ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ನ್ಯಾಷನಲ್ ಟೆಸ್ಟ್ ಹೌಸ್ 114ನೇ ಉತ್ಕೃಷ್ಟತೆಯನ್ನು ಆಚರಿಸುತ್ತದೆ
ನ್ಯಾಷನಲ್ ಟೆಸ್ಟ್ ಹೌಸ್ ಕೃತಕ ಬುದ್ಧಿಮತ್ತೆ ಚಾಲಿತ ಪರೀಕ್ಷಾ ಸೌಲಭ್ಯಗಳ ಮೇಲೆ ಗಮನ ಹರಿಸಲಿದೆ: ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು
ಎನ್.ಟಿ.ಎಚ್ ಹೊಸ ಪರೀಕ್ಷಾ ಸೌಲಭ್ಯಗಳನ್ನು ಪ್ರಾರಂಭಿಸಿದೆ, ಮೊದಲ ಡ್ರೋನ್ ಪ್ರಮಾಣಪತ್ರಗಳನ್ನು ಬಿಡುಗಡೆ ಮಾಡಿದೆ ಮತ್ತು ಕಾರ್ಯತಂತ್ರದ ಒಪ್ಪಂದಗಳಿಗೆ ಸಹಿ ಹಾಕಿದೆ
Posted On:
10 SEP 2025 7:37PM by PIB Bengaluru
ನ್ಯಾಷನಲ್ ಟೆಸ್ಟ್ ಹೌಸ್ (ಎನ್.ಟಿ.ಎಚ್) ಜಾಗತಿಕವಾಗಿ ಆಧುನೀಕರಣ, ತೊಡಗಿಸಿಕೊಳ್ಳುವಿಕೆ ಮತ್ತು ಹೈಡ್ರೋಜನ್ ಶಕ್ತಿ, ಸ್ಮಾರ್ಟ್ ವಸ್ತುಗಳು, ಸುಧಾರಿತ ಎಲೆಕ್ಟ್ರಾನಿಕ್ಸ್, ಡಿಜಿಟಲ್ ಪರೀಕ್ಷೆ ಮತ್ತು ಕೃತಕ ಬುದ್ಧಿಮತ್ತೆ ಚಾಲಿತ ಪ್ರಮಾಣೀಕರಣದಂತಹ ಹೊಸ ಗಡಿಗಳನ್ನು ಅನ್ವೇಷಿಸಲು ಮುಂದುವರಿಯುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಎನ್.ಟಿ.ಎಚ್ ನ 114ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಭವಿಷ್ಯ-ಸಿದ್ಧ ಉಪಕ್ರಮಗಳು ಆತ್ಮನಿರ್ಭರ ಭಾರತದ ದೃಷ್ಟಿಕೋನ ಮತ್ತು 2047ರ ವೇಳೆಗೆ ವಿಕಸಿತ ಭಾರತವಾಗುವ ಭಾರತದ ಗುರಿಯೊಂದಿಗೆ ಹೊಂದಿಕೆಯಾಗುತ್ತವೆ ಎಂದು ಅವರು ಹೇಳಿದರು.
ಡಿಜಿಟಲ್ ಉಪಕ್ರಮಗಳ ಮೂಲಕ ಎನ್.ಟಿ.ಎಚ್ ತನ್ನ ಕಾರ್ಯಾಚರಣೆಯನ್ನು ಆಧುನೀಕರಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಲ್ಯಾಬೊರೇಟರಿ ಡೇಟಾ ಆಟೋಮೇಷನ್ ಸಿಸ್ಟಮ್ (ಎಲ್.ಡಿ.ಎ.ಎಸ್) ಹಸ್ತಚಾಲಿತ ದೋಷಗಳನ್ನು ಕಡಿಮೆ ಮಾಡುತ್ತದೆ, ವಹಿವಾಟು ಸಮಯವನ್ನು ತಗ್ಗಿಸುತ್ತದೆ ಮತ್ತು ಗುಣಮಟ್ಟದ ಪರೀಕ್ಷೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಡುತ್ತದೆ, ಆ ಮೂಲಕ ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಹೊಸ ಮೊಬೈಲ್ ಅಪ್ಲಿಕೇಶನ್ ಉದ್ಯಮ ಮತ್ತು ಗ್ರಾಹಕರಿಗೆ ಎನ್.ಟಿ.