ಜವಳಿ ಸಚಿವಾಲಯ
azadi ka amrit mahotsav

ಕೇಂದ್ರ ಜವಳಿ ಸಚಿವರಾದ ಶ್ರೀ ಗಿರಿರಾಜ್ ಸಿಂಗ್ ಅಧ್ಯಕ್ಷತೆಯಲ್ಲಿ ಅತಿ ಸಣ್ಣ, ಸಣ್ಣ, ಮಧ್ಯಮ ಉದ್ದಿಮೆ ಜವಳಿ ರಫ್ತುದಾರರ ಸಮಾಲೋಚನಾ ಸಭೆ


ಮಾರುಕಟ್ಟೆ ವೈವಿಧ್ಯೀಕರಣ, ದೇಶೀಯ ಬಳಕೆ ಮತ್ತು ಸ್ವದೇಶಿ ಗಮನದ ಕುರಿತು ಶ್ರೀ ಗಿರಿರಾಜ್ ಸಿಂಗ್ ಒತ್ತಿ ಹೇಳಿದರು

ಕೇಂದ್ರ ಸಚಿವರು ಮುಂದಿನ ಪೀಳಿಗೆಯ ಜಿಎಸ್.ಟಿ  ಸುಧಾರಣೆಗಳ ಪರಿವರ್ತನಾ ಫಲಿತಾಂಶಗಳನ್ನು ಎತ್ತಿ ತೋರಿಸಿದರು

Posted On: 09 SEP 2025 9:01PM by PIB Bengaluru

ಕೇಂದ್ರ ಜವಳಿ ಸಚಿವರ ಅಧ್ಯಕ್ಷತೆಯಲ್ಲಿ ಜವಳಿ ಮತ್ತು ಉಡುಪು ಮೌಲ್ಯ ಸರಪಳಿಯಾದ್ಯಂತದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ (ಎಂಎಸ್ಎಂಇ)  ಜವಳಿ ರಫ್ತುದಾರರೊಂದಿಗೆ ಜವಳಿ ಸಚಿವಾಲಯ ಇಂದು ವ್ಯಾಪಕವಾದ ಸಮಾಲೋಚನಾ ಸಭೆಯನ್ನು ನಡೆಸಿತು. ಆಗಸ್ಟ್ 13, 2025 ರಂದು ನಡೆದ ಪ್ರಮುಖ ರಫ್ತುದಾರರೊಂದಿಗೆ ರಾಷ್ಟ್ರೀಯ ಮಟ್ಟದ ಸಮಾಲೋಚನೆಯ ನಂತರ ಇದು ಅಂತಹ ಎರಡನೇ ಸಭೆಯಾಗಿದೆ. ಹೆಚ್ಚುವರಿ ಕಾರ್ಯದರ್ಶಿ (ಜವಳಿ) ಮತ್ತು ವ್ಯಾಪಾರ ಸಲಹೆಗಾರರು ಕೂಡ ಚರ್ಚೆಯಲ್ಲಿ ಹಾಜರಿದ್ದರು.

ಚರ್ಚೆಗಳನ್ನು ಉದ್ಘಾಟಿಸಿದ ಕೇಂದ್ರ ಸಚಿವರು, ಭಾರತದ ಜವಳಿ ವಲಯವು 179 ಶತಕೋಟಿ ಡಾಲರ್ ಮೌಲ್ಯದ್ದಾಗಿದ್ದು, 37.75 ಶತಕೋಟಿ ಡಾಲರ್ ರಫ್ತು ಹೊಂದಿದೆ ಎಂದು ತಿಳಿಸಿದರು. ಇದು ಭಾರತದ ಆರ್ಥಿಕ ಶಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯ ಹೆಮ್ಮೆಯ ಸಂಕೇತಗಳಲ್ಲಿ ಒಂದಾಗಿದೆ. ಒಟ್ಟು ದೇಶೀಯ ಉತ್ಪನ್ನಕ್ಕೆ ಸುಮಾರು 2% ಕೊಡುಗೆ ನೀಡುವ ಈ ವಲಯವು ವಿಶ್ವ ವ್ಯಾಪಾರದಲ್ಲಿ 4.1% ಪಾಲನ್ನು ಹೊಂದಿರುವ ಜಾಗತಿಕವಾಗಿ 6 ನೇ ಅತಿದೊಡ್ಡ ರಫ್ತುದಾರ ದೇಶವಾಗಿ ಭಾರತದ ಸ್ಥಾನವನ್ನು ಉಳಿಸಿಕೊಂಡಿದೆ. 220 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿರುವುದರಿಂದ  ಮತ್ತು 520 ಕ್ಕೂ ಹೆಚ್ಚು ಜಿಲ್ಲೆಗಳು  ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ, ಭಾರತೀಯ ಜವಳಿ ಆತ್ಮನಿರ್ಭರ ಭಾರತದ ದೃಷ್ಟಿಕೋನ ಮತ್ತು ಸ್ವದೇಶಿಯ ಕಾಲಾತೀತ ಮನೋಭಾವವನ್ನು ಸಾಕಾರಗೊಳಿಸಿದೆ.

