕ್ಷರಾದ ಶ್ರೀ ಎ.ಎಸ್. ಸಾಹ್ನಿ; ಹಾಕಿ ಇಂಡಿಯಾ ಅಧ್ಯಕ್ಷರಾದ ಡಾ. ದಿಲೀಪ್ ಕುಮಾರ್ ಟಿರ್ಕಿ; ಹಾಕಿ ಇಂಡಿಯಾ ಫೆಡರೇಶನ್ ಸದಸ್ಯರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ವಿವಿಧ ಶಾಲೆಗಳ ಉತ್ಸಾಹಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು, ನಮ್ಮ ದೇಶದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ ಇಂಡಿಯನ್ ಆಯಿಲ್ ಮತ್ತು ಇತರ ತೈಲ ಮಾರುಕಟ್ಟೆ ಕಂಪನಿಗಳ ಪಾತ್ರವನ್ನು ಸ್ಮರಿಸಿದರು. ಈ ಕಂಪನಿಗಳು ತಮ್ಮ ಇರುವಿಕೆಯ ಶಕ್ತಿ ಪ್ರದರ್ಶನದೊಂದಿಗೆ ದೇಶದ ಆರ್ಥಿಕತೆಯನ್ನು ಭದ್ರಪಡಿಸುವಲ್ಲಿ ಮಾತ್ರವಲ್ಲದೆ, ಕ್ರೀಡಾಪಟುಗಳನ್ನು ನಿರಂತರವಾಗಿ ಬೆಂಬಲಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿವೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ತಮ್ಮ ಶ್ರೇಷ್ಠತೆಯನ್ನು ಮೆರೆಯಲು ಸಹಾಯ ಮಾಡುತ್ತವೆ ಎಂದು ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಹೇಳಿದರು.
ಭಾರತೀಯ ಹಾಕಿಯ ಸ್ಪೂರ್ತಿದಾಯಕ ಸ್ವರ್ಣಯುಗವನ್ನು ಸ್ಮರಿಸಿಕೊಂಡ ಸಚಿವರು, ಶ್ರೀ ಹರ್ಬಿಂದರ್ ಸಿಂಗ್, ಶ್ರೀ ಜಾಫರ್ ಇಕ್ಬಾಲ್, ಶ್ರೀ ಅಜಿತ್ಪಾಲ್ ಸಿಂಗ್, ಶ್ರೀ ಎಂ.ಎಂ. ಸೋಮಯ್ಯ ಮತ್ತು ಶ್ರೀ ರಾಜಿಂದರ್ ಸಿಂಗ್ ರವರಂತಹವರು ಯುವ ಪೀಳಿಗೆಗೆ ಹೇಗೆ ಸ್ಫೂರ್ತಿ ನೀಡಿದರು ಎಂಬುದನ್ನು ಉಲ್ಲೇಖಿಸಿ, ತಾವೂ ಕೂಡಾ ಬಾಲ್ಯದಲ್ಲಿ ಹಾಕಿ ಕ್ರೀಡೆಯ ಅನುಯಾಯಿಯಾದ ನೆನಪನ್ನು ಮೆಲುಕು ಹಾಕಿದರು.
ಭಾರತೀಯ ಮಹಿಳಾ ಹಾಕಿ ಈಗ ಜಾಗತಿಕ ಮಟ್ಟಕ್ಕೆ ಏರಿದ್ದು, ದೇಶ ಹೆಮ್ಮೆ ಪಡುವಂತೆ ಮಾಡುತ್ತಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು. ರಾಣಿ ರಾಂಪಾಲ್, ಪ್ರೀತಮ್ ರಾಣಿ ಸಿವಾಚ್, ಸವಿತಾ ಪುನಿಯಾ, ವಂದನಾ ಕಟಾರಿಯಾ ಮತ್ತು ಇತರ ಅನೇಕ ಆಟಗಾರ್ತಿಯರು ದೇಶಕ್ಕೆ ಅಪಾರ ಕೀರ್ತಿ ತಂದಿದ್ದು, ಯುವ ಪೀಳಿಗೆಗೆ ಮಾದರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೆಮ್ಮೆ ಪಟ್ಟರು.