ಎಚ್‌ನ ಪ್ರಯೋಗಾಲಯ ಸೇವೆಗಳನ್ನು ಅನುಕೂಲಕರವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಮಧ್ಯಸ್ಥಗಾರರೊಂದಿಗೆ ಸಂವಹನವನ್ನು ಸುವ್ಯವಸ್ಥಿತಗೊಳಿಸುತ್ತದೆ ಎಂದು ಅವರು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಎನ್.ಟಿ.ಎಚ್‌ನ ಬಲವಾದ ಬೆಳವಣಿಗೆಯನ್ನು ಶ್ಲಾಘಿಸಿದ ಶ್ರೀ ಪ್ರಲ್ಹಾದ್ ಜೋಶಿ ಅವರು, 2024-25ರಲ್ಲಿ 45,926 ಮಾದರಿಗಳನ್ನು ಪರೀಕ್ಷಿಸುವುದರೊಂದಿಗೆ ಮಾದರಿ ಪರೀಕ್ಷೆಯಲ್ಲಿ ಶೇ.60.36 ರಷ್ಟು ಹೆಚ್ಚಳವಾಗಿದೆ. ಜೊತೆಗೆ ಆದಾಯದಲ್ಲಿ ಶೇ.49.89 ರಷ್ಟು ಹೆಚ್ಚಳವಾಗಿದೆ. ಹಿಂದಿನ ವರ್ಷದಲ್ಲಿದ್ದ 29.66 ಕೋಟಿ ರೂ.ಗೆ ಹೋಲಿಸಿದರೆ 2024-25ರಲ್ಲಿ 44.45 ಕೋಟಿ ರೂ.ಗೆ ತಲುಪಿದೆ. ಮೊದಲ ಬಾರಿಗೆ, ಎನ್.ಟಿ.ಎಚ್ ತನ್ನ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ವಾರ್ಷಿಕ ಪ್ರಶಸ್ತಿಗಳನ್ನು ಸ್ಥಾಪಿಸಿದೆ, ಇದು ಉತ್ಕೃಷ್ಟತೆ ಮತ್ತು ಪ್ರೇರಣೆಗೆ ತನ್ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸಚಿವರು ಎನ್.ಟಿ.ಎಚ್ ವಾರ್ಷಿಕ ಶ್ರೇಷ್ಠತಾ ಪ್ರಶಸ್ತಿಗಳು 2025 ಮತ್ತು ಹೆಚ್ಚಿನ ಮೌಲ್ಯದ ಗ್ರಾಹಕರಿಗೆ ವಿಶೇಷ ಮನ್ನಣೆಯನ್ನು ನೀಡಿದರು. ಈ ವರ್ಷದ ಪ್ರಶಸ್ತಿ ಪುರಸ್ಕೃತರಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿ.ಐ.ಎಸ್), ಪೂರ್ವ ಪ್ರಾದೇಶಿಕ ಕಚೇರಿ, ಕೋಲ್ಕತ್ತಾ; ಮೆಸರ್ಸ್ ಕಾನ್ಸೈ ನೆರೊಲಾಕ್ ಪೇಂಟ್ಸ್, ಮುಂಬೈ; ತಮಿಳುನಾಡು ಪಠ್ಯಪುಸ್ತಕ ಮತ್ತು ಶೈಕ್ಷಣಿಕ ಸೇವೆಗಳ ನಿಗಮ (ಟಿ.ಎನ್.ಟಿ.ಬಿ.ಇ.ಎಸ್.ಸಿ); ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ವಿಭಾಗ (ಪಿ.ಎಚ್.ಇ.ಡಿ), ರಾಜಸ್ಥಾನ; ಉತ್ತರ ಪ್ರದೇಶ ಜಲ ಜೀವನ್ ಮಿಷನ್ (ಯು.ಪಿ.ಜೆ.ಜೆ.ಎಂ); ಮತ್ತು ಗುವಾಹಟಿಯ ಎನ್.ಬಿ.ಸಿ.ಸಿ (ಇಂಡಿಯಾ) ಲಿಮಿಟೆಡ್ ಸಂಸ್ಥೆಗಳು ಭಾರತದ ಪರೀಕ್ಷೆ ಮತ್ತು ಗುಣಮಟ್ಟ ಭರವಸೆಯ ಚೌಕಟ್ಟನ್ನು ಬಲಪಡಿಸುವಲ್ಲಿ ಅವರ ನಂಬಿಕೆ, ಸಹಯೋಗ ಮತ್ತು ಕೊಡುಗೆಗಾಗಿ ಗೌರವಿಸಲ್ಪಟ್ಟವು.
