ಗ್ರಾಮೀಣಾಭಿವೃದ್ಧಿ ಸಚಿವಾಲಯ
ಸರಸ್ (SARAS) ಜೀವನೋಪಾಯ ಮೇಳಕ್ಕೆ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮತ್ತು ದಿಲ್ಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರಿಂದ ಔಪಚಾರಿಕ ಚಾಲನೆ
“2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಗುರಿಯಾಗಿದೆ, ಇದಕ್ಕಾಗಿ ಪ್ರತಿಯೊಬ್ಬರೂ ಸ್ವದೇಶಿ (ಸ್ಥಳೀಯ ಸರಕುಗಳು) ಅಳವಡಿಸಿಕೊಳ್ಳಬೇಕು” - ಶ್ರೀ ಶಿವರಾಜ್ ಸಿಂಗ್
ಮೇಳದಲ್ಲಿ ಭಾಗವಹಿಸಿದ ಲಖ್ಪತಿ ದೀದಿಗಳನ್ನು ಸಮುದಾಯ ಭೋಜನಕ್ಕಾಗಿ ತಮ್ಮ ನಿವಾಸಕ್ಕೆ ಆಹ್ವಾನಿಸಿದ ಶ್ರೀ ಶಿವರಾಜ್ ಸಿಂಗ್
ದಿಲ್ಲಿ ನಿವಾಸಿಗಳು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಬದ್ಧತೆಯನ್ನು ವ್ಯಕ್ತಪಡಿಸಿದ ಶ್ರೀ ಶಿವರಾಜ್ ಸಿಂಗ್
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಈ ಭವ್ಯ ಮೇಳವು ಸೆಪ್ಟೆಂಬರ್ 22 ರವರೆಗೆ ದಿಲ್ಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ನಡೆಯಲಿದೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಮೇಳವು 'ಸ್ಥಳೀಯರಿಗೆ ಆದ್ಯತೆ (ವೋಕಲ್ ಫಾರ್ ಲೋಕಲ್) ಸಂಕಲ್ಪವನ್ನು 'ಸ್ವದೇಶಿ'ಯನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆಯೊಂದಿಗೆ ಬಲಪಡಿಸುತ್ತದೆ
Posted On:
09 SEP 2025 10:29PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 'ಸ್ಥಳೀಯರಿಗೆ ಆದ್ಯತೆ' ಎಂಬ ಸಂಕಲ್ಪವನ್ನು ಬಲಪಡಿಸುವ ಮತ್ತು 'ಸ್ವದೇಶಿ' (ಸ್ಥಳೀಯ ಸರಕುಗಳು) ಅಳವಡಿಸಿಕೊಳ್ಳುವ ಪ್ರತಿಜ್ಞೆ ಕೈಗೊಳ್ಳುವ ಪ್ರಯತ್ನವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಮತ್ತು ದಿಲ್ಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಇಂದು ಭವ್ಯವಾದ ಸರಸ್ (SARAS) ಜೀವನೋಪಾಯ ಮೇಳವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಕೇಂದ್ರ ಸಹಾಯಕ ಸಚಿವರಾದ ಡಾ. ಚಂದ್ರಶೇಖರ್ ಪೆಮ್ಮಸಾನಿ ಮತ್ತು ಶ್ರೀ ಕಮಲೇಶ್ ಪಾಸ್ವಾನ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಶೈಲೇಶ್ ಕುಮಾರ್ ಸಿಂಗ್, ದಿಲ್ಲಿ ಮುಖ್ಯ ಕಾರ್ಯದರ್ಶಿ ಶ್ರೀ ಧರ್ಮೇಂದ್ರ, ಸ್ವಸಹಾಯ ಗುಂಪುಗಳ 'ಲಖ್ಪತಿ ದೀದಿಗಳು', ಹಿರಿಯ ಅಧಿಕಾರಿಗಳು ಮತ್ತು ಹಲವಾರು