ಕೃಷಿ ಸಚಿವಾಲಯ
ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಅವರಿಂದ ಸಿಕ್ಕಿಂನಲ್ಲಿ ತೋಟಗಾರಿಕಾ ಕಾಲೇಜಿನ ಆಡಳಿತ ಮತ್ತು ಶೈಕ್ಷಣಿಕ ಕಟ್ಟಡಗಳು ಹಾಗೂ ವಾರ್ಷಿಕ ಪ್ರಾದೇಶಿಕ ಕಾರ್ಯಾಗಾರ ಉದ್ಘಾಟನೆ
"ಪ್ರಕೃತಿ ಸೌಂದರ್ಯದಿಂದ ತುಂಬಿರುವ ಅದ್ಭುತ ರಾಜ್ಯ ಸಿಕ್ಕಿಂ" - ಶ್ರೀ ಶಿವರಾಜ್ ಸಿಂಗ್
"ಸಿಕ್ಕಿಂನ ರೈತರಿಂದ ದೇಶಾದ್ಯಂತ ರಾಸಾಯನಿಕ ಮುಕ್ತ ಗೊಬ್ಬರಗಳ ಶುದ್ಧ ಉತ್ಪನ್ನಗಳ ಪೂರೈಕೆ" - ಶ್ರೀ ಶಿವರಾಜ್ ಸಿಂಗ್
"ಸಾಂಪ್ರದಾಯಿಕವಲ್ಲದ ಬೆಳೆಗಳ ಉತ್ತೇಜನದಿಂದ ಸಿಕ್ಕಿಂನಲ್ಲಿ ತೋಟಗಾರಿಕಾ ಚಟುವಟಿಕೆಗಳಿಗೆ ವೈವಿಧ್ಯತೆ" - ಶ್ರೀ ಚೌಹಾಣ್
"ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬೆಟ್ಟಗುಡ್ಡ ರಾಜ್ಯಗಳಿಗೆ ವಿಶೇಷ ಆದ್ಯತೆಯಿಂದಾಗಿ ಭಾರತೀಯ ಕೃಷಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ" - ಶ್ರೀ ಶಿವರಾಜ್ ಸಿಂಗ್
Posted On:
25 SEP 2025 6:51PM by PIB Bengaluru
ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂಫಾಲ್‌ನ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಅಡಿಯಲ್ಲಿ ಸಿಕ್ಕಿಂನ ಬರ್ಮಿಯೋಕ್‌ನಲ್ಲಿರುವ ತೋಟಗಾರಿಕಾ ಕಾಲೇಜಿನ ಆಡಳಿತ ಮತ್ತು ಶೈಕ್ಷಣಿಕ ಕಟ್ಟಡಗಳು ಹಾಗೂ ವಾರ್ಷಿಕ ಪ್ರಾದೇಶಿಕ ಕಾರ್ಯಾಗಾರವನ್ನು ಇಂದು ವರ್ಚುಯಲ್ ಮಾದರಿಯಲ್ಲಿ ಉದ್ಘಾಟಿಸಿದರು. ಸಿಕ್ಕಿಂ ರಾಜ್ಯಪಾಲರಾದ ಶ್ರೀ ಓಂ ಪ್ರಕಾಶ್ ಮಾಥುರ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀ ಭಗೀರಥ ಚೌಧರಿ, ಸಿಕ್ಕಿಂನ ಕೃಷಿ ಸಚಿವರಾದ ಶ್ರೀ ಪುರನ್ ಕುಮಾರ್ ಗುರುಂಗ್, ಉಪಕುಲಪತಿ ಡಾ.ಅನುಪಮ್ ಮಿಶ್ರಾ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಮಾತನಾಡಿ, ಸಿಕ್ಕಿಂನಲ್ಲಿ ಇಂದಿನ ಕಾರ್ಯಕ್ರಮದಲ್ಲಿ ವ್ಯಕ್ತಿಗತವಾಗಿ ಹಾಜರಾಗಲು ಸಾಧ್ಯವಾಗದಿದ್ದರೂ ಬರ್ಮಿಯೋಕ್‌ನಲ್ಲಿರುವ ತೋಟಗಾರಿಕಾ ಕಾಲೇಜಿನಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟಡಗಳಲ್ಲಿ ಎಲ್ಲರೊಂದಿಗೆ ತಮ್ಮ ಚೈತನ್ಯವಿದೆ ಎಂದು ಹೇಳಿದರು. ಶ್ರೀ ಭಗೀರಥ ಚೌಧರಿ ಅವರು ಭಾರತ ಸರ್ಕಾರದ ಪ್ರತಿನಿಧಿಯಾಗಿ ಅಲ್ಲಿ ಖುದ್ದು ಉಪಸ್ಥಿತರಿದ್ದಾರೆ ಎಂದು ಅವರು ಹೇಳಿದರು.