ಈ ಸಂದರ್ಭದಲ್ಲಿ, ಶ್ರೀ ಪ್ರಲ್ಹಾದ್ ಜೋಶಿ ಅವರು ಭಾರತದ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಭವಿಷ್ಯಕ್ಕೆ ಸಿದ್ಧವಾದ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿರುವ ಹಲವಾರು ಅತ್ಯಾಧುನಿಕ ಪರೀಕ್ಷಾ ಸೌಲಭ್ಯಗಳನ್ನು ಉದ್ಘಾಟಿಸಿದರು. ಇವಿ ಬ್ಯಾಟರಿಗಳು, ಚಾರ್ಜಿಂಗ್ ವ್ಯವಸ್ಥೆಗಳು ಮತ್ತು ವಾಹನಗಳನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾದ ಕೋಲ್ಕತ್ತಾದ ಎನ್.ಟಿ.ಎಚ್ (ಇ.ಆರ್) ನಲ್ಲಿ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಸೌಲಭ್ಯ, ಭಾರತದ ಶುದ್ಧ ಚಲನಶೀಲತೆ ಅಭಿಯಾನಕ್ಕೆ ಅನುಗುಣವಾಗಿ ಸುರಕ್ಷತೆ, ದಕ್ಷತೆ ಮತ್ತು ಸ್ಪರ್ಧಾತ್ಮಕತೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ; ಗಾಜಿಯಾಬಾದ್‌ನ ಎನ್.ಟಿ.ಎಚ್ (ಎನ್.ಆರ್) ನಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ, ಇದು ರಕ್ಷಣೆ, ಕೃಷಿ, ಲಾಜಿಸ್ಟಿಕ್ಸ್ ಮತ್ತು ಕಣ್ಗಾವಲುಗಾಗಿ ಡ್ರೋನ್‌ಗಳ ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕಾಗಿ ಏಕ-ನಿಲುಗಡೆ ಪರಿಹಾರವನ್ನು ಒದಗಿಸುತ್ತದೆ; ಮತ್ತು ಗಾಜಿಯಾಬಾದ್ ನ ಎನ್.ಟಿ.ಎಚ್ (ಎನ್.ಆರ್) ನಲ್ಲಿ ರಾಸಾಯನಿಕ ಪರೀಕ್ಷಾ ಪ್ರಯೋಗಾಲಯ, ಇದು ರಾಸಾಯನಿಕ ಸುರಕ್ಷತೆ, ಕೈಗಾರಿಕಾ ವಸ್ತುಗಳ ಪರೀಕ್ಷೆ ಮತ್ತು ಪರಿಸರ ಮೇಲ್ವಿಚಾರಣೆಯಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಭವಿಷ್ಯದಲ್ಲಿ, ರೈತರು ಮತ್ತು ರಫುದಾರರ ಅವಶ್ಯಕತೆಗಳನ್ನು ಪೂರೈಸಲು ಸಾವಯವ ಆಹಾರ ಪರೀಕ್ಷೆಯನ್ನು ಬೆಂಬಲಿಸುತ್ತದೆ.
ದೇಶದಲ್ಲಿ ಡ್ರೋನ್ ಪ್ರಮಾಣೀಕರಣದಲ್ಲಿ ಹೊಸ ಅಧ್ಯಾಯವನ್ನು ಗುರುತಿಸುವ ಮೂಲಕ ಸಚಿವರು ಇಬ್ಬರು ಭಾರತೀಯ ತಯಾರಕರಿಗೆ ಮೊದಲ ಡ್ರೋನ್ ಪ್ರಮಾಣಪತ್ರಗಳನ್ನು ನೀಡಿದರು. ಪ್ರಮಾಣೀಕರಣ ಸೇವೆಗಳನ್ನು ಅತ್ಯಲ್ಪ ವೆಚ್ಚದಲ್ಲಿ ಒದಗಿಸಲಾಗುತ್ತಿದೆ ಎಂದು ಅವರು ಒತ್ತಿಹೇಳಿದರು, ಇದು ಉದಯೋನ್ಮುಖ ದೇಶೀಯ ಡ್ರೋನ್ ಉದ್ಯಮವನ್ನು ಬೆಂಬಲಿಸಲು ಮತ್ತು ಅದರ ಜಾಗತಿಕ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸಿಕೊಳ್ಳಲು ಎನ್.