ಸಾರ್ವಜನಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆಯೋಜಿಸಿರುವ ಸರಸ್ ಜೀವನೋಪಾಯ ಮೇಳವು ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 22 ರವರೆಗೆ ದಿಲ್ಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ವಸಹಾಯ ಗುಂಪುಗಳ 400 ಕ್ಕೂ ಹೆಚ್ಚು 'ಲಖ್ಪತಿ ದೀದಿಗಳು' ತಮ್ಮ ಅತ್ಯುತ್ತಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ, ಇದನ್ನು ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್, ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಇತರ ಅತಿಥಿಗಳು ವೀಕ್ಷಿಸಿದರು. ಸಮುದಾಯಗಳನ್ನು ಸಬಲೀಕರಣಗೊಳಿಸುವಲ್ಲಿ, ಜೀವನೋಪಾಯವನ್ನು ಹೆಚ್ಚಿಸುವಲ್ಲಿ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ಕೊಡುಗೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿರುವ ಸ್ವಸಹಾಯ ಗುಂಪುಗಳು ಮತ್ತು ಗ್ರಾಮೀಣ ಉದ್ಯಮಿಗಳ ಕಾರ್ಯವನ್ನು ಅವರು ಪೂರ್ಣ ಹೃದಯದಿಂದ ಶ್ಲಾಘಿಸಿದರು. ಅತಿಥಿಗಳು ಪ್ರದರ್ಶನ ಪ್ರದೇಶಕ್ಕೆ ಭೇಟಿ ನೀಡಿದರು, ಸ್ವಸಹಾಯ ಗುಂಪುಗಳ ಸದಸ್ಯರೊಂದಿಗೆ ಸಂವಹನ ನಡೆಸಿದರು ಮತ್ತು ಪ್ರದರ್ಶಿಸಲಾದ ಉತ್ಪನ್ನಗಳ ವೈವಿಧ್ಯತೆ ಮತ್ತು ಗುಣಮಟ್ಟವನ್ನು ಮೆಚ್ಚಿದರು. ಇಂಡಿಯಾ ಫುಡ್ ಕೋರ್ಟ್ ವಿವಿಧ ರಾಜ್ಯಗಳಿಂದ ಸಾಂಪ್ರದಾಯಿಕ ಮತ್ತು ರುಚಿಕರವಾದ ಪಾಕಪದ್ಧತಿಗಳನ್ನು ಒದಗಿಸುತ್ತಿದೆ, 'ಏಕ್ ಭಾರತ್, ಶ್ರೇಷ್ಠ ಭಾರತ್' ಮನೋಭಾವದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿದಿನ ಆಯೋಜಿಸಲಾಗುತ್ತಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಈ ಮೇಳವು ಸ್ವಾವಲಂಬಿ ಮತ್ತು ಸಬಲೀಕರಣಗೊಂಡ ನವ ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಗುರಿಯಾಗಿದೆ ಮತ್ತು ಇದಕ್ಕಾಗಿ 'ಸ್ವದೇಶಿ'ಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಹೇಳಿದರು. "ನಾವು ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಅಳವಡಿಸಿಕೊಳ್ಳಬೇಕು, ಮತ್ತು ಹಾಗೆ ಮಾಡುವುದರಿಂದ ನಮ್ಮ ದೇಶವು ಬಲಗೊಳ್ಳುತ್ತದೆ" ಎಂದು ಅವರು ಹೇಳಿದರು. ಎಲ್ಲಾ 'ದೀದಿಗಳು' ಮತ್ತು ಇತರ ಭಾಗವಹಿಸುವವರಿಗೆ 'ಸ್ವದೇಶಿ'ಯನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ಸಹ ಅವರು ಬೋಧಿಸಿದರು.