ಹೊಸ ಕಟ್ಟಡಗಳನ್ನು ₹52 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸಿಕ್ಕಿಂನ ಯುವಕರಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳು ಸಿಗಲಿವೆ ಎಂದು ಶ್ರೀ ಚೌಹಾಣ್ ಹೇಳಿದರು. ಸಿಕ್ಕಿಂ ಅನ್ನು ವಿಶಿಷ್ಟ ಹವಾಮಾನ ಮತ್ತು ನೈಸರ್ಗಿಕ ಸೌಂದರ್ಯದಿಂದ ಸಮೃದ್ಧವಾದ ಅದ್ಭುತ ರಾಜ್ಯ ಎಂದು ಬಣ್ಣಿಸಿದ ಅವರು, ಆವಕಾಡೊಗಳು, ಕಿವಿ ಹಣ್ಣು, ದೊಡ್ಡ ಏಲಕ್ಕಿ, ಆರ್ಕಿಡ್‌ಗಳು ಮತ್ತು ಶುಂಠಿ, ಅರಿಶಿನ, ಟೊಮೆಟೊ, ಎಲೆಕೋಸಿನಂತಹ ತರಕಾರಿಗಳ ಕೃಷಿಗೆ ಅಪಾರ ಸಾಮರ್ಥ್ಯವನ್ನು ಸಿಕ್ಕಿಂ ಭೂಮಿ ಹೊಂದಿದೆ ಎಂದು ಹೇಳಿದರು.

ಜೇನು ಸಾಕಣೆ, ಅಣಬೆ ಕೃಷಿ, ಬಿದಿರು ಮತ್ತು ಔಷಧೀಯ ಸಸ್ಯಗಳಂತಹ ಸಾಂಪ್ರದಾಯಿಕವಲ್ಲದ ಕೃಷಿಯನ್ನು ಉತ್ತೇಜಿಸುವ ಮೂಲಕ ಸಿಕ್ಕಿಂನ ತೋಟಗಾರಿಕಾ ಚಟುವಟಿಕೆಗಳು ಹೆಚ್ಚಿನ ವೈವಿಧ್ಯತೆಯನ್ನು ಪಡೆದಿವೆ ಎಂದು ಕೇಂದ್ರ ಕೃಷಿ ಸಚಿವರು ಹೇಳಿದರು. ಇಲ್ಲಿನ ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ದೂರವಿದ್ದು, ಸಿಕ್ಕಿಂಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಶುದ್ಧ ಉತ್ಪನ್ನಗಳನ್ನು ತಲುಪಿಸುತ್ತಿದ್ದು ಸಿಕ್ಕಿಂ ಸಾವಯವ ರಾಜ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. "ಇದಕ್ಕಾಗಿ, ನಾನು ಸಿಕ್ಕಿಂನ ರೈತರಿಗೆ ನಮಸ್ಕರಿಸುತ್ತೇನೆ" ಎಂದೂ ಸಹ ಸಚಿವರು ನುಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗುಡ್ಡಗಾಡು ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಅವರ ನಾಯಕತ್ವದಲ್ಲಿ ಭಾರತೀಯ ಕೃಷಿ ವೇಗವಾಗಿ ಪ್ರಗತಿ ಸಾಧಿಸುತ್ತಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಸಿಕ್ಕಿಂನಲ್ಲಿ ಕೃಷಿ ಉತ್ತೇಜನಕ್ಕೆ ಯಾವುದೇ ಅವಕಾಶವನ್ನೂ ಭಾರತ ಸರ್ಕಾರ ಕೈಚೆಲ್ಲುವುದಿಲ್ಲ ಎಂದು ಅವರು ಭರವಸೆ ನೀಡಿದರು. ಸಿಕ್ಕಿಂನ ವಿಶಿಷ್ಟ ಹವಾಮಾನ ಅನುಕೂಲಗಳನ್ನು ವಿವರಿಸಿದ ಅವರು, ಅದರ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯ ಪ್ರಯತ್ನ ಮಾಡಲಾಗುವುದು ಎಂದು ಹೇಳುತ್ತಾ ದೇಶದಲ್ಲಿ ಸಾವಯವ ಕೃಷಿಯತ್ತ ಒಲವು ಹೆಚ್ಚುತ್ತಿದ್ದು, ಅದು ಈ ಸಮಯದ ಅಗತ್ಯವೂ ಆಗಿದೆ ಎಂದು ಒತ್ತಿ ಹೇಳಿದರು.

ಕೃಷಿ ಉತ್ತೇಜನಕ್ಕೆ ಪ್ರಧಾನಮಂತ್ರಿ ಮೋದಿ ಅವರ ಆರು ಅಂಶಗಳ ಸೂತ್ರವನ್ನು ಕೇಂದ್ರ ಸಚಿವರು ವಿವರಿಸಿದರು. ಅವುಗಳೆಂದರೆ ಉತ್ಪಾದನೆ ಹೆಚ್ಚಿಸುವುದು, ಕೃಷಿ ವೆಚ್ಚವನ್ನು ಕಡಿಮೆ ಮಾಡುವುದು, ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಖಚಿತಪಡಿಸುವುದು, ನಷ್ಟವನ್ನು ಸರಿದೂಗಿಸುವುದು ಮತ್ತು ಕೃಷಿಯನ್ನು ವೈವಿಧ್ಯಗೊಳಿಸುವುದು. ಹೂವಿನ ಕೃಷಿ, ಬಿದಿರು ಕೃಷಿ ಮತ್ತು ತೋಟಗಾರಿಕೆಯು ರೈತರ ಆದಾಯವನ್ನು ವರ್ಧಿಸಲು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಹೇಳಿದರು. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯು ಅನೇಕ ರೋಗಗಳನ್ನು ಆಹ್ವಾನಿಸಿದೆ ಎಂದು ಎಚ್ಚರಿಸುತ್ತಾ, ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ಹೇಗೆ ಬದಲಾಗುವುದು ಎಂಬುದರ ಬಗ್ಗೆಯೂ ಅವರು ಪ್ರಸ್ತಾಪಿಸಿದರು. "ಈ ಭೂಮಿಯು ನಮ್ಮದು ಮಾತ್ರವಲ್ಲ, ನಮ್ಮ ಭವಿಷ್ಯದ ಪೀಳಿಗೆಗೂ ಸಹ ಸೇರಿದೆ. ರಾಸಾಯನಿಕ ಗೊಬ್ಬರಗಳ ವಿವೇಚನಾರಹಿತ ಬಳಕೆ ಮುಂದುವರಿದರೆ, ಮುಂಬರುವ ದಿನಗಳು ಭವಿಷ್ಯದ ಪೀಳಿಗೆಗೆ ಅನಾನುಕೂಲಕರವಾಗಿ ಪರಿಣಮಿಸಬಹುದಾಗಿದೆ" ಎಂದು ಶ್ರೀ ಚೌಹಾಣ್ ಎಚ್ಚರಿಕೆ ನೀಡಿದರು.
ಕೃಷಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಅವರು, ವಿದ್ಯಾಭ್ಯಾಸ ಮುಗಿದ ನಂತರ ವಿದ್ಯಾರ್ಥಿಗಳು ಸ್ವತಃ ಕೃಷಿಯಲ್ಲಿ ತೊಡಗುವ ಮೂಲಕ, ಕೃಷಿ ಆಧಾರಿತ ನವೋದ್ಯಮಗಳನ್ನು ಪ್ರಾರಂಭಿಸುವ ಮೂಲಕ ಅಥವಾ ಕೃಷಿಯನ್ನು ಮುನ್ನಡೆಸಲು ಹೊಸ ಆವಿಷ್ಕಾರಗಳು ಮತ್ತು ನವೀನ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ಕೃಷಿ ಚಟುವಟಿಕೆಗಳೊಂದಿಗೆ ಸಂಪರ್ಕದಲ್ಲಿರುವಂತೆ ಮನವಿ ಮಾಡಿದರು. ಕೃಷಿಯು ಅಪಾರ ಅವಕಾಶಗಳನ್ನು ಹೊಂದಿದೆ ಮತ್ತು ಇಂದಿಗೂ ಸಹ ರೈತರೇ ಅತ್ಯಂತ ಪ್ರಮುಖವಾಗಿದ್ದು ಕೃಷಿಯು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿ ಮುಂದುವರಿದಿದೆ ಎಂದು ಅವರು ಹೇಳಿದರು. "ದೇಶದ ಜನಸಂಖ್ಯೆಯ ಸುಮಾರು ಶೇಕಡ 46 ರಷ್ಟು ಜನರ ಉದ್ಯೋಗ ಕ್ಷೇತ್ರ ಕೃಷಿಯಾಗಿದೆ" ಎಂದು ಕೇಂದ್ರ ಸಚಿವರು ಗಮನಸೆಳೆದರು.
ಐಸಿಎಆರ್ ಮಹಾನಿರ್ದೇಶಕರಾದ ಡಾ. ಮಂಗಿ ಲಾಲ್ ಜಾಟ್ ಅವರು ನವದೆಹಲಿಯ ಕೃಷಿ ಭವನದಿಂದ ವರ್ಚುಯಲ್ ಮಾದರಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
*****
(Release ID: 2171502)
Visitor Counter : 5