ಟಿ.ಎಚ್‌ನ ಆಳವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ತನ್ನ ಸಹಯೋಗದ ಚೌಕಟ್ಟನ್ನು ವಿಸ್ತರಿಸಲು, ಎನ್.ಟಿ.ಎಚ್ ಪ್ರಮುಖ ಸಂಸ್ಥೆಗಳೊಂದಿಗೆ ಅನೇಕ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಿತು. ಪ್ಲಾಸ್ಟಿಕ್ ಮತ್ತು ಪೆಟ್ರೋಕೆಮಿಕಲ್ಸ್ ಪರೀಕ್ಷೆಯ ಸಾಮರ್ಥ್ಯಗಳನ್ನು ಬಲಪಡಿಸಲು ಸಿಪೆಟ್ ಜೊತೆಗಿನ ಒಪ್ಪಂದ ಇದರಲ್ಲಿ ಸೇರಿದೆ; ಸೌರ ಫಲಕಗಳು, ವಿಂಡ್ ಟರ್ಬೈನ್‌ಗಳು ಮತ್ತು ನವೀಕರಿಸಬಹುದಾದ ಇಂಧನ ಉಪಕರಣಗಳ ಪ್ರಮಾಣೀಕರಣ ಮತ್ತು ಪರೀಕ್ಷೆಯನ್ನು ಮುಂದುವರಿಸಲಿದೆ. ಭಾರತದ ಹಸಿರು ಇಂಧನ ಪರಿವರ್ತನೆಯನ್ನು ಬೆಂಬಲಿಸಲು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಲಾರ್ ಎನರ್ಜಿ (ಎನ್.ಐ.ಎಸ್.ಇ) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ (ಎನ್.ಐ.ಡಬ್ಲ್ಯೂ.ಇ) ಜೊತೆ; ಪರ್ವ ಫೈನಾನ್ಸ್ ಕಾರ್ಪೊರೇಷನ್ (ಪಿ.ಎಫ್.ಸಿ) ನೊಂದಿಗೆ ಗುಣಮಟ್ಟದ ಚಾಲಿತ ಮೂಲಸೌಕರ್ಯ ಹಣಕಾಸು ಮತ್ತು ವಿದ್ಯುತ್ ಕ್ಷೇತ್ರದಲ್ಲಿ ವಿಶ್ವಾಸಾರ್ಹ, ಪ್ರಮಾಣೀಕೃತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು; ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಗುಣಮಟ್ಟದ ಭರವಸೆಯನ್ನು ಖಚಿತಪಡಿಸಿಕೊಳ್ಳುವುದು, ಸುಸ್ಥಿರ ನಿರ್ಮಾಣ ಅಭ್ಯಾಸಗಳನ್ನು ಉತ್ತೇಜಿಸಲು ಕ್ಯಾಸಾಗ್ರ್ಯಾಂಡ್ ಜತೆ ಕೈಜೋಡಿಸುವುದು; ಮತ್ತು ಜೈಪುರ ವಿಶ್ವವಿದ್ಯಾಲಯದೊಂದಿಗೆ ಶೈಕ್ಷಣಿಕ-ಕೈಗಾರಿಕಾ ಸಹಯೋಗವನ್ನು ಆಳಗೊಳಿಸಲು, ಜಂಟಿ ಸಂಶೋಧನೆ, ಕೌಶಲ ಅಭಿವೃದ್ಧಿ ಮತ್ತು ಜ್ಞಾನ ವಿನಿಮಯವನ್ನು ಉತ್ತೇಜಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಸಹಯೋಗಗಳು ನಾವೀನ್ಯತೆ, ಗುಣಮಟ್ಟ ಮತ್ತು ಸುಸ್ಥಿರತೆಯಲ್ಲಿ ರಾಷ್ಟ್ರೀಯ ಪಾಲುದಾರನಾಗಿ ಎನ್.ಟಿ.ಎಚ್ ನ ಉದಯೋನ್ಮುಖ ಪಾತ್ರವನ್ನು ಬಂಬಿಸುತ್ತವೆ. ಭಾರತದ ಗುಣಮಟ್ಟ ಮತ್ತು ತಾಂತ್ರಿಕ ಪ್ರಗತಿಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ, ಉದ್ಯಮ, ಶೈಕ್ಷಣಿಕ ಮತ್ತು ಹಣಕಾಸು ಸಂಸ್ಥೆಗಳನ್ನು ಒಟ್ಟುಗೂಡಿಸುತ್ತವೆ.
