ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಇ-ಆಡಳಿತ ವಿಭಾಗ ಮತ್ತು ಐ.ಐ.ಎಂ ಕಲ್ಕತ್ತಾದಿಂದ ಸರ್ಕಾರಿ ಅಧಿಕಾರಿಗಳ ಮೂರನೇ ತಂಡದ ಸಬಲೀಕರಣಕ್ಕೆ ಹೆಗ್ಗುರುತಿನ ಡಿಜಿಟಲ್ ಆಡಳಿತ ಮತ್ತು ದತ್ತಾಂಶ ನಿರ್ವಹಣಾ ತರಬೇತಿ

Posted On: 09 SEP 2025 6:44PM by PIB Bengaluru

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿಯ (MeitY) ರಾಷ್ಟ್ರೀಯ ಇ-ಆಡಳಿತ ವಿಭಾಗವು (NeGD), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಲ್ಕತ್ತಾ (IIMC) ಸಹಭಾಗಿತ್ವದಲ್ಲಿ, 'ಡಿಜಿಟಲ್ ಆಡಳಿತ ಮತ್ತು ದತ್ತಾಂಶ ನಿರ್ವಹಣೆ' ಕುರಿತ ಪ್ರತಿಷ್ಠಿತ ತರಬೇತಿ ಕಾರ್ಯಕ್ರಮದ ಮೂರನೇ ಬ್ಯಾಚ್ ಅನ್ನು ಯಶಸ್ವಿಯಾಗಿ ನಡೆಸಿದೆ. ಈ ತರಬೇತಿ ಕಾರ್ಯಕ್ರಮವು 2025ರ ಸೆಪ್ಟೆಂಬರ್ 8 ರಿಂದ 10 ರವರೆಗೆ ಐ.ಐ.ಎಂ ಕಲ್ಕತ್ತಾ ಕ್ಯಾಂಪಸ್ ನಲ್ಲಿ ನಡೆದಿದೆ.

ಮೊದಲ ಎರಡು ತಂಡಗಳ ತರಬೇತಿಯ ಯಶಸ್ಸಿನೊಂದಿಗೆ ಆಯೋಜನೆಯಾದ ಈ ಮೂರನೇ ತಂಡದ ತರಬೇತಿ ಕಾರ್ಯಕ್ರಮವು ರಾಷ್ಟ್ರದಾದ್ಯಂತದ 28 ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಒಟ್ಟುಗೂಡಿಸಿತು. ನವದೆಹಲಿ, ಕರ್ನಾಟಕ, ರಾಜಸ್ಥಾನ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಪಶ್ಚಿಮ ಬಂಗಾಳಗಳ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಇಲಾಖೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಉಪಕ್ರಮವು ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಸಾಮರ್ಥ್ಯ ನಿರ್ಮಾಣ ಯೋಜನೆಯ ನಿರ್ಣಾಯಕ ಅಂಶವಾಗಿದೆ. ಭಾರತದ ಹಿರಿಯ ಅಧಿಕಾರಶಾಹಿ ವರ್ಗವು ರಾಷ್ಟ್ರದ ಡಿಜಿಟಲ್ ರೂಪಾಂತರವನ್ನು ಮುನ್ನಡೆಸಲು ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ದತ್ತಾಂಶದ ಬಲವನ್ನು ಬಳಸಿಕೊಳ್ಳಲು ಅಗತ್ಯವಾದ ಕಾರ್ಯತಂತ್ರದ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳೊಂದಿಗೆ ಸಜ್ಜುಗೊಳಿಸಲು ಈ ಎರಡೂವರೆ ದಿನಗಳ ಕಾರ್ಯಕ್ರಮವನ್ನು ತೀವ್ರತರವಾಗಿ ಮತ್ತು ಅಗತ್ಯಕ್ಕನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

ತರಬೇತಿ ಪಠ್ಯಕ್ರಮದ ಪ್ರಮುಖ ಆದ್ಯತೆಗಳು:

• ಸುಧಾರಿತ ದತ್ತಾಂಶ ಆಡಳಿತ: ರಾಷ್ಟ್ರೀಯ ಡಿಜಿಟಲ್ ಸ್ವತ್ತುಗಳನ್ನು ನಿರ್ವಹಿಸಲು ಚೌಕಟ್ಟುಗಳು ಮತ್ತು ಅತ್ಯಾಧುನಿಕ ಅಭ್ಯಾಸಗಳು

• ಸೈಬರ್ ಭದ್ರತೆ ಮತ್ತು ಗೌಪ್ಯತೆ: ದತ್ತಾಂಶ ಸುರಕ್ಷತೆಯನ್ನು ಖಾತರಿಪಡಿಸಲು ಮತ್ತು ನಾಗರಿಕರ ಗೌಪ್ಯತೆಯನ್ನು ರಕ್ಷಿಸಲು ಸದೃಢ ಕ್ರಮಗಳ ಅನುಷ್ಠಾನ

• ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ: ಪರಿಣಾಮಕಾರಿ ನೀತಿ ನಿರೂಪಣೆ ಮತ್ತು ಸಾಂಸ್ಥಿಕ ರೂಪಾಂತರಕ್ಕಾಗಿ ವಿಶ್ಲೇಷಣೆಗಳ ಸಮರ್ಥ ಬಳಕೆ

• ಡಿಜಿಟಲ್ ನಾಯಕತ್ವ: ನಾಗರಿಕ ಕೇಂದ್ರಿತ ಇ-ಆಡಳಿತ ಯೋಜನೆಗಳನ್ನು ಬೆಂಬಲಿಸುವ ಮತ್ತು ಕಾರ್ಯಗತಗೊಳಿಸುವ ತಂತ್ರಗಳು


ಸರ್ಕಾರಿ ಆಡಳಿತಗಾರರು ಎದುರಿಸುತ್ತಿರುವ ಸಮಕಾಲೀನ ಸವಾಲುಗಳನ್ನು ಪರಿಹರಿಸಲು ಪಠ್ಯಕ್ರಮವನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ. ಈ ಹಿರಿಯ ಅಧಿಕಾರಿಗಳ ತೊಡಗಿಸಿಕೊಳ್ಳುವಿಕೆ ಮತ್ತು ಒಳನೋಟಗಳು ಈ ಪ್ರಕ್ರಿಯೆಯಲ್ಲಿನ ಪ್ರತಿಯೊಬ್ಬರಿಗೂ ಕಲಿಕೆಯ ಅನುಭವವನ್ನು ಅಪಾರವಾಗಿ ಹೆಚ್ಚಿಸಲಿದೆ.

ಈ ಸಾಮರ್ಥ್ಯ ವರ್ಧನೆ ಯೋಜನೆಯು ಎಲ್ಲರಿಗೂ ಉತ್ತಮ ಗುಣಮಟ್ಟದ, ಲಭ್ಯವಾಗಬಲ್ಲ ಮತ್ತು ನಾಗರಿಕ-ಕೇಂದ್ರಿತ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡುತ್ತಾ ಸರ್ಕಾರದೊಳಗೆ ವ್ಯಾಪಕವಾದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

 

*****
 


(Release ID: 2165110) Visitor Counter : 2
Read this release in: English , Urdu , Hindi