LCGF.jpeg)
2 ಕೋಟಿಗೂ ಹೆಚ್ಚು 'ದೀದಿಗಳು' ಈಗಾಗಲೇ 'ಲಖ್ಪತಿ'ಗಳಾಗಿದ್ದಾರೆ ಮತ್ತು ಶೀಘ್ರದಲ್ಲೇ ಈ ಸಂಖ್ಯೆ 3 ಕೋಟಿ ದಾಟಲಿದೆ ಎಂದು ಶ್ರೀ ಶಿವರಾಜ್ ಸಿಂಗ್ ಹೇಳಿದರು. ಮೇಳದಲ್ಲಿ ಹಾಜರಿದ್ದ 'ಲಖ್ಪತಿ ದೀದಿ'ಗಳನ್ನು ತಮ್ಮ ನಿವಾಸಕ್ಕೆ ಭೇಟಿ ನೀಡಿ ತಮ್ಮೊಂದಿಗೆ ಸಮುದಾಯ ಭೋಜನವನ್ನು ಹಂಚಿಕೊಳ್ಳಲು ಅವರು ಆಹ್ವಾನಿಸಿದರು. ದಿಲ್ಲಿ ಸರ್ಕಾರ ಮತ್ತು ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಅವರೊಂದಿಗೆ ಕೇಂದ್ರ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ವಂಚಿತರಾಗಿದ್ದ ದಿಲ್ಲಿ ನಿವಾಸಿಗಳಿಗೆ ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಒದಗಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು. ದಿಲ್ಲಿ ಮತ್ತು ಹತ್ತಿರದ ಪ್ರದೇಶಗಳ ಜನರು ತಮ್ಮ ಕುಟುಂಬಗಳೊಂದಿಗೆ ಸರಸ್ (SARAS) ಜೀವನೋಪಾಯ ಮೇಳಕ್ಕೆ ಭೇಟಿ ನೀಡಬೇಕೆಂದು ಅವರು ಮನವಿ ಮಾಡಿದರು.
'ಲಖ್ಪತಿ ದೀದಿ'ಗಳ ಕಠಿಣ ಪರಿಶ್ರಮ ಮತ್ತು ದಿಲ್ಲಿಯಲ್ಲಿ ಈ ಮೇಳವನ್ನು ಆಯೋಜಿಸುವಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಯತ್ನಗಳನ್ನು ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ ಶ್ಲಾಘಿಸಿದರು. "ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, ನಾವು ದಿಲ್ಲಿಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತೇವೆ. ನಮ್ಮ ಸರ್ಕಾರ ನಮ್ಮ ಸಹೋದರಿಯರನ್ನು ಸ್ವಾವಲಂಬಿಗಳನ್ನಾಗಿ ಮತ್ತು ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತಿದೆ" ಎಂದು ಅವರು ಹೇಳಿದರು.

ಸರಸ್ (SARAS) ಜೀವನೋಪಾಯ ಮೇಳ: ಗ್ರಾಮೀಣ ಸಮೃದ್ಧಿಗಾಗಿ ರಾಷ್ಟ್ರೀಯ ವೇದಿಕೆ
ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ವಾರ್ಷಿಕವಾಗಿ ಆಯೋಜಿಸುವ ಸರಸ್ (SARAS) ಜೀವನೋಪಾಯ ಮೇಳವು ದೇಶದ ಅತಿದೊಡ್ಡ ವೇದಿಕೆಗಳಲ್ಲಿ ಒಂದಾಗಿದೆ, ಅಲ್ಲಿ ಗ್ರಾಮೀಣ ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಅವಕಾಶವನ್ನು ಪಡೆಯುತ್ತವೆ. ಈ ಮೇಳವು ಗ್ರಾಮೀಣ ಉತ್ಪಾದಕರನ್ನು ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವುದಲ್ಲದೆ, 'ಸ್ಥಳೀಯರಿಗೆ ಆದ್ಯತೆ' ಎಂಬ ಮನೋಭಾವವನ್ನು ಉತ್ತೇಜಿಸುತ್ತದೆ ಮತ್ತು 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಎಲ್ಲಾ ನಾಗರಿಕರು, ಉದ್ಯಮ ಪ್ರತಿನಿಧಿಗಳು ಮತ್ತು ನೀತಿ ನಿರೂಪಕರು ಮೇಳಕ್ಕೆ ಭೇಟಿ ನೀಡಲು, ಗ್ರಾಮೀಣ ಮಹಿಳಾ ಉದ್ಯಮಿಗಳನ್ನು ಬೆಂಬಲಿಸಲು ಮತ್ತು ಭಾರತದ ಶ್ರೀಮಂತ ಕರಕುಶಲ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅನುಭವಿಸಲು ಮನವಿ ಮಾಡಿದೆ.
*****
(Release ID: 2165235)
Visitor Counter : 2