2025ರ ಜುಲೈ ನಲ್ಲಿ ಚಿಲ್ಲರೆ ಹಣದುಬ್ಬರ ದರವು ಶೇ.1.55 ರಷ್ಟಿದ್ದು, ಇದು 2017ರ ಜೂನ್ ನಂತರದ ಅತ್ಯಂತ ಕಡಿಮೆ ಹಣದುಬ್ಬರ ದರವಾಗಿದೆ, ಅಂದರೆ ಸುಮಾರು 8 ವರ್ಷಗಳಲ್ಲಿ ಅತ್ಯಂತ ಕಡಿಮೆ ಹಣದುಬ್ಬರ ದರವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಶೂನ್ಯ ದೋಷ, ಶೂನ್ಯ ಪರಿಣಾಮ ಅಂದರೆ ‘ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲಮತ್ತು ಪರಿಸರದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಬಾರದು’ ಎಂಬ ಸ್ಪಷ್ಟ ಕರೆಯ ಬಗ್ಗೆ ಶ್ರೀ ಪ್ರಲ್ಹಾದ್ ಜೋಶಿ ಅವರು ಮಾತನಾಡಿದರು. ಶೀಘ್ರದಲ್ಲೇ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ, ಆ ಮೂಲಕ ವಿಶ್ವದರ್ಜೆಯ ಪರೀಕ್ಷಾ ಸೇವೆಗಳಿಗೆ ದಾರಿ ಮಾಡಿಕೊಡುತ್ತದೆ, ಇದಕ್ಕಾಗಿ ಎನ್.ಟಿ.ಎಚ್ ಸಿದ್ಧವಾಗಬೇಕು ಎಂದು ಅವರು ಹೇಳಿದರು.
ಎನ್.ಟಿ.ಎಚ್‌ನ 114 ವರ್ಷಗಳ ಪ್ರಯಾಣವು ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀ ಪ್ರಲ್ಹಾದ್ ಜೋಶಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಅದರ ವಿನಮ್ರ ಆರಂಭದಿಂದ ಇಂದಿನ ಸುಧಾರಿತ ಸೌಲಭ್ಯಗಳು ಮತ್ತು ಜಾಗತಿಕ ದೃಷ್ಟಿಕೋನದವರೆಗೆ, ಸಂಸ್ಥೆಯು ನಂಬಿಕೆ, ಗುಣಮಟ್ಟ ಮತ್ತು ವೈಜ್ಞಾನಿಕ ಪ್ರಗತಿಯ ಆಧಾರಸ್ತಂಭವಾಗಿ ನಿಂತಿದೆ. ಇಂದು ಪ್ರಾರಂಭಿಸಲಾದ ಹೊಸ ಉಪಕ್ರಮಗಳು ಸುರಕ್ಷಿತ, ಹೆಚ್ಚು ನವೀನ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಎನ್.ಟಿ.ಎಚ್‌ನ ಬದ್ಧತೆಯನ್ನು ಪುನರುಚ್ಚರಿಸುತ್ತವೆ.
1911ರಲ್ಲಿ ಕೋಲ್ಕತ್ತಾದ ಅಲಿಪೋರ್‌ನಲ್ಲಿ ಸರ್ಕಾರಿ ಪರೀಕ್ಷಾ ಕೇಂದ್ರವಾಗಿ ಸ್ಥಾಪಿಸಲಾದ ಎನ್.ಟಿ.ಎಚ್ ಪರೀಕ್ಷೆ, ಪ್ರಮಾಣೀಕರಣ ಮತ್ತು ಗುಣಮಟ್ಟದ ಭರವಸೆಯಲ್ಲಿ ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿ ವಿಕಸನಗೊಂಡಿದೆ. ಒಂದು ಶತಮಾನಕ್ಕೂ ಹೆಚ್ಚು ಕಾಲ ತನ್ನ ಪ್ರಯಾಣದಲ್ಲಿ, ಇದು ಸರ್ ಸಿ.ವಿ.ರಾಮನ್, ಡಾ.ಎಸ್.ವೆಂಕಟೇಶ್ವರನ್, ಡಾ.ಶಾಂತಿ ಸ್ವರೂಪ್ ಭಟ್ನಾಗರ್ ಮತ್ತು ಡಾ.ಕೃಷ್ಣನ್ ಸೇರಿದಂತೆ ಪ್ರಖ್ಯಾತ ವಿಜ್ಞಾನಿಗಳ ಒಡನಾಟವನ್ನು ಹೊಂದಿದೆ, ಅವರು ಅದರ ವೈಜ್ಞಾನಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಪ್ರಸ್ತುತತೆಗೆ ಕೊಡುಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ, ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಶ್ರೀಮತಿ ನಿಧಿ ಖರೆ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.




*****
(Release ID: 2165496)
Visitor Counter : 2