ಜಾಗತಿಕ ಸವಾಲುಗಳ ನಡುವೆ ಚೇತರಿಕೆಯ  ಕಾರ್ಯಕ್ಷಮತೆ

ಜಾಗತಿಕ ಚಂಚಲ ಸ್ಥಿತಿ ಮತ್ತು ಕೆಲವು ಪಾಲುದಾರರು ವಿಧಿಸಿದ ಕಠಿಣ  ಸುಂಕಗಳ ಹೊರತಾಗಿಯೂ, ಭಾರತದ ಜವಳಿ ಚೇತರಿಕೆಯನ್ನು   ಪ್ರದರ್ಶಿಸಿದೆ:

  • ಜುಲೈ 2025 ರಫ್ತುಗಳು 5.37% ರಷ್ಟು ಬೆಳೆದು 3.10 ಶತಕೋಟಿ ಡಾಲರ್ ಗೆ ತಲುಪಿದೆ.
  • ಏಪ್ರಿಲ್-ಜುಲೈ 2025 ರಫ್ತುಗಳು 12.18 ಶತಕೋಟಿ ಡಾಲರ್ ತಲುಪಿದ್ದು, ವರ್ಷದಿಂದ ವರ್ಷಕ್ಕೆ 3.87% ಬೆಳವಣಿಗೆಯನ್ನು ತೋರಿಸಿವೆ.
  • ವಿಭಾಗವಾರು ಬೆಳವಣಿಗೆ: ಸಿದ್ಧ ಉಡುಪುಗಳು (+7.87%), ಕಾರ್ಪೆಟ್ ಗಳು (+3.57%), ಸೆಣಬಿನ ಉತ್ಪನ್ನಗಳು (+15.78%), ಕರಕುಶಲ ವಸ್ತುಗಳು ಮತ್ತು ಎಂ.ಎಂ.ಎಫ್ ಜವಳಿ ಸ್ಥಿರ ಕಾರ್ಯಕ್ಷಮತೆಯನ್ನು ಕಾಯ್ದುಕೊಂಡಿವೆ.