ರಾಜತಾಂತ್ರಿಕತೆ, ಆಡಳಿತ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸನ್ನು ಸಾಧಿಸುವ ತತ್ವಗಳಾದ ಒಗ್ಗಟ್ಟಿನ ತಂಡದ ಕಾರ್ಯ, ಶಿಸ್ತು ಮತ್ತು ನ್ಯಾಯಯುತ ಆಟ - ಕ್ರೀಡೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಸಚಿವರು ಒತ್ತಿ ಹೇಳಿದರು. ಭಾಗವಹಿಸುತ್ತಿರುವ ಎಲ್ಲಾ ತಂಡಗಳನ್ನು ಅಭಿನಂದಿಸಿದ ಸಚಿವರು, ಈ ಚಾಂಪಿಯನ್‌ಶಿಪ್ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುವುದಲ್ಲದೆ, ಹೆಚ್ಚಿನ ಯುವತಿಯರನ್ನು ಹಾಕಿಯತ್ತ ಸೆಳೆಯಲು ಪ್ರಮುಖಪಾತ್ರ ವಹಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಯುವ ಸಬಲೀಕರಣ ಮತ್ತು ರಾಷ್ಟ್ರ ನಿರ್ಮಾಣದ ಸಾಧನವಾಗಿ ಕ್ರೀಡೆಯ ಬಗ್ಗೆ ಅಪಾರ ಒಲವನ್ನು ತೋರುತ್ತಿದೆ ಎಂದು ಸಚಿವರು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಭಾರತವು ಕ್ರೀಡೆಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸುತ್ತಿದ್ದು, ಖೇಲೋ ಇಂಡಿಯಾ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (TOPS) ಮತ್ತು ಫಿಟ್ ಇಂಡಿಯಾ ಆಂದೋಲನದಂತಹ ಉಪಕ್ರಮಗಳು ಕ್ರೀಡಾಪಟುಗಳಿಗೆ ಪೂರಕವಾದ ಪರಿಸರವನ್ನು ಸೃಷ್ಟಿಸುತ್ತಿವೆ. ಕ್ರೀಡಾ ಮೂಲಸೌಕರ್ಯದಲ್ಲಿ ಹೆಚ್ಚಿದ ಹೂಡಿಕೆಗಳು ಮತ್ತು ಮಹಿಳಾ ಕ್ರೀಡೆಗಳ ಮೇಲೆ ವಿಶೇಷ ಒತ್ತು ನೀಡುವುದರಿಂದ ಭಾರತೀಯ ಕ್ರೀಡಾಪಟುಗಳು ಏಷ್ಯನ್ ಕ್ರೀಡಾಕೂಟ, ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಒಲಿಂಪಿಕ್ಸ್ ನಲ್ಲಿ ದಾಖಲೆಯ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತಿದ್ದು, ಮುಂದಿನ ಪೀಳಿಗೆಗೆ ವೃತ್ತಿಪರವಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಸ್ಫೂರ್ತಿ ನೀಡುತ್ತಿದೆ.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಭಾಗವಹಿಸುತ್ತಿರುವ ಎಲ್ಲಾ 11 ತಂಡಗಳಿಗೂ ಶುಭಾಶಯಗಳನ್ನು ಕೋರಿದರು, "ಶಿಸ್ತಿನಿಂದ, ತಂಡವಾಗಿ ಮತ್ತು ಕ್ರೀಡಾ ಮನೋಭಾವ" ದೊಂದಿಗೆ ಸ್ಪರ್ಧಿಸಲು ಕ್ರೀಡಾಪಟುಗಳಿಗೆ ಕಿವಿಮಾತನ್ನು ಹೇಳಿದರು. "ಈ ಚಾಂಪಿಯನ್‌ಶಿಪ್ ಕೇವಲ ಮೈದಾನದಲ್ಲಿನ ವಿಜಯಶಾಲಿಗಳಿಗೆ ಮಾತ್ರವಲ್ಲದೆ, ಅದು ಹುಟ್ಟಿಸುವ ಕನಸುಗಳು, ಅದು ನಿರ್ಮಿಸುವ ಸ್ನೇಹ ಮತ್ತು ಅದು ಪ್ರೇರೇಪಿಸುವ ಪ್ರಗತಿಗಾಗಿ ಸ್ಮರಣೀಯವಾಗಲಿ. ಅತ್ಯುತ್ತಮ ತಂಡ ಗೆಲ್ಲಲಿ, ಮತ್ತು ಪ್ರತಿಯೊಬ್ಬ ಭಾಗವಹಿಸುವ ಕ್ರೀಡಾಪಟು ಅನುಭವ ಮತ್ತು ಉತ್ಸಾಹದ ಚಿಲುಮೆಯಾಗಲಿ. ಒಟ್ಟಾಗಿ, ನಾವು ಭಾರತೀಯ ಕ್ರೀಡೆಗಳಿಗೆ, ಭಾರತೀಯ ಮಹಿಳೆಯರಿಗೆ ಮತ್ತು ನಮ್ಮ ರಾಷ್ಟ್ರಕ್ಕೆ ಬಲವಾದ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ" ಎಂದು ಅವರು ಹೇಳಿದರು.
****
(Release ID: 2172895)
Visitor Counter : 9