ಪ್ರಮುಖ ಪಾಲುದಾರ ರಾಷ್ಟ್ರಗಳಲ್ಲಿ, ವಿಶೇಷವಾಗಿ ಜಪಾನ್ (+17.9%), ಯುನೈಟೆಡ್ ಕಿಂಗ್ಡಮ್ (+7.39%), ಯುಎಇ (+9.62%), ಮತ್ತು ಆಸ್ಟ್ರೇಲಿಯಾ (+1.74%) ಗಳಲ್ಲಿ ಮೊದಲ ತ್ರೈಮಾಸಿಕದ ಬಲವಾದ ರಫ್ತು ಬೆಳವಣಿಗೆಯ ಬಗ್ಗೆ ಸಚಿವರು ಗಮನ ಸೆಳೆದರು. ಪ್ರಮುಖ ಎಫ್.ಟಿ.ಎ. ಪಾಲುದಾರ ರಾಷ್ಟ್ರಗಳಲ್ಲಿನ ಈ ಸಕಾರಾತ್ಮಕ ಪ್ರವೃತ್ತಿಗಳು 590 ಶತಕೋಟಿ  ಯುಎಸ್ ಡಾಲರ್ ಜಾಗತಿಕ ಜವಳಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ವಶಪಡಿಸಿಕೊಳ್ಳುವ ಭಾರತದ ಸಾಮರ್ಥ್ಯವನ್ನು ಪುನರುಚ್ಚರಿಸುತ್ತವೆ ಎಂದು ಅವರು ಒತ್ತಿ ಹೇಳಿದರು. ಗೌರವಾನ್ವಿತ ಪ್ರಧಾನ ಮಂತ್ರಿಯವರ "ವೋಕಲ್ ಫಾರ್ ಲೋಕಲ್ " ಎನ್ನುವ ಸ್ಪಷ್ಟ ಕರೆಗೆ ಅನುಗುಣವಾಗಿ, ದೇಶೀಯ ಬೇಡಿಕೆಯನ್ನು ಏಕಕಾಲದಲ್ಲಿ ಹೆಚ್ಚಿಸುವಾಗ, ಗುರುತಿಸಲಾದ 40 ಜಾಗತಿಕ ಮಾರುಕಟ್ಟೆಗಳಲ್ಲಿ ಕಾರ್ಯತಂತ್ರದ ವೈವಿಧ್ಯೀಕರಣದ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು.

ಜಿ ಎಸ್ ಟಿ ಸುಧಾರಣೆಗಳು - ಒಂದು ದಿಟ್ಟ ಹೆಜ್ಜೆ

ಜವಳಿ ಮೌಲ್ಯ ಸರಪಳಿಯಲ್ಲಿ ಎರಡನೇ ತಲೆಮಾರಿನ ಜಿಎಸ್ ಟಿ ತರ್ಕಬದ್ಧಗೊಳಿಸುವಿಕೆಗೆ ನಾಂದಿ ಹಾಡಿದ 56ನೇ ಜಿ ಎಸ್ ಟಿ ಮಂಡಳಿ ಸಭೆಯ (3ನೇ ಸೆಪ್ಟೆಂಬರ್ 2025) ಪರಿವರ್ತನಾತ್ಮಕ ಫಲಿತಾಂಶಗಳನ್ನು ಕೇಂದ್ರ ಸಚಿವರು ಎತ್ತಿ ತೋರಿಸಿದರು. ಈ ಸುಧಾರಣೆಗಳು ಲೋಪವನ್ನು ಕಡಿಮೆ ಮಾಡುತ್ತದೆ, ವೆಚ್ಚಗಳನ್ನು ಕಡಿಮೆ ಮಾಡುತ್ತದೆ, ಬೇಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ರಫ್ತಿನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.

ಮುಂದಿನ ತಲೆಮಾರಿನ ನಾಗರಿಕ ಕೇಂದ್ರಿತ ಜಿ ಎಸ್ ಟಿ ವಿಕಾಸದ ಭಾಗವಾಗಿ ಗೌರವಾನ್ವಿತ ಪ್ರಧಾನಮಂತ್ರಿಗಳು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವಿವರಿಸಿದ ಈ ಸುಧಾರಣೆಗಳು "ಪರಂಪರೆ ಜೊತೆಗೆ ವಿಕಾಸ " ತತ್ವವನ್ನು ಪ್ರತಿಬಿಂಬಿಸುತ್ತವೆ - ಆಧುನಿಕ ಬೆಳವಣಿಗೆಗೆ ಅನುವು ಮಾಡಿಕೊಡುವುದರೊಂದಿಗೆ ಭಾರತದ ಪರಂಪರೆಯನ್ನು ಸಂರಕ್ಷಿಸುವುದು.  ಜಾಗತಿಕ ಜವಳಿ ಶಕ್ತಿ ಕೇಂದ್ರವಾಗಿ ಭಾರತ ಹೊರಹೊಮ್ಮುವ ಮಾರ್ಗಸೂಚಿಯಾಗಿ 5 ಎಫ್ ಸೂತ್ರ - ಫಾರ್ಮ್ ನಿಂದ ಫೈಬರ್ ನಿಂದ ಫ್ಯಾಕ್ಟರಿಯಿಂದ ಫ್ಯಾಷನ್ ವರೆಗೆ   ಎನ್ನುವುದನ್ನುಸಚಿವರು ಪುನರುಚ್ಚರಿಸಿದರು.

ಸರ್ಕಾರ-ಉದ್ಯಮ ಪಾಲುದಾರಿಕೆ

ಎಂಎಸ್ಎಂಇ ಜವಳಿ ರಫ್ತುದಾರರು ಸುಧಾರಣೆಗಳನ್ನು ಸ್ವಾಗತಿಸಿದರು ಮತ್ತು ನಿರಂತರ ಹಣಕಾಸಿನ ಬೆಂಬಲ, ಸರಳೀಕೃತ ಅನುಸರಣೆ ಮತ್ತು ಕೈಮಗ್ಗಗಳು, ಕರಕುಶಲ ವಸ್ತುಗಳು ಮತ್ತು ಜಿ.ಐ-ಟ್ಯಾಗ್ ಮಾಡಲಾದ ಸ್ವದೇಶಿ ಉತ್ಪನ್ನಗಳ ಬಲವಾದ ಜಾಗತಿಕ ಬ್ರ್ಯಾಂಡಿಂಗ್ ಅಗತ್ಯವನ್ನು ಒತ್ತಿ ಹೇಳಿದರು.

ಯುರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ಇತರ ಕಾರ್ಯತಂತ್ರದ ತಾಣಗಳಂತಹ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ, ವಿಶೇಷವಾಗಿ ಇ-ಕಾಮರ್ಸ್ ಚಾನೆಲ್ ಗಳ ಮೂಲಕ ಕರಕುಶಲ ವಸ್ತುಗಳು, ಕೈಮಗ್ಗಗಳು ಮತ್ತು ಜೀವನಶೈಲಿ ಉತ್ಪನ್ನಗಳನ್ನು ಉತ್ತೇಜಿಸಲು ಗೋದಾಮುಗಳನ್ನು ರಚಿಸುವಂತೆ ಕೇಂದ್ರ ಸಚಿವರು ಮತ್ತಷ್ಟು ಪ್ರೋತ್ಸಾಹಿಸಿದರು. ಇದು ಭಾರತೀಯ ಉತ್ಪಾದಕರು ಅಂತರರಾಷ್ಟ್ರೀಯ ಗ್ರಾಹಕರನ್ನು ನೇರವಾಗಿ ತಲುಪಲು, ವಿತರಣಾ ಸಮಯವನ್ನು ಕಡಿಮೆ ಮಾಡಲು ಮತ್ತು ಮೌಲ್ಯಯುತವಾದ ಮಾರುಕಟ್ಟೆಗಳಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಸರ್ಕಾರ ಈಗಾಗಲೇ ಗುರಿ ಹೊಂದಿದದ ಕ್ರಮಗಳನ್ನು ಜಾರಿಗೆ ತಂದಿದೆ:

  • ಹತ್ತಿಯ ಮೇಲಿನ ಆಮದು ಸುಂಕ ವಿನಾಯಿತಿ ಡಿಸೆಂಬರ್ 31, 2025 ರವರೆಗೆ.
  • ಕ್ಯೂ ಸಿ ಒ ಸಂಬಂಧಿತ ಪ್ರಕರಣಗಳಲ್ಲಿ ಮುಂಗಡ ಅಧಿಕಾರ ನೀಡುವ ಅಡಿಯಲ್ಲಿ ರಫ್ತು ಬಾಧ್ಯತೆಯನ್ನು 6 ರಿಂದ 18 ತಿಂಗಳುಗಳಿಗೆ ವಿಸ್ತರಿಸಲಾಗಿದೆ.
  • ಹೊಸ ಹೂಡಿಕೆಗಳನ್ನು ಸುಗಮಗೊಳಿಸಲು ಪಿ.ಎಲ್.ಐ  ಯೋಜನೆಯ ಅರ್ಜಿ ಅವಧಿಯನ್ನು ವಿಸ್ತರಿಸಲಾಗಿದೆ.
  • ವೈವಿಧ್ಯೀಕರಣ, ಹಣಕಾಸಿನ ಬೆಂಬಲ, ರಚನಾತ್ಮಕ ಸುಧಾರಣೆಗಳು ಮತ್ತು ನಾವೀನ್ಯತೆ ಕುರಿತು ನಾಲ್ಕು ಉದ್ಯಮದವರ ನೇತೃತ್ವದ ಸಮಿತಿಗಳನ್ನು ರಚಿಸಲಾಗಿದೆ.

2030ರ ಮುನ್ನೋಟ - ಭಾರತದ ಜಾಗತಿಕ ನಾಯಕತ್ವ

ಸಭೆಯನ್ನು ಮುಕ್ತಾಯಗೊಳಿಸುತ್ತಾ, ಕೇಂದ್ರ ಸಚಿವರು 2030ರ ಮುನ್ನೋಟಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು, ಇದರ ಉದ್ದೇಶಗಳು ಹೀಗಿವೆ:

  • 100 ಶತಕೋಟಿ ಯುಎಸ್ ಡಾಲರ್ ಜವಳಿ ರಫ್ತು
  • 250 ಶತಕೋಟಿ  ಯುಎಸ್ ಡಾಲರ್ ದೇಶೀಯ ಮಾರುಕಟ್ಟೆ

ಮಾರುಕಟ್ಟೆ ವೈವಿಧ್ಯೀಕರಣ, ಆಳವಾದ ದೇಶೀಯ ಬಳಕೆ, ರಚನಾತ್ಮಕ ಸುಧಾರಣೆಗಳು, ನಾವೀನ್ಯತೆ ಮತ್ತು ಕುಶಲಕರ್ಮಿಗಳು, ನೇಕಾರರು, ಎಂಎಸ್ಎಂಇಗಳು ಮತ್ತು ಮಹಿಳಾ ಉದ್ಯಮಿಗಳ ಶಕ್ತಿಯನ್ನು ಪ್ರದರ್ಶಿಸುವ ಪುನರುಜ್ಜೀವನಗೊಂಡ ಸ್ವದೇಶಿ ಚಳುವಳಿಯ ಮೂಲಕ ಈ ಗುರಿಗಳನ್ನು ಸಾಧಿಸಲಾಗುವುದು ಎಂದು ಅವರು ಒತ್ತಿ ಹೇಳಿದರು.

ಗೌರವಾನ್ವಿತ ಪ್ರಧಾನಮಂತ್ರಿಯವರ ಕ್ರಿಯಾಶೀಲ ನಾಯಕತ್ವದಲ್ಲಿ ಭಾರತದ ಜವಳಿ ಉದ್ಯಮವು ಭವ್ಯ ಭವಿಷ್ಯದ ಹೊಸ್ತಿಲಲ್ಲಿ ನಿಂತಿದೆ ಎಂಬ ದೃಢ ವಿಶ್ವಾಸದೊಂದಿಗೆ ಕೇಂದ್ರ ಸಚಿವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. ನೀತಿ ಆದ್ಯತೆಗಳ ಕೇಂದ್ರದಲ್ಲಿ ಎಂಎಸ್ಎಂಇಗಳು ಮತ್ತು ಆಧುನಿಕ ಸ್ಪರ್ಧಾತ್ಮಕತೆಯೊಂದಿಗೆ ಭಾರತದ ಪರಂಪರೆಯನ್ನು ಸರಾಗವಾಗಿ ಜೋಡಿಸುವುದರೊಂದಿಗೆ, ಈ ವಲಯವು ಜವಳಿ ಮೌಲ್ಯ ಸರಪಳಿಯಲ್ಲಿ - ಕೃಷಿಯಿಂದ ನಾರಿನವರೆಗೆ, ಕಾರ್ಖಾನೆಯಿಂದ ಫ್ಯಾಷನ್ವರೆಗೆ ಮತ್ತು ಫ್ಯಾಷನ್ನಿಂದ ವಿದೇಶದವರೆಗೆ - ಜಾಗತಿಕ ನಾಯಕ ದೇಶವಾಗಿ ಹೊರಹೊಮ್ಮಲು ಸಜ್ಜಾಗಿದೆ.

 

*****
 


(Release ID: 2165237) Visitor